Advertisement

ಆರೋಗ್ಯ ಶಿಬಿರ ಬಡವರಿಗೆ ಸಹಕಾರಿ

03:29 PM Oct 20, 2019 | Team Udayavani |

ಹಾನಗಲ್ಲ: ಮನುಷ್ಯನಿಗೆ ಎಲ್ಲ ಭಾಗ್ಯಗಳಲ್ಲಿ ಆರೋಗ್ಯ ಭಾಗ್ಯ ಅತೀ ಮುಖ್ಯವಾಗಿದ್ದು. ದುಬಾರಿ ವೆಚ್ಚದ ಇಂದಿನ ಕಾಲದಲ್ಲಿ ಬಡಜನತೆಗೆ ಆಸ್ಪತ್ರೆ ಖರ್ಚು ನಿಭಾಯಿಸುವುದು ಕಷ್ಟಸಾಧ್ಯ. ಸಂಘ ಸಂಸ್ಥೆಗಳು ನಡೆಸುವ ಉಚಿತ ಆರೋಗ್ಯ ಶಿಬಿರಗಳು ಬಡವರಿಗೆ ಸಹಕಾರಿ ಎಂದು ಎಪಿಎಂಸಿ ಸದಸ್ಯ ಸಿದ್ದಪ್ಪ ಬಂಗಾರೇರ ತಿಳಿಸಿದರು.

Advertisement

ತಾಲೂಕಿನ ಮಕರವಳ್ಳಿ ಗ್ರಾಮದಲ್ಲಿ ರೋಶನಿ ಸಮಾಜ ಸೇವಾ ಸಂಸ್ಥೆ ಸಹಯೋಗದಲ್ಲಿ, ಗ್ರಾಮಾಭಿವೃದ್ಧಿ ಸಮಿತಿ, ಲೋಕ್‌ಮಂಚ, ವಿಶ್ವ ಸೇವಾ ಸಮಿತಿ, ಪಿಡಿಜಿರೋ ಸುಬ್ರಾವ್‌ ಕಾಸರಕೋಡ ಮೆಮೋರಿಯಲ್‌ ರೋಟರಿ ಚಾರಿಟೇಬಲ್‌ ಆಸ್ಪತ್ರೆ ಆಶ್ರದಲ್ಲಿ ನಡೆದ ಕಿವಿ ಮೂಗು ಗಂಟಲು, ಎಲಬು ಕೀಲು, ಸ್ತ್ರೀ ರೋಗ ಉಚಿತ ಆರೊಗ್ಯ ತಪಾಸಣಾ ಮತ್ತು ಜಾಗೃತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶದ ಬಡವರ ಹಿತದೃಷ್ಟಿಯಿಂದ ಹಲವಾರು ವರ್ಷಗಳಿಂದ ರೋಶನಿ ಸಂಸ್ಥೆ ಇಂತಹ ಉಚಿತ ಆರೋಗ್ಯ ತಪಾಸಣೆಗಳನ್ನು ನಡೆಸುವುದರ ಜತೆಗೆ ಆರೋಗ್ಯದ ಅರಿವು ಮೂಡಿಸುತ್ತಿರುವುದು ಶ್ಲಾಘನೀಯ. ಶಿಬಿರದಲ್ಲಿ ಪಾಲ್ಗೊಂಡವರು ವೈದ್ಯರ ಸಲಹೆ ಪಾಲಿಸಿ ಆರೋಗ್ಯ ಕಾಪಾಡಿಕೊಳ್ಳಿ ಎಂದು ಕರೆ ನೀಡಿದರು.

