Advertisement

ನಾಳೆಯಿಂದ ಹೆಲ್ತ್‌ ಕಾನ್‌ ಸಮಾವೇಶ

12:11 PM Nov 01, 2019 | Suhan S |

ಹುಬ್ಬಳ್ಳಿ: ಕೈಗೆಟಕುವ ದರದಲ್ಲಿ ವೈದ್ಯಕೀಯ ಸೇವೆ ಒದಗಿಸುವ, ವೈದ್ಯಕೀಯ ಕ್ಷೇತ್ರದಲ್ಲಿನ ತಂತ್ರಜ್ಞಾನ ಕ್ರಾಂತಿಯ ಲಾಭವನ್ನು ಗ್ರಾಮೀಣ ಭಾಗ ಸೇರಿದಂತೆ ಎಲ್ಲ ಕಡೆ ತಲುಪಿಸುವ ನಿಟ್ಟಿನಲ್ಲಿ ಚಿಂತನ-ಮಂಥನ ನಡೆಸಲು ನ. 2-3ರಂದು ಹೆಲ್ತ್‌ಕಾನ್‌ ಆಯೋಜಿಸಲಾಗಿದ್ದು, ದೇಶದ ವಿವಿಧೆಡೆಯ ಸುಮಾರು 400ಕ್ಕೂ ಹೆಚ್ಚು ಪ್ರತಿನಿಧಿಗಳು, ತಜ್ಞರು ಪಾಲ್ಗೊಳ್ಳಲಿದ್ದಾರೆ.

Advertisement

ಟೈ ಹುಬ್ಬಳ್ಳಿ ಅಧ್ಯಕ್ಷ ಶಶಿಧರ ಶೆಟ್ಟರ, ಹೆಲ್ತ್‌ಕಾನ್‌ ಸಂಯೋಜಕ ಡಾ| ಶಂಕರ ಬಿಜಾಪುರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಟೈ ಹುಬ್ಬಳ್ಳಿ ಆಯೋಜಿಸುತ್ತಿರುವ ಎರಡನೇ ಹೆಲ್ತ್‌ಕಾನ್‌ ಇದಾಗಿದೆ. ಆರೋಗ್ಯ ಸೇವೆ ಕ್ಷೇತ್ರದ ಸಮಸ್ಯೆ-ಸವಾಲುಗಳಿಗೆ ಪರಿಹಾರ ರೂಪಣೆ ಉದ್ದೇಶದೊಂದಿಗೆ ಇದನ್ನು ಕೈಗೊಳ್ಳಲಾಗುತ್ತಿದ್ದು, ಡೆನಿಸನ್ಸ್‌ ಹೋಟೆಲ್‌ನಲ್ಲಿ ನಡೆಯಲಿದೆ ಎಂದರು.

ಆರೋಗ್ಯ ರಕ್ಷಣೆಯಲ್ಲಿ ನಾಯಕತ್ವದ ಯಶಸ್ಸು ಮತ್ತು ಕಲಿಕೆ, ಭವಿಷ್ಯದ ಆರೋಗ್ಯ ರಕ್ಷಣೆಯನ್ನು ತಂತ್ರಜ್ಞಾನ ಹೇಗೆ ರೂಪಿಸುತ್ತದೆ, ಆಸ್ಪತ್ರೆ ಯಶಸ್ವಿ ನಿರ್ವಹಣೆ, ಗುಣಮಟ್ಟದ ಹಾಗೂ ಕಡಿಮೆ ವೆಚ್ಚದ ಆರೋಗ್ಯ ಸೇವೆಗಳ ಸಂಪರ್ಕ, ವೈದ್ಯರು ಮತ್ತು ಸಾಮಾಜಿಕ ಜಾಲತಾಣ, ಭವಿಷ್ಯದ ಆರೋಗ್ಯರಕ್ಷಣೆಗೆ ಸಿದ್ಧತೆ, ವೈದ್ಯರು ಮತ್ತು ರೋಗಿಗಳ ಸಂಬಂಧ ಇನ್ನಿತರ ವಿಷಯಗಳ ಕುರಿತಾಗಿ ತಜ್ಞರು ಅನುಭವ ಹಂಚಿಕೊಳ್ಳಲಿದ್ದು, ಸಂವಾದ ನಡೆಯಲಿದೆ.  ವೈದ್ಯಕೀಯ ಕ್ಷೇತ್ರದ ಯಶಸ್ವಿ ನವೋದ್ಯಮಿಗಳು ಸಹ ತಮ್ಮ ಅನಿಸಿಕೆ ವ್ಯಕ್ತಪಡಿಸಲಿದ್ದಾರೆ ಎಂದು ತಿಳಿಸಿದರು.

