ಕೋಲಾರ: ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ ಯೋಜನೆಯಡಿ ಹೆಲ್ತ್ ಕಾರ್ಡ್ ನೀಡುವಲ್ಲಿ ಕಳಪೆ ಸಾಧನೆ ಮಾಡಿದ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಸಿ.ಸತ್ಯಭಾಮ ತರಾಟೆಗೆ ತೆಗೆದುಕೊಂಡರು.
ಜಿಲ್ಲಾಡಳಿತ ಭವನದಲ್ಲಿ ಆಯೋಜಿಸಿದ್ದ ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ ಯೋಜನೆಯ ಜಿಲ್ಲಾ ಮಟ್ಟದ ಕುಂದುಕೊರತೆ ಪರಿಹಾರ ಸಮಿತಿ ಸಭೆಯಲ್ಲಿ ವಿವರ ಒದಗಿಸಿದ ನೋಡಲ್ ಅಧಿಕಾರಿ ಡಾ. ಎಸ್.ಸಿ.ನಾರಾಯಣ ಸ್ವಾಮಿ, ಜಿಲ್ಲೆಯಲ್ಲಿ 15.32 ಲಕ್ಷ ಜನ ಸಂಖ್ಯೆಯ ಪೈಕಿ 3.56 ಲಕ್ಷ ಮಂದಿಗೆ ಆರೋಗ್ಯ ಕಾರ್ಡ್ ನೀಡಲಾಗಿದೆ ಎಂದು ತಿಳಿಸಿದರು.
ಇಷ್ಟು ದಿನ ಏನು ಮಾಡುತ್ತಿದ್ದೀರಿ?: ಹೆಲ್ತ್ ಕಾರ್ಡ್ ನೀಡುವಲ್ಲಿ ಕಳಪೆ ಸಾಧನೆಗೆ ಗರಂ ಆದ ಡೀಸಿ ಇಷ್ಟು ಸಾಕಾ? ಜಿಲ್ಲೆಯಲ್ಲಿ 15 ಲಕ್ಷ ಜನಸಂಖ್ಯೆ ಪೈಕಿ 13 ಲಕ್ಷಕ್ಕೂ ಅಧಿಕ ಮಂದಿ ಬಿಪಿಎಲ್ ಕುಟುಂಬಗಳಿವೆ. ಯೋಜನೆ ಬಂದು ಎರಡು ವರ್ಷವಾಯಿತು. ಇನ್ನೂ 4 ಲಕ್ಷ ಮಂದಿಗೂ ಕಾರ್ಡ್ ವಿತರಿಸಿಲ್ಲ ಎಂದರೆ ಏನು ಮಾಡುತ್ತಿದ್ದೀರಿ? ಗುರಿ ಇಟ್ಟುಕೊಂಡು ಕಾರ್ಡ್ ಮಾಡಿಸಬೇಕು ಎಂದು ತರಾಟೆಗೆ ತೆಗೆದುಕೊಂಡರು.
