ಆಸ್ಪತ್ರೆಗಳ ಮೂಲಸೌಕರ್ಯ, ಹಳೆಯ ಯೋಜನೆಗಳ ಮುಂದುವರಿ ಕೆಯ ಜೊತೆಗೆ ಔಷಧ ರಂಗ, ವೈದ್ಯಕೀಯ ಸಂಶೋಧನೆ, ವೈದ್ಯಕೀಯ ಉಪಕರಣಗಳ ಅಭಿವೃದ್ಧಿ ಹಾಗೂ ಸಿಕಲ್ ಸೆಲ್ ಅನೀಮಿಯ (ದುಂಡಾಗಿರಬೇಕಾದ ರಕ್ತಕಣಗಳು ಕಡೆಗೋಲಿನ ಆಕಾರದಲ್ಲಿ ಇರುವ ಕಾಯಿಲೆ) ನಿರ್ಮೂಲನೆಯ ಸಂಕಲ್ಪ ಅಮೃತಕಾಲದ ಚೊಚ್ಚಲ ಬಜೆಟ್‌ನಲ್ಲಿ ಅಡಕವಾಗಿದೆ. ಆರೋಗ್ಯ ಕ್ಷೇತ್ರದ ಆದ್ಯ ಅಂಶಗಳಾದ ಮೂಲಸೌಕರ್ಯ, ಸಂಶೋಧನೆ ಮತ್ತು ರೋಗ ನಿರ್ವಹಣೆ ಈ ಮೂರು ಆಯಾಮಗಳಿಗೆ ಬಜೆಟ್‌ನಲ್ಲಿ ವಿಶೇಷ ಒತ್ತು ನೀಡಲಾಗಿದ್ದು, ಮುಂದಿನ ದಶಕಗಳ ಆರೋಗ್ಯ ರಂಗದ ದಿಕ್ಕುದೆಸೆಗೆ ಮುನ್ನುಡಿ ಬರೆಯಲಾಗಿದೆ.
2023-24ರ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕಾಗಿ 88,956 ಕೋಟಿ ರೂಪಾಯಿಗಳನ್ನು ತೆಗೆದಿರಿಸಲಾಗಿದೆ. 2022-23ರ (86,606 ಕೋಟಿ ರೂ.) ಸಾಲಿಗೆ ಹೋಲಿಸಿದರೆ ಮುಂದಿನ ಆರ್ಥಿಕ ವರ್ಷದಲ್ಲಿ 2,350 ಕೋಟಿ ರೂಪಾಯಿ ಹೆಚ್ಚು ಆರೋಗ್ಯ ಕ್ಷೇತ್ರಕ್ಕೆ ವಿನಿಯೋಗವಾಗಲಿದೆ. ಅಂದರೆ ಶೇ. 2.71ರಷ್ಟು ಹೆಚ್ಚು ಹಣ ಬಳಕೆಯಾಗಲಿದೆ. ಆದರೆ 2022-23ರ ಸಾಲಿನ ಬಜೆಟ್ ಅಂದಾಜಿನಲ್ಲಿ 86,606 ಕೋಟಿ ರೂ. ಆರೋಗ್ಯ ಕ್ಷೇತ್ರಕ್ಕೆ ನಿಗದಿ ಆಗಿದ್ದರೂ ಆ ಬಳಿಕದ ಪರಿಷ್ಕೃತ ಅಂದಾಜಿನಲ್ಲಿ 77,351 ಕೋಟಿ ರೂಪಾಯಿಗಳನ್ನು ಮಾತ್ರ ನೀಡಲಾಗಿತ್ತು. ಈ ಬಾರಿ ಆ ರೀತಿ ಆಗದೇ ಬಜೆಟ್ ಅಂದಾಜಿನ ಹಣ ಪೂರ್ಣಪ್ರಮಾಣದಲ್ಲಿ ವಿನಿಯೋಗ ಆಗಲಿ ಎಂಬ ಆಶಯವನ್ನು ಆರೋಗ್ಯ ತಜ್ಞರು ವ್ಯಕ್ತಪಡಿಸುತ್ತಾರೆ.
