ಮಹಾನಗರ: ಹೊಸದಿಲ್ಲಿಯಲ್ಲಿರುವ ಮೊಹಲ್ಲಾ ಕ್ಲಿನಿಕ್ ಮಾದರಿಯಲ್ಲಿ ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಆರಂಭವಾದ “ನಮ್ಮ ಕ್ಲಿನಿಕ್’ ಸೇವೆ ಗ್ರಾಮೀಣ ಭಾಗಕ್ಕೂ ವಿಸ್ತರಣೆಯಾಗಲಿದೆ.
ಇದೀಗ ಪ್ರಧಾನಮಂತ್ರಿ ಅಭೀಮ್ ಯೋಜನೆಯ ಮೂಲಕ ಮಂಗಳೂರು ಗ್ರಾಮೀಣ ಭಾಗದ ನಾಲ್ಕು ಕಡೆ ಸೇರಿದಂತೆ ವಿಟ್ಲದಲ್ಲಿಯೂ ನಮ್ಮ ಕ್ಲಿನಿಕ್ ನಿರ್ಮಾಣ ಆಗಲಿದೆ. ನಿರ್ಮಾಣ ಸಂಬಂಧ ಕಟ್ಟಡ ಪರಿಶೀಲನೆ ಈಗಾಗಲೇ ನಡೆದಿದ್ದು, ಇನ್ನೇನು ಕೆಲ ವಾರಗಳಲ್ಲೇ ಅಂತಿಮಗೊಳ್ಳಲಿದೆ.
ಜಿಲ್ಲೆಯಲ್ಲಿ ಪಾಲಿಕೆ ವ್ಯಾಪ್ತಿಯ ಸೂಟರ್‌ಪೇಟೆ, ಬೋಳಾರ, ಬಂದರು, ಪಚ್ಚನಾಡಿ, ಕೋಡಿಕಲ್, ಮೀನಕಳಿಯ, ಕುಂಜತ್ತಬೈಲ್, ಸುಳ್ಯದ ದುಗ್ಗಲಡ್ಕ, ಮೂಡುಬಿದಿರೆಯ ಗಂಟಾಲ್‌ಕಟ್ಟೆ, ಉಳ್ಳಾಲದ ಕೆರೆಬೈಲು, ಕಡಬದ ಕೋಡಿಂಬಾಳ, ಪುತ್ತೂರಿನ ಬನ್ನೂರಿನಲ್ಲಿ ಕ್ಲಿನಿಕ್‌ಗಳಿವೆ. ಈಗಾಗಲೇ ಆರಂಭವಾಗಿರುವ ನಮ್ಮ ಕ್ಲಿನಿಕ್‌ಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಇಲ್ಲಿ ಸೇವೆಗಳು ಉಚಿತವಾಗಿದ್ದು, ಸಾರ್ವಜನಿಕರು ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಅಧಿಕಾರಿಗಳ ಪ್ರಕಾರ ಸುಮಾರು 25 ರಿಂದ 30 ಮಂದಿ ಪ್ರತೀ ದಿನ ಸೇವೆ ಪಡೆದುಕೊಳ್ಳುತ್ತಿದ್ದಾರೆ.
