Advertisement

ಆರೋಗ್ಯ ವಲಯಕ್ಕೆ ಅಪಾಯ ವೈದ್ಯರೇ, ಟೇಕ್‌ ಕೇರ್‌…

09:38 AM Mar 19, 2020 | mahesh |

ವೈದ್ಯರು, ನರ್ಸ್‌ಗಳು ದೇವರಲ್ಲ,  ಅವರೂ ಮನುಷ್ಯರು. ಅವರಿಗೂ ಕೆಲಸದ ಒತ್ತಡವಿರುತ್ತದೆ, ಆತಂಕವಿರುತ್ತದೆ ಎನ್ನುವುದನ್ನು ಅರಿತು ಸಂಯಮದಿಂದ ವರ್ತಿಸೋಣ,  ಸಹಕರಿಸೋಣ. ಆರೋಗ್ಯ ವಲಯದಲ್ಲಿ ಇರುವವರು ಆರೋಗ್ಯದಿಂದ ಇರಲಿ ಎಂದು ಪ್ರಾರ್ಥಿಸೋಣ.

Advertisement

ಕಳೆದ ವಾರ ಮೃತಪಟ್ಟ ಕಲಬುರಗಿಯ ಕೊರೊನಾ ಪೀಡಿತ ವ್ಯಕ್ತಿಗೆ ಚಿಕಿತ್ಸೆ ನೀಡಿದ್ದ ವೈದ್ಯರಿಗೆ ಈಗ ಸೋಂಕು ಹರಡಿರುವುದು ಖಚಿತ ಪಟ್ಟಿದೆ. ಇದು ನಿಜಕ್ಕೂ ಆತಂಕದ ಹಾಗೂ ನೋವಿನ ವಿಷಯ. ಈ ಘಟನೆ ಆರೋಗ್ಯ ವಲಯದಲ್ಲಿರುವವರು ಎದುರಿಸುತ್ತಿರುವ ಸವಾಲು ಮತ್ತು ಅಪಾಯಗಳತ್ತ ನಮ್ಮ ಗಮನ ಸೆಳೆಯುತ್ತಿದೆ. ಅದರಲ್ಲೂ ಮುಖ್ಯವಾಗಿ ವೈದ್ಯರು, ನರ್ಸ್‌ಗಳು ತುಂಬಾ ಎಚ್ಚರಿಕೆಯಿಂದ ಇರಲೇಬೇಕು ಎನ್ನುವ ಅಗತ್ಯವನ್ನು ಈ ಘಟನೆ ಸಾರುತ್ತಿದೆ. ಹಾಗೆ ನೋಡಿದರೆ, ವೈದ್ಯರು ಸುರಕ್ಷತೆಯ ವಿಷಯದಲ್ಲಿ ಬಹಳ ಜಾಗ್ರತೆ ವಹಿಸಿರುತ್ತಾರೆ ಎನ್ನುವುದು ನಿರ್ವಿವಾದ, ಆದರೂ ಇಷ್ಟೆಲ್ಲ ಎಚ್ಚರಿಕೆ ವಹಿಸಿದ ಮೇಲೂ ಅದ್ಹೇಗೋ ಈ ವೈರಸ್‌ ಅವರ ದೇಹ ಸೇರಿಕೊಂಡಿರುವುದು ಬೇಸರದ ವಿಷಯ.

ಕೊರೊನಾ ಅಷ್ಟೇ ಅಲ್ಲ, ಎಚ್‌1ಎನ್‌1, ಸಾರ್ಸ್‌ ಸೇರಿದಂತೆ ವೈರಾಣು ರೋಗಗಳೆಲ್ಲ ಹರಡಿದ್ದ ಸಮಯದಲ್ಲಿ ಅನೇಕ ವೈದ್ಯರು ಪೀಡಿತರಾಗಿದ್ದು ಉಂಟು.

ಕಲಬುರಗಿಯ ಘಟನೆಯೊಂದೇ ಅಲ್ಲ, ಇಂದು ಜಗತ್ತಿನಾದ್ಯಂತ ಹಲವು ದೇಶಗಳಲ್ಲಿ ವೈದ್ಯರು ಕೊರೊನಾ ಪೀಡಿತರಾಗುತ್ತಿದ್ದಾರೆ. ಅಮೆರಿಕದಲ್ಲಿ ಹಲವು ನರ್ಸ್‌ಗಳಲ್ಲಿ, ವೈದ್ಯರಲ್ಲಿ ಸೋಂಕು ಕಾಣಿಸಿಕೊಂಡಿದೆ. ಚೀನಾದಲ್ಲಂತೂ, ಕೊರೊನಾ ಅಪಾಯದ ಬಗ್ಗೆ ಜಗತ್ತಿಗೆ ಮೊದಲು ಎಚ್ಚರಿಸಿದ್ದ ವೈದ್ಯರೊಬ್ಬರು ಈ ಸೋಂಕಿಗೇ ತುತ್ತಾಗಿ ಮೃತಪಟ್ಟದ್ದು ದೊಡ್ಡ ಸುದ್ದಿಯಾಯಿತು. ಚೀನಾವೊಂದರಲ್ಲಿ 3300ಕ್ಕೂ ಅಧಿಕ ಆರೋಗ್ಯ ವಲಯದ ಕೆಲಸಗಾರರು(ವೈದ್ಯರು, ನರ್ಸ್‌ಗಳು, ಆ್ಯಂಬುಲೆನ್ಸ್‌ ಚಾಲಕರು ಇತ್ಯಾದಿ) ಕೊರೊನಾ ಸೋಂಕಿಗೆ ಈಡಾದರೆ, ಅದರಲ್ಲಿ 13 ಜನ ಮೃತಪಟ್ಟಿದ್ದಾರೆ.