2ರಂದು ಉದ್ಘಾಟನೆ: ಹೆಲ್ತ್‌ಕಾನ್‌ ಸಮಾವೇಶದ ಉದ್ಘಾಟನಾ ಕಾರ್ಯಕ್ರಮ ನ. 2ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ.  ಡಿಸಿಎಂ ಡಾ| ಅಶ್ವತ್ಥನಾರಾಯಣ, ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು, ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ರಾಜ್ಯಸಭಾ ಸದಸ್ಯ ಡಾ| ಪ್ರಭಾಕರ ಕೋರೆ, ಎಸ್‌ ಡಿಎಂ ಆರೋಗ್ಯ ವಿವಿ ಕುಲಪತಿ ಡಾ| ನಿರಂಜನ ಕುಮಾರ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.

ನ. 3ರಂದು ನಡೆಯುವ ಕಾರ್ಯಕ್ರಮದಲ್ಲಿ ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ ಜೋಶಿ ಪಾಲ್ಗೊಳ್ಳಲಿದ್ದಾರೆ ಎಂದರು. ಹುಬ್ಬಳ್ಳಿಯಲ್ಲಿ ಹೆಲ್ತ್‌ಪಾರ್ಕ್‌ ಆರಂಭ ನಿಟ್ಟಿನಲ್ಲಿ ರಾಜ್ಯ ಸರಕಾರಕ್ಕೆ ಮನವಿ ಮಾಡಲಾಗಿದ್ದು, ಪಾರ್ಕ್‌ ಗೆ 20 ಎಕರೆ ಭೂಮಿ ಅವಶ್ಯವಾಗಿದೆ ಎಂದು ಹೇಳಿದರು.

Advertisement

ಐಎಂಎ ಅಧ್ಯಕ್ಷ ಡಾ| ಕ್ರಾಂತಿಕಿರಣ ಮಾತನಾಡಿ, ವೈದ್ಯರು ಹಾಗೂ ರೋಗಿಗಳ ನಡುವೆ ಉತ್ತಮ ಸಂವಾದ ನಡೆದರೆ ರೋಗಿಗಳಿಗೆ ಅದೆಷ್ಟೋ ಸಮಾಧಾನವಾಗುತ್ತದೆ. ಒಬ್ಬ ವೈದ್ಯ ದಿನಕ್ಕೆ 50ಕ್ಕಿಂತ ಹೆಚ್ಚು ಜನರಿಗೆ ಚಿಕಿತ್ಸೆ ನೀಡುವುದಕ್ಕೆ ಮುಂದಾಗಬಾರದು. ಒಬ್ಬ ವೈದ್ಯನಿಂದ 100-150 ಜನರ ತಪಾಸಣೆ-ಚಿಕಿತ್ಸೆ ಸರಿಯಲ್ಲ ಎಂಬುದು ನಮ್ಮ ಅಭಿಪ್ರಾಯವಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಡಾ| ವಿವೇಕ ಪಾಟೀಲ, ಡಾ| ಬಿ.ಆರ್‌. ಪಾಟೀಲ, ಟೈ ಹುಬ್ಬಳ್ಳಿ ಪದಾಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next