Advertisement

Monkey Disease ತಡೆಗೆ ಆರೋಗ್ಯ ಇಲಾಖೆ ಕಣ್ಗಾವಲು

10:40 AM Feb 11, 2024 | Shreeram Nayak |

ಬೆಂಗಳೂರು: ರಾಜ್ಯದ ಆಯ್ದ ಜಿಲ್ಲೆಗಳಲ್ಲಿ ಮಂಗನ ಕಾಯಿಲೆ(ಕೆಎಫ್ಡಿ) ಪಾಸಿಟಿವಿಟಿ ಹಾಗೂ ಮರಣ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು, ಮಾನವ ಹಾಗೂ ಉಣ್ಣೆ ಕಣ್ಗಾವಲು ಬಲಪಡಿಸಲು ಮುಂದಾಗಿದೆ.

Advertisement

ರಾಜ್ಯದ 12 ಜಿಲ್ಲೆಗಳಲ್ಲಿ ಮಂಗನ ಕಾಯಿಲೆ ಪ್ರಕರಣಗಳು ಸಾಮಾನ್ಯವಾಗಿ ವರದಿಯಾಗುತ್ತದೆ. ಆದರೆ ಪ್ರಸಕ್ತ ಸಾಲಿನಲ್ಲಿ ಶಿವಮೊಗ್ಗ, ಉ.ಕ. ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 70 ಪ್ರಕರಣಗಳು ದಾಖಲಾಗಿದೆ. ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ತಲಾ ಒಂದು ಮರಣ ಪ್ರಕರಣ ವರದಿಯಾಗಿದೆ. ಹಠಾತ್‌ ಜ್ವರ, ಸ್ನಾಯುಗಳ ನೋವುಗಳು ಸೋಂಕಿನ ಮುಖ್ಯ ಲಕ್ಷಣವಾಗಿದೆ. ಇದಕ್ಕೆ ನಿರ್ದಿಷ್ಟವಾದ ಚಿಕಿತ್ಸೆಯಿಲ್ಲದಿದ್ದರೂ, ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ.

ಆರೋಗ್ಯ ಇಲಾಖೆಯಿಂದ ಕ್ರಮ
ಆರೋಗ್ಯ ಇಲಾಖೆ ಕೆಎಫ್ಡಿ ಮಾದರಿಗಳನ್ನು ವಿಡಿಎಲ್‌ ಶಿವಮೊಗ್ಗ ಮತ್ತು ಎಂಐವಿ ಮಣಿಪಾಲದ ಪ್ರಯೋಗಾಲಯದಲ್ಲಿ ಪರೀಕ್ಷೆ ಒಳಪಡಿಸಲಾಗುತ್ತದೆ. ಸೋಂಕಿತರಿಗೆ ಎ.ಬಿ.ಎ.ಆರ್‌.ಕೆ. ಅಡಿಯಲ್ಲಿ ವೈದ್ಯಕೀಯ ಚಿಕಿತ್ಸೆ ಉಚಿತವಾಗಿ ನೀಡಲಾಗುತ್ತದೆ. ಜೆಸಿಎಚ್‌ ತೀರ್ಥಹಳ್ಳಿ, ಸಾಗರ, ಸಿದ್ಧಾಪುರ, ಹಾಗೂ ಹೊನ್ನಾವರ ಉಪವಿಭಾಗೀಯ ಆಸ್ಪತ್ರೆಗಳಲ್ಲಿ ಕೆಎಫ್ಡಿ ರೋಗಿಗಳಿಗೆ ಪ್ರತ್ಯೇಕ ಹಾಸಿಗೆ ಮೀಸಲಿಡಲಾಗಿದೆ.

ಕೆಎಂಸಿ ಮಣಿಪಾಲ, ಎಸ್‌ಐಎಂಎಸ್‌ ಶಿವಮೊಗ್ಗ, ಕೆಆರ್‌ಐಎಂಎಸ್‌ ಕಾರವಾರ ಆಸ್ಪತ್ರೆಗಳನ್ನು ಕೆಎಫ್ಡಿ ಸೋಂಕಿತರ ಚಿಕಿತ್ಸೆಗಾಗಿ ರೆಫ‌ರಲ್‌ ಆಸ್ಪತ್ರೆಗಳಾಗಿ ಗುರುತಿಸಲಾಗಿದೆ. ಕೆಎಫ್ಡಿ ಪೀಡಿತ ಪ್ರದೇಶದ ಆಸ್ಪತ್ರೆಗಳಲ್ಲಿ ಐವಿ ದ್ರಾವಣ, ಪ್ಯಾರಾಸೆಟಮಾಲ್‌ ದಾಸ್ತಾನು ಮಾಡಿಡಲು ಇಲಾಖೆ ಸ್ಪಷ್ಟವಾಗಿ ಸೂಚಿಸಿದೆ. ಜತೆಗೆ ಉಣ್ಣೆ ಕಡಿತವನ್ನು ತಡೆಗಟ್ಟಲು ಬಳಸುವ ಡಿಇಪಿಎ ತೈಲ ಉಚಿತವಾಗಿ ವಿತರಿಸಲಾಗಿದೆ.