ಒಂದೇ ಸೂರಿನಡಿ ಹಲವು ಸೇವೆ
ನಮ್ಮ ಕ್ಲಿನಿಕ್‌ಗಳಲ್ಲಿ ಹಲವು ಸೇವೆಗಳು ಒಂದೇ ಸೂರಿನಲ್ಲಿ ದೊರಕಲಿದೆ. ಗರ್ಭಿಣಿ ಆರೈಕೆ, ಶಿಶುವಿನ ಆರೈಕೆ, ಮಕ್ಕಳ ಸೇವೆ, ಕುಟುಂಬ ಕಲ್ಯಾಣ ಸೇವೆ, ಸಾಂಕ್ರಾಮಿಕ ರೋಗಗಳ ನಿರ್ವಹಣೆ, ಸಂಪೂರ್ಣ ಓಪಿಡಿ ಸೇವೆಗಳು, ಮಧುಮೇಹ, ರಕ್ತದೊತ್ತಡ ಚೆಕ್ ಅಪ್, ಕ್ಯಾನ್ಸರ್ ಸ್ಕ್ರೀನಿಂಗ್ ಸೇವೆ, ಬಾಯಿ ಆರೋಗ್ಯ ಸಮಸ್ಯೆಗಳು ಸೇವೆ, ಕಣ್ಣಿನ ತಪಾಸಣೆ, ಮೂಗು, ಗಂಟಲು ಇತರೇ ಸೇವೆಗಳು, ಮಾನಸಿಕ ಆರೋಗ್ಯ ಸ್ಕ್ರೀನಿಂಗ್ ಸೇವೆ, ವೃದ್ಧಾಪ್ಯ ಆರೈಕೆ ಸಹಿತ ತುರ್ತು ವೈದ್ಯಕೀಯ ಸೇವೆ ಸಹಿತ ಒಟ್ಟು 12 ಪ್ರಮುಖ ಆರೋಗ್ಯ ಸೇವೆಗಳು ಲಭ್ಯ ಇರಲಿವೆ. ವೈದ್ಯಾಧಿಕಾರಿ, ಶುಶ್ರೂಷಕಿ, ಪ್ರಯೋಗ ಶಾಲಾ ತಂತ್ರಜ್ಞರು ಹಾಗೂ ಡಿ ಗ್ರೂಪ್ ಸಿಬಂದಿ ಸೇರಿ ಒಟ್ಟು ನಾಲ್ಕು ಮಂದಿ ಕಾರ್ಯ ನಿರ್ವಹಿಸುತ್ತಾರೆ. ಸಾರ್ವಜನಿಕರಿಗೆ ಉಚಿತ ಸೇವೆ ಸಿಗಲಿದೆ.
Related Articles
ಐದು ಕಡೆ ಎಲ್ಲೆಲ್ಲಿ?
ಹೊಸತಾಗಿ ನಿರ್ಧಾರ ಕೈಗೊಂಡಂತೆ ಜಿಲ್ಲೆಯ ಐದು ಕಡೆಗಳಲ್ಲಿ ನಮ್ಮ ಕ್ಲಿನಿಕ್ ತಲೆ ಎತ್ತಲಿದೆ. ಅದರಂತೆ ಕೋಟೆಕಾರ್, ವಿಟ್ಲ, ಮೂಲ್ಕಿ, ಕಿನ್ನಿಗೋಳಿ, ಬಜಪೆಯಲ್ಲಿ ನಮ್ಮ ಕ್ಲಿನಿಕ್ ಸದ್ಯದಲ್ಲೇ ಆರಂಭಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಇನ್ನೇನು ಕೆಲವೇ ಸಮಯದಲ್ಲಿ ಸರಕಾರದಿಂದಲೂ ಅಧಿಕೃತ ಮುದ್ರೆ ಬೀಳುವ ಸಾಧ್ಯತೆ ಇದೆ.
ಸದ್ಯದಲ್ಲೇ ವೈದ್ಯರ ನೇಮಕ
ಮಂಗಳೂರು ಪಾಲಿಕೆ ವ್ಯಾಪ್ತಿಯ ಏಳು ಕಡೆ ಸೇರಿದಂತೆ ಜಿಲ್ಲೆಯ 12 ಕಡೆಗಳಲ್ಲಿ ಸದ್ಯ ನಮ್ಮ ಕ್ಲಿನಿಕ್ ಕಾರ್ಯನಿರ್ವಹಿಸುತ್ತಿದೆ. ಆರೋಗ್ಯ ಸೇವೆಯನ್ನು ಮತ್ತಷ್ಟು ಕಡೆಗಳಿಗೆ ವಿಸ್ತರಿಸುವ ಉದ್ದೇಶದಿಂದ ಇನ್ನೂ ಐದು ಕಡೆಗಳಲ್ಲಿ ಹೊಸತಾಗಿ ನಮ್ಮ ಕ್ಲಿನಿಕ್ ಆರಂಭಿಸುತ್ತಿದ್ದೇವೆ. ಈಗಾಗಲೇ ಜಾಗ ಗುರುತು ಮಾಡಲಾಗಿದ್ದು, ಸರಕಾರಕ್ಕೆ ವರದಿ ಸಲ್ಲಿಕೆ ಮಾಡಿ, ಸದ್ಯದಲ್ಲೇ ವೈದ್ಯರ ನೇಮಕ ನಡೆಯಲಿದೆ.
– ಡಾ| ಕಿಶೋರ್ ಕುಮಾರ್, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ
- ನವೀನ್ ಭಟ್ ಇಳಂತಿಲ