ಚಿತ್ರದುರ್ಗ: ನದಿಗೆ ನೀರು ಹರಿದು ಬ್ಯಾರೇಜ್ ತುಂಬಿದ ಸಂಭ್ರಮದಲ್ಲಿ ಆರೋಗ್ಯ ಸಚಿವರೂ ಸೇರಿದಂತೆ ಜನಪ್ರತಿನಿಧಿಗಳೇ ಸಾಮಾಜಿಕ ಅಂತರ ಮರೆತು ಮೆರವಣಿಗೆ ಮಾಡಿದ ಘಟನೆ ಚಳ್ಳಕೆರೆ ತಾಲೂಕಿನ ಪರಶುರಾಂಪುರದಲ್ಲಿ ನಡೆದಿದೆ.
ಕಳೆದ ತಿಂಗಳು ವಾಣಿವಿಲಾಸ ಸಾಗರದಿಂದ ಚಳ್ಳಕೆರೆ ಹಾಗೂ ಮೊಳಕಾಲ್ಮೂರು ವ್ಯಾಪ್ತಿಯ ವೇದಾವತಿ ನದಿ ಪಾತ್ರದ ಜನತೆಗೆ ಕುಡಿಯುವ ಉದ್ದೇಶಕ್ಕೆ ತಲಾ 0.25 ಟಿಎಂಸಿ ನೀರು ಹರಿಸಲಾಗಿತ್ತು.
ಇದರಿಂದ ಈ ಭಾಗದ ಎಲ್ಲಾ ಬ್ಯಾರೇಜುಗಳಲ್ಲಿ ನೀರು ತುಂಬಿದ್ದು, ಸದಾ ಬರಗಾಲವನ್ನೇ ಅನುಭವಿಸುತ್ತಿದ್ದ ಈ ಭಾಗದ ಜನ ಸಂತಸಗೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಮೊಳಕಾಲ್ಮೂರು ಶಾಸಕ ಬಿ. ಶ್ರೀರಾಮುಲು ವೇದಾವತಿ ನದಿಗೆ ಬಾಗಿನ ಅರ್ಪಿಸಲು ಆಗಮಿಸಿದ್ದರು.
ಈ ವೇಳೆ ಸೇಬು ಹಣ್ಣಿನ ಭಾರೀ ಗಾತ್ರದ ಹಾರ ಮಾಡಿ ಜೆಸಿಬಿ ಮೂಲಕ ಸಚಿವ ಶ್ರೀರಾಮುಲು, ಸಂಸದ ನಾರಾಯಣಸ್ವಾಮಿ, ಶಾಸಕ ತಿಪ್ಪಾರೆಡ್ಡಿ ಅವರಿಗೆ ಹಾಕಲಾಯಿತು. ಜೆಸಿಬಿಯಿಂದಲೇ ಹೂವಿನ ವೃಷ್ಟಿಯೂ ಆಯಿತು. ಆನಂತರ ಎತ್ತಿನ ಗಾಡಿಯಲ್ಲಿ ಮೆರವಣಿಗೆ ಮಾಡಿ ಸಂಭ್ರಮಿಸಿದರು.
ಈ ಅದ್ದೂರಿ ಸ್ವಾಗತದ ಸಂಭ್ರಮದಲ್ಲಿ ಆರೋಗ್ಯ ಸಚಿವರು ಸಾಮಾಜಿಕ ಅಂತರ, ಮಾಸ್ಕ್ ಎಲ್ಲವನ್ನೂ ಮರೆತರು. ಭಾರೀ ಸಂಖ್ಯೆಯಲ್ಲಿ ಜನ ಕೂಡಾ ಸೇರಿದ್ದರು.