Advertisement

Pregnancy: ಗರ್ಭಿಣಿಯರು ಮತ್ತು ಅವರ ಕುಟುಂಬದ ಕ್ಷೇಮ

03:06 PM Oct 08, 2023 | Team Udayavani |

ಇಂದು, ಮಹಿಳೆಯರ ಸಶಕ್ತೀಕರಣ ಒಂದು ಹೊಸ ಮಜಲಿಗೆ ತಲುಪಿರುವುದು ನಿಚ್ಚಳವಾಗಿ ಕಾಣಸಿಗುತ್ತದೆ. ಒಂದು ಕಾಲದಲ್ಲಿ ಸಮಾಜದಲ್ಲಿ ಪುರುಷರಿಗೆಂದೇ ಮೀಸಲಾಗಿದ್ದ ವಿಭಿನ್ನ ಪಾತ್ರಗಳನ್ನು ಮಹಿಳೆಯರು ಸುಲಲಿತವಾಗಿ ನಿರ್ವಹಿಸುತ್ತಿದ್ದಾರೆ. ಹಲವು ದೇಶಗಳಲ್ಲಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ ಜಾಗತಿಕ ಅಂದೋಲನಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಅವರು ಸಾಧಿಸಿರುವ ಯಶಸ್ಸಿನ ಹೊರತಾಗಿಯೂ ತಾಯಿಯಾಗುವ ಆಯ್ಕೆಯನ್ನು ಕೈಗೊಂಡ ಮಹಿಳೆಯರು ಅನೇಕ ವೈಯಕ್ತಿಕ ಸವಾಲುಗಳನ್ನು ಎದುರಿಸುತ್ತಾರೆ. ಒಂಬತ್ತು ತಿಂಗಳ ಗರ್ಭಾವಸ್ಥೆ ಅವರ ದೇಹದಲ್ಲಿ ಬದಲಾವಣೆಗಳನ್ನು ತರುವುದರ ಜತೆಗೆ ಅವರ ಕೌಟುಂಬಿಕ ಜೀವನದಲ್ಲಿ ಭಾವನಾತ್ಮಕ, ಮಾನಸಿಕ ಮತ್ತು ಆರ್ಥಿಕ ಬದಲಾವಣೆಗಳ ಬೇಡಿಕೆ ಇಡುತ್ತದೆ. ಈ ಪರಿವರ್ತನೆಯ ಸಮಯದಲ್ಲಿ ಮಹಿಳೆ ಮತ್ತು ಅವರ ಕುಟುಂಬಗಳಿಗೆ ನೆರವಾಗಲು ಮತ್ತು ಅವರು ಸುಲಲಿತವಾಗಿ ಪೋಷಕರ ಪಾತ್ರವನ್ನು ನಿಭಾಯಿಸುವುದನ್ನು ಖಚಿತ ಪಡಿಸುವುದಕ್ಕಾಗಿ, ಭಾರತ ಸರಕಾರವು ವಿವಿಧ ಕಾನೂನುಗಳು ಮತ್ತು ಪಾಲಿಸಿಗಳನ್ನು ಅನುಷ್ಠಾನಕ್ಕೆ ತಂದಿದೆ.

Advertisement

ಭಾರತದಲ್ಲಿ ಮದುವೆಯಾಗಲು ಕಾನೂನುಬದ್ಧ ವಯಸ್ಸು ಹುಡುಗಿಯರಿಗೆ 18 ಮತ್ತು ಹುಡುಗರಿಗೆ 21 ವರ್ಷಗಳಾಗಿರುತ್ತವೆ. ಈ ಕಾನೂನುಬದ್ಧ ವಯಸ್ಸನ್ನು ತಲುಪಿದ ಬಳಿಕ, ಭಾರತದ ಪ್ರತಿಯೊಬ್ಬ ನಾಗರಿಕನಿಗೂ ತಮ್ಮ ಕುಟುಂಬವನ್ನು ಆರಂಭಿಸಲು ಬಯಸಿದಾಗ ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವಿರುತ್ತದೆ. ತೀರಾ ಇತ್ತೀಚೆಗೆ, ಹುಡುಗಿಯರು ಶಿಕ್ಷಣ ಮತ್ತು ಉದ್ಯೋಗ ಪಡೆಯಲು ಹಾಗೂ ಆರ್ಥಿಕ ಸ್ವಾವಲಂಬನೆ ಪಡೆಯಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ, ಲಿಂಗ ಸಮಾನತೆಗೆ ಪ್ರೋತ್ಸಾಹ ನೀಡುವುದಕ್ಕಾಗಿ ಬಾಲ್ಯ ವಿವಾಹ ನಿಷೇಧ ತಿದ್ದುಪಡಿ, ಕಾಯ್ದೆ , 2021ರ (Prohibition of Child Marriage (Amendment), Bill 2021) ಅಡಿ ಸ್ತ್ರೀಯರ ಕನಿಷ್ಟ ವಿವಾಹ ವಯಸ್ಸನ್ನು 18ರಿಂದ 21 ವರ್ಷಗಳಿಗೆ ಏರಿಸಲು ಭಾರತ ಸರಕಾರ ಯೋಜಿಸಿದೆ. ಕಾಯ್ದೆಯು ಪ್ರಸ್ತುತ ಸಂಸತ್ತಿನಲ್ಲಿ ಚರ್ಚೆಯಲ್ಲಿದೆ. ಹಾಗಿದ್ದರೂ ಈ ಗಮನಾರ್ಹ ಬದಲಾವಣೆಗೆ ಸಿದ್ಧರಾಗಲು ತಿದ್ದುಪಡಿಯ ಅಧಿಸೂಚನೆಯ ದಿನಾಂಕದಿಂದ ತೊಡಗಿ ಎರಡು ವರ್ಷಗಳ ಕಾಲಾವಕಾಶ ಇರುವುದಾಗಿ ಸರಕಾರವು ನಾಗರಿಕರಿಗೆ ಭರವಸೆ ನೀಡಿದೆ.

