Advertisement

ಒತ್ತಡದ ಜೀವನದಿಂದ ಆರೋಗ್ಯ ಸಮಸ್ಯೆ

04:28 PM Nov 29, 2018 | Team Udayavani |

ತುಮಕೂರು: ಆರೋಗ್ಯ ಇಂದು ಎಲ್ಲರಿಗೂ ಬೇಕಾಗಿದೆ. ಮನುಷ್ಯನಿಗೆ ಅತಿ ಅಗತ್ಯವಿರುವ ವ್ಯವಸ್ಥೆಗಳಲ್ಲಿ ಆರೋಗ್ಯ ಪ್ರಮುಖ ಸ್ಥಾನ ಪಡೆದುಕೊಳ್ಳುತ್ತದೆ. ನಂತರದ ಸ್ಥಾನದಲ್ಲಿ ಶಿಕ್ಷಣ, ಆಹಾರ ಬರುತ್ತದೆ. ಒತ್ತಡದ ಬದುಕಿನಲ್ಲಿ ಹಣಗಳಿಕೆಗೆ ಹೆಚ್ಚು ಒತ್ತು ನೀಡಿದ ಪರಿಣಾಮ ಆರೋಗ್ಯ ಸಮಸ್ಯೆಗಳು ಅತಿ ಚಿಕ್ಕ ವಯಸ್ಸಿಗೆ ತಲೆದೋರುತ್ತಿದೆ ಎಂದು ಮಾಜಿ ಸಂಸದ ಜಿ.ಎಸ್‌.ಬಸವರಾಜು ಅಭಿಪ್ರಾಯಿಸಿದರು.

Advertisement

ನಗರದ ವೀರಶೈವ ಗುರುಕುಲ ವಿದ್ಯಾರ್ಥಿ ನಿಲಯದಲ್ಲಿ ಮಾಜಿ ಶಾಸಕ ದಿ.ಜಿ.ಎಸ್‌.ಶಿವನಂಜಪ್ಪ ಅವರ 90ನೇ ಹುಟ್ಟು ಹಬ್ಬದ ಅಂಗವಾಗಿ ಸಿದ್ದರಾಮೇಶ್ವರ್‌ ಬ್ಯಾಂಕ್‌, ಗುರುಕುಲ ವಿದ್ಯಾರ್ಥಿ ನಿಲಯ ಹಾಗೂ ಗುರುಕುಲ ವಿವಿಧೋದ್ದೇಶ ಸಹಕಾರ ಸಂಘ, ಬೆಂಗಳೂರಿನ ಅಪೊಲೋ ಆಸ್ಪತ್ರೆಯ ಸಹಕಾರದಲ್ಲಿ ಬುಧವಾರ ಏರ್ಪಡಿಸಿದ್ದ ಆರೋಗ್ಯ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಮೂಢ ನಂಬಿಕೆ ಬಿಡಿ: ಇಂದಿಗೂ ಹಳ್ಳಿಗಾಡಿನಲ್ಲಿ ಮನುಷ್ಯನಿಗೆ ಬರುವ ಕಾಯಿಲೆಗೂ ದೇವರು, ದಿಂಡಿರು ಕಾರಣ ಎಂಬ ಮೂಢ ನಂಬಿಕೆ ಬಿತ್ತಲಾಗುತ್ತಿದೆ. ಇದರಿಂದ ಹೊರಬರುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಇದನ್ನು ಮಾಡುವವನೇ ನಿಜವಾದ ಜನನಾಯಕ ಎಂದು ನುಡಿದರು.
 
ಮಹನೀಯರೆ ಕಾರಣ: ಜಿಲ್ಲೆಯಲ್ಲಿ ವೀರಶೈವ ಸಮುದಾಯ ಇಷ್ಟು ಉತ್ತುಂಗಕ್ಕೆರಲು ಕಾರಣರಾದವರು ದಿ.ಜಿ.ಎಸ್‌.ಶಿವನಂಜಪ್ಪ ಮತ್ತು ಮಲ್ಲಿಕಾರ್ಜುನಯ್ಯ. ಅವರನ್ನು ಸಮುದಾಯ ಎಂದಿಗೂ ಮರೆಯುವಂತಿಲ್ಲ. ಹಳ್ಳಿಗಾಡಿನಿಂದ ನಗರಕ್ಕೆ ಬಂದಂತಹ ವೀರಶೈವ ಸಮುದಾಯ ಜನರು ನಗರದಲ್ಲಿ ನೆಲೆಗೊಳ್ಳಲು ಅಗತ್ಯವಿರುವ ಎಲ್ಲಾ ವ್ಯವಸ್ಥೆಯನ್ನು ಅಂದಿನ ಕಾಲದಲ್ಲಿ ಈ ಇಬ್ಬರು ಮಹನೀಯರು ಮಾಡಿದ ಪರಿಣಾಮ, ಇಂದು ನಗರದಲ್ಲಿ ವೀರಶೈವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಲು ಸಾಧ್ಯವಾಗಿದೆ ಎಂದು ತಿಳಿಸಿದರು.