ನಿಮ್ಹಾನ್ಸ್‌ಗೆ 133 ಕೋ.ರೂ.: ಬೆಂಗಳೂರಿನಲ್ಲಿರುವ ನಿಮ್ಹಾನ್ಸ್‌ನ ಮೂಲಕ ನಡೆಯುವ ರಾಷ್ಟ್ರೀಯ ಟೆಲಿ ಮಾನಸಿಕ ಆರೋಗ್ಯ ಕಾರ್ಯಕ್ರಮಕ್ಕೆ 133.73 ಕೋಟಿ ರೂಪಾಯಿ ಮೀಸಲಿರಿಸಲಾಗಿದೆ. ಕಳೆದ ವರ್ಷದ ಬಜೆಟ್‌ನಲ್ಲಿ 121 ಕೋಟಿ ರೂ. ನೀಡಲಾಗಿತ್ತು. ಈ ಬಾರಿ ಅನುದಾನದಲ್ಲಿ ಶೇ.10ರ ಹೆಚ್ಚಳವಾಗಿದೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಟೆಲಿ ಮೆಡಿಸಿನ್ ಮತ್ತು ಆಪ್ತ ಸಮಾಲೋಚನೆಯ ಮಹತ್ವವನ್ನು ಮನಗಂಡಿರುವ ಸರಕಾರ ಭವಿಷ್ಯದಲ್ಲಿಯೂ ಟೆಲಿ ಮೆಡಿಸಿನ್‌ಗೆ ಪ್ರೋತ್ಸಾಹ ನೀಡುವ ಇಂಗಿತ ಹೊಂದಿರುವುದು ಸ್ಪಷ್ಟ.
ಆಯುಷ್ಮಾನ್ ಭಾರತ್ – ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಗೆ 7,200 ಕೋಟಿ ರೂಪಾಯಿ ಪ್ರಕಟಿಸಲಾಗಿದ್ದು ಕಳೆದ ಬಜೆಟ್‌ಗಿಂತ 743 ಕೋಟಿ ರೂಪಾಯಿ ಹೆಚ್ಚಳವಾಗಿದೆ. ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಯೋಜನೆಗೆ 4,200 ಕೋಟಿ ರೂಪಾಯಿ ನೀಡಲಾಗಿದ್ದು ಕಳೆದ ಸಾಲಿಗೆ ಹೋಲಿಸಿದರೆ 23 ಕೋಟಿ ರೂಪಾಯಿ ಹೆಚ್ಚಳವಾಗಿದೆ. ಆದರೆ ರಾಷ್ಟ್ರೀಯ ಆರೋಗ್ಯ ಯೋಜನೆಗೆ ಅನುದಾನದಲ್ಲಿ ತುಸು ಇಳಿಕೆ ದಾಖಲಾಗಿದೆ. ಈ ಬಜೆಟ್‌ನಲ್ಲಿ 36,785 ಕೋ.ರೂ. ಪ್ರಕಟಿಸಲಾಗಿದ್ದು ಕಳೆದ ಬಜೆಟ್‌ಗಿಂತ 375 ಕೋ.ರೂ. ಕಡಿತವಾಗಿದೆ.
“ಸಿಕಲ್ ಸೆಲ್’ ಅನೀಮಿಯ ನಿರ್ಮೂಲನೆಗೆ ಸಂಕಲ್ಪ
ಸಿಕಲ್ ಸೆಲ್ ಅನೀಮಿಯವನ್ನು 2047ರ ಹೊತ್ತಿಗೆ ನಿರ್ಮೂಲನೆ ಮಾಡುವ ಸಂಕಲ್ಪವನ್ನು ಸರಕಾರ ಕೈಗೊಂಡಿದೆ. ವಂಶಪಾರಂಪರ್ಯವಾಗಿ ಹಿಮೋಗ್ಲೊಬಿನ್‌ನ ಅಸಹಜತೆ ಯಿಂದ ಬರುವ ಈ ಕಾಯಿಲೆ ಬುಡಕಟ್ಟು ಜನಾಂಗದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ದೇಶದಲ್ಲಿ ಒಟ್ಟು 17 ಕೋಟಿ ಜನರು ಸಿಕಲ್ ಸೆಲ್ ಅನೀಮಿಯದಿಂದ ನರಳುತ್ತಿದ್ದಾರೆ. ಸಿಕಲ್ ಸೆಲ್ ಬಾಧಿತ ಪ್ರದೇಶಗಳ 40 ವರ್ಷದೊಳಗಿನ ಬುಡಕಟ್ಟು ಜನರ ಆರೋಗ್ಯ ತಪಾಸಣೆ ಮತ್ತು ಜಾಗೃತಿ ಯೋಜನೆ ಹಮ್ಮಿಕೊಳ್ಳುವುದು ಈ ಯೋಜನೆಯ ಉದ್ದೇಶ. ಆರೋಗ್ಯ ಇಲಾಖೆಯ ಮೂಲಗಳ ಪ್ರಕಾರ ರಾಜ್ಯದಲ್ಲಿ ಸುಮಾರು 3 ಲಕ್ಷ ಸಿಕಲ್ ಸೆಲ್ ಅನಿಮಿಯಾ ಪೀಡಿತರಿದ್ದಾರೆ. ಗುಡ್ಡಗಾಡು ಪ್ರದೇಶ ಹೊಂದಿರುವ ಮೈಸೂರು, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿಕಲ್ ಸೆಲ್ ಅನೀಮಿಯ ಪೀಡಿತರು ಹೆಚ್ಚು ಸಂಖ್ಯೆಯಲ್ಲಿದ್ದಾರೆ.