Advertisement

ನಾಳೆಯಿಂದ ಆರೋಗ್ಯ ಸಮೀಕ್ಷೆ

05:54 PM Apr 23, 2020 | Suhan S |

ಹಾವೇರಿ: ಜಿಲ್ಲೆಯಾದ್ಯಂತ ಏ. 24ರಿಂದ ಮನೆ ಮನೆ ಸಮೀಕ್ಷೆ ಕೈಗೊಂಡು ಜನರ ಆರೋಗ್ಯ ಮಾಹಿತಿ ಸಂಗ್ರಹಿಸಬೇಕು. ಮೂರು ದಿನಗಳೊಳಗೆ ಸಮೀಕ್ಷೆ ಪೂರ್ಣಗೊಳಿಸಬೇಕು ಎಂದು ತಹಶೀಲ್ದಾರ್‌ ಗಳಿಗೆ ಅಪರ ಜಿಲ್ಲಾಧಿಕಾರಿ ಯೋಗೇಶ್ವರ ಸೂಚನೆ ನೀಡಿದರು.

Advertisement

ಜಿಲ್ಲೆಯ ವಿವಿಧ ತಾಲೂಕುಗಳ ತಹಶೀಲ್ದಾರ್‌, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಶಿಶು ಅಭಿವೃದ್ಧಿ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು, ಮತಗಟ್ಟೆ ಅಧಿಕಾರಿಗಳ ಮೂಲಕ ಆರೋಗ್ಯ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. ಮಾಹಿತಿ ಸಂಗ್ರಹಕ್ಕಾಗಿ ಆರೋಗ್ಯ ಇಲಾಖೆಯಿಂದ ಮಾದರಿ ತಯಾರಿಸಲಾಗಿದೆ. ಮನೆ ಮನೆಗೆ ತೆರಳಿ 60 ವರ್ಷ ಮೇಲ್ಪಟ್ಟ ವಯೋಮಾನದವರ ವಿವರ, ಸಕ್ಕರೆ ಕಾಯಿಲೆ ಇರುವವರು, ರಕ್ತದೊತ್ತಡ ಇರುವವರು, ಕ್ಯಾನ್ಸರ್‌ನಿಂದ ಬಳಲುತ್ತಿರುವವರು, ಜ್ವರ, ಶೀತ, ಕೆಮ್ಮು, ಉಸಿರಾಟದ ತೊಂದರೆ ಇರುವವರ ಹೆಸರು, ವಯಸ್ಸು, ಮೊಬೈಲ್‌ ಸಂಖ್ಯೆ, ಕಾಯಿಲೆ ವಿವರದ ಮಾಹಿತಿ ಸಂಗ್ರಹಿಸಿ ಆಯಾ ಮೇಲುಸ್ತುವಾರಿ ಅಧಿಕಾರಿಗಳ ಮೂಲಕ ತಹಶೀಲ್ದಾರ್‌ ಕಚೇರಿಗೆ ತಲುಪಿಸಬೇಕು. ಆರೋಗ್ಯ ಇಲಾಖೆ ಮೂಲಕ ಜಿಲ್ಲಾಡಳಿತಕ್ಕೆ ಮಾಹಿತಿ ಕ್ರೋಢೀಕರಿಸಿ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ತೀವ್ರತರ ರೋಗ ಲಕ್ಷಣ ಗಳು ಕಂಡುಬಂದರೆ ಆರೋಗ್ಯ ಇಲಾಖೆ ಮೂಲಕ ಸೂಕ್ತ ಚಿಕಿತ್ಸೆ ನೀಡುವ ಉದ್ದೇಶ ಹೊಂದಲಾಗಿದೆ ಎಂದು ವಿವರಿಸಿದರು.

ಜಿಪಂ ಸಿಇಒ ರಮೇಶ ದೇಸಾಯಿ ಮಾತನಾಡಿ, ಸಮೀಕ್ಷೆಗೆ ತೆರಳುವ ಬಿಎಲ್‌ ಒಗಳಿಗೆ ಮಾಸ್ಕ್, ಸ್ಯಾನಿಟೈಸರ್‌ ನೀಡಬೇಕು. ಕೇಂದ್ರ ಸ್ಥಾನದಲ್ಲಿ ಬಿಎಲ್‌ಒಗಳು ಇಲ್ಲದಿದ್ದರೆ ಪರ್ಯಾಯ ಶಿಕ್ಷಕರ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದರು. ಎಸಿ ಡಾ| ದಿಲಿಷ್‌ ಶಶಿ, ಡಿಡಿಪಿಐ ಅಂದಾನೆಪ್ಪ ವಡಗೇರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪಿ.ವೈ. ಶೆಟ್ಟೆಪನವರ, ಚುನಾವಣಾ ತಹಶೀಲ್ದಾರ್‌ ಪ್ರಶಾಂತ ನಾಲವಾರ, ಹಾವೇರಿ ತಹಶೀಲ್ದಾರ್‌ ಶಂಕರ್‌, ಬಿಇಒ ಎಂ.ಎಚ್‌.ಪಾಟೀಲ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next