ಈ ವೇಳೆ ನೋಡಲ್ ಅಧಿಕಾರಿ ನಾರಾಯಣಸ್ವಾಮಿ ಕೊರೊನಾದಿಂದಾಗಿ ಸಾಧ್ಯವಾಗಲಿಲ್ಲ, ಗ್ರಾಪಂಗಳಲ್ಲಿನ ಬಾಪೂಜಿ ಸೇವಾ ಕೇಂದ್ರದಲ್ಲಿ ವಿತರಿಸಲು ಕ್ರಮ ವಹಿಸಬೇಕೆಂದು ನಿಮ್ಮಿಂದ ತಾಪಂ ಇಒಗೆ ನಿರ್ದೇಶನ ಹೋಗಬೇಕೆಂದು ಹೇಳುತ್ತಿದ್ದಂತೆ ಸಿಡಿಮಿಡಿಗೊಂಡ ಡೀಸಿ, ಇನ್ನು ಮುಂದೆ ಕೊರೊನಾ ವಿಚಾರವನ್ನು ನೆಪವಾಗಿ ಇಟ್ಟುಕೊಂಡು ಹೇಳಬಾರದು, ಇಲಾಖಾ ಕಾರ್ಯಕ್ರಮ ನಡೆಸುತ್ತಿಲ್ಲವೇ, ಇಒಗೆ ಮಾಡೋದಕ್ಕೆ ಬೇಕಾದಷ್ಟು ಕೆಲಸ ಇದೆ. ನಿಮ್ಮ ಇಲಾಖೆ ಸಿಬ್ಬಂದಿ, ಅಧಿಕಾರಿ ಗಳನ್ನು ಇಟ್ಟುಕೊಂಡು ಕೆಲಸ ಮಾಡಿಸಿ ತಾಕೀತು ಮಾಡಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ವಿಜಯಕುಮಾರ್, ಆಯುಷ್ಮಾನ್ ಭಾರತ್ ಜಿಲ್ಲಾ ನೋಡಲ್ ಅಧಿಕಾರಿ ಡಾ.ಎನ್.ಸಿ. ನಾರಾಯಣಸ್ವಾಮಿ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಪ್ರಾದೇಶಿಕ ಸಲಹೆಗಾರ ಡಾ.ರಾಜಣ್ಣ, ಜಿಲ್ಲಾ ಸಮನ್ವಯಾಧಿಕಾರಿ ಡಾ.ಗಿರೀಶ್ ಉಪಸ್ಥಿತರಿದ್ದರು.
ಜಾಲಪ್ಪ ಆಸ್ಪತ್ರೆ ವೈದ್ಯರ ವಿರುದ ಡೀಸಿ ಆಕ್ರೋಶ
ಆಯುಷ್ಮಾನ್ ಭಾರತ್ ಯೋಜನೆಯಡಿ ಫಲಾನುಭವಿಗಳ ಚಿಕಿತ್ಸೆಗಾಗಿ ಹಣ ಅನುಮೋದನೆ ಆದರೂ ಹೆಚ್ಚುವರಿ ಹಣ ಪಾವತಿಸಿಕೊಂಡಿರುವ ಕುರಿತ ದೂರುದಾರರ ಸಮ್ಮುಖದಲ್ಲಿ ವಿಚಾರಣೆ ನಡೆಸಿದ ವೇಳೆ ಜಾಲಪ್ಪ ಆಸ್ಪತ್ರೆಯ ವೈದ್ಯರನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ ಸತ್ಯಭಾಮ, ಸರ್ಕಾರ ಪುಕ್ಕಟೆ ಚಿಕಿತ್ಸೆ ನೀಡಿ ಎನ್ನುತ್ತಿಲ್ಲ, ಹಣ ಕೊಡುತ್ತಿದೆ. ಆಯುಷ್ಮಾನ್ ಕಾರ್ಡ್ ಹೊಂದಿರುವವರಿಗೆ ಲಭ್ಯವಿರುವ ವೈದ್ಯಕೀಯ ಸೇವೆ ಉಚಿತವಾಗಿ ಒದಗಿಸದೆ ಹಣ ಯಾಕೆ ಕಟ್ಟಿಸಿಕೊಳ್ಳುತ್ತೀರಿ ಎಂದು ವೈದ್ಯ ಡಾ.ಅಭಿನಂದನ್ ಅವರನ್ನು ಪ್ರಶ್ನಿಸಿದರು.
ಇದು ಮೊದಲ ಸಭೆಯಾದ್ದರಿಂದ ವಿನಾಯಿತಿ ನೀಡುತ್ತೇನೆ, ಮುಂದೆ ಪ್ರತಿ ತಿಂಗಳು ಸಭೆ ನಡೆಸುತ್ತೇನೆ. ಈ ಸಂದರ್ಭದಲ್ಲೂ ದೂರುಗಳು ಬಂದರೆ ಸರ್ಕಾರದ ಗಮನಕ್ಕೆ ತಂದು ಕ್ರಮಕ್ಕೆ ಶಿಫಾರಸು ಮಾಡುವುದಾಗಿ ಹೇಳಿದರು.