Advertisement

ಆರೋಗ್ಯ ಸೇವೆ ದೊರೆಯದೇ ಪರದಾಟ

06:46 PM Oct 28, 2021 | Team Udayavani |

ಮಹಾಲಿಂಗಪುರ: ಚಿಮ್ಮಡ ಪ್ರಾಥಮಿಕ ಆರೋಗ್ಯ ಕೇಂದ್ರ ಸುಸಜ್ಜಿತ ಕಟ್ಟಡ ಹೊಂದಿದ್ದರೂ ರೋಗಿಗಳಿಗೆ ಸಮರ್ಪಕ ಸೇವೆ ಸಿಗುತ್ತಿಲ್ಲ. ಸಕಾಲಕ್ಕೆ ವೈದ್ಯರಿಂದ ಸಮರ್ಪಕ ಸೇವೆ ಸಿಗದೇ, ಕಾಯಂ ನರ್ಸ್‌ ಇಲ್ಲದೇ ರೋಗಿಗಳು ಪರದಾಡುವಂತಾಗಿದೆ. ವೈದ್ಯಾಧಿಕಾರಿಗಳ
ವರ್ಗಾವಣೆ, ಅಸಮರ್ಪಕ ನಿರ್ವಹಣೆ, ಔಷಧ ಕೊರತೆಯಿಂದ ರೋಗಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ರೋಗಿಗಳ ಕೊರತೆ ಕಾರಣ ನೀಡಿ, 24×7 ಆಸ್ಪತ್ರೆ ಸೌಲಭ್ಯ ಹಿಂಪಡೆಯಲಾಯಿತು. ಇದರಿಂದ ಈ ಆಸ್ಪತ್ರೆ ಕೇವಲ ಕೋವಿಡ್‌ ಲಸಿಕೆ ನೀಡಲು ಹಾಗೂ ಗರ್ಭಿಣಿಯರಿಗೆ ಹೆರಿಗೆ ಕಾರ್ಡ್‌ ನೀಡುವುದಕ್ಕೆ ಮಾತ್ರ ಸೀಮಿತವಾದಂತಾಗಿದೆ.

Advertisement

ಕೋವಿಡ್‌ ಲಸಿಕಾಮೇಳದಲ್ಲಿ ಕರ್ತವ್ಯಕ್ಕೆ ಹಾಜರಿಲ್ಲದ ಕಾರಣ ಚಿಮ್ಮಡ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ| ಅಶೋಕ ಪಡಸಾಲೆ ಅವರನ್ನು ಅಮಾನತು ಮಾಡಲಾಗಿತ್ತು. ಕೆಲವೇ ದಿನಗಳಲ್ಲಿ ಪಡಸಾಲೆ ಮುಖ್ಯ ವೈದ್ಯಾಧಿಕಾರಿಗಳಾಗಿ ಕಾರ್ಯ ನಿರ್ವಹಣೆ ಆರಂಭಿಸಿದ್ದರೂ ಜನರು ಇವರ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿಲ್ಲ.

ಸ್ಟಾಫ್‌ ನರ್ಸ್‌ ಕೊರತೆ: ಸದ್ಯ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಸೇರಿದಂತೆ 13 ಜನ ಸಿಬ್ಬಂದಿ, ಹನ್ನೆರಡು ಜನ ಆಶಾ ಕಾರ್ಯಕರ್ತೆಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಆಸ್ಪತ್ರೆಗೆ ಸ್ಟಾಪ್‌ ನರ್ಸ್‌ಗಳ ಕೊರತೆ ಇದೆ.