ಇಲ್ಲಿ ಇನ್ನೊಂದು ಪ್ರಶ್ನೆಯೂ ಸುಳಿದಾಡುತ್ತಿದೆ. ಈ ಹೊಸ ವೈರಸ್‌ ವೈದ್ಯಲೋಕಕ್ಕೂ ಹೊಸತೇ ಆಗಿರುವುದರಿಂದ, ಅವರಿಗೂ ಈ ವಿಷಯದಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆಯೇ ಎಂಬುದು. ಖಂಡಿತ ಇದೆ. ಸ್ವಲ್ಪ ಅಜಾಗರೂಕತೆ ವಹಿಸಿದರೂ, ಈ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಪ್ರತಿಯೊಂದು ಆಸ್ಪತ್ರೆಗಳಲ್ಲೂ ಮತ್ತಷ್ಟು ಮುಂಜಾಗ್ರತೆಯ ಕ್ರಮಗಳನ್ನು, ಪ್ರೊಸೀಜರ್‌ಗಳನ್ನು ಪಾಲಿಸುವ ಅಗತ್ಯವಿದೆ. ಈ ವಿಷಯದಲ್ಲಿ ದಂತವೈದ್ಯರೂ ಅತಿದೊಡ್ಡ ಸವಾಲನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ರಾಜ್ಯದ ಡೆಂಟಲ್‌ ಕ್ಲೀನಿಕ್‌ಗಳನ್ನು ತಾತ್ಕಾಲಿಕ ಮುಚ್ಚಬೇಕು ಎನ್ನುವ ಸರ್ಕಾರದ ಆದೇಶ ಸ್ವಾಗತಾರ್ಹ.

Advertisement

ಈಗ ಜನರೂ ಕೊರೊನಾ ವಿಚಾರದಲ್ಲಿ ಜಾಗೃತರಾಗುತ್ತಿರುವುದರಿಂದ, ಇನ್ಮುಂದೆ ಆಸ್ಪತ್ರೆಗಳಿಗೆ ತಪಾಸಣೆಗಾಗಿ ತೆರಳುವವರ ಸಂಖ್ಯೆಯೂ ಹೆಚ್ಚಬಹುದು. ಇವರನ್ನೆಲ್ಲ ಸುರಕ್ಷಿತವಾಗಿ ನಿರ್ವಹಿಸುವ ಸೌಲಭ್ಯ, ಮಾನವಸಂಪನ್ಮೂಲ ನಿಜಕ್ಕೂ ಎಷ್ಟಿದೆ? ಈ ವಿಷಯದಲ್ಲಿ ಸರ್ಕಾರ ಗಂಭೀರವಾಗಿ ಚಿಂತಿಸಬೇಕು. ಇನ್ನು ಕೊರೊನಾದಿಂದಾಗಿ ಇಟಲಿ, ಇರಾನ್‌, ಚೀನಾದಂಥ ರಾಷ್ಟ್ರಗಳಲ್ಲಿ, ವೈದ್ಯರು-ನರ್ಸ್‌ಗಳು ಅಧಿಕ ಕೆಲಸ, ಮಾನಸಿಕ ಒತ್ತಡದಿಂದಲೂ ಹೈರಾಣಾಗುತ್ತಿದ್ದಾರೆ. ರಜೆ ಇಲ್ಲದೆ ದುಡಿಯುತ್ತಿದ್ದಾರೆ, ಅವರ ನಿದ್ರೆ ಹಾಳಾಗಿ, ಜೈವಿಕ ಗಡಿಯಾರ ಏರುಪೇರಾಗುತ್ತಿದೆ. ನಿತ್ಯದ ಸಾವು-ನೋವುಗಳು ಅವರನ್ನು ಅಧೀರರನ್ನಾಗಿಸುತ್ತಿವೆ. ಹೀಗಾಗಿ, ಅವರ ಮಾನಸಿಕ ಆರೋಗ್ಯವನ್ನೂ ಕಾಪಾಡಬೇಕಿದೆ.

ಭಾರತದಲ್ಲೂ ಆರೋಗ್ಯ ವಲಯದ ಈ ಕಾಯಕಯೋಗಿಗಳು ಕೊರೊನಾವನ್ನು ಎದುರಿಸಲು ಸಜ್ಜಾಗಿದ್ದಾರೆ. ಆದರೆ, ಈ ಹೋರಾಟದಲ್ಲಿ ಅವರು ಹೈರಾಣಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರಗಳ ಮೇಲಿದೆ. ಸಾರ್ವಜನಿಕರೂ ಈಗ ಸಂಯಮದಿಂದ ವರ್ತಿಸಬೇಕಿದೆ. ವೈದ್ಯರು, ನರ್ಸ್‌ಗಳು ದೇವರಲ್ಲ, ಅವರೂ ಮನುಷ್ಯರು. ಅವರಿಗೂ ಕೆಲಸದ ಒತ್ತಡವಿರುತ್ತದೆ, ಆತಂಕವಿರುತ್ತದೆ ಎನ್ನುವುದನ್ನು ಅರಿತು ಸಂಯಮದಿಂದ ವರ್ತಿಸೋಣ, ಸಹಕರಿಸೋಣ. ಆರೋಗ್ಯ ವಲಯದಲ್ಲಿರುವವರು ಆರೋಗ್ಯದಿಂದ ಇರಲಿ ಎಂದು ಪ್ರಾರ್ಥಿಸೋಣ.

Advertisement

Udayavani is now on Telegram. Click here to join our channel and stay updated with the latest news.

Next