ಪೊಕ್ಸೊ ಕಾಯ್ದೆಯು ಲಿಂಗ ತಾರತಮ್ಯವಿಲ್ಲದೆ ಮಕ್ಕಳು ಮತ್ತು ಹದಿಹರೆಯದವರು (ಗಂಡು -ಹೆಣ್ಣು ಇಬ್ಬರೂ) ಯಾವುದೇ ಬಗೆಯ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗದಂತೆ ರಕ್ಷಿಸುವುದನ್ನು ಖಚಿತಪಡಿಸುತ್ತದೆ ಮತ್ತು ತಮ್ಮ ಮಕ್ಕಳ ಸುರಕ್ಷೆಗೆ ಸಂಬಂಧಿಸಿದಂತೆ ಹೆತ್ತವರಿಗೆ ಭದ್ರತೆಯ ಭಾವನೆ ಒದಗಿಸುತ್ತದೆ.

ಪೊಕ್ಸೊ POCSO

(Protection of Children from Sexual Offences) ಕಾಯ್ದೆ 2012ರ ಪ್ರಕಾರ:

Advertisement

„ ­18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಅಂದರೆ ಮಗು, ಮಕ್ಕಳು, ಹುಡುಗರು ಮತ್ತು ಹುಡುಗಿಯರನ್ನು ಯಾವುದೇ ತರಹದ ಲೈಂಗಿಕ ದೌರ್ಜನ್ಯದಿಂದ ಈ ಕಾಯ್ದೆ ರಕ್ಷಿಸುತ್ತದೆ.

„ ದೌರ್ಜನ್ಯಕ್ಕೊಳಗಾದ ಮಗುವಿನ ಗುರುತನ್ನು ಗೌಪ್ಯವಾಗಿಡಲಾಗುತ್ತದೆ ಮತ್ತು ಗುರುತನ್ನು ಕಾಪಾಡಲು ವಿಫ‌ಲವಾದಲ್ಲಿ ಕಟ್ಟುನಿಟ್ಟಿನ ಶಿಕ್ಷೆಗೊಳಗಾಗಬೇಕಾಗುತ್ತದೆ.

„ ­ಮಕ್ಕಳ ಮೇಲಿನ ಯಾವುದೇ ದೌರ್ಜನ್ಯ (ದೈಹಿಕ, ಮಾನಸಿಕ ಅಥವಾ ಭಾವನಾತ್ಮಕ) ವರದಿಯಾದಾಗ, ಮಕ್ಕಳೊಂದಿಗೆ ಸ್ನೇಹಭಾವದಿಂದ ತನಿಖೆಯನ್ನು ನಡೆಸಲಾಗುವುದು.

„ ಅಪ್ರಾಪ್ತ ವಯಸ್ಸಿನ ಹುಡುಗಿ (18ಕ್ಕಿಂತ ಕಡಿಮೆ) ಲೈಂಗಿಕ ಸಂಭೋಗಕ್ಕೆ ಸಮ್ಮತಿ ಸೂಚಿಸಲು ಶಕ್ತಳಾಗಿರುವುದಿಲ್ಲ.

„ ­ಅಪ್ರಾಪ್ತ ವಯಸ್ಸಿನ ಹುಡುಗಿ, ಮದುವೆಯಾಗಿ ಅಥವಾ ಮದುವೆಯಾಗದೆ ಒಂದು ವೇಳೆ ಗರ್ಭಿಣಿಯಾಗಿರುವುದು ಕಂಡುಬಂದಲ್ಲಿ, ಆಕೆಯನ್ನು ಲೈಂಗಿಕ ದೌರ್ಜನ್ಯಕ್ಕೊಳಗಾದ ಪೀಡಿತೆ ಎಂದು ಪರಿಗಣಿಸಲಾಗುತ್ತದೆ.

ಗರ್ಭಪಾತ (MTP ಕಾಯ್ದೆ)

ಜನನ ನಿಯಂತ್ರಣ ಮತ್ತು ಕುಟುಂಬ ಯೋಜನೆಗಾಗಿ ಔಷಧ ಅಂಗಡಿಗಳಲ್ಲಿ ದೊರಕುವ ತುರ್ತು ಗರ್ಭನಿರೋಧಕಗಳು, ತಾತ್ಕಾಲಿಕ ಗರ್ಭತಡೆ ವಿಧಾನಗಳು ಮತ್ತು ಶಾಶ್ವತ ಸಂತಾನಹರಣದಂಥ ವಿವಿಧ ಗರ್ಭನಿರೋಧಕ ಆಯ್ಕೆಗಳಲ್ಲಿ ಭಾರತದಲ್ಲಿ ಲಭ್ಯವಿದೆ. ಆದರೂ ಈ ವಿಧಾನಗಳು ವಿಫ‌ಲವಾದಲ್ಲಿ, ವೈದ್ಯಕೀಯ ಗರ್ಭಪಾತ (ಕಾಯ್ದೆಯಡಿ ನಾಗರಿಕರು ಕಾನೂನುಬದ್ಧವಾಗಿ ಗರ್ಭಪಾತ) ಮಾಡಿಸಿಕೊಳ್ಳಲು ಅಥವಾ ಗರ್ಭಾವಸ್ಥೆಯನ್ನು ಮುಂದುವರಿಸದಿರಲು ಅವಕಾಶವಿದೆ.

