Advertisement

ಆರೋಗ್ಯ ಭಾಗ್ಯಕ್ಕೆ ಸಿರಿಧಾನ್ಯ ಜಾಗೃತಿ ಅಗತ್ಯ

06:37 AM Jan 20, 2019 | |

ಬೆಂಗಳೂರು: ಆರೋಗ್ಯವಂತ ಸಮಾಜ ನಿರ್ಮಿಸುವ ನಿಟ್ಟಿನಲ್ಲಿ ಯುವ ಜನತೆಯಲ್ಲಿ ಸಾವಯವ ಸಿರಿಧಾನ್ಯಗಳ ಬಳಕೆ ಕುರಿತು ಜಾಗೃತಿ ಮೂಡಿಸುವ ಅಗತ್ಯತೆ ಇದೆ ಎಂದು ಕೃಷಿ ಸಚಿವ ಶಿವಶಂಕರ ರೆಡ್ಡಿ ಹೇಳಿದರು.

Advertisement

ನಗರದ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ನಡೆಯುತ್ತಿರುವ ಸಾವಯವ ಮತ್ತು ಸಿರಿಧಾನ್ಯಗಳ ಅಂತಾರಾಷ್ಟ್ರೀಯ ಮೇಳದ ಗ್ರಾಹಕರ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಸಿರಿಧಾನ್ಯಗಳು ನಮ್ಮ ಪೂರ್ವಜರು ನಿತ್ಯ ಬಳಸುತ್ತಿರುವ ಆಹಾರ ಪದಾರ್ಥವಾಗಿತ್ತು. ಹೀಗಾಗಿಯೇ ಅವರು, ಮಧುಮೇಹ, ಅಧಿಕ ರಕ್ತದ ಒತ್ತಡ, ಬೊಜ್ಜು ಮತ್ತು ಕ್ಯಾನ್ಸರ್‌ನಂತ ಕಾಯಿಲೆಗಳನ್ನು ದೂರ ಉಳಿದು ನೂರಾರು ವರ್ಷ ಜೀವಿಸುತ್ತಿದ್ದರು.

ಇಂದು ನಾವು ಸಿರಿಧಾನ್ಯಗಳನ್ನು ದೂರವಿಟ್ಟು ರೋಗಗಳ ಹಾಗೂ ರೋಗಿಗಳ ಸಂಖ್ಯೆಯೂ ಹೆಚ್ಚಾಗಿದೆ. ಇವುಗಳಿಂದ ಹೊರಬಂದು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಯುವ ಜನರಿಗೆ ಹಾಗೂ ಮಕ್ಕಳಿಗೆ ಸಿರಿಧಾನ್ಯ ಕುರಿತು ಜಾಗೃತಿ ಮೂಡಿಸುವುದು ಅಗತ್ಯವಿದೆ. ಹೀಗಾಗಿಯೇ ಸಿರಿಧಾನ್ಯ ಮೇಳ ಹಮ್ಮಿಕೊಂಡು ಸಿರಿಧಾನ್ಯ ಬೆಳೆಯುವ ರೈತರಿಗೆ ಉತ್ತೇಜನೆ, ಖರೀದಿದಾರರಿಗೆ ವೇದಿಕೆ, ಗ್ರಾಹಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಚಿತ್ರ ಸ್ಪರ್ಧೆ: ಇಲಾಖೆಯಿಂದ ಈ ಮೇಳದಲ್ಲಿ ಮಕ್ಕಳು ಮತ್ತು ಯುವಜನತೆಯಲ್ಲಿ ಸಾವಯವ ಕೃಷಿ ಜಾಗೃತಿ ಮೂಡಿಸಲು ಚಿತ್ರಸ್ಪರ್ಧೆ ಆಯೋಜಿಸಲಾಗಿತ್ತು. ನೂರಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ಪ್ರತಿಯೊಬ್ಬರು ಸಹ ಸಾವಯವ ಕೃಷಿ ಬಗ್ಗೆ ಚೆನ್ನಾಗಿ ಚಿತ್ರ ಬಿಡಿಸಿದ್ದಾರೆ.

