Advertisement

ಕೆಕೆಆರ್ ಡಿಬಿಯಿಂದ ಆರೋಗ್ಯ ಅವಿಷ್ಕಾರ: ಡಾ. ಅಜಯಸಿಂಗ್

02:47 PM Oct 11, 2023 | Team Udayavani |

ಕಲಬುರಗಿ: ಕಲ್ಯಾಣ ಕರ್ನಾಟಕ ಶೈಕ್ಷಣಿಕ ಅಭಿವೃದ್ಧಿಗೆ ತೊಡಕಾಗಿರುವ ಖಾಲಿ ಶಿಕ್ಷಕರನ್ನು ಕೆಕೆಆರ್ ಡಿಬಿಯಿಂದಲೇ ನೇಮಕ ಮಾಡಿಕೊಳ್ಳುವ ಶಿಕ್ಷಣ ಅವಿಷ್ಕಾರದಂತೆ ಆರೋಗ್ಯ ಕ್ಷೇತ್ರದ ಮೂಲಸೌಕರ್ಯ ಗಳಿಗೂ ಸ್ಪಂದಿಸಲು ಮುಂದಿನ 15 ದಿನದೊಳಗೆ ಆರೋಗ್ಯ ಅವಿಷ್ಕಾರ ಯೋಜನೆ ರೂಪಿಸುವುದಾಗಿ ಕೆಕೆಆರ್ ಡಿಬಿ ಅಧ್ಯಕ್ಷ ಡಾ. ಅಜಯಸಿಂಗ್ ಹೇಳಿದರು.

Advertisement

ನಗರದ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ವಾಕರ್ಸ್ ಆ್ಯಂಡ್ ಜಾಗರ್ಸ್ ಅಸೋಸಿಯೇಷನ್ ಆಯೋಜಿಸಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಮಂಡಳಿಯಿಂದಲೇ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡು ಶಿಕ್ಷಕರ ಕೊರತೆ ನೀಗಿಸಲಾಗಿದೆ.‌ ಅದೇ ತೆರನಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಅವಿಷ್ಕಾರ ಯೋಜನೆ ರೂಪಿಸಲು ಉದ್ದೇಶಿಸಿಲಾಗಿದೆ. 15 ದಿನದೊಳಗೆ ಯೋಜನೆ ರೂಪಿಸಲಾಗುವುದು ಎಂದು ಡಾ. ಅಜಯಸಿಂಗ್ ವಿವರಣೆ ನೀಡಿದರು.

ತಂದೆಯವರು ಒಂದು ದಿನ ತಪ್ಪದೇ ಮಾಡುತ್ತಿದ್ದ ವಾಕಿಂಗ್ ತಮಗೆ ಸ್ಪೂರ್ತಿಯಾಗಿದ್ದು, ಆರೋಗ್ಯ ವಿದ್ದರೆ ಎಲ್ಲವೂ ಮಾಡಬಹುದು. ಆರೋಗ್ಯ ಕೆಟ್ಟರೆ ಏನೂ ಮಾಡಲಿಕ್ಕಾಗದು.‌ ದಿನಾಲು ಒಂದು ತಾಸು ವಾಕಿಂಗ್ ಹಾಗೂ ಯೋಗಕ್ಕೆ ಸಮಯ ನೀಡಿದರೆ ದಿನದ 23 ಗಂಟೆ ನಮ್ಮನ್ನು ರಕ್ಷಿಸುತ್ತದೆ.‌ ಹೀಗಾಗಿ ದಿನಾಲು ಯೋಗ ಮಾಡುವುದು ಅಗತ್ಯವಾಗಿದೆ ಎಂದು ಡಾ. ಅಜಯಸಿಂಗ್ ಹೇಳಿದರು.

ತಾವು ಈಗ ಶಾಸಕ, ಇದಕ್ಕೂ ಮೊದಲು ವೈದ್ಯ.‌ ಆದರೆ ಅದರಕ್ಕಿಂತ ಮುಂಚೆ ಕ್ರೀಡಾಪಟು. ಕ್ರೀಡೆ ಜೀವನದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದ ಅವರು, ಜಿಲ್ಲಾ ಕ್ರೀಡಾಂಗಣದ ಸರ್ವಾಂಗೀಣ ಅಭಿವೃದ್ಧಿಗೆ ಬದ್ದತೆ ಹೊಂದಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು,  ಸಚಿವರು ಹಾಗೂ ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸಲಾಗುವುದು.‌ ಬ್ರಿಜೇಶ್ ಪಟೇಲ್ ಅವರೊಂದಿಗೆ ಕಲಬುರಗಿಯಲ್ಲಿ ಕ್ರಿಕೆಟ್ ಅಕಾಡೆಮಿ ಪ್ರಾರಂಭಿಸುವ ನಿಟ್ಟಿನಲ್ಲಿ ಯತ್ನಿಸಲಾಗುವುದು ಎಂದರು.‌