ಇಡೀ ದೇಶದಲ್ಲಿ ಅನ್ವಯವಾಗುವ ಈ ಕಾನೂನು ಎಪ್ರಿಲ್‌ 1, 1972ರಿಂದ ಜಾರಿಯಲ್ಲಿದೆ ಮತ್ತು ತಮ್ಮ ವೈವಾಹಿಕ ಸ್ಥಿತಿಯನ್ನು ಪರಿಗಣಿಸದೆ ಎಲ್ಲ ಮಹಿಳೆಯರಿಗೂ ಈ ಕಾಯ್ದೆ ಅನುವು ಮಾಡಿದೆ. ಈ ಹಿಂದೆ ಗರ್ಭಾವಸ್ಥೆಯ 20ನೇ ವಾರದ ತನಕ ಕಾಯ್ದೆಗೆ ಅನುಮತಿಯಿತ್ತು. ಆದರೆ 2021 ಕಾಯ್ದೆಗೆ ತಿದ್ದುಪಡಿ ಮಾಡಲಾಗಿದ್ದು, ವಿವಿಧ ಸ್ಥಿತಿಗಳು, ಪ್ರಕರಣಗಳು ಮತ್ತು ಹಲವಾರು ವರ್ಷಗಳಿಂದ ಕೋರ್ಟುಗಳು ಹಾಗೂ ಕ್ಲಿನಿಕಲ್‌ ಸನ್ನಿವೇಶಗಳಲ್ಲಿ ಕಂಡುಬಂದ ಕಾರಣಗಳನ್ನು ಗಮನದಲ್ಲಿಟ್ಟುಕೊಂಡು 24 ವಾರಗಳವರೆಗಿನ ಭ್ರೂಣದ ಗರ್ಭಪಾತಕ್ಕೆ ಅವಕಾಶ ಕಲ್ಪಿಸಲಾಗಿದೆ.

ಹೊಸ ತಿದ್ದುಪಡಿ ಕಾಯ್ದೆಯಡಿ 20ರಿಂದ 24 ವಾರಗಳ ನಡುವಿನ ಗರ್ಭಪಾತಕ್ಕೆ ಅರ್ಹರಾಗುವ ಮಹಿಳೆಯರ ಆರು ವರ್ಗಗಳನ್ನು ಸರಕಾರವು ದೃಢೀಕರಿಸಿದೆ. ಆ ವರ್ಗಗಳು ಇಂತಿವೆ:

  1. ಅತ್ಯಾಚಾರ, ಲೈಂಗಿಕ ದೌರ್ಜನ್ಯ ಅಥವಾ ನಿಷಿದ್ಧ ಸಂಭೋಗದ ಸಂತ್ರಸ್ತರು
  2. ಅಪ್ರಾಪ್ತ ವಯಸ್ಕರು (18ಕ್ಕಿಂತ ಕಡಿಮೆ)
  3. ಇನ್ನೂ ಗರ್ಭಿಣಿಯಾಗಿರುವಾಗಲೇ ತಮ್ಮ ವೈವಾಹಿಕ ಸ್ಥಿತಿಯಲ್ಲಿ ಬದಲಾವಣೆಗೆ (ಅಂದರೆ ವಿಧವೆಯಾಗುವುದು ಅಥವಾ ಡಿವೋರ್ಸ್‌ ಪಡೆದುಕೊಳ್ಳುವುದು) ಒಳಗಾದವರು.
  4. ವಿಕಲಾಂಗ ವ್ಯಕ್ತಿಗಳ ಹಕ್ಕುಗಳ ಕಾಯ್ದೆ 2016ರ ಅಡಿ ಅಂಗವೈಕಲ್ಯವುಳ್ಳವರು ಅಂದರೆ ದೈಹಿಕ ಅಂಗ ಊನಕ್ಕೆ ಹೊಂದಿರುವ ಮಹಿಳೆಯರು.
  5. ಬೌದ್ಧಿಕ ಮಾಂದ್ಯತೆಯುಳ್ಳವರು ಹಾಗೂ ಮಾನಸಿಕ ಅಸ್ವಸ್ಥ ಮಹಿಳೆಯರು
  6. ಭ್ರೂಣದಲ್ಲಿ ಕಂಡುಬಂದ ವಿಕೃತಿ ಅಂದರೆ, ಮಗು ಜೀವನಕ್ಕೆ ಹೊಂದಿಕೊಂಡು ಹೋಗಲು ಆಗದ ಸ್ಥಿತಿಯಲ್ಲಿದ್ದರೆ ಅಥವಾ ಒಂದು ವೇಳೆ ಮಗು ಜನಿಸಿದಲ್ಲಿ ತೀವ್ರ ದೈಹಿಕ ಅಥವಾ ಮಾನಸಿಕ ವೈಕಲ್ಯಗಳಿದ್ದರೆ ಆ ಭ್ರೂಣದ ಗರ್ಭಪಾತಕ್ಕೆ ಅವಕಾಶವಿದೆ.

