ದಾವಣಗೆರೆ: ರಾಜ್ಯ ಸರಕಾರವು ಯಶಸ್ವಿನಿ ಯೋಜನೆ ಮರು ಜಾರಿಗೆ ತೀರ್ಮಾನಿಸಿರುವುದರಿಂದ ಆಯುಷ್ಮಾನ್ ಭಾರತ್ ಯೋಜನೆಯೊಂದಿಗೆ ಆರೋಗ್ಯ-ಕರ್ನಾಟಕ ಯೋಜನೆ ಅಸ್ತಿತ್ವ ಕಳೆದುಕೊಳ್ಳುತ್ತಾ ಎನ್ನುವ ಪ್ರಶ್ನೆ ಮೂಡಿದೆ.
ಆರೋಗ್ಯ ರಕ್ಷಣೆಯಲ್ಲಿ ರೈತರಿಗೆ, ಬಡವರಿಗೆ ಹೆಚ್ಚು ಸುಲಭ ಹಾಗೂ ಆಪ್ತವಾಗಿದ್ದ ಯಶಸ್ವಿನಿ ಯೋಜನೆ ಮರುಜಾರಿಯಾದರೆ, ರಾಜ್ಯ ಸರಕಾರದ ಆರೋಗ್ಯ- ಕರ್ನಾಟಕ ಯೋಜನೆ ಪಾತ್ರವೇನು ಎಂಬ ಬಗ್ಗೆ ಸ್ಪಷ್ಟತೆ ಇಲ್ಲದಂತಾಗಿದೆ.
ರಾಜ್ಯದ ಜನರಿಗೆ ಆರೋಗ್ಯ ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ಹಿಂದಿನ ರಾಜ್ಯ ಸರಕಾರ, ವಂತಿಕೆ ಕಟ್ಟಬೇಕಾಗಿದ್ದ ಯಶಸ್ವಿನಿ ಯೋಜನೆಯನ್ನು ಕೈಬಿಟ್ಟು 2018ರ ಮಾರ್ಚ್‌ನಲ್ಲಿ ಹೊಸದಾಗಿ ಆರೋಗ್ಯ-ಕರ್ನಾಟಕ ಯೋಜನೆ ಜಾರಿಗೆ ತಂದಿತ್ತು. ಬಳಿಕ ಇದೇ ಆರ್ಥಿಕ ವರ್ಷದಲ್ಲಿ ಅಂದರೆ ಸೆಪ್ಟೆಂಬರ್ 23ರಂದು ಕೇಂದ್ರ ಸರಕಾರ ಆಯುಷ್ಕಾನ್-ಭಾರತ್ ಯೋಜನೆಗೆ ಚಾಲನೆ ನೀಡಿತು. ಈ ಎರಡೂ ಯೋಜನೆಗಳ ಉದ್ದೇಶ, ವ್ಯಾಪ್ತಿಗಳಲ್ಲಿ ಹೋಲಿಕೆ ಇರುವುದರಿಂದ ರಾಜ್ಯ ಸರಕಾರ ಈ ಎರಡೂ ಯೋಜನೆಗಳನ್ನು ಸಂಯೋಜಿಸಿ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಎಂಬ ಯೋಜನೆ ಅನುಷ್ಠಾನಗೊಳಿಸಿತ್ತು.
ಹೆಸರಿಗಷ್ಟೇ ಉಳಿಯುವ ಸಾಧ್ಯತೆ
ಆರೋಗ್ಯ-ಕರ್ನಾಟಕ ಯೋಜನೆಯ ಫಲ ಪಡೆಯಲು ಜನ ಯಾವುದೇ ವಂತಿಕೆ ಕಟ್ಟಬೇಕಾಗಿಲ್ಲ. ಸರಕಾರಿ ವೈದ್ಯರ ಶಿಫಾರಸು ಪತ್ರ ಪಡೆದು ಎಲ್ಲ ಬಿಪಿಎಲ್‌ನವರೂ ಗರಿಷ್ಠ ಐದು ಲಕ್ಷ ರೂ.ವರೆಗಿನ ಚಿಕಿತ್ಸಾ ಸೌಲಭ್ಯ ಪಡೆಯಬಹುದು.
ಎಪಿಎಲ್‌ನವರು ಶೇ. 30ರಷ್ಟು ರಿಯಾಯಿತಿ ಪಡೆಯಬಹುದು. ಆದರೆ, ಈ ಸೌಲಭ್ಯವನ್ನು ಕೇಂದ್ರ ಸರಕಾರದ ಆಯುಷ್ಮಾನ್ ಭಾರತ್ ಯೋಜನೆ ನೀಡುವುದರಿಂದ ಸೇರ್ಪಡೆಗೊಂಡಿರುವ ಆರೋಗ್ಯ-ಕರ್ನಾಟಕ ಹೆಸರಿಗಷ್ಟೇ ಉಳಿಯುವ ಸಾಧ್ಯತೆ ಇದೆ. ಯಶಸ್ವಿನಿ ಜಾರಿಯಲ್ಲಿದ್ದಾಗ 39.64ಲಕ್ಷ ಜನ ನೋಂದಣಿ ಮಾಡಿಕೊಂಡಿದ್ದರು.