Advertisement

ಯೋಗ, ಧ್ಯಾನ, ಆಧ್ಯಾತ್ಮಿಕತೆಯಿಂದ ಆರೋಗ್ಯ ಜೀವನ

08:20 PM Feb 18, 2020 | Lakshmi GovindaRaj |

ಮೈಸೂರು: ಆಧ್ಯಾತ್ಮದಲ್ಲಿ ಯೋಗಾಭ್ಯಾಸ ಪ್ರಮುಖವಾಗಿರುವುದರಿಂದ ಮುಂದಿನ ದಿನಗಳಲ್ಲಿ ವಾರ್ಡ್‌ ಮಟ್ಟದಲ್ಲಿ ಯೋಗಕೇಂದ್ರ ಸ್ಥಾಪಿಸಲು ಯೋಜನೆ ರೂಪಿಸಲಾಗುವುದು ಎಂದು ಮೇಯರ್‌ ತಸ್ನೀಂ ಹೇಳಿದರು. ರಾಮಕೃಷ್ಣ ಪರಮಹಂಸರ 184ನೇ ಜಯಂತ್ಯುತ್ಸವ ಅಂಗವಾಗಿ ಮೈಸೂರು ಬ್ರಾಹ್ಮಣ ಯುವ ವೇದಿಕೆಯಿಂದ ಮಂಗಳವಾರ ರಾಮಕೃಷ್ಣ ನಗರದ ವೃತ್ತದಲ್ಲಿ ಆಯೋಜಿಸಿದ್ದ ಆಧ್ಯಾತ್ಮಿಕ ಜಗತ್ತು ಕಾರ್ಯಕ್ರಮದಲ್ಲಿ ರಾಮಕೃಷ್ಣ ಪರಮಹಂಸರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

Advertisement

ಸಾಂಸ್ಕೃತಿಕ ರಾಜಧಾನಿ ಮೈಸೂರಿಗೆ ಪಾರಂಪರಿಕ ಇತಿಹಾಸವಿದೆ. ರಾಮಕೃಷ್ಣನಗರ ಬಡಾವಣೆ ಗಮನಿಸಿದರೆ ಪರಿಸರ ಸ್ವತ್ಛತೆಯೊಂದಿಗೆ ಆಧ್ಯಾತ್ಮಿಕವಾಗಿ ಆಕರ್ಷಣೀಯವಾಗಿದೆ. ಸಹಸ್ರಾರು ಹಿರಿಯ ನಾಗರಿಕರು ವಾಯುವಿಹಾರಕ್ಕೆ ಬರುತ್ತಾರೆ. ಪ್ರತಿದಿನ ವಾಯುವಿಹಾರದೊಂದಿಗೆ ಯೋಗ, ಧ್ಯಾನ ಮತ್ತು ಆಧ್ಯಾತ್ಮಿಕತೆ ಜೀವನಶೈಲಿ ಅಳವಡಿಸಿಕೊಂಡರೆ ಆರೋಗ್ಯಕರ ವಾತಾವರಣ ನಿರ್ಮಿಸಬಹುದು ಎಂದರು.

ಮಾಜಿ ಮೇಯರ್‌ ಆರ್‌.ಜೆ. ನರಸಿಂಹ ಅಯ್ಯಂಗಾರ್‌ ಮಾತನಾಡಿ, ಭಾರತದಲ್ಲಿ ರಾಷ್ಟ್ರಿಯ ಯುವದಿನೋತ್ಸವವನ್ನು ಸ್ವಾಮಿ ವಿವೇಕಾನಂದರ ಜನ್ಮದಿನ ಆಚರಿಸುತ್ತೇವೆ. ಆದರೆ ನರೇಂದ್ರನನ್ನು ಆಧ್ಯಾತ್ಮಿಕವಾಗಿ ವಿವೇಕಾನಂದನಾಗಿ ಸೃಷ್ಟಿಸಿದ ಗುರು ರಾಮಕೃಷ್ಣ ಪರಮಹಂಸರು. ಪ್ರತಿಯೊಬ್ಬ ಮನುಷ್ಯನಲ್ಲೂ ಆಧ್ಯಾತ್ಮಿಕತೆ, ಸಾತ್ವಿಕತೆ, ಚಿಂತನೆ ಹೆಚ್ಚಾದರೆ ಸಮಾಜದಲ್ಲಿ ಶಾಂತಿಯುತ ವಾತಾವರಣ ನಿರ್ಮಾಣವಾಗುತ್ತದೆ ಎಂದು ಹೇಳಿದರು.

