ಬಾದಾಮಿ: ಬಡಜನರಿಗೆ ಉಚಿತ ಆರೋಗ್ಯ ಸೇವೆ ಒದಗಿಸಲು ಸರಕಾರ ಪ್ರತಿ ತಾಲೂಕಾಸ್ಪತ್ರೆಗೆ ಡಯಾಸಿಲಿಸ್ ಘಟಕ ಮಂಜೂರಾಗಿದ್ದು, ಸಾರ್ವಜನಿಕರು ಇದರ ಸೇವೆ ಪಡೆಯಬೇಕು ಎಂದು ಶಾಸಕ ಬಿ.ಬಿ. ಚಿಮ್ಮನಕಟ್ಟಿ ಹೇಳಿದರು.
ಪಟ್ಟಣದ ಸರಕಾರಿ ತಾಲೂಕಾಸ್ಪತ್ರೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಶಸ್ತ್ರಚಿಕಿತ್ಸೆ, ಆರೋಗ್ಯ
ತಪಾಸಣೆ, ಪುರುಷರಿಗೆ ಹೊಲಿಗೆ ರಹಿತ ಸಂತಾನ ಹರಣ ಶಸ್ತ್ರಚಿಕಿತ್ಸೆ ಮತ್ತು ಹೈಡ್ರೋಸೆಲ್ ಶಸ್ತ್ರಚಿಕಿತ್ಸಾ ಶಿಬಿರ ಮತ್ತು ಡಯಾಸಿಲಿಸ್ ಹಾಗೂ ತೀವ್ರ ನಿಗಾ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯ ಸರಕಾರದ ಪ್ರತಿಯೊಬ್ಬ ಪ್ರಜೆಗಳ ಆರೋಗ್ಯ ದೃಷ್ಟಿಯಿಂದ ಉಚಿತ ಸೇವೆ ನೀಡಲು ಕಂಕಣಬದ್ದವಾಗಿದ್ದು, ಸಾರ್ವಜನರಿಕರು ಸರಕಾರಿ ಆಸ್ಪತ್ರೆಗಳಲ್ಲಿ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡೆದುಕೊಳ್ಳಬೇಕು ಎಂದರು.
ಜಿಪಂ ಮಾಜಿ ಉಪಾಧ್ಯಕ್ಷ ಎಂ.ಎಚ್. ಚಲವಾದಿ, ಡಾ.ಬಿ.ಕೆ. ಬಾವಿ, ಐಎಂಎ ಅಧ್ಯಕ್ಷ ಡಾ.ಸಂದೀಪ ಸಜ್ಜನ ಮಾತನಾಡಿದರು. ಜಿಪಂ ಸದಸ್ಯ ಆಸೆಂಗೆಪ್ಪ ನಕ್ಕರಗುಂದಿ, ಪುರಸಭೆ ಸದಸ್ಯ ರಾಜಮಹ್ಮದ ಬಾಗವಾನ, ಶಂಕರ ಕನಕಗಿರಿ, ಇಲಿಯಾಸ್ ಜಮಾದಾರ, ಎಸ್.ಎ.ನಾಯಕ ಹಾಜರಿದ್ದರು. ಮುಖ್ಯ ವೈದ್ಯಾಧಿಕಾರಿ .ಬಿ.ಎಚ್.ರೇವಣಸಿದ್ದಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ಕವಿತಾ ಶಿವನಾಯ್ಕರ ಸ್ವಾಗತಿಸಿದರು. ಆರ್.ಬಿ. ಅಂಬಿಗೇರ ನಿರೂಪಿಸಿದರು. ಶಂಭುಲಿಂಗ ಹಿರೇಮಠ ವಂದಿಸಿದರು.