Advertisement
ಶುಕ್ರವಾರ ಆಸ್ಪತ್ರೆಯಲ್ಲಿ ವಾಸ್ತವ್ಯಕ್ಕಾಗಿ ಆಗಮಿಸಿದ ಸಂದರ್ಭ ಅವರು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. 2009 ರಲ್ಲಿ ಇದು ತಾಲೂಕು ಆಸ್ಪತ್ರೆಯಾಗಿದ್ದಾಗ ಆರೋಗ್ಯ ಸಚಿವನಾಗಿ ಭೇಟಿ ನೀಡಿದ್ದೆ. ಜಿಲ್ಲಾಸ್ಪತ್ರೆ ದರ್ಜೆಗೇರಿಸಲು ಪ್ರಯತ್ನ ನಡೆಸಿದ್ದೆ. ಉನ್ನತ ಮಟ್ಟದ ಸಮಿತಿಯ ಒಪ್ಪಿಗೆ ದೊರೆತು, ಘೋಷಣೆ ಆಗಿತ್ತು. ಆದರೆ ಅನಂತರ ಅಗತ್ಯ ಸೌಕರ್ಯ ಕೊಡಲು ಸಾಧ್ಯವಾಗಲಿಲ್ಲ. ಈ ಬಾರಿ ಶಾಸಕರು ಮತ್ತೆ ನೆನಪು ಮಾಡಿದ್ದಾರೆ. ಹಣಕಾಸು ಇಲಾಖೆ, ಕ್ಯಾಬಿನೆಟ್ ಒಪ್ಪಿಗೆ ಪಡೆದು ಸೌಲಭ್ಯ ಒದಗಿಸಲಾಗುವುದು ಎಂದರು.
ವೈದ್ಯರ ಕೊರತೆ ನೀಗಿಸಲು ನೇರ ನೇಮಕಾತಿಗೆ ಡಿಎಸ್‌ಒಗಳಿಗೆ ಅಧಿಕಾರ ನೀಡಲಾಗಿದೆ. ಜಿಲ್ಲೆಯಲ್ಲಿ ವೈದ್ಯರನ್ನು ನೇಮಿಸಿಕೊಳ್ಳಲು ಆದೇಶ ನೀಡಲಾಗಿದೆ. ಇತರ ತಜ್ಞ ವೈದ್ಯರ ನೇಮಕಾತಿಗೂ ಕಾರ್ಯಯೋಜನೆ ಸಿದ್ಧಪಡಿಸಲಾಗಿದೆ. 108 ಆರೋಗ್ಯ ಕವಚದ ಕ್ರಾಂತಿಯಾದಂತೆ ಆಸ್ಪತ್ರೆಗಳ ಸುಧಾರಣೆ ಕೂಡ ನಡೆಯ ಬೇಕಾಗಿದೆ ಎಂದರು. ಶಾಸಕರಾದ ರಘುಪತಿ ಭಟ್, ಲಾಲಾಜಿ ಮೆಂಡನ್, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಬಿಜೆಪಿ ಮಂಗಳೂರು ವಿಭಾಗದ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಜಿಲ್ಲಾ ಸರ್ಜನ್ ಡಾ| ಮಧುಸೂದನ ನಾಯಕ್, ಯಶ್‌ಪಾಲ್ ಸುವರ್ಣ, ಕುತ್ಯಾರು ನವೀನ್ ಶೆಟ್ಟಿ ಇದ್ದರು.
Related Articles
ಇದಕ್ಕೆ ಮುನ್ನ ಮಂಗಳೂರು ಬಳಿ ಮಂದಾರಕ್ಕೆ ಭೇಟಿ ನೀಡಿ ತ್ಯಾಜ್ಯ ಸಂತ್ರಸ್ತ ರಿಗೆ ಪುನರ್ವಸತಿ ಮತ್ತು ತ್ಯಾಜ್ಯ ವಿಲೇಗೆ ಸರಕಾರ ಪ್ಯಾಕೇಜ್ ರೂಪಿಸಲಿದೆ ಎಂದು ಭರವಸೆ ನೀಡಿದರು.