Advertisement

ಪ್ರಮುಖವಾಗಿ ಹಂತ- ಹಂತವಾಗಿ ಕಲಬುರಗಿ ಜಿಲ್ಲಾ ಕ್ರೀಡಾಂಗಣ ಅಭಿವೃದ್ದಿ ಪಡಿಸಲಾಗುವುದು.‌ ಕ್ರೀಡಾ ಸಚಿವ ಬಿ.‌ನಾಗೇಂದ್ರ ಬಳ್ಳಾರಿಯವರಾಗಿದ್ದು, ಚರ್ಚಿಸಲಾಗುವುದು.‌ ಈಗ ಸಿಂಥೇಟಿಕ್ ಟ್ರ್ಯಾಕ್ ಕ್ರಿಯಾ ಯೋಜನೆ ರೂಪಿಸಲಾಗುವುದು. ಕ್ರೀಡಾಂಗಣ ಅಭಿವೃದ್ಧಿಗೆ ಮಂಡಳಿಯಿಂದ ಸೂಕ್ತ ಅನುದಾನ ನೀಡಲಾಗುವುದು.‌ ಒಟ್ಟಾರೆ ಕೆಕೆಆರ್ ಡಿಬಿ ಎಲ್ಲ ಕ್ಷೇತ್ರಗಳಿಗೆ ಸೂಕ್ತ ಅನುದಾನ ಕಲ್ಪಿಸಲಾಗುವುದು ಎಂದು ಡಾ.‌ಅಜಯಸಿಂಗ್ ಹೇಳಿದರು.

ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಮಾತನಾಡಿ, ಜಿಲ್ಲಾ ಕ್ರೀಡಾಂಗಣ ಸಮಗ್ರ ಅಭಿವೃದ್ಧಿ ಗೆ 33 ಕೋ.ರೂ ಯೋಜನೆ ರೂಪಿಸಲಾಗಿದೆ. ಇಷ್ಟೊಂದು ಮೊತ್ತ ಸರ್ಕಾರ, ಕೆಕೆಆರ್ ಡಿಬಿ ಹಾಗೂ ಜಿಲ್ಲೆಯ ಎಲ್ಲ ಶಾಸಕರು ತಮ್ಮ ಅನುದಾನ ನೀಡಿದಲ್ಲಿ ಇದು ಸಾಧ್ಯವಾಗುತ್ತದೆ ಎಂದ ಅವರು, ಕಲಬುರಗಿಯಲ್ಲಿ ಉತ್ತಮ ಬ್ಯಾಡ್ಮಿಂಟನ್ ಕ್ರೀಡಾಂಗಣವಿದೆ. ಅದೇ ತೆರನಾದ ಇತರ ಎಲ್ಲ ಕ್ರೀಡಾಂಗಣ ನಿರ್ಮಾಣವಾಗಬೇಕಿದೆ ಎಂದರು.

ವಾಕರ್ಸ್ ಅ್ಯಂಡ್ ಅಸೋಸಿಯೇಷನ್ ಅಧ್ಯಕ್ಷ ಶಿವರಾಜ ಭಾಸಗಿ ಮಾತನಾಡಿ, ದಿನಾಲು ಬೆಳಿಗ್ಗೆ ಒಂದು ತಾಸು ಎಲ್ಲವನ್ನು ಮರೆತು ವಾಕಿಂಗ್ ಮಾಡಿದರೆ ದಿನವಿಡೀ ಉಲ್ಲಾಸದಿಂದ ಇರಬಹುದು ಎಂದು ಹೇಳಿದರು.

ಜಿ.ಪಂ ಮಾಜಿ ಉಪಾಧ್ಯಕ್ಷ ಗುರುಲಿಂಗಪ್ಪಗೌಡ ಪಾಟೀಲ್, ಶಾಂತಕುಮಾರ ನಿಗ್ಗುಡಗಿ ಸೇರಿದಂತೆ ಮುಂತಾದವರಿದ್ದರು. ಆರ್. ಜೆ.‌ಮಂಜು ನಿರೂಪಿಸಿದರು.‌ ನಿವೃತ್ತ ಕೃಷಿ ಅಧಿಕಾರಿ ಡಾ. ಡಿ.ಎಂ ಮಣ್ಣೂರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next