Advertisement

ಆರೋಗ್ಯ ವಿಮೆ: ಈ ಅಂಶಗಳು ತಿಳಿದಿರಲಿ

01:06 AM Feb 07, 2021 | Team Udayavani |

ಇಂದಿನ ಸಂದರ್ಭದಲ್ಲಿ ವೈದ್ಯಕೀಯ ಖರ್ಚು ಹಿಂದೆಂದಿಗಿಂತ ಅಧಿಕವಾಗಿದೆ. ಇದರಿಂದಾಗಿ ಆರೋಗ್ಯ ವಿಮೆಯ ಮೊರೆ ಹೋಗುತ್ತಿರುವವರ ಸಂಖ್ಯೆಯೂ ದಿನೇ ದಿನೆ ಹೆಚ್ಚುತ್ತಿದೆ. ವಿಮಾ ಮಾರುಕಟ್ಟೆಯಲ್ಲಿ ಹಲವು ಬಗೆಯ ಪಾಲಿಸಿಗಳು ಲಭ್ಯ ಇವೆ.
ಎಲ್ಲ ವಿಮಾ ಪಾಲಿಸಿಗಳ ವಿವರಗಳು ಆನ್‌ಲೈನ್‌ನಲ್ಲಿ ಲಭ್ಯವಿರುವುದರಿಂದ ಕುಳಿತಲ್ಲೇ ವಿಮಾ ಪಾಲಿಸಿಗಳ ಕುರಿತು ಮಾಹಿತಿ ಪಡೆದುಕೊಳ್ಳಬಹುದು. ಆದರೆ ಯಾವುದೇ ಬಗೆಯ ವಿಮೆಯ ಕುರಿತು, ಸಂಸ್ಥೆಯ ಪ್ರತಿನಿಧಿಯೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ. ವಿಮಾ ಪಾಲಿಸಿ ಮಾಡಿಸಿಕೊಳ್ಳುವ ಮುನ್ನ ನಾವು ಅರಿತುಕೊಳ್ಳಬೇಕಾದ ನಾಲ್ಕು ಸಂಗತಿಗಳು ಇಲ್ಲಿವೆ.

Advertisement

ಒಳಗೊಂಡಿರುವುದೇನು?: ವಿಮೆ ಮಾಡುವಾಗ ಎಲ್ಲರೂ ಪ್ರೀಮಿಯಂ ವಿಷಯಕ್ಕೇ ಮೊದಲ ಪ್ರಾಶಸ್ತ್ಯ ಕೊಡುತ್ತಾರೆ. ಆದರೆ ಆ ಪಾಲಿಸಿ ಏನೆಲ್ಲ ಕವರ್‌ ಮಾಡುತ್ತದೆ ಎಂಬುದರತ್ತ ಹೆಚ್ಚಿನ ಲಕ್ಷ್ಯ ವಹಿಸುವುದಿಲ್ಲ. ಇದು ಸರಿಯಾದ ಕ್ರಮವಲ್ಲ. ಆಸ್ಪತ್ರೆಯ ಪ್ರಾಥಮಿಕ ಖರ್ಚನ್ನು ಕವರ್‌ ಮಾಡುವ ಪ್ಲ್ಯಾನ್‌, ಗಂಭೀರ ಕಾಯಿಲೆಯ ಚಿಕಿತ್ಸೆ ಕವರ್‌ ಮಾಡುವ ಪ್ಲ್ಯಾನ್‌… ಹೀಗೆ ಹಲವು ವಿಚಾರಗಳ ಕುರಿತು ಮಾಹಿತಿ ಪಡೆದುಕೊಳ್ಳಬೇಕು. ಹೀಗೆ ಮಾಡುವುದರಿಂದ ಗ್ರಾಹಕರಿಗೆ ಈ ವಿಮೆ ಸೂಕ್ತವೋ ಎಂಬ ಬಗ್ಗೆ ಖಚಿತ ನಿರ್ಧಾರಕ್ಕೆ ಬರಲು ಸಹಕಾರಿಯಾಗುತ್ತದೆ. ಗಂಭೀರ ಕಾಯಿಲೆಯನ್ನು ಕವರ್‌ ಮಾಡುವ ಪಾಲಿಸಿಯಾದರೆ ಎಷ್ಟು ಬಗೆಯ ಕಾಯಿಲೆಗಳನ್ನು ಕವರ್‌ ಮಾಡುತ್ತದೆ ಎಂದು ತಿಳಿದುಕೊಳ್ಳಬೇಕು.

ಹೊರಗುಳಿಯುವುದೇನು?: ಪಾಲಿಸಿ ಏನನ್ನು ಕವರ್‌ ಮಾಡುತ್ತದೆ ಎಂದು ತಿಳಿಯುವುದು ಮಾತ್ರವಲ್ಲ; ಅದು ಏನನ್ನು ಕವರ್‌ ಮಾಡುತ್ತಿಲ್ಲ ಎಂದು ತಿಳಿದು ಕೊಳ್ಳುವುದೂ ಅಷ್ಟೇ ಮುಖ್ಯ. ಏಕೆಂದರೆ ನಮಗೆ ಬೇಕಾಗಿರುವ ಸವಲತ್ತನ್ನು ಪಾಲಿಸಿ ಒದಗಿಸದೇ ಇದ್ದ ಪಕ್ಷದಲ್ಲಿ ಅದನ್ನು ಪಡೆದುಕೊಳ್ಳಲು ಹೆಚ್ಚುವರಿ ಹಣ ಕೊಡಬೇಕಾಗುತ್ತದೆ. ಎಲ್ಲ ಪಾಲಿಸಿಗಳೂ ಕೆಲ ಸವಲತ್ತುಗಳನ್ನು ಹೊರಗಿಡುತ್ತವೆ. ಇವನ್ನು “ಎಕ್ಸ್ ಕ್ಲೂಷನ್’ ಎಂದು ಕರೆಯುತ್ತಾರೆ. ಕೆಲವು ಬೇಸಿಕ್‌ ಆರೋಗ್ಯ ವಿಮೆಗಳನ್ನು ಕೊಂಡ ದಿನಾಂಕದಿಂದ 1- 2 ತಿಂಗಳ ಅವಧಿಯೊಳಗೆ ಕ್ಲೈಮ್‌ ಮಾಡಿಕೊಳ್ಳಲು ಆಗುವುದಿಲ್ಲ. ಹಾಗಾಗಿ ಪಾಲಿಸಿಯ ಎಕ್ಸ್ ಕ್ಲೂಷನ್‌ಗಳು ಏನೇನು ಎಂಬುದನ್ನು ಏಜೆಂಟರಿಂದ ತಿಳಿದುಕೊಳ್ಳಬೇಕು.