ಸಂತಾನೋತ್ಪತ್ತಿ ನೆರವು ತಂತ್ರಜ್ಞಾನಗಳು ಮತ್ತು ಬಾಡಿಗೆ ತಾಯ್ತನ (Assisted reproductive technologies and Surrogacy)

ದಂಪತಿಗೆ ಗರ್ಭ ಧರಿಸಲು ಸಾಧ್ಯವಾಗದಿದ್ದಲ್ಲಿ ಅಥವಾ ಬಂಜೆತನ ಹೊಂದಿದ್ದಲ್ಲಿ, ಅವರು ತಮ್ಮದೇ (ಜೈವಿಕ) ಮಗುವನ್ನು ಹೊಂದಲು ಆಯ್ಕೆಗಳು ಲಭ್ಯವಿವೆ. ಫ‌ಲವತ್ತತೆಯ ಔಷಧ ಮತ್ತು ಸಂತಾನೋತ್ಪತ್ತಿ ನೆರವು ತಂತ್ರಜ್ಞಾನಗಳಲ್ಲಿ (ಅಸಿಸ್ಟೆಡ್‌ ರಿಪ್ರೊಡಕ್ಟಿವ್‌ ಟೆಕ್ನಾಲಜಿ) ಆಗಿರುವ ಸುಧಾರಣೆಗಳಿಗೆ ಕೃತಜ್ಞತೆಗಳನ್ನು ಹೇಳಬೇಕು. ಸಂತಾನೋತ್ಪತ್ತಿ ನೆರವು ತಂತ್ರಜ್ಞಾನ ಅಸಿಸ್ಟೆಡ್‌ ರಿಪ್ರೊಡಕ್ಟಿವ್‌ ಟೆಕ್ನಾಲಜಿ (ART) ಯು ಬಂಜೆತನದಿಂದಾಗಿ ಗರ್ಭ ಧರಿಸಲು ಕಷ್ಟಪಡುತ್ತಿರುವ ದಂಪತಿಗೆ ಅಥವಾ ಕೃತಕ ವಿಧಾನದಿಂದ ಮಕ್ಕಳನ್ನು ಪಡೆಯಲು ಸಾಧ್ಯವಾಗುವಂತೆ ಜನರಿಗೆ ಸಹಾಯ ಮಾಡಲು ವಿನ್ಯಾಸಗೊಳಿಸಲಾದ ಒಂದು ಫ‌ಲವತ್ತತೆ ಚಿಕಿತ್ಸೆಯ ಶ್ರೇಣಿಯನ್ನು ಹೊಂದಿದೆ. ಈ ಚಿಕಿತ್ಸೆಗಳು ಗರ್ಭಾವಸ್ಥೆಯ ಬಾಡಿಗೆ ತಾಯ್ತನ (ಇಲ್ಲಿ ಬಾಡಿಗೆ ತಾಯಿಯು ಮಗುವಿನೊಂದಿಗೆ ಜೈವಿಕ ಸಂಬಂಧವನ್ನು ಹೊಂದಿರುವುದಿಲ್ಲ), ಗ್ಯಾಮಿಟ್‌ಗಳ (ವೀರ್ಯ ಅಥವಾ ಮೊಟ್ಟೆ ) ದಾನ ಮತ್ತು ಇನ್‌ -ವಿಟ್ರೋ ಫ‌ರ್ಟಿಲೈಸೇಶನ್‌ (ಪ್ರಯೋಗಶಾಲೆಯಲ್ಲಿ ಅಂಡವನ್ನು ಫ‌ಲವತ್ತುಗೊಳಿಸುವುದು)-ಇವುಗಳನ್ನು ಒಳಗೊಂಡಿರುತ್ತದೆ.

ಈ ತಂತ್ರಜ್ಞಾನಗಳ ಕಾನೂನುಬದ್ಧ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಭಾರತದಲ್ಲಿ ಯಾವುದೇ ಸಂಭಾವ್ಯ ದುರ್ಬಳಕೆಯನ್ನು ತಡೆಯಲು, ಲೋಕಸಭೆಯು ಡಿಸೆಂಬರ್‌ 1, 2021ರಂದು ಕೆಲವು ತಿದ್ದುಪಡಿಗಳೊಂದಿಗೆ ಸಂತಾನೋತ್ಪತ್ತಿ ನೆರವು ತಂತ್ರಜ್ಞಾನ ಮಸೂದೆಯನ್ನು ಅಂಗೀಕರಿಸಿತು.