ಚಿತ್ರ ಬಿಡಿಸುವ ಮೂಲಕ ಮಕ್ಕಳ ಮನಸ್ಸಿನಲ್ಲಿ ಸಾವಯವದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಇನ್ನು ಪೋಷಕರು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಸಾವಯವ ಸಿರಿಧಾನ್ಯಗಳ ಖಾದ್ಯಗಳನ್ನು ತಯಾರಿಸಿ ಮಕ್ಕಳಿಗೆ ಕೊಡುವುದನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. 

Advertisement

ಕೃಷಿ ಮಾಹಿತಿ: ಕೃಷಿ ಇಲಾಖೆ ನಿರ್ದೇಶಕ ಶ್ರಿನಿವಾಸ್‌ ಮಾತನಾಡಿ, ಎರಡು ದಿನದಲ್ಲಿ ಸಾವಿರಾರು ರೈತರು, ಲಕ್ಷಾಂತರ ಗ್ರಾಹಕರು ಮೇಳದಲ್ಲಿ ಭಾಗವಹಿಸಿದ್ದಾರೆ. ಇಲ್ಲಿ ಸಿರಿಧಾನ್ಯಗಳ ವಿವಿಧ ಉತ್ಪನ್ನಗಳನ್ನು ಖರೀದಿಸಲು ವೇದಿಕೆ ಒದಗಿಸುವ ಜತೆಗೆ ಅವುಗಳ ಬಳಕೆಯಿಂದ ಸಿಗುವ ಉಪಯೋಗ ಏನು ಎಂಬುದರ ಕುರಿತು ಅರಿವು ಮೂಡಿಸಲು ಇಲಾಖೆಯು ತಜ್ಞರಿಂದ ಸಿರಿಧಾನ್ಯಗಳ ಬಳಕೆ, ಉಪಯೋಗ ಮತ್ತು ಸಾವಯವ ಕೃಷಿಗೆ ಸಂಬಂಧಿಸಿದ ಮಾಹಿತಿಗಳನ್ನು ಒದಗಿಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಸಾವಯವ ತಾಂತ್ರಿಕ ಕೈಪಿಡಿಯನ್ನು ಸಚಿವ ಶಿವಶಂಕರರೆಡ್ಡಿ ಬಿಡುಗಡೆಗೊಳಿಸಿದರು. ಈ ಕೈಪಿಡಿಯಲ್ಲಿ ಬೀಜದ ಪ್ರಮಾಣ, ಸಾವಯವದ ಪ್ರಮಾಣ, ಮಾನದಂಡ ಸೇರಿದಂತೆ ಅನೇಕ ತಾಂತ್ರಿಕ ಅಂಶಗಳು ತಿಳಿಸಲಾಗಿದೆ. ಕೃಷಿ ಪದವೀಧರ ಅಧಿಕಾರಿಗಳ ಸಂಘದಿಂದ ಈ ಕೈಪಿಡಿ ಸಿದ್ಧಪಡೆಸಲಾಗಿದೆ. ಬೆಂಗಳೂರು ಕೃಷಿ ವಿವಿ ಕುಲಪತಿ ಡಾ.ರಾಜೇಂದ್ರಪ್ರಸಾದ್‌, ಕೃಷಿ ಇಲಾಖೆ ಆಯುಕ್ತ ಜಗದೀಶ್‌ ಸೇರಿದಂತೆ ಇತರರು ಉಪಸ್ಥಿತರಿದ್ದರು.

ನಗದು ಬಹುಮಾನ: ಚಿತ್ರಕಲಾ ಸ್ಪರ್ಧೆಯಲ್ಲಿ  5ರಿಂದ 8 ವರ್ಷದ ಮಕ್ಕಳು, 9ರಿಂದ 16 ವರ್ಷದ ಮಕ್ಕಳ ಎರಡು ತಂಡವಾಗಿ ವಿಂಗಡಿಸಿ ಸ್ಪರ್ಧೆ ನಡೆಸಲಾಯಿತು. ಪ್ರಥಮ ಬಹುಮಾನಕ್ಕೆ 3 ಸಾವಿರ ರೂ., ದ್ವಿತೀಯ 2 ಸಾವಿರ ರೂ., ತೃತೀಯ 1 ಸಾವಿರ ರೂ., ಸಮಾಧಾನಕರ ಬಹುಮಾನಕ್ಕೆ 500 ರೂ.ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next