ಎಕ್ಸ್ ಟ್ರಾ ಕವರ್‌: ವಿಮಾ ಸಂಸ್ಥೆಗಳು ಆ್ಯಡ್‌ ಆನ್‌ ಸವಲತ್ತನ್ನು ನೀಡುತ್ತವೆ. ಆ್ಯಡ್‌ ಆನ್‌ ಎಂದರೆ, ಮೂಲ ಪಾಲಿಸಿಯಲ್ಲಿ ಇಲ್ಲದೇ ಇರುವ ಸವಲತ್ತನ್ನು ಹೆಚ್ಚುವರಿ ಶುಲ್ಕ ತೆತ್ತು ಸೇರಿಸಿಕೊಳ್ಳುವುದು. ಕೆಲವೊಮ್ಮೆ ಈ ಆ್ಯಡ್‌ ಆನ್‌ ಸವಲತ್ತುಗಳು ಪಾಲಿಸಿಯ ಜತೆಗೇ ಬಂದಿರುತ್ತವೆ. ಎಷ್ಟೋ ಸಲ ತಮ್ಮ ಪಾಲಿಸಿಯಲ್ಲಿ ಆ್ಯಡ್‌ ಆನ್‌ ಸವಲತ್ತು ಇರುವುದು ಗ್ರಾಹಕರಿಗೇ ತಿಳಿದಿರುವುದಿಲ್ಲ. ಆದರೆ ಗೊತ್ತಿಲ್ಲದೆಯೇ ಅನಾವಶ್ಯಕವಾಗಿ ಹೆಚ್ಚಿನ ಬೆಲೆ ತೆತ್ತಿರುತ್ತಾರೆ. ಪಾಲಿಸಿಕೊಳ್ಳುವ ಮುನ್ನ, ಇಂಥ ಯಾವುದೇ ಸವಲತ್ತು ಸೇರಿಕೊಂಡಿಲ್ಲ ಎಂದು ಖಚಿತಪಡಿಸಿಕೊಂಡರೆ ಉತ್ತಮ. ಒಂದು ವೇಳೆ ಸೇರಿದ್ದಲ್ಲಿ, ಅದನ್ನು ಬೇಡವೆಂದು ತಿರಸ್ಕರಿಸಬಹುದು.

ವೈಟಿಂಗ್ ಪಿರಿಯೆಡ್‌
ಮಾರುಕಟ್ಟೆಯಲ್ಲಿ ಲಭ್ಯವಿರುವ ವಿಮೆಗಳಲ್ಲಿ ಹೆಚ್ಚಿನವು, ಹಿಂದಿನಿಂದಲೂ ಇರುವ ಗಂಭೀರ ಕಾಯಿಲೆಗಳಿದ್ದರೆ, ಅದನ್ನು ಕವರ್‌ ಮಾಡುವುದಿಲ್ಲ. ಮಾಡಿದರೂ 3- 4 ವರ್ಷಗಳ ಒಳಗೆ ಆ್ಯಕ್ಟಿವೇಟ್‌ ಆಗುವುದಿಲ್ಲ. ಅಂದರೆ ನಿಗದಿತ ಅವಧಿಯ ಅನಂತರವೇ ವಿಮಾ ರಕ್ಷಣೆ ಸಿಗುತ್ತದೆ. ಇದನ್ನೇ “ವೈಟಿಂಗ್‌ ಪಿರಿಯೆಡ್‌’ ಎನ್ನಲಾಗುತ್ತದೆ. ಗ್ರಾಹಕರಿಗೆ ಕಡಿಮೆ ಅವಧಿಯಲ್ಲಿ ಕ್ಲೈಮ್‌ ಮಾಡಲು ಸಾಧ್ಯವಾಗುವಂಥ ಪಾಲಿಸಿ ಬೇಕಿದ್ದಲ್ಲಿ, ವೈಟಿಂಗ್‌ ಪಿರಿಯೆಡ್‌ ಕಡಿಮೆಯಿರುವ ಪಾಲಿಸಿಯನ್ನು ಆಯ್ದುಕೊಳ್ಳಬೇಕು. ಆರ್ಥೈಟಿಸ್‌, ಮೂತ್ರಕೋಶದಲ್ಲಿ ಕಲ್ಲು, ಕ್ಯಾಟರಾಕ್ಟ್ ಮುಂತಾದ ಚಿಕಿತ್ಸೆಗಳನ್ನು ಕೆಲವು ಪಾಲಿಸಿಗಳು ಮೊದಲ ಒಂದೆರಡು ವರ್ಷಗಳ ಅವಧಿಯಲ್ಲಿ ಕವರ್‌ ಮಾಡುವುದಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next