ರೋಟರಿ ಚಾರಿಟೇಬಲ್‌ ಆಸ್ಪತ್ರೆ ತಜ್ಞ ಡಾ| ಕೆ.ಜೆ. ಸಿದ್ದೇಶ್ವರ ಮಾತನಾಡಿ, ಮನುಷ್ಯನಲ್ಲಿ ತೇವಾಂಶ ಹೆಚ್ಚಿರುವುದರಿಂದ ಕಿವಿಗಳಲ್ಲಿ ಖೊಬ್ಬರಿ ಎಣ್ಣೆಯನ್ನು ಹಾಕಬಾರದು. ಇದರೊಂದಿಗೆ ಕಿವಿಯಲ್ಲಿ ಕಡ್ಡಿ, ಪಿನ್‌, ಚೂಪಾದ ವಸ್ತುಗಳನ್ನು ಹಾಕುವುದರಿಂದ ಕಿವುಡುತನ ಬರುತ್ತದೆ. ಹಾಗಾಗದಂತೆ ಎಚ್ಚರ ವಹಿಸುವುದು ಅಗತ್ಯ. ಡಾಕ್ಟರ್‌ಗಳ ಸಲಹೆಯಂತೆ ಔಷಧಿ ಗಳನ್ನು ಬಳಸಬೇಕು. ವೈದ್ಯರ ಸಲಹೆ ಇಲ್ಲದೆ ಯಾವುದೇ ಔಷಧಿ ಬಳಸುವುದು ಆರೋಗ್ಯಕ್ಕೆ ಹಾನಿ ಉಂಟಾಗುತ್ತದೆ ಎಂದು ಸಲಹೆ ನೀಡಿದರು.

ರೋಶನಿ ಸಂಸ್ಥೆಯ ಸಂಯೋಜಕಿ ಸಿಸ್ಟರ್‌ ಅನಿತಾ ಡಿಸೋಜಾ ಮಾತನಾಡಿ, ಸಮಾಜದ ಬೆಳವಣಿಗೆಯಲ್ಲಿ ಪ್ರತಿಯೊಬ್ಬರ ಆರೋಗ್ಯ ಪ್ರಮುಖ ಪಾತ್ರ ವಹಿಸುತ್ತದೆ. ರೋಶನಿ ಸಂಸ್ಥೆ ಕಳೆದ ಎರಡು ದಶಕಗಳಿಂದ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸಮಾಜದಲ್ಲಿನ ಸಮಸ್ಯೆಗಳನ್ನು ಗುರುತಿಸಿ, ಸಮಾಜಮುಖೀ ಕಾರ್ಯ ಮಾಡಿ ಪರಿಹಾರ ನೀಡುತ್ತ ಬಂದಿದೆ. ಸಾರ್ವಜನಿಕರು ಇಂತಹ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ರೋಶನಿ ಸಂಸ್ಥೆಯ ಸಂಯೋಜಕ ಕೆ.ಎಫ್‌. ನಾಯ್ಕರ ಆರೋಗ್ಯ ಭಾಗ್ಯದ ಕುರಿತು ಅರಿವು ಮೂಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೊಂದಿ ಗ್ರಾಪಂ ಅಧ್ಯಕ್ಷೆ ಪ್ರಬಾವತಿ ಕರಬುಳ್ಳೇರ ವಹಿಸಿದ್ದರು. ಗ್ರಾಪಂ ಸದಸ್ಯರಾದ ದುರ್ಗಪ್ಪ ಗೂರನವರ, ಸಾವಿತ್ರಮ್ಮ ಸೊಟ್ಟನವರ, ಉಮೇಶ ಕಬ್ಬೂರ, ಲೋಕ್‌ ಮಂಚ್‌ ಮುಖಂಡ ಮಂಜುನಾಥ ಕುದರಿ, ಡಾ| ದೇವೇಂದ್ರ ಪಾತ್ರೋಟಿ, ಡಾ| ದಿವ್ಯತಾ, ದಾರೇಶ್ವರ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಶಿಬಿರದಲ್ಲಿ 250ಕ್ಕೊ ಹೆಚ್ಚು ಜನರು ಭಾಗವಹಿಸಿ ಶಿಬಿರದ ಸದುಪಯೋಗ ಪಡಿಸಿಕೊಂಡರು.

Advertisement
Advertisement

Udayavani is now on Telegram. Click here to join our channel and stay updated with the latest news.

Next