„ ಈ ಕ್ಲಿನಿಕ್‌ಗಳಿಗೆ ಬರಲು ದಂಪತಿ ಒಂದು ವರ್ಷದ ಅಸುರಕ್ಷಿತ ಲೈಂಗಿಕ ಸಂಪರ್ಕದ ಬಳಿಕವೂ ಬಂಜೆತನ ಹೊಂದಿದ್ದಾರೆ ಅಥವಾ ಗರ್ಭ ಧರಿಸಲು ಅಡ್ಡಿಯಾಗುವ ಇತರ ಯಾವುದೇ ಸಾಬೀತಾದ ವೈದ್ಯಕೀಯ ಸ್ಥಿತಿಗಳನ್ನು ಹೊಂದಿದ್ದಾರೆ ಎಂದು ವೈದ್ಯಕೀಯವಾಗಿ ದೃಢಪಟ್ಟಿರಬೇಕು.

„ ಜತೆಗೆ, ಮದುವೆಯಾದ ದಂಪತಿಗಳಲ್ಲಿ ಮಹಿಳೆಯು 21ರಿಂದ 50 ವರ್ಷ ನಡುವಿನ ವಯಸ್ಸಿನವರಾಗಿದ್ದು ಮತ್ತು ಪುರುಷರನ್ನು 21ರಿಂದ 55 ವರ್ಷ ನಡುವಿನ ವಯಸ್ಸಿನವರಾಗಿದ್ದರೆ ಮಾತ್ರ ಎಆರ್‌ಟಿ ಸೇವೆಗಳನ್ನು ಬಳಸಿಕೊಳ್ಳಬಹುದು.

ಬಾಡಿಗೆ ತಾಯ್ತನ ಎಂಬುದು ಇನ್ನೊಂದು ಪ್ರಮುಖ ಸಂತಾನೋತ್ಪತ್ತಿ ನೆರವು ತಂತ್ರಜ್ಞಾನವಾಗಿದ್ದು, ಇದರಲ್ಲಿ ಒಬ್ಬ ಮಹಿಳೆ ಇನ್ನೊಬ್ಬ ದಂಪತಿಗಾಗಿ ಗರ್ಭಿಣಿಯಾಗುತ್ತಾರೆ. ಈ ಪ್ರಕ್ರಿಯೆಯಲ್ಲಿ ಒಳಗೊಂಡ ಎಲ್ಲರಿಗೂ ಈ ವ್ಯವಸ್ಥೆಯಿಂದ ಪ್ರಯೋಜನವಾದರೂ ಇದರಲ್ಲಿ ಸಂಕೀರ್ಣವಾದ ಸಾಮಾಜಿಕ, ನೈತಿಕ, ಮೌಲ್ಯಗಳಿಗೆ ಸಂಬಂಧಿಸಿದ ಮತ್ತು ಕಾನೂನು ಸಮಸ್ಯೆಗಳು ಒಳಗೊಂಡಿರುತ್ತವೆ. ಆದ್ದರಿಂದ ಅವುಗಳನ್ನು ನಿಭಾಯಿಸಲು ಕಾನೂನಾತ್ಮಕ ನಿಯಂತ್ರಗಳು ಅಳವಡಿಕೆಯಲ್ಲಿದೆ. ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಾಡಿಗೆ ತಾಯ್ತನ ಮಸೂದೆಯು ಹಲವು ಬದಲಾವಣೆಗಳಿಗೆ ಒಳಗಾಗಿದೆ.

„ ಬಾಡಿಗೆ ತಾಯ್ತನ (ನಿಯಂತ್ರಣ) ಕಾಯ್ದೆ, ಡಿಸೆಂಬರ್‌ 2021ರಲ್ಲಿ ಅಂಗೀಕಾರ: ಇದರ ಪ್ರಕಾರ, ಬಾಡಿಗೆ ತಾಯ್ತನದಿಂದ ಪೋಷಕರಾಗಲು ಉದ್ದೇಶಿಸಿರುವ, ಕಾನೂನುಬದ್ಧವಾಗಿ ವಿವಾಹವಾಗಿರುವ ಮತ್ತು ವೈದ್ಯಕೀಯವಾಗಿ ಬಾಡಿಗೆ ತಾಯ್ತನಕ್ಕಾಗಿ ಅಂಡ ಅಥವಾ ವೀರ್ಯದಾನಕ್ಕೆ ಅಗತ್ಯವಿರುವ ವಯಸ್ಸಿಗೆ ತಲುಪಿರುವ ದಂಪತಿಗಳು ಮಾತ್ರ ಈ ಸೌಲಭ್ಯವನ್ನು ಬಳಸಬಹುದು.

ಲಿಂಗ ಸಮಾನತೆಯನ್ನು ಎತ್ತಿ ಹಿಡಿಯುವ ಕಾನೂನುಗಳು (PCPNDT ಕಾಯ್ದೆ)