Advertisement
ಶಾಸಕರೂ ವಾಸ್ತವ್ಯ ನಡೆಸಲಿಸರಕಾರಿ ಆಸ್ಪತ್ರೆಗಳು ಸುಧಾರಣೆಯಾಗಬೇಕೆಂಬ ಉದ್ದೇಶದಿಂದ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಎಲ್ಲಿ ಅವಕಾಶವಿದೆಯೋ ಅಲ್ಲಿನ ಆಸ್ಪತ್ರೆಯಲ್ಲಿ ವಾಸ್ತವ್ಯ ಹೂಡುತ್ತಿದ್ದೇನೆ. ನಾನು ಒಮ್ಮೆ ವಾಸ್ತವ್ಯ ನಡೆಸಿದ ಕೂಡಲೇ ಎಲ್ಲವೂ ಸುಧಾರಣೆ ಯಾಗದು. ಸ್ಥಳೀಯ ಶಾಸಕರು ಕೂಡ ಒಂದು ಅಥವಾ ಎರಡು ತಿಂಗಳಿಗೊಮ್ಮೆ ವಾಸ್ತವ್ಯ ಹೂಡಬೇಕು. ಆಗ ಸುಧಾರಣೆ ಸಾಧ್ಯ. ನನ್ನ ಆಸ್ಪತ್ರೆ ವಾಸ್ತವ್ಯ ಪ್ರಚಾರಕ್ಕಾಗಿ ಅಲ್ಲ. ಸರಕಾರಿ ಆಸ್ಪತ್ರೆಗಳ ಬಗ್ಗೆ ಜನರ ಭಯ ದೂರ ಮಾಡಬೇಕಾದರೆ ಇದು ಅನಿವಾರ್ಯ ಎಂದು ಸಚಿವರು ಹೇಳಿದರು. ವೈದ್ಯರ ವಿಶ್ರಾಂತಿ ಕೊಠಡಿಯಲ್ಲಿ ಸಚಿವರ ವಾಸ್ತವ್ಯ
ಸಚಿವ ಶ್ರೀರಾಮುಲು ಶುಕ್ರವಾರ ರಾತ್ರಿ ಅಜ್ಜರಕಾಡು ಆಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿದರು. ಸುಮಾರು 8 ಗಂಟೆಗೆ ಆಗಮಿಸಿ ವಾರ್ಡ್‌ಗಳಿಗೆ ಭೇಟಿ ನೀಡಿದರು. ಕೆಲವು ರೋಗಿಗಳ ಆರೋಗ್ಯ ವಿಚಾರಿಸಿದರು. ಆಸ್ಪತ್ರೆಯ ತುರ್ತು ನಿಗಾ ಘಟಕದ ಪಕ್ಕ ಇರುವ ವೈದ್ಯರ ವಿಶ್ರಾಂತಿ ಕೊಠಡಿಯಲ್ಲಿ ಸಚಿವರು ನಿದ್ದೆಗೆ ಜಾರಿದರು. “ರಾತ್ರಿ ಸಾಮಾನ್ಯವಾಗಿ ಬಾಳೆಹಣ್ಣು ಮಾತ್ರ ಸೇವಿಸುತ್ತೇನೆ. ಬೆಳಗ್ಗೆ ಆಸ್ಪತ್ರೆಯಲ್ಲಿಯೇ ಪ್ರಗತಿ ಪರಿಶೀಲನೆ ನಡೆಸುತ್ತೇನೆ’ ಎಂದು ಶ್ರೀರಾಮುಲು ಹೇಳಿದರು. ವರ್ಗಾವಣೆ ಕೋರಿಕೆಗೆ ಅಸ್ತು
ರೋಗಿಗಳ ಕ್ಷೇಮ ವಿಚಾರಿಸುವ ಸಂದರ್ಭ ತಾಯಿಯ ಆರೈಕೆ ಮಾಡುತ್ತಿದ್ದ ಉಡುಪಿ ಕಲ್ಯಾಣಪುರದ ವಿದ್ಯಾಲತಾ ಸಚಿವರಿಗೆ ಮನವಿ ಸಲ್ಲಿಸಿದರು. ಸಕಲೇಶ ಪುರದ ಆರೋಗ್ಯ ಕೇಂದ್ರದಲ್ಲಿ ಸ್ಟಾಫ್ ನರ್ಸ್ ಆಗಿದ್ದೇನೆ. ಈಗ ತಾಯಿ ಅನಾರೋಗ್ಯ ಪೀಡಿತಳಾಗಿದ್ದಾಳೆ. ಈಕೆಯನ್ನು ಉಪಚರಿಸಲು ಯಾರೂ ಇಲ್ಲ. ನನಗೆ ಉಡುಪಿಗೆ ವರ್ಗಾವಣೆ ಮಾಡಿಸಿಕೊಡಿ’ ಎಂದರು. ಸಚಿವರು ಒಪ್ಪಿಗೆ ಸೂಚಿಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶ ನೀಡಿದರು. ಕೈ ಮುಗಿದು ರೋಗಿಗಳು, ಅವರ ಸಂಬಂಧಿಕರನ್ನು ಮಾತನಾಡಿಸಿದ ಸಚಿವರು “ಇಲ್ಲಿ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರಾ? ಎಂದು ವಿಚಾರಿಸಿದರು.