Advertisement

ಆರೋಗ್ಯ ಸುರಕ್ಷಾ ಯೋಜನೆ: ಖಾಸಗಿ ಆಸ್ಪತ್ರೆಗಳಿಗೆ ಕೋಟ್ಯಂತರ ರೂ. ಬಾಕಿ

12:27 PM Nov 26, 2017 | Team Udayavani |

ಮಹಾನಗರ: ‘ಸುವರ್ಣ ಆರೋಗ್ಯ ಸುರಕ್ಷಾ’ ಯೋಜನೆಯಡಿ ಖಾಸಗಿ ಆಸ್ಪತ್ರೆಗಳಲ್ಲಿ ಬಡರೋಗಿಗಳ ಚಿಕಿತ್ಸಾ ವೆಚ್ಚಕ್ಕೆ ಮರುಪಾವತಿಸಬೇಕಾದ ಕೋಟ್ಯಂತರ ರೂ. ಅನ್ನು ರಾಜ್ಯ ಸರಕಾರ ಬಾಕಿ ಉಳಿಸಿಕೊಂಡಿದ್ದು, ಆಸ್ಪತ್ರೆಗಳು ಸಂಕಷ್ಟಕ್ಕೆ ಸಿಲುಕಿವೆ. ಜಿಲ್ಲೆಯಲ್ಲಿ ಸುಮಾರು ಏಳು ತಿಂಗಳಿನಿಂದ ಸರಕಾರದಿಂದ ಹಣ ಪಾವತಿಯಾಗಿಲ್ಲ. ಪ್ರತಿ ಖಾಸಗಿ ಆಸ್ಪತ್ರೆಗೂ ಸುಮಾರು 1ರಿಂದ 2 ಕೋಟಿ ರೂ.ಗೂ ಅಧಿಕ ಹಣ ಬಾಕಿ ಇದೆ.

Advertisement

ಸರಕಾರವು ಖಾಸಗಿ ಆಸ್ಪತ್ರೆಗಳಲ್ಲಿ ಬಿಪಿಎಲ್‌ ಕಾರ್ಡ್‌ದಾರರಿಗೆ ಗುಣಮಟ್ಟದ ಉಚಿತ ಚಿಕಿತ್ಸೆ ಪಡೆದುಕೊಳ್ಳುವುದಕ್ಕೆ ಮತ್ತು ಎಪಿಎಲ್‌ ಕುಟುಂಬದ ಚಿಕಿತ್ಸಾ ವೆಚ್ಚದ ಶೇ.70ರಷ್ಟು ಭರಿಸುವ ಉದ್ದೇಶದಿಂದ ಸುವರ್ಣ ಆರೋಗ್ಯ ಸುರಕ್ಷಾ ಎಂಬ ಯೋಜನೆ ಜಾರಿಗೆ ತಂದಿದೆ. ಈ ಸಂಬಂಧ ಪ್ರತಿ ಜಿಲ್ಲೆಯಲ್ಲೂ ನಿಗದಿತ ಖಾಸಗಿ ಆಸ್ಪತ್ರೆಗಳ ಜತೆಗೆ ಒಪ್ಪಂದ ಮಾಡಿಕೊಂಡಿದ್ದು, ಬಡರೋಗಿಗಳ ಚಿಕಿತ್ಸೆಯ ವೆಚ್ಚವನ್ನು ಆಸ್ಪತ್ರೆಗಳಿಗೆ ಸರಕಾರ ಪಾವತಿಸುತ್ತದೆ.

ಈಗ ಖಾಸಗಿ ಆಸ್ಪತ್ರೆಗಳಿಗೆ ಈ ಯೋಜನೆಯಡಿ ಚಿಕಿತ್ಸಾ ವೆಚ್ಚ ಮರುಪಾವತಿ ವಿಳಂಬವಾಗಿದ್ದು, ಕೋಟ್ಯಂತರ ರೂ.ಬಾಕಿ ಇರುವುದರಿಂದ ಸಂಕಷ್ಟ ಎದುರಾಗಿದೆ.