ಸಮಾಜದ ನಿರೀಕ್ಷೆಗಳು ಮತ್ತು ಪದ್ಧತಿಗಳು ಕೂಡ ತಾಯಿಯ ಆರೋಗ್ಯದ ಮೇಲೆ ಋಣಾತ್ಮಕ ಪ್ರಭಾವ ಬೀರಬಹುದು. ಇದರಿಂದ ಕುಟುಂಬ ಜೀವನದ ಮೇಲೂ ಪರಿಣಾಮ ಉಂಟಾಗುತ್ತದೆ. ಗರ್ಭಾವಸ್ಥೆಯ ಸಮಯದಲ್ಲಿ, ಮಗುವಿನ ನಿರೀಕ್ಷೆಯಲ್ಲಿರುವ ತಂದೆತಾಯಂದಿರು ಸಮಾಜದವರಿಂದ, ಸಂಬಂಧಿಕರಿಂದ ಮತ್ತು ಇತರ ಕುಟುಂಬ ಸದಸ್ಯರಿಂದ ಹಲವು ಬಗೆಯ ಸಲಹೆಗಳನ್ನು ಪಡೆಯುತ್ತಾರೆ. ದುರದೃಷ್ಟವಶಾತ್‌, ಇನ್ನೂ ಹುಟ್ಟಬೇಕಿರುವ ಮಗುವಿನ ಲಿಂಗದ ಬಗ್ಗೆಯೂ ಸಾಕಷ್ಟು ಚರ್ಚೆಗಳಾಗುತ್ತವೆ. ಈ ಹಿಂದೆ ವರದಕ್ಷಿಣೆಯ ಕಾರಣದಿಂದ ಹೆಣ್ಣು ಮಗುವಿನ ಜನನ ಸಮಾಜಕ್ಕೆ ಒಂದು ಹೊರೆ ಎಂಬುದಾಗಿ ಕುಟುಂಬಗಳು ನಂಬುತ್ತಿದ್ದವು. ಇದು ಗಂಡು ಮಗುವಿಗೆ ಹೆಚ್ಚಿನ ಆದ್ಯತೆ ಕೊಡಲು ಕಾರಣವಾಯಿತು. ವರದಕ್ಷಿಣೆ ಪದ್ಧತಿ ಈಗ ಚಾಲ್ತಿಯಲ್ಲಿ ಇಲ್ಲದಿದ್ದರೂ ಕೂಡ, ಗಂಡು ಮಗುವಿಗೆ ಹಂಬಲಿಸುವ ಕ್ರಮ ಈಗಲೂ ಇದೆ.

ಆದ್ದರಿಂದ 2003ರಲ್ಲಿ ಗರ್ಭಧಾರಣೆ-ಪೂರ್ವ ಮತ್ತು ಪ್ರಸವ – ಪೂರ್ವ ರೋಗನಿರ್ಣಯ ತಂತ್ರ ಗಳ (ಲಿಂಗ ಆಯ್ಕೆಯ ನಿಷೇಧ) ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಲಿಂಗ ಬಹಿರಂಗಪಡಿಸುವ ಅವ್ಯವಸ್ಥೆ ಮತ್ತು ಹೆಣ್ಣು ಭ್ರೂಣಹತ್ಯೆಯ ಹಾನಿಕಾರಕ ಪದ್ಧತಿ ತಡೆಗಟ್ಟಲು ಸರಕಾರ ಕ್ರಮ ಕೈಗೊಂಡಿದೆ.  ಈ ಕಾಯ್ದೆಯ ಪ್ರಕಾರ:

„ ಇನ್ನೂ ಹುಟ್ಟದಿರುವ ಮಗುವಿನ ಲಿಂಗವನ್ನು ಬಹಿರಂಗಪಡಿಸುವುದು ಕಾನೂನುಬಾಹಿರವಾಗಿದೆ.

„ ಹೀಗೆ ಮಾಡುವವರು ಅಥವಾ ಇಂತಹ ರೋಗನಿರ್ಣಯ ಕಾರ್ಯವಿಧಾನಗಳಿಗೆ ಒಳಗಾಗಲು ಮಹಿಳೆಯನ್ನು ಒತ್ತಾಯಿಸು ವವರು ಜೈಲುಶಿಕ್ಷೆಗೆ ಒಳಗಾಗಬೇಕಾಗುತ್ತದೆ ಅಥವಾ ಭಾರಿ ದಂಡ ತೆರಬೇಕಾಗುತ್ತದೆ.

ಲಿಂಗವನ್ನು ಪರಿಗಣಿಸದೆ ಎಲ್ಲ ಮಕ್ಕಳಿಗೆ ನ್ಯಾಯ ಮತ್ತು ಸಮಾನತೆಯನ್ನು ಉತ್ತೇಜಿಸಲು ಈ ಕಾನೂನುಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದಿರುವುದು ಮುಖ್ಯವಾಗಿದೆ. ಈ ಸಮಸ್ಯೆಗಳ ಬಗ್ಗೆ ತಿಳುವಳಿಕೆ ಪಡೆಯುವ ಮೂಲಕ ಮತ್ತು ಜಾಗೃತರಾಗಿ ಉಳಿಯುವ ಮೂಲಕ, ನಾವು ನ್ಯಾಯಯುತ ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ಕೆಲಸ ಮಾಡಬಹುದು.

ಗರ್ಭಿಣಿ ಮಹಿಳೆಯರಿಗೆ ನೆರವಾಗಲು ಯೋಜನೆಗಳು

ಗರ್ಭಿಣಿ ಮಹಿಳೆಯರಿಗೆ ಬೆಂಬಲ ನೀಡುವ ಸಲುವಾಗಿ ಕಾನೂನುಗಳ ಜತೆಗೆ ಸರಕಾರವು ವಿವಿಧ ಅರ್ಥಿಕ ನೆರವು ಮತ್ತು ಆರೋಗ್ಯ ಉತ್ತೇಜಿಸುವ ಯೋಜನೆಗಳನ್ನು ಒದಗಿಸುತ್ತದೆ. ಪ್ರಸ್ತುತ ಲಭ್ಯವಿರುವ ಸರಕಾರಿ ಯೋಜನೆಗಳೆಂದರೆ:

ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ

ಸರಕಾರಿ ಕಾರ್ಯಕ್ರಮದ ಭಾಗವಾಗಿ,

„ ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಸಂಬಂಧಿಸಿದ ನಿರ್ದಿಷ್ಟ ಷರತ್ತುಗಳನ್ನು ಪೂರೈಸಿದಲ್ಲಿ ಕುಟುಂಬದ ಜೀವಂತ ಮಗುವಿಗೆ, ಗರ್ಭಿಣಿ ಮಹಿಳೆ ಮತ್ತು ಹಾಲುಣಿಸುವ ತಾಯಂದಿರ (Pregnant Women & Lactating Mothers) ಬ್ಯಾಂಕ್‌ /ಪೋಸ್ಟ್‌ ಆಫೀಸ್‌ ಖಾತೆಗೆ ನೇರವಾಗಿ ರೂ. 5,000 ಪ್ರೋತ್ಸಾಹ ಧನ.

„ ಮಗುವಿನ ನಿರೀಕ್ಷೆಯಲ್ಲಿರುವ ತಾಯಂದಿರು ತಮ್ಮ ಗರ್ಭಾವಸ್ಥೆಯ ಮೊದಲು ಆರು ತಿಂಗಳಲ್ಲಿ ರೂ. 1,000, ಪ್ರಸವದ ಬಳಿಕ ರೂ. 2,000 ಮತ್ತು ಅವರ ಮಗು ಮೊದಲ ಸುತ್ತಿನ ಲಸಿಕೆಗಳನ್ನು ಪಡೆದ ಬಳಿಕ ಹೆಚ್ಚುವರಿಯಾಗಿ ರೂ. 2,000 ಪಡೆಯುತ್ತಾರೆ.

„ ಈ ಯೊಜನೆಗೆ ಅರ್ಜಿ ಸಲ್ಲಿಸಲು ಮಹಿಳೆಯರು ಗೂಗಲ್‌ ಪ್ಲೇ ಸ್ಟೋರ್‌ನಿಂದ PMMVY ಆ್ಯಪ್‌ನ್ನು ಡೌನ್ಲೋಡ್‌ ಮಾಡಿಕೊಳ್ಳಬಹುದು. ಅಥವಾ //pmmvy.nic.in/ ಮೂಲಕ ನೋಂದಾಯಿಸಿಕೊಳ್ಳಬಹುದು.

ಪೂರಕ ಪೋಷಣೆ ಕಾರ್ಯಕ್ರಮ

ಗರ್ಭಿಣಿಯರಲ್ಲಿ ಹೆಚ್ಚುತ್ತಿರುವ ರಕ್ತಹೀನತೆ ಮತ್ತು ನವಜಾತ ಶಿಶುಗಳಲ್ಲಿ ಅಪೌಷ್ಠಿಕತೆಯ ಪ್ರಕರಣಗಳನ್ನು ಪರಿಗಣಿಸಿ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸೇವೆಗಳು (Integrated Child Development Services) ಗರ್ಭಿಣಿಯರಿಗೆ ಮತ್ತು ಹಾಲುಣಿಸುತ್ತಿ ರುವ ಮಹಿಳೆಯರಿಗೆ ಪೌಷ್ಠಿಕ ಆಹಾರ ವನ್ನು ಒದಗಿಸಲು ಪೂರಕ ಪೋಷಣೆ ಕಾರ್ಯಕ್ರಮ ಜಾರಿಗೆ ತಂದಿದೆ.

ಕರ್ನಾಟಕ ತಾಯಿ ಭಾಗ್ಯ ಯೋಜನೆ

ಈ ಯೋಜನೆಯು ಬಿಪಿಎಲ್‌ (ಬಡತನ ರೇಖೆಗಿಂತ ಕೆಳಗಿರುವ) ಕುಟುಂಬಗಳ ಗರ್ಭಿಣಿಯರಿಗೆ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ – ಎಎನ್‌ಸಿ (ಪ್ರಸವಪೂರ್ವ ಆರೈಕೆ) ಕಾರ್ಡ್‌ಗಳ ಮೂಲಕ ಗುರುತಿಸಲಾದ ಎರಡು ಜೀವಂತ ಹೆರಿಗೆಗಳವರೆಗೆ ನಗದು ರಹಿತ ಉಚಿತ ಚಿಕಿತ್ಸೆಯನ್ನು ಒದಗಿಸುತ್ತದೆ.

ಅರ್ಹತೆ

„ ಗರ್ಭಿಣಿ ಅಥವಾ ಹಾಲುಣಿಸುತ್ತಿರುವ ಮಹಿಳೆಯರು

„ ಕರ್ನಾಟಕದಲ್ಲಿ ವಾಸಿಸುವವರು.

„ ಬಿಪಿಲ್‌ ಅಥವಾ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಕ್ಕೆ ಸೇರಿದವರು.

ಪ್ರಯೋಜನಗಳು

„ ಸರಕಾರಿ ಆಸ್ಪತ್ರೆಗಳು ಗರ್ಭಿಣಿ ಮಹಿಳೆಯರಿಗೆ ಉಚಿತ ಹೆರಿಗೆ, ನಗದುರಹಿತ ಚರಿತ್ರೆ, ಸಾರಿಗೆ, ಕರ್ನಾಟಕ ಮತ್ತು ಔಷಧಗಳನ್ನು ಒದಗಿಸುವುದು.

