Advertisement
ಗೃಹ ಆರೋಗ್ಯ ಯೋಜನೆಯು ಕೋಲಾರ ಜಿಲ್ಲೆಯಲ್ಲಿ ಪ್ರಾರಂಭಗೊಂಡು, ಜನವರಿ ಅಂತ್ಯದೊಳಗೆ ರಾಜ್ಯಾದ್ಯಂತ ಜಾರಿಗೆ ಬರಲಿದೆ. ಕರ್ನಾಟಕದಲ್ಲಿ ಶೇ. 26.9ರಷ್ಟು ಮಂದಿ ಅಧಿಕ ರಕ್ತದೊತ್ತಡ, ಶೇ. 15.6ರಷ್ಟು ಮಂದಿ ಮಧುಮೇಹದಿಂದ ಬಳಲುತ್ತಿದ್ದಾರೆ. ಇದರಿಂದ ಉಂಟಾಗುತ್ತಿರುವ ಮರಣ ಹಾಗೂ ಅನಾರೋಗ್ಯ ತೊಡಕುಗಳನ್ನು ತಡೆಗಟ್ಟಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಗೃಹ ಆರೋಗ್ಯ ಯೋಜನೆಯನ್ನು ಜಾರಿಗೊಳಿಸುತ್ತಿದ್ದಾರೆ. ಯೋಜನೆಯ ಭಾಗವಾಗಿ ಗ್ರಾಮೀಣ ಭಾಗ ಜನರ ಮನೆ ಬಾಗಿಲಿಗೆ ಸಮುದಾಯ ಆರೋಗ್ಯ ಕೇಂದ್ರ ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರ ತಂಡ ತೆರಳಿ ತಪಾ ಸಣೆ ನಡೆಸಲಿದೆ.
ಸಮುದಾಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು ಮೊದಲ ಹಂತದಲ್ಲಿ ಗ್ರಾಮೀಣ ಭಾಗದ ಪ್ರತೀ ಮನೆಗೆ ಭೇಟಿ ನೀಡಲಿದ್ದಾರೆ. ಪ್ರತೀ ಮಂಗಳವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರ ದಿನಕ್ಕೆ ತಲಾ 15 ಮನೆಗಳಂತೆ ಭೇಟಿ ನೀಡಿ ತಪಾಸಣೆ ನಡೆಸಲಿದ್ದಾರೆ. ಈ ವೇಳೆ ಅಧಿಕ ರಕ್ತದೊತ್ತಡ (ಬಿಪಿ) ಹಾಗೂ ಮಧುಮೇಹ (ಡಯಾಬಿಟೀಸ್)ದಿಂದ ಬಳಲುವವರು ಮತ್ತು ಇತರರ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಜತೆಗೆ ಮಾನಸಿಕ ಆರೋಗ್ಯ, ಸ್ತನ, ಬಾಯಿ ಹಾಗೂ ಗರ್ಭಕಂಠದ ಕ್ಯಾನ್ಸರ್ ತಪಾಸಣೆ ಮಾಡಲಾಗುತ್ತದೆ. ಕನಿಷ್ಠ ಮೂರು ತಿಂಗಳು
ರಾಜ್ಯ ಗ್ರಾಮೀಣ ಭಾಗದಲ್ಲಿ ಸಂಪೂರ್ಣ ಆರೋಗ್ಯ ತಪಾಸಣೆ ನಡೆಸಲು ಕನಿಷ್ಠ 3 ತಿಂಗಳು ಬೇಕಾಗುತ್ತದೆ. ಪ್ರಸ್ತುತ ರಾಜ್ಯದಲ್ಲಿ ಶೇ. 11.5ರಷ್ಟು ಮಂದಿ ಬಾಯಿ, ಶೇ. 26ರಷ್ಟು ಸ್ತನ ಹಾಗೂ ಶೇ. 18.3ರಷ್ಟು ಜನರು ಗರ್ಭ ಕಂಠದ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಈ ರೋಗಗಳಿಗೂ ಪರಿಹಾರ ಒದಗಿಸಲು ಗೃಹ ಆರೋಗ್ಯ ಯೋಜನೆಯಲ್ಲಿ ರೂಪುರೇಷೆ ಸಿದ್ಧಪಡಿಸಲಾಗಿದೆ.