ಆರ್ಥಿಕ ಹೊರೆ ಹೆಚ್ಚಳ
ಈ ಯೋಜನೆಯಡಿ ಖಾಸಗಿ ಆಸ್ಪತ್ರೆಗಳು ಸಾವಿರಾರು ರೂ. ಔಷಧವನ್ನು ವಿತರಕರಿಂದ ಪಡೆದು ರೋಗಿಗಳಿಗೆ ಚಿಕಿತ್ಸೆ ನೀಡುತ್ತವೆ. ವಿತರಕರಿಗೆ ಈ ಔಷಧ ವೆಚ್ಚವನ್ನು 90 ದಿನಗಳೊಳಗೆ ಮರು ಪಾವತಿಸಬೇಕಾಗಿದ್ದು, ವಿಳಂಬವಾದರೆ ವಿತರಕರಿಂದ ಕಿರಿಕಿರಿ ಅನುಭವಿಸಬೇಕಾಗುತ್ತದೆ. ಸಾಮಾನ್ಯವಾಗಿ, ಸರಕಾರದಿಂದ ಚಿಕಿತ್ಸಾ ವೆಚ್ಚವು ಮರು ಪಾವತಿಯಾಗುವುದಕ್ಕೆ ಏಳೆಂಟು ತಿಂಗಳು ಕಳೆಯುತ್ತಿದ್ದು, ಆಸ್ಪತ್ರೆಗಳ ಆರ್ಥಿಕ ಹೊರೆ ಕೂಡ ಜಾಸ್ತಿಯಾಗುತ್ತಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಅನೇಕ ಬಾರಿ ಇಲ್ಲಸಲ್ಲದ ಸಬೂಬು ಹೇಳಿ ಹಣ ಬಿಡುಗಡೆಗೆ ವಿಳಂಬ ಮಾಡುತ್ತಿದ್ದಾರೆ. ರೋಗಿಯ ಬಗ್ಗೆ ಸೂಕ್ತ ದಾಖಲೆ ಸಲ್ಲಿಸಿದ್ದರೂ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸುತ್ತವೆ.

Advertisement

ಯಾವ ಆಸ್ಪತ್ರೆಗಳಲ್ಲಿ ಚಿಕಿತ್ಸೆ ?
ಜಿಲ್ಲೆಯಲ್ಲಿ ಸುಮಾರು 35ರಿಂದ 40 ಆಸ್ಪತ್ರೆಗಳನ್ನು ಆರೋಗ್ಯ ಸುರಕ್ಷಾ ಯೋಜನೆಯಡಿ ಗುರುತಿಸಲಾಗಿದೆ. ಫಾದರ್‌ ಮುಲ್ಲರ್‌ ಆಸ್ಪತ್ರೆ ಕಂಕನಾಡಿ ಮತ್ತು ಕೆ.ಎಸ್‌. ಹೆಗ್ಡೆ ಆಸ್ಪತ್ರೆ, ದೇರಳಕಟ್ಟೆ (ಹೃದ್ರೋಗ, ಕ್ಯಾನ್ಸರ್‌, ನರರೋಗ, ಮೂತ್ರಪಿಂಡದ ಕಾಯಿಲೆ, ಸುಟ್ಟಗಾಯ, ಅಪಘಾತ, ನವಜಾತ ಶಿಶುಗಳಿಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗಳು), ಮಣ್ಣಗುಡ್ಡೆಯ ಗ್ಲೋಬಲ್‌ ಆಸ್ಪತ್ರೆ (ಕ್ಯಾನ್ಸರ್‌, ಮೂತ್ರಪಿಂಡದ ಕಾಯಿಲೆ, ನವಜಾತ ಶಿಶುಗಳ ಶಸ್ತ್ರಚಿಕಿತ್ಸೆ, ಅಪಘಾತ, ಸುಟ್ಟಗಾಯಕ್ಕೆ ಚಿಕಿತ್ಸೆ), ಅತ್ತಾವರ ಕೆಎಂಸಿ ಆಸ್ಪತ್ರೆ (ಕ್ಯಾನ್ಸರ್‌, ಮೂತ್ರಪಿಂಡದ ಕಾಯಿಲೆ, ನವಜಾತ ಶಿಶುಗಳ ಶಸ್ತ್ರಚಿಕಿತ್ಸೆ, ಅಪಘಾತ), ದೇರಳಕಟ್ಟೆಯ ಯೇನೆಪೊಯ ಆಸ್ಪತ್ರೆ (ನರರೋಗ, ಮೂತ್ರಪಿಂಡದ ಕಾಯಿಲೆ, ನವಜಾತ ಶಿಶುಗಳ ಶಸ್ತ್ರಚಿಕಿತ್ಸೆ, ಕ್ಯಾನ್ಸರ್‌, ಅಪಘಾತ) ಕೊಡಿಯಾಲ್‌ಬೈಲ್‌ನ ಯೇನೆಪೊಯ ಆಸ್ಪತ್ರೆ (ಹೃದ್ರೋಗ ಮತ್ತು ಮೂತ್ರಪಿಂಡದ ಕಾಯಿಲೆ), ಪಂಪ್‌ ವೆಲ್‌ನ ಒಮೇಗಾ ಆಸ್ಪತ್ರೆ (ಹೃದ್ರೋಗ, ನರರೋಗ, ಮೂತ್ರಪಿಂಡ ಕಾಯಿಲೆ) ದೇರಳಕಟ್ಟೆಯ ಕಣಚೂರ್‌ ಆಸ್ಪತ್ರೆ (ಮೂತ್ರಪಿಂಡದ ಕಾಯಿಲೆ ಮತ್ತು ಅಪಘಾತದ ಚಿಕಿತ್ಸೆ, ನವಜಾತ ಶಿಶುಗಳ ಶಸ್ತ್ರಚಿಕಿತ್ಸೆ), ಪುತ್ತೂರಿನ ಪ್ರಗತಿ ಆಸ್ಪತ್ರೆ (ಮೂತ್ರಪಿಂಡದ ಕಾಯಿಲೆ, ಸುಟ್ಟಗಾಯ ಮತ್ತು ಅಪಘಾತದ ಚಿಕಿತ್ಸೆ, ಜ್ಯೋತಿ ಸರ್ಕಲ್‌ನ ಕೆಎಂಸಿ (ಹೃದ್ರೋಗ) ಬಡರೋಗಿಗಳು ದಾಖಲಾದರೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯ ಪ್ರತಿಯೊಂದು ಆಸ್ಪತ್ರೆಗೂ ಒಂದರಿಂದ 2 ಕೋ.ರೂ. ಬಾಕಿ ಇರಿಸಿರುವುದರಿಂದ ಈ ಯೋಜನೆಯಡಿ ಬಡರೋಗಿಗಳಿಗೆ ಚಿಕಿತ್ಸೆ ಮುಂದುವರಿಸುವುದಕ್ಕೂ ತುಂಬಾ ತೊಂದರೆಯಾಗುತ್ತಿದೆ. ಸರಕಾರ ಆದಷ್ಟು ಬೇಗ, ಬಾಕಿ ಮೊತ್ತವನ್ನು ಮರುಪಾವತಿಸಬೇಕು ಎಂದು ಹೆಸರು ಹೇಳಲು ಇಚ್ಛಿಸದ ಖಾಸಗಿ ಆಸ್ಪತ್ರೆಯೊಂದರ ಸಿಬಂದಿ ‘ಉದಯವಾಣಿ’ಗೆ ತಿಳಿಸಿದ್ದಾರೆ.

