ಇನ್ನು ಮುಂದೆ ದೇಶದ ಪ್ರತಿ ಜಿಲ್ಲೆಯಲ್ಲಿ ವಾರಕ್ಕೆ 200 ಮಂದಿಯಂತೆ ಎಲ್ಲ 733 ಜಿಲ್ಲೆಗಳಲ್ಲೂ ಜನರು ಕೋವಿಡ್ ಪರೀಕ್ಷೆಗೆ ಒಳಗಾಗಲಿದ್ದಾರೆ.
ರೋಗಲಕ್ಷಣ ಇರಲಿ, ಇಲ್ಲದೇ ಇರಲಿ, ಪ್ರತಿ ಜಿಲ್ಲೆಯಲ್ಲೂ ತಿಂಗಳಿಗೆ 800 ಮಂದಿಯ ಪರೀಕ್ಷೆ ನಡೆಯಲಿದೆ. ಕೋವಿಡ್ ವೈರಸ್ ಸಾಮುದಾಯಿಕ ಮಟ್ಟದಲ್ಲಿ ವ್ಯಾಪಿಸಿದೆಯೇ ಎಂಬ ಬಗ್ಗೆ ಅಧ್ಯಯನ ಆರಂಭವಾಗಲಿದೆ.
ಕೇಂದ್ರ ಆರೋಗ್ಯ ಸಚಿವಾಲಯವು ಈ ಮಾರ್ಗಸೂಚಿಗಳನ್ನು ಎಲ್ಲ ಜಿಲ್ಲೆಗಳಿಗೆ ರವಾನಿಸಿದೆ. ಪ್ರತಿ ಜಿಲ್ಲೆಯೂ ಕೂಡ ಈಗ 10 ಆರೋಗ್ಯ ಕೇಂದ್ರಗಳನ್ನು ಆಯ್ಕೆ ಮಾಡಬೇಕು. 10ರ ಪೈಕಿ 6 ಕೇಂದ್ರಗಳು ಸರ್ಕಾರಿ ಸ್ವಾಮ್ಯವಾಗಿರಬೇಕು.
ಇಲ್ಲಿ ಜನರ ಗಂಟಲು ದ್ರವ ಮತ್ತು ರಕ್ತದ ಮಾದರಿಗಳನ್ನು ಪರೀಕ್ಷಿಸಲಾಗುತ್ತದೆ. ಗಂಟಲು ದ್ರವ ಪರೀಕ್ಷೆ ಮೂಲಕ ಅವರಲ್ಲಿ ಕೋವಿಡ್ ಸೋಂಕು ಇದೆಯೇ ಎಂಬುದನ್ನು ಪರೀಕ್ಷಿಸಲಾಗುತ್ತದೆ. ರಕ್ತ ಪರೀಕ್ಷೆಯ ಮೂಲಕ, ಅವರಿಗೆ ಈಗಾಗಲೇ ಸೋಂಕು ತಗುಲಿ ಅವರು ಗುಣಮುಖರಾಗಿದ್ದಾರೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ.
ಅವರ ದೇಹದಲ್ಲಿ ಪ್ರತಿಕಾಯಗಳು ಸೃಷ್ಟಿಯಾಗಿದ್ದರೆ, ಅವರಿಗೆ ಸೋಂಕು ತಗುಲಿತ್ತು ಮತ್ತು ಅವರು ಅದರ ವಿರುದ್ಧ ಹೋರಾಡಿ ಗುಣಮುಖರಾಗಿದ್ದಾರೆ ಎಂದು ಅರ್ಥ.