ಬೆಳಗ್ಗೆ ಬೇಗ ಏಳಿ: ಮೂಳೆ ಮತ್ತು ಕೀಲು ರೋಗ ತಜ್ಞ ಡಾ. ಯೋಗೀಶ್‌ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಅಸ್ಟಿಯಾ
ಪೋರಸಿಸ್‌ ಎಂಬ ಕಾಯಿಲೆ ಚಿಕ್ಕ ವಯಸ್ಸಿನವರನ್ನು ಕಾಡುತ್ತಿದೆ. ಇದಕ್ಕೆ ಪ್ರಮುಖ ಕಾರಣ. ದೇಹಕ್ಕೆ ಮಿಟಮಿನ್‌ ಡಿ ಅಂಶದ ಕೊರತೆ. ಬೆಳಗಿನ ವೇಳೆ ದೊರೆಯುವ ಎಳೆ ಬಿಸಿಲಿನಲ್ಲಿ ಮನುಷ್ಯನ ದೇಹಕ್ಕೆ ಮಿಟಮಿನ್‌ ಡಿ ಪುಕ್ಕಟ್ಟೆಯಾಗಿ ದೊರೆಯುತ್ತದೆ. ಬೆಳಗಿನ ಹೊತ್ತು ಬೇಗ ಎದ್ದು, ವಾಯುವಿಹಾರ ಮಾಡುವುದರಿಂದ ಮೂಳೆಗಳ ಸವೆತದಂಥ ಕಾಯಿಲೆಯಿಂದ ಹೊರಬರಬಹುದೆಂದು ಸಲಹೆ ನೀಡಿದರು.

ಉಪಯೋಗಕಾರಿ: ಸಿದ್ದರಾಮೇಶ್ವರ ಬ್ಯಾಂಕ್‌ ಬ್ಯಾಂಕಿನ ಅಧ್ಯಕ್ಷ ಬಸವರಾಜಪ್ಪ ಮಾತನಾಡಿ, ಶಿವನಂಜಪ್ಪ ಅವರು ರಾಜಕೀಯವಾಗಿ, ಸಾಮಾಜಿಕವಾಗಿ ಸಮುದಾಯದ ಬಗ್ಗೆ ಕಾಳಜಿ ಹೊಂದಿದ್ದವರು. ಅಂತಹವರ ಹೆಸರಿನಲ್ಲಿ ನಡೆಯುತ್ತಿರುವ ಈ ಆರೋಗ್ಯ ಶಿಬಿರ ಹೆಚ್ಚು ಜನರಿಗೆ ಉಪಯೋಗಕಾರಿಯಾಗಲಿ ಎಂದರು. 

Advertisement

ವೇದಿಕೆಯಲ್ಲಿ ಸಿದ್ದರಾಮೇಶ್ವರ ಬ್ಯಾಂಕ್‌ ಬ್ಯಾಂಕಿನ ಅಧ್ಯಕ್ಷರಾದ ಪಿ.ಎನ್‌.ಶಿವರುದ್ರಯ್ಯ, ಉಪಾಧ್ಯಕ್ಷರಾದ ಬಿ.ಬಿ.ಮಹದೇವಯ್ಯ, ನಿರ್ದೇಶಕರಾದ ಬಿ.ಎಸ್‌.ಜೋತಿಲಕ್ಷ್ಮೀ, ಗುರುಕುಲ ವಿವಿಧೋದ್ದೇಶ ಬ್ಯಾಂಕ್‌ ಬ್ಯಾಂಕ್‌ನ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ಸಕ್ಕರೆ ರೋಗ ತಜ್ಞರಾದ ಡಾ.ಧೀರಜ್‌ ಕುಮಾರ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಶಿಬಿರದಲ್ಲಿ ಹೃದ್ರೋಗ, ಮೂಳೆ ಮತ್ತು ಕೀಲು, ಮಧುಮೇಹ, ರಕ್ತದೊತ್ತಡ ಹಾಗೂ ಇನ್ನಿತರ ಕಾಯಿಲೆ ಬಗ್ಗೆ ಅಪೊಲೋ ಆಸ್ಪತ್ರೆಯ ತಜ್ಞ ವೈದ್ಯರು ರೋಗಿಗಳನ್ನು ಪರೀಕ್ಷಿಸಿ, ಸಲಹೆ, ಸೂಚನೆ ಜೊತೆಗೆ, ಔಷಧ ವಿತರಿಸಿದರು. ಶಿಬಿರದಲ್ಲಿ 500ಕ್ಕೂ ಹೆಚ್ಚು ಜನರ ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next