ದಾಖಲೆ ಇಲ್ಲದಿದ್ದರೆ ಮಾತ್ರ ವಿಳಂಬ
ಆರೋಗ್ಯ ಸುರಕ್ಷಾ ಯೋಜನೆಯಡಿ ದಾಖಲಾದ ರೋಗಿಗಳ ಚಿಕಿತ್ಸಾ ವೆಚ್ಚಕ್ಕೆ ಸಂಬಂಧ ಖಾಸಗಿ ಆಸ್ಪತ್ರೆಗಳು ನೀಡಿರುವ ದಾಖಲೆಗಳನ್ನು ಪ್ರತಿ ತಿಂಗಳು ಇಲಾಖೆ ಮುಖ್ಯ ಕಚೇರಿಗೆ ಕಳುಹಿಸಲಾಗುತ್ತಿದೆ. ಸಾಮಾನ್ಯವಾಗಿ ಮೂರು ತಿಂಗಳೊಳಗೆ ಈ ವೆಚ್ಚ ಆಸ್ಪತ್ರೆಗಳಿಗೆ ಮರುಪಾವತಿಯಾಗುತ್ತಿದೆ. ಸರಿಯಾದ ದಾಖಲೆ ಒದಗಿಸದಿದ್ದರೆ ಮಾತ್ರ ವಿಳಂಬವಾಗಬಹುದು. ಒಂದು ವೇಳೆ ನಮ್ಮಿಂದ ದಾಖಲೆ ಸಲ್ಲಿಸುವುದಕ್ಕೆ ವಿಳಂಬ ಮಾಡಿದರೆ, ಸರಕಾರಕ್ಕೆ ನಮ್ಮ ಮೇಲೆ ಪ್ರಕರಣ ದಾಖಲಿಸುವ ಹಕ್ಕೂ ಇದೆ.
ಜಗನ್ನಾಥ್‌, ಸುವರ್ಣ ಆರೋಗ್ಯ
   ಸುರಕ್ಷಾ ಇಲಾಖೆ ಜಿಲ್ಲಾ ಸಂಯೋಜಕ 

   ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next