ಹುಬ್ಬಳ್ಳಿ: ಶಿಕ್ಷಣ ಮತ್ತು ಆರೋಗ್ಯವನ್ನು ಜನರು ಇರುವಲ್ಲಿಯೇ ಕೊಂಡೊಯ್ಯಬೇಕೆಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಆಶಯವಾಗಿದೆ. ಈ ಹಿನ್ನೆಲೆಯಲ್ಲಿ ಉಚಿತ ಆರೋಗ್ಯ ಶಿಬಿರಗಳ ಮೂಲಕ ಬಡವರ ಮನೆ ಬಾಗಿಲಿಗೆ ಆರೋಗ್ಯ ಸೇವೆ ಒದಗಿಸಲಾಗುತ್ತಿದೆ ಎಂದು ಬಾಲಾಜಿ ಆಸ್ಪತ್ರೆಯ ನರರೋಗ ತಜ್ಞ ಹಾಗೂ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಡಾ| ಕ್ರಾಂತಿಕಿರಣ ತಿಳಿಸಿದರು.
ರವಿವಾರ ಅಕ್ಕಸಾಲಿಗರ ಓಣಿಯ ಶ್ರೀ ಕಾಳಿಕಾದೇವಿ ದೇವಸ್ಥಾನದ ಸಮುದಾಯ ಭವನದಲ್ಲಿ ಬಿಜೆಪಿ ವೈದ್ಯಕೀಯ ಪ್ರಕೋಷ್ಠ ಹಾಗೂ ಬಾಲಾಜಿ ನರರೋಗ ಆಸ್ಪತ್ರೆ ಮತ್ತು ತುರ್ತು ಚಿಕಿತ್ಸಾ ಕೇಂದ್ರದಿಂದ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದ ನೇತೃತ್ವ ವಹಿಸಿ ಅವರು ಮಾತನಾಡಿದರು.
ಹಿಂದೆ ವೈದ್ಯಕೀಯ ಕಾಲೇಜು ಆರಂಭಿಸಲು ಪರವಾನಗಿಗೆ ವರ್ಷಾನುಗಟ್ಟಲೇ ಕಾಯಬೇಕಿತ್ತು. ಮೋದಿ ಸರಕಾರ ಬಂದ ಬಳಿಕ ಒಳ್ಳೆಯ ಉದ್ದೇಶ, ಸಮಾಜಮುಖೀ ಚಿಂತನೆಯುಳ್ಳ ಸಂಘ-ಸಂಸ್ಥೆ, ಮಠಗಳಿಗೆ ವೈದ್ಯಕೀಯ ಕಾಲೇಜು ಆರಂಭಿಸಲು ಸ್ವತಃ ಕೇಂದ್ರ ಸರ್ಕಾರವೇ ಪರವಾನಗಿ ನೀಡಿದೆ.
ದೇಶವನ್ನಾಳಿದ ಹಿಂದಿನ ಸರ್ಕಾರಗಳು ಕೆಲವೇ ಏಮ್ಸ್ ಸಂಸ್ಥೆಗಳನ್ನು ನಿರ್ಮಿಸಿದರೆ, ಮೋದಿ ಸರ್ಕಾರ ಬಂದ ಬಳಿಕ 24 ಏಮ್ಸ್ ಸಂಸ್ಥೆಗಳಾಗಿವೆ. ಮನುಷ್ಯನಿಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ಎರಡೂ ಮಹತ್ವವಾಗಿವೆ ಎಂದರು.
ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಮಾತನಾಡಿ, ಆರೋಗ್ಯ ಕೆಟ್ಟಾಗ ಜನರು ವೈದ್ಯರನ್ನು ಸಂಪರ್ಕಿಸುವುದು ಸಹಜ. ಆದರೆ, ವೈದ್ಯರೇ ಜನರ ಬಳಿ ಬಂದು ಆರೋಗ್ಯ ತಪಾಸಣೆ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ಬಿಜೆಪಿ ಮುಖಂಡರಾದ ಪ್ರಭು ನವಲಗುಂದಮಠ, ಚಂದ್ರಶೇಖರ ಗೋಕಾಕ, ಸುಮಿತ್ರಾ ಗುಂಜಾಳ, ರಾಧಾಬಾಯಿ ಸಫಾರೆ, ಲೋಕೇಶ ಗುಂಜಾಳ, ಮಂಜುನಾಥ ಕಾಟಕರ, ಸಂತೋಷ ಅರಕೇರಿ, ಶಿವಯ್ಯ ಹಿರೇಮಠ, ಡಾ| ರವೀಂದ್ರ, ಡಾ| ವಿವೇಕ ಪಾಟೀಲ, ರಂಗಾಬದ್ದಿ, ಮನೋಹರ ಇನ್ನಿತರರಿದ್ದರು.