Advertisement

ಗರ್ಜಿನಾಳ ಆರೋಗ್ಯ ಉಪಕೇಂದ್ರಕ್ಕೆ ಬೀಗ

04:28 PM Mar 28, 2022 | Team Udayavani |

ದೋಟಿಹಾಳ: ಸಮೀಪದ ಮುದೇನೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗರ್ಜಿನಾಳ ಆರೋಗ್ಯ ಉಪಕೇಂದ್ರಕ್ಕೆ ಎರಡು ತಿಂಗಳಿಂದ ಬೀಗ ಹಾಕಿದ್ದು, ಸೂಕ್ತ ಚಿಕಿತ್ಸೆಯಿಲ್ಲದೇ ಜನತೆ ಪರದಾಡುವಂತಾಗಿದೆ. ಆರೋಗ್ಯ ಕೇಂದ್ರಕ್ಕೆ ಬೀಗ ಹಾಕಿದ ಕಾರಣ ಕೇಂದ್ರದ ಆವರಣ ಕುಡುಕರ ತಾಣವಾಗಿ ಮಾರ್ಪಟ್ಟಿದೆ. ಹೀಗಾಗಿ ಸಾರ್ವಜನಿಕರು ಆರೋಗ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Advertisement

ಸಾರ್ವಜನಿಕರು ಸಣ್ಣಪುಟ್ಟ ಕಾಯಿಲೆಗೂ ಚಿಕಿತ್ಸೆಯಿಲ್ಲದೇ ಪರದಾಡುವಂತಾಗಿದೆ. ಗ್ರಾಮದಲ್ಲಿ ಚಿಕ್ಕಮಕ್ಕಳು, ಗರ್ಭಿಣಿಯರು, ಬಾಣಂತಿಯರ ಆರೋಗ್ಯದಲ್ಲಿ ಏರುಪೇರಾದರೆ 10-12 ಕಿ.ಮೀ. ದೂರದ ತಾವರಗೇರಾ ಸರಕಾರಿ ಆಸ್ಪತ್ರೆ ಹೋಗಬೇಕು. ರಾತ್ರಿ ವೇಳೆ ಸಾರ್ವಜನಿಕರಿಗೆ ತೊಂದರೆಯಾದರೆ ಕಷ್ಟವಾಗುತ್ತದೆ. ಈ ವೇಳೆ ಕೆಲವರು ಖಾಸಗಿ ವಾಹನದ ಮೂಲಕ ಹೋಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಬಡವರು ಸಕಾಲಕ್ಕೆ ಚಿಕಿತ್ಸೆ ಸಿಗದೇ ಪರದಾಡುವಂತಾಗಿದೆ ಎಂದು ಗ್ರಾಮದ ಯುವಕರು ಹೇಳುತ್ತಾರೆ.

ಈ ಆರೋಗ್ಯ ಉಪಕೇಂದ್ರದ ಆವರಣ ನಿರ್ಜನ ಪ್ರದೇಶವಾದ ಕಾರಣ ಕುಡುಕರ ಹಾವಳಿ ಹೆಚ್ಚಾಗಿದೆ. ಆರೋಗ್ಯ ಇಲಾಖೆಯ ಸುತ್ತಲೂ ಅನಾರೋಗ್ಯದ ವಾತಾವರಣ ಕಂಡುಬರುತ್ತಿದೆ.

ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಸಾರ್ವಜನಿಕರಿಗೆ ಇದರ ಬಗ್ಗೆ ತಿಳಿವಳಿಕೆ ನೀಡಬೇಕೆಂಬುದೇ ನಾಗರಿಕರ ಕಳಕಳಿಯಾಗಿದೆ.

Advertisement

ಕೇಂದ್ರದಲ್ಲಿ ಮೂರು ಹುದ್ದೆಗಳಿದ್ದು, ಸದ್ಯ ಈ ಮೂರು ಹುದ್ದೆಗಳು ಖಾಲಿ ಇರುವುದರಿಂದ ಈ ಕೇಂದ್ರಕ್ಕೆ ಬೀಗ ಹಾಕಲಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿಯಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ.

ಕೇಂದ್ರದ ಹಿರಿಯ ಆರೋಗ್ಯ ಅಧಿಕಾರಿ ಮತ್ತು ಸಮುದಾಯ ಆರೋಗ್ಯ ಅಧಿಕಾರಿ ಹುದ್ದೆ ಖಾಲಿ ಇದೆ. ಎಎನ್‌ಎಂ ಅವರು ಹೆರಿಗೆ ಮೇಲೆ ರಜೆ ಹೋಗಿದ್ದಾರೆ. ಹೀಗಾಗಿ ಸಿಬ್ಬಂದಿ ಇಲ್ಲದ ಕಾರಣ ಈ ಕೇಂದ್ರಕ್ಕೆ ಬೀಗ ಹಾಕಲಾಗಿದೆ.

 

ನಮ್ಮೂರ ಆಸ್ಪತ್ರೆಯ ಬಾಗಿಲು ಹಾಕಿ ಎರಡು ತಿಂಗಳ ಆಗೇತ್ರಿ. ಯಾರಿಗಾದರೂ ಮೈಯಾಗ್‌ ಹುಷಾರಿಲ್ಲ ಅಂದ್ರೆ ಗಾಡಿ ಮಾಡಿಕೊಂಡು ತಾವರಗೇರಾ ಪಟ್ಟಣಕ್ಕೆ ಹೋಗಬೇಕ್ರಿ. ನಮ್ಮ ಆಸ್ಪತ್ರೆಯ ಪರಿಸ್ಥಿತಿ ಬಗ್ಗೆ ಯಾರಿಗೂ ಕಾಳಜಿ ಇಲ್ಲದಂತಾಗೆತ್ರಿ.

-ದುರ್ಗಮ್ಮ ತಿನ್ನಾಳ, ಗರ್ಜಿನಾಳ ಗ್ರಾಮಸ್ಥೆ

 

ಗರ್ಜಿನಾಳ ಆರೋಗ್ಯ ಉಪಕೇಂದ್ರದ ಸಮಸ್ಯೆ ಬಗ್ಗೆ ಮಾಹಿತಿ ಇಲ್ಲ. ಒಂದು ವೇಳೆ ಅಲ್ಲಿ ಮೂರು ಹುದ್ದೆ ಖಾಲಿ ಇದ್ದರೆ. ವಾರದಲ್ಲಿ ಮೂರು ದಿನಗಳ ಕಾಲ ಬೇರೊಬ್ಬರನ್ನು ಅಲ್ಲಿಗೆ ಕಳಿಸಿ, ಸಾರ್ವಜನಿಕರ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡುತ್ತೇವೆ.

-ಡಾ| ಆನಂದ ಗೋಟೂರ, ತಾಲೂಕು ಆರೋಗ್ಯಾಧಿಕಾರಿ

-ಮಲ್ಲಿಕಾರ್ಜುನ ಮೆದಿಕೇರಿ

Advertisement

Udayavani is now on Telegram. Click here to join our channel and stay updated with the latest news.

Next