ಹಿರಿಯ ಸಮಾಜಸೇವಕ ಡಾ.ಕೆ.ರಘುರಾಂ ವಾಜಪೇಯಿ ಮಾತನಾಡಿ, ಆಧ್ಯಾತ್ಮಿಕ ಯೋಗದ ಸನ್ಮಾರ್ಗದಲ್ಲಿ ಭಾರತ ಅಗ್ರಸ್ಥಾನದಲ್ಲಿದೆ ಎಂದರೆ ಅದಕ್ಕೆ ಮೂಲ ಕಾರಣ ರಾಮಕೃಷ್ಣ ಪರಮಹಂಸರು. ಸರಳಜೀವಿಯಾಗಿದ್ದ ಅವರು ಕಾಳಿದೇವಿ ಆರಾಧಕರಾಗಿ ಆಧ್ಯಾತ್ಮಿಕ ಗುರುಗಳಾದರು. ಹಿಂದೂ ಧರ್ಮದ ಜಾಗೃತಿ ಯುವ ಜನಾಂಗದಲ್ಲಿ ಬೆಳೆಯುತ್ತಿದೆ ಎಂದರೇ ರಾಮಕೃಷ್ಣರ ಕೊಡುಗೆ ಅಪಾರವಾದದ್ದು ಎಂದರು.

ಕಾಂಗ್ರೆಸ್‌ ಯುವಮುಖಂಡ ಎನ್‌.ಎಂ.ನವೀನ್‌ ಕಮಾರ್‌ ಮಾತನಾಡಿ, ಬಹುವರ್ಷಗಳಿಂದ ರಾಮಕೃಷ್ಣ ಪರಮಹಂಸರ ಪ್ರತಿಮೆ ಸ್ಥಾಪಿಸಬೇಕೆನ್ನುವ ಬೇಡಿಕೆಯಿತ್ತು. ಹೋರಾಟಗಳು ನಡೆಯುತ್ತಿದ್ದವು. ಎಷ್ಟೇ ಗೊಂದಲವಿದ್ದರೂ ಕೃಷ್ಣರಾಜ ವೃತ್ತದ ಮಾದರಿಯಲ್ಲಿ ಸ್ಥಾಪಿಸಲು ಬಹಳ ಶ್ರಮವಹಿಸಿದ್ದು, ಇಂದು ಆಕರ್ಷಕವಾಗಿ, ಸುಂದರವಾಗಿ ರಾಮಕೃಷ್ಣ ಪರಮಹಂಸರ ವೃತ್ತ ನಿರ್ಮಾಣವಾಗಿದೆ ಎಂದು ತಿಳಿಸಿದರು.

Advertisement

ನಗರಪಾಲಿಕೆ ಸದಸ್ಯ ಎಂ.ಸಿ.ರಮೇಶ್‌, ಲಕ್ಷ್ಮೀ ಕಿರಣ್‌, ಎಂ.ಶಿವಕುಮಾರ್‌, ಆರ್‌.ಕೆ.ಶರತ್‌, ಶೋಭಾ, ಅಗಸ್ತ ಕೋ.ಆಪರೇಟವ್‌ ಸೊಸೈಟಿ ಅಧ್ಯಕ್ಷ ಸಿವಿ ಪಾರ್ಥಸಾರಥಿ, ಅಪೂರ್ವ ಸುರೇಶ್‌, ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷ ಮುಳ್ಳೂರು ಗುರುಪ್ರಸಾದ್‌, ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್‌, ಅಜಯ್‌, ಕಡಕೊಳ ಜಗದೀಶ್‌ ವಿನಯ್‌ ಕಣಗಾಲ್‌, ಸುಚೀಂದ್ರ ಸೇರಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next