ಏನು ಮಾಡಬೇಕು?
ಕಾಡಿಗೆ ಹೋಗುವವರು ಸುರಕ್ಷತೆಗಾಗಿ ಮೈತುಂಬಾ ಬಟ್ಟೆ ಧರಿಸಬೇಕು, ಈ ವೇಳೆ ಕಡ್ಡಾಯವಾಗಿ ಡಿಇಪಿಎ ಉಣ್ಣೆ ವಿಕರ್ಷಕ ತೈಲ ಮೈಗೆ ಲೇಪಿಸಬೇಕು. ಹಿಂದಿರುಗಿದ ಬಳಿಕ ಬಿಸಿ ನೀರಿನಲ್ಲಿ ಸ್ನಾನ ಮಾಡುವುದರ ಜತೆಗೆ ಧರಿಸಿದ ಬಟ್ಟೆ ನೀರಿನಲ್ಲಿ ತೊಳೆಯುವುದು, ಕಾಡಿನಿಂದ ಮನೆಗಳಿಗೆ ಉಣ್ಣೆಗಳು ಬಾರದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಉಣ್ಣೆ ನಿವಾರಕ ಔಷಧವನ್ನು ದನದ ಕೊಟ್ಟಿಗೆಯ ಒಳಗೆ ಮತ್ತು ಸುತ್ತಮುತ್ತಲೂ ಸಿಂಪಡಿಸಬೇಕು.

Advertisement

ಏನು ಮಾಡಬಾರದು?
ಸೋಂಕಿತ ಪ್ರದೇಶಗಳ ಕಾಡಿನ ಒಣಗಿದ ಎಲೆಗಳನ್ನು ಮನೆಗೆ ತಂದು ರಾಶಿ ಹಾಕಬಾರದು, ಸತ್ತ ಪ್ರಾಣಿಗಳನ್ನು ಬರಿ ಕೈಯಿಂದ ಮುಟ್ಟಬಾರದು, ಮಂಗ ಸತ್ತ ಪ್ರದೇಶಕ್ಕೆ ಭೇಟಿ ನೀಡಿದರೆ ತತ್‌ಕ್ಷಣ ಅಧಿಕಾರಿಗಳಿಗೆ ವರದಿ ಮಾಡಬೇಕು. ಚಾರಣಿಗರು, ಚಾರಣದ ಸಮಯದಲ್ಲಿ ಉಣ್ಣೆ ಕಡಿತವನ್ನು ನಿರ್ಲಕ್ಷಿéಸಬಾರದು.

6 ಮಂದಿಗೆ ಮಂಗನ ಕಾಯಿಲೆ ಸೋಂಕು
ಶಿವಮೊಗ್ಗ: ಚಿಕ್ಕಮಗಳೂರಿನಲ್ಲಿ ಐವರು ಹಾಗೂ ಶಿವಮೊಗ್ಗದ ಒಬ್ಬರಿಗೆ ಶನಿವಾರ ಕೆಎಫ್‌ಡಿ ಪಾಸಿಟಿವ್‌ ಕಾಣಿಸಿಕೊಂಡಿದೆ. ಈವರೆಗೆ 76 ಮಂದಿಗೆ ಪಾಸಿಟಿವ್‌ ಬಂದಿದ್ದು, 53 ಮಂದಿ ಗುಣಮುಖರಾಗಿದ್ದಾರೆ. ಇಬ್ಬರು ಮೃತಪಟ್ಟಿದ್ದಾರೆ. 21 ಸಕ್ರಿಯ ಪ್ರಕರಣಗಳಿವೆ.

ಮಲೆನಾಡು ಭಾಗದಲ್ಲಿ ದಿನೇದಿನೆ ಕೆಎಫ್‌ಡಿ ಪ್ರಕರಣಗಳು ಹೆಚ್ಚಾಗಿದ್ದು ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಪರೀûಾ ಪ್ರಮಾಣ ಹೆಚ್ಚು ಮಾಡಿದ್ದು ಪ್ರತಿದಿನ ನೂರಕ್ಕೂ ಹೆಚ್ಚು ಸ್ಯಾಂಪಲ್‌ ಟೆಸ್ಟ್‌ ಮಾಡಲಾಗುತ್ತಿದೆ. ಶನಿವಾರ ಶಿವಮೊಗ್ಗದ 124, ಉತ್ತರ ಕನ್ನಡ 4, ಚಿಕ್ಕಮಗಳೂರು 12, ಕೊಡಗು 4, ಹಾವೇರಿಯ ಒಂದು ಮಾದರಿ ಪರೀಕ್ಷೆಗೆ ಒಳಪಡಿಸಲಾಗಿತ್ತು.

ಈ ಪೈಕಿ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಐವರು, ಶಿವಮೊಗ್ಗದ ಹೊಸನಗರ ತಾಲೂಕಿನ ಒಬ್ಬರಿಗೆ ಪಾಸಿಟಿವ್‌ ಬಂದಿದೆ. ಇಬ್ಬರು ರೋಗಿಗಳು ಮಣಿಪಾಲ್‌ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next