Advertisement

ವಾರದೊಳಗೆ ಆರೋಗ್ಯ ನಿರೀಕ್ಷಕರು-ಜಮಾದಾರರ ನೇಮಕ

12:34 PM Aug 30, 2017 | Team Udayavani |

ಹುಬ್ಬಳ್ಳಿ: ಸರಕಾರದ ಸುತ್ತೋಲೆಯಂತೆ ಘನತ್ಯಾಜ್ಯ ಸಂಗ್ರಹ ಹಾಗೂ ಸ್ವತ್ಛತೆ ಕಾರ್ಯಕ್ಕೆ ಪಾಲಿಕೆಯಿಂದಲೇ ನೇರವಾಗಿ ಗುತ್ತಿಗೆ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ನಿರ್ವಹಣೆಗೆ ವಾರದೊಳಗೆ ಆರೋಗ್ಯ ನಿರೀಕ್ಷಕರು ಹಾಗೂ ಜಮಾದಾರರನ್ನು ನೇಮಿಸಿಕೊಳ್ಳಲಾಗುವುದು ಎಂದು ಪಾಲಿಕೆ ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ ಹೇಳಿದರು. 

Advertisement

ಘನತ್ಯಾಜ್ಯ ನಿರ್ವಹಣೆ ಕುರಿತಾಗಿ ಮಂಗಳವಾರ ನಡೆದ ಪಾಲಿಕೆ ವಿಶೇಷ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಅವಳಿನಗರದ 48 ವಾರ್ಡ್‌ ಗಳಲ್ಲಿ ಹಲವು ವರ್ಷಗಳಿಂದ ಸ್ವತ್ಛತೆಗೆ ಹೊರಗುತ್ತಿಗೆ ಮುಂದುವರಿದಿದೆ. ಇದರ ಬದಲು ಪಾಲಿಕೆಯಿಂದಲೇ ಪೌರಕಾರ್ಮಿಕರನ್ನು ನೇರವಾಗಿ ಗುತ್ತಿಗೆ ಆಧಾರದಲ್ಲಿ ನೇಮಕಕ್ಕೆ ಹಾಗೂ ಅಗತ್ಯ ಸಲಕರಣೆಗಳ ಖರೀದಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.

ಪೌರಕಾರ್ಮಿಕರ ನೇಮಕಕ್ಕೆ 60 ಕೋಟಿ, ಸಲಕರಣೆಗಳ ಖರೀದಿಗೆ 30ಕೋಟಿ ರೂ. ಅಂದಾಜು ವೆಚ್ಚದೊಂದಿಗೆ ಒಟ್ಟು 6 ಪ್ಯಾಕೇಜ್‌ ಗಳಿಗೆ ರಾಜ್ಯ ಸರಕಾರ ಒಪ್ಪಿಗೆ ನೀಡಿದೆ. ಪಾಲಿಕೆಯಿಂದಲೇ ಪೌರಕಾರ್ಮಿಕರ ನೇಮಕಕ್ಕೆ ಕಾರ್ಮಿಕ ಇಲಾಖೆಯಿಂದ ಅನುಮೋದನೆ ಆದೇಶ ಅಗತ್ಯವಾಗಿದೆ ಎಂದರು. ನಿಯಮ ಉಲ್ಲಂಘಿಸಿದ ಸ್ವತ್ಛತೆ ಗುತ್ತಿಗೆದಾರರಿಗೆ ಕಳೆದ ನಾಲ್ಕು ತಿಂಗಳಲ್ಲಿ ಒಟ್ಟು 37.51ಲಕ್ಷ ರೂ. ದಂಡ ವಿಧಿಸಲಾಗಿದ್ದು, ಅಂದಾಜು 74ಲಕ್ಷ ರೂ. ಬಿಲ್‌ ತಡೆ ಹಿಡಿಯಲಾಗಿದೆ ಎಂದು ವಿವರಿಸಿದರು.  

ಸದಸ್ಯರ ಆಕ್ರೋಶ: ಇದಕ್ಕೂ ಮೊದಲು ಅವಳಿನಗರದಲ್ಲಿ ಸ್ವತ್ಛತೆ ಬಗ್ಗೆ ಸಮರ್ಪಕ ಕ್ರಮ ಇಲ್ಲದಿರುವ ಬಗ್ಗೆ ಪಕ್ಷಭೇದ ಮರೆತು ಸದಸ್ಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸದನವನ್ನೇ ಕತ್ತಲಲ್ಲಿಡುವ, ಗೊಂದಲ ಮೂಡಿಸುವ ಕಾರ್ಯ ನಡೆಯುತ್ತಿದೆ ಎಂದು ಆಯುಕ್ತರ ವಿರುದ್ಧ ಹರಿಹಾಯ್ದರು. 