„ ಅರ್ಹ ಫ‌ಲಾನುಭವಿಗಳು ತಮ್ಮ ವ್ಯಾಪ್ತಿಯಲ್ಲಿ ಎಎನ್‌ಸಿ ಕಾರ್ಡ್‌ ಪಡೆಯಲು ಆಶಾ ಕಾರ್ಯಕರ್ತೆಯರೊಂದಿಗೆ ಅಥವಾ ಕಿರಿಯ ಮಹಿಳಾ ಅಧಿಕಾರಿಯೊಂದಿಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಖಾಸಗಿ ಅಥವಾ ಸರಕಾರಿ ಆಸ್ಪತ್ರೆಗಳಲ್ಲಿ ಪ್ರಯೋಜನಗಳನ್ನು ಪಡೆಯಲು ಈ ಕಾರ್ಡ್‌ ನೆರವಾಗುತ್ತದೆ.

“ಮಾತೃಪೂರ್ಣ

(ಕರ್ನಾಟಕ ಸರಕಾರದಿಂದ) „ ಅಂಗನವಾಡಿ ಕೇಂದ್ರಗಳ ಮೂಲಕ ಕಡಿಮೆ ಆದಾಯದ (ಬಿಪಿಎಲ್‌, ಎಸ್‌ಸಿ,ಎಸ್‌ಟಿ) ಸ್ಥಿತಿಗೆ ಸೇರಿದ ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರಿಗೆ ವಾರದಲ್ಲಿ ಆರು ದಿನಗಳು 600 ಕ್ಯಾಲೋರಿಗಳ ದೈನಂದಿನ ಸೇವನೆಯ ಪ್ರಮಾಣವಿರುವ ಒಂದು ಪೂರ್ಣ ಊಟವನ್ನು ಪ್ರತಿದಿನ ಒದಗಿಸುತ್ತದೆ.

“ಜನನಿ ಸುರಕ್ಷಾ ಯೋಜನೆ

„ ಇದು ಕೇಂದ್ರ ಸರಕಾರ ಪ್ರಾಯೋಜಿಕ ಯೋಜನೆಯಾಗಿದ್ದು, ಇದು ಹೆರಿಗೆ ಮತ್ತು ಹೆರಿಗೆ ಅನಂತರದ ಆರೈಕೆಗೆ ನಗದು ಸಹಾಯ ಒದಗಿಸುತ್ತದೆ.

„ ಉಪ-ಕೇಂದ್ರ / ಸಾಮಾಜಿಕ ಆರೋಗ್ಯ ಕೇಂದ್ರ /ಸಮುದಾಯ ಆರೋಗ್ಯ ಕೇಂದ್ರ/ ಮೊದಲ ರೆಫ‌ರಲ್‌ ಘಟಕಗಳು: (Sub-Centre Public Health Centre / Community Health Centre/ First Referral Units) ಜಿಲ್ಲಾ ಅಥವಾ ರಾಜ್ಯ ಆಸ್ಪತ್ರೆಯ ಸಾಮಾನ್ಯ ವಾಡ್‌ ìಗಳಂತಹ ಸರಕಾರಿ ಆರೋಗ್ಯ ಕೇಂದ್ರಗಳಲ್ಲಿ ಹೆರಿಗೆಯಾಗುವ ಬಿಪಿಎಲ್‌, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಗಳ ಮಹಿಳೆಯರಿಗೆ ಆರ್ಥಿಕ ಸಹಾಯವನ್ನು ನೀಡುತ್ತದೆ.

„ ಲಭ್ಯವಿರುವ ವಿತ್ತೀಯ ಪ್ರಯೋಜನಗಳ ಕುರಿತು ಹೆಚ್ಚಿನ ವಿವರಗಳಿಗಾಗಿ ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಒದ ಗಿಸಿದ ಯೋಜನೆಯ ಅಧಿಕೃತ ವೆಬ್‌ ಸೈಟ್‌ ಅನ್ನು ಸಂಪರ್ಕಿಸಬಹುದು. ಹಾಗಾಗಿ, ನಮ್ಮ ಸಮಾಜದಲ್ಲಿ ಸದೃಢ ಮತ್ತು ಆರೋಗ್ಯವಂತ ಕುಟುಂಬಗಳನ್ನು ಕಟ್ಟಲು ಈ ಸರಕಾರಿ ಕಾನೂನುಗಳು ಮತ್ತು ಯೋಜನೆಗಳ ಪ್ರಾಯೋಜನ ಪಡೆದುಕೊಳ್ಳೋಣ.

-ಡೇಲ್‌ ಸೆನೋರಾ ಫೆರ್ನಾಂಡಿಸ್‌,

ರಿಸರ್ಚ್‌ ಸ್ಕಾಲರ್‌

-ಡಾ| ಶಶಿಕಲಾ ಕೆ. ಭಟ್‌,

ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು,

ಸ್ತ್ರೀರೋಗ ವಿಭಾಗ,

ಡಾ| ಟಿ.ಎಂ.ಎ.ಪೈ, ಆಸ್ಪತ್ರೆ, ಉಡುಪಿ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಒಬಿಜಿ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next