Related Articles
ರಕ್ತದೊತ್ತಡ ಹಾಗೂ ಮಧುಮೇಹ ಸ್ಕ್ರೀನಿಂಗ್ ವೇಳೆ ಅಗತ್ಯವಿದ್ದವರಿಗೆ ವೈದ್ಯರ ಮೇಲ್ವಿಚಾರಣೆಯಲ್ಲಿ ಔಷಧವನ್ನು ಬದಲಾಯಿಸಲಾಗುತ್ತದೆ. ಅವರಿಗೆ ಒಂದು ತಿಂಗಳ ಅವಧಿಗೆ ಅಗತ್ಯವಿರುವ ಮಾತ್ರೆಗಳ ಕಿಟ್ ಪೂರೈಸಲಾಗುತ್ತದೆ. ಈ ಮಾಹಿತಿಯನ್ನು ಎನ್ಸಿಡಿ ಆ್ಯಪ್ನಲ್ಲಿ ಭರ್ತಿ ಮಾಡಲಾಗುತ್ತದೆ. ಕ್ಯಾನ್ಸರ್ ಹಾಗೂ ಇತರ ಕಾಯಿಲೆಗಳ ತಪಾಸಣೆ ವೇಳೆ ಅಪಾಯದ ಮುನ್ಸೂಚನೆ ಅಥವಾ ಲಕ್ಷಣಗಳು ವರದಿಯಾದರೆ ತತ್ಕ್ಷಣ ಟೆಲಿ ಕಾಲ್ ಮೂಲಕ ವೈದ್ಯರ ಅಭಿಪ್ರಾಯ ಪಡೆದು, ಹೆಚ್ಚಿನ ತಪಾಸಣೆಗಾಗಿ ಸಮೀಪದ ಆಯುಷ್ಮಾನ್ ಆರೋಗ್ಯ ಮಂದಿರಕ್ಕೆ (ಹಿಂದಿನ ಉಪ ಆರೋಗ್ಯ ಕೇಂದ್ರ) ಶಿಫಾರಸು ಮಾಡಲಾಗುತ್ತದೆ.
Advertisement
ಇಂದು ಚಾಲನೆಗೃಹ ಆರೋಗ್ಯ ಯೋಜನೆಗೆ ಸಿಎಂ ಸಿದ್ದರಾಮಯ್ಯ ಅ. 24ರಂದು ಬ್ಯಾಂಕ್ವೆಟ್ ಸಭಾಂಗಣದಲ್ಲಿ ಸಂಜೆ 4ಕ್ಕೆ ಚಾಲನೆ ನೀಡಲಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್, ಸಭಾಪತಿ ಬಸವರಾಜ್ ಹೊರಟ್ಟಿ, ಸ್ಪೀಕರ್ ಯು.ಟಿ. ಖಾದರ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮತ್ತಿತರ ಸಚಿವರು ಭಾಗವಹಿಸಲಿದ್ದಾರೆ. “ಗ್ರಾಮೀಣ ಭಾಗದ ಜನರು ರಕ್ತದೊತ್ತಡ, ಮಧುಮೇಹ ರೋಗಗಳ ತಪಾಸಣೆ ವಿಚಾರದಲ್ಲಿ ನಿರ್ಲ ಕ್ಷ್ಯ ವಹಿಸುತ್ತಿದ್ದಾರೆ. ಹೀಗಾಗಿ ಈಗ ಆರೋಗ್ಯ ಇಲಾಖೆಯನ್ನು ಜನರ ಮನೆ ಬಳಿಗೆ ಕಳುಹಿಸುತ್ತಿದ್ದೇವೆ. ಪ್ರಾರಂಭಿಕ ಹಂತದಲ್ಲಿ ರಕ್ತದೊತ್ತಡ, ಮಧುಮೇಹವನ್ನು ಜನರು ನಿರ್ಲಕ್ಷಿಸಿದರೆ ದೀರ್ಘಾವಧಿಯಲ್ಲಿ ಕಿಡ್ನಿ ವೈಫಲ್ಯ, ಹೃದಯಾಘಾತಗಳಿಗೆ ಕಾರಣವಾಗುತ್ತದೆ. ಗೃಹ ಆರೋಗ್ಯದ ಮುಖಾಂತರ ನಾವು ಈಗಲೇ ತಪಾಸಣೆ ನಡೆಸಿ ಔಷಧಗಳನ್ನು ಕೊಟ್ಟರೆ ಮುಂದೆ ಆಗುವ ಪ್ರಾಣಾಪಾಯಗಳನ್ನು ತಡೆಗಟ್ಟಬಹುದಾಗಿದೆ.” -ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