ಡಿಎಚ್‌ಒ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ:ಆಸ್ಪತ್ರೆ ಆರಂಭದ ಕೆಲವು ವರ್ಷಗಳವರೆಗೆ ಪ್ರತಿದಿನ 200ಕ್ಕೂ ಹೆಚ್ಚು ಜನ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಇಂದು ಆಸ್ಪತ್ರೆಯಲ್ಲಿ 30-40 ಜನರಿಗೆ ಚಿಕಿತ್ಸೆ ದೊರೆಯುತ್ತಿಲ್ಲ. ಗ್ರಾಮಸ್ಥರು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಅನಂತ ದೇಸಾಯಿಯವರ ಗಮನಕ್ಕೆ ತಂದಾಗ ಗ್ರಾಮದ ಆಸ್ಪತ್ರೆಗೆ ಖಾಯಂ ನರ್ಸ ನೇಮಕಗೊಳಿಸಿ ಗ್ರಾಮದ ಆಸ್ಪತ್ರೆಗೆ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಗ್ರಾಮಸ್ಥರ ಅಳಲು.

ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆರಿಗೆ ಸೌಲಭ್ಯ ಕಲ್ಪಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಹಾಗೂ ಶಾಸಕರಿಗೆ ಹಲವಾರು ಬಾರಿ ಮನವಿ ಮಾಡಿಕೊಂಡಿದ್ದರೂ ಪ್ರಯೋಜನವಾಗಿಲ್ಲ, ಹೆರಿಗೆಗೆ ಗರ್ಭಿಣಿಯರು ಪರದಾಡುವಂತಾಗಿದೆ. ಗ್ರಾಮದ ಆಸ್ಪತ್ರೆಗೆ ಅಗತ್ಯ ಸೌಲಭ್ಯ ಕಲ್ಪಿಸಿ. 24×7 ಹೆರಿಗೆ ಸೌಲಭ್ಯ ನೀಡದಿದ್ದಲ್ಲಿ ಆಸ್ಪತ್ರೆಯ ಬಾಗಿಲು ಹಾಕಿ ಪ್ರತಿಭಟನೆ ನಡೆಸಲಾಗುವುದು.
ಗುರಲಿಂಗಪ್ಪ ಪೂಜಾರಿ, ಅಧ್ಯಕ್ಷರು ಗ್ರಾಪಂ ಚಿಮ್ಮಡ

Advertisement

ಚಿಮ್ಮಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾಯಂ ನರ್ಸ್‌ ಹುದ್ದೆಯೇ ಇಲ್ಲ. ಅದಕ್ಕಾಗಿ ಈಗಾಗಲೇ ಡಿಎಚ್‌ಓ ಅವರು ಸರ್ಕಾರಕ್ಕೆ ಪತ್ರ ಬರೆದು ಕಾಯಂ ನರ್ಸ್‌ ಹುದ್ದೆಯನ್ನು ಮಂಜೂರಿ ಮಾಡಲು ವಿನಂತಿಸಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ವೈದ್ಯರಿಗೆ ಎಚ್ಚರಿಕೆ
ನೀಡಿ, ಅಲ್ಲಿನ ಲೋಪದೋಷ ಸರಿಪಡಿಸುತ್ತೇವೆ. ಮಹಾಲಿಂಗಪುರ ಮತ್ತು ಬನಹಟ್ಟಿ ಸರಕಾರಿ ಆಸ್ಪತ್ರೆಯ ವೈದ್ಯರಿಗೆ ತಿಳಿಸಿ. ಚಿಮ್ಮಡ ಗ್ರಾಮದಿಂದ ಬರುವ ಗರ್ಭಿಣಿಯರಿಗೆ ಸೂಕ್ತ ಚಿಕಿತ್ಸೆ ನೀಡಲು ಸೂಚಿಸುತ್ತೇವೆ.
ಜಿ.ಎಸ್‌.ಗಲಗಲಿ, ಟಿಎಚ್‌ಒ ರಬಕವಿ-ಬನಹಟ್ಟಿ

*ಚಂದ್ರಶೇಖರ ಮೋರೆ

Advertisement

Udayavani is now on Telegram. Click here to join our channel and stay updated with the latest news.

Next