ಬಿಜೆಪಿಯ ಡಾ| ಪಾಂಡುರಂಗ ಪಾಟೀಲ ಮಾತನಾಡಿ, ಘನತ್ಯಾಜ್ಯ ನಿರ್ವಹಣೆ ವಿಷಯವಾಗಿ ಅಧಿಕಾರಿಗಳು ಸದನಕ್ಕೆ ಸಮರ್ಪಕ ಮಾಹಿತಿ ನೀಡದೆ ತಮ್ಮದೇ ನಿರ್ಣಯ ಕೈಗೊಳ್ಳುತ್ತಿದ್ದಾರೆ. ಮಹಾಪೌರರ ಗಮನಕ್ಕೂ ತಾರದೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು, ನಿರ್ಧಾರಗಳನ್ನು ಕೈಗೊಳ್ಳುವುದಕ್ಕೆ ಇದೇನು ಸರ್ವಾಧಿಕಾರಿ ಆಡಳಿತವೇ ಎಂದು ಕಿಡಿಕಾರಿದರು. 

Advertisement

ಬಿಜೆಪಿಯ ವೀರಣ್ಣ ಸವಡಿ ಮಾತನಾಡಿ, ವಾರ್ಷಿಕ 30 ಕೋಟಿ ವೆಚ್ಚವಾದರೂ ಸ್ವತ್ಛತೆ ಇಲ್ಲವಾಗುತ್ತಿದೆ. ಘನತ್ಯಾಜ್ಯ ನಿರ್ವಹಣೆ ಹಾಗೂ ಸ್ವತ್ಛತೆ ಕುರಿತು 6 ಪ್ಯಾಕೇಜ್‌ಗೆ ಅನುಮೋದನೆ ನಂತರ ಕೆಲ ಗುತ್ತಿಗೆದಾರರು ಕೋಟ್‌ ìಗೆ ಹೋಗಿದ್ದಾರೆ. ಕೋರ್ಟ್‌ಲ್ಲಿ ವಿಚಾರಣೆ ಏನಾಗಿದೆ ಎಂಬ ಬಗ್ಗೆಯೂ ಸದಸ್ಯರಿಗೆ ಮಾಹಿತಿ ಇಲ್ಲ ಎಂದರೆ ಹೇಗೆ?

ಪಾಲಿಕೆಯಿಂದ ನೇರವಾಗಿ ಗುತ್ತಿಗೆ ಕಾರ್ಮಿಕರನ್ನು ನೇಮಿಸಿಕೊಂಡರೆ ಮುಂದೆ ಸ್ವತ್ಛತೆ ಸಮಸ್ಯೆಯಾದರೆ ಯಾರನ್ನು ಕೇಳುವುದು ಎಂದು ಪ್ರಶ್ನಿಸಿದರು. ಕಾಂಗ್ರೆಸ್‌ನ ಗಣೇಶ ಟಗರಗುಂಟಿ ಮಾತನಾಡಿ, ಸ್ವತ್ಛತೆಯ ಅವಾಂತರ ಮುಂದುವರಿದರೆ ವಾರ್ಡ್‌ ಜನ ನಮ್ಮನ್ನು ಚಪ್ಪಲಿ ತೆಗೆದುಕೊಂಡು ಹೊಡೆಯುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಪಕ್ಷ ನಾಯಕ ಸುಭಾಸ ಶಿಂಧೆ, ಸದಸ್ಯರಾದ ಅಲ್ತಾಫ್ ಕಿತ್ತೂರು, ರಾಜಣ್ಣಾ ಕೊರವಿ, ಸುಧೀರ ಸರಾಫ್, ಪ್ರಕಾಶ ಕ್ಯಾರಕಟ್ಟಿ, ಶಿವಾನಂದ ಮುತ್ತಣ್ಣವರ, ಶೈಲಾ ಕಾಮರಡ್ಡಿ, ರಘು ಲಕ್ಕಣ್ಣವರ, ರಾಮಣ್ಣಾ ಬಡಿಗೇರ  ಮುಂತಾದವರು ಸ್ವತ್ಛತೆ ಇಲ್ಲದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಮಹಾಪೌರ ಡಿ.ಕೆ.ಚವ್ಹಾಣ ಅವರು ಘನತ್ಯಾಜ್ಯ ನಿರ್ವಹಣೆ ಕುರಿತಾಗಿ ಮುಂದಿನ ವಾರ ಪಾಲಿಕೆ ಸರ್ವಪಕ್ಷ ಸದಸ್ಯರ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವಂತೆ ಆಯುಕ್ತರಿಗೆ ಆದೇಶಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next