Advertisement
ನಾವು ದಿನನಿತ್ಯ ಸೇವಿಸುವ ಆಹಾರದಲ್ಲಿ ಇರುವ ಮುಖ್ಯ ಅಂಶಗಳಾದ ಕಾರ್ಬೋಹೈಡ್ರೇಟ್, ಪ್ರೊಟೀನ್ ಹಾಗೂ ಕೊಬ್ಬು (ಫ್ಯಾಟ್) ಇವುಗಳು ದೇಹದ ಚಟುವಟಿಕೆಗೆ ಬೇಕಾದ ಶಕ್ತಿ/ಕ್ಯಾಲರಿಗಳನ್ನು ನೀಡುತ್ತವೆ. ಸುಮಾರು ಹತ್ತು ಗ್ರಾಮ್ ಕಾಬೋìಹೈಡ್ರೇಟ್ ಇರುವ ಆಹಾರ ಅಂದರೆ ಅನ್ನ, ಚಪಾತಿ, ರೊಟ್ಟಿ, ದೋಸೆ, ಸಜ್ಜಿಗೆ ಇತ್ಯಾದಿಗಳು ಸುಮಾರು 40 ಕಿ. ಕ್ಯಾಲರಿಯಷ್ಟು ಶಕ್ತಿಯನ್ನು ನೀಡುತ್ತವೆ.10 ಗ್ರಾಮ್ ಪ್ರೊಟೀನ್ ಇರುವ ಆಹಾರ ಮುಖ್ಯವಾಗಿ ಮೀನು, ಮೊಟ್ಟೆ, ಮಾಂಸ, ಮೊಳಕೆ ಕಾಳುಗಳು, ಸೋಯಾಬೀನ್ ಇತ್ಯಾದಿಗಳು ಕೂಡ 40 ಕಿ.ಲೋ. ಕ್ಯಾಲರಿ ಶಕ್ತಿಯನ್ನು ನೀಡುತ್ತವೆ. ಅದೇ ತರಹವಾಗಿ 10 ಗ್ರಾಮ್ ಕೊಬ್ಬಿನ (ಫ್ಯಾಟ್) ಅಂಶವಿರುವ ಆಹಾರ ಎಣ್ಣೆ, ತುಪ್ಪ, ಹುರಿದ ವಸ್ತುಗಳು, ಹಾಲಿನ ಉತ್ಪನ್ನಗಳು, ಮಾಂಸ, ಸಿಹಿ ತಿಂಡಿಗಳು ಇತ್ಯಾದಿಗಳು ಅತೀ ಹೆಚ್ಚು 90 ಕಿ.ಲೋ. ಕ್ಯಾಲರಿಯಷ್ಟು ಶಕ್ತಿಯನ್ನು ನೀಡುತ್ತವೆ.
Related Articles
Advertisement
ಇದರೊಂದಿಗೆ ಆ ವ್ಯಕ್ತಿಯೂ ಧೂಮಪಾನವನ್ನು ಮಾಡುತ್ತಿದ್ದಲ್ಲಿ ಅದರಲ್ಲಿರುವ ನಿಕೋಟಿನ್ ರಕ್ತನಾಳಗಳನ್ನು ಮತ್ತಷ್ಟು ಸಂಕುಚಿತಗೊಳಿಸುವುದರಿಂದ ರಕ್ತದೊತ್ತಡ ಮತ್ತಷ್ಟು ಹೆಚ್ಚಾಗಲು ಕಾರಣವಾಗಬಹುದು. ಹೃದಯಕ್ಕೆ ರಕ್ತ ಸರಬರಾಜು ಮಾಡುವ ಕೊರೊನರಿ ರಕ್ತನಾಳಗಳಲ್ಲಿ ಹೀಗಾದರೆ ಹೃದಯಾಘಾತವಾಗುವ ಅಪಾಯವಿರುತ್ತದೆ.
ಸುಮಾರು ಐದಾರು ದಶಕಗಳ ಹಿಂದೆ ಭಾರತ ದೇಶದಲ್ಲಿ ಅಧಿಕ ರಕ್ತದೊತ್ತಡ ಪ್ರಮಾಣ ಸುಮಾರು ಶೇ. 5ರಿಂದ 10 ರವರೆಗಿತ್ತು. ಆಗ ಹೆಚ್ಚಿನ ಜನರು ಕೃಷಿಯಾಧಾರಿತ ಜೀವನ ನಡೆಸುತ್ತಿದ್ದರು. ಹೊಲ ಗದ್ದೆಗಳಲ್ಲಿ, ತೋಟ, ಪಶು ಆರೈಕೆ, ಮನೆ ಕೆಲಸ, ಬಾವಿ ನೀರು ಸೇದುವುದು, ಬಟ್ಟೆ ಒಗೆಯುವುದು, ನೆಲ ಒರೆಸುವುದು ಇತ್ಯಾದಿ ಕೆಲಸವನ್ನು ಮಾಡುತ್ತಿದ್ದರು. ಈ ಎಲ್ಲ ಕೆಲಸಗಳು ದೇಹದ ಎಲ್ಲ ಅಂಗಾಂಗಗಳಿಗೆ ಚಟುವಟಿಕೆ ನೀಡುವಂತಹವಾಗಿದ್ದವು. ಆದರೆ ಈಗ ಈ ಎಲ್ಲ ಕೆಲಸಗಳು ಯಾಂತ್ರೀಕೃತಗೊಂಡಿವೆ.
ಜನರು ಇಂದು ದೈಹಿಕ ಕೆಲಸಗಳಿಲ್ಲದ ಒತ್ತಡದಿಂದ ಕೂಡಿದ ಕಚೇರಿಗಳಲ್ಲಿ, ಯಾಂತ್ರಿಕ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಇದರಿಂದ ದೈಹಿಕ ಚಟುವಟಿಕೆ ಕಡಿಮೆಯಾಗಿ, ತಲಾ ಆದಾಯ ಹೆಚ್ಚಾಗಿ ಆಹಾರ ಪದ್ಧತಿ ಬದಲಾವಣೆಗೊಂಡು ಬೊಜ್ಜಿಗೆ ಒಳಗಾಗುತ್ತಿದ್ದಾರೆ. ಇದಲ್ಲದೆ ಇತರ ಹವ್ಯಾಸಗಳಾದ ಮದ್ಯಪಾನ, ತಂಬಾಕು ಸೇವನೆ ಕೂಡ ಹೆಚ್ಚಾಗುತ್ತಿದೆ. ಇಂದು ಭಾರತದಲ್ಲಿ 30ರಿಂದ 35ರಷ್ಟು ವಯಸ್ಕರಲ್ಲಿ ಅಧಿಕ ರಕ್ತದೊತ್ತಡ ಹಾಗೂ 20-25ರಷ್ಟು ವಯಸ್ಕರಲ್ಲಿ ಹೃದಯ ರೋಗ ಕಂಡುಬರುತ್ತಿದೆ.
ತೂಕ ಇಳಿಸಿಕೊಳ್ಳುವುದು ಹೇಗೆ?
ದೇಹದ ತೂಕ ಕಡಿಮೆ ಮಾಡಲು ಎರಡು ಮುಖ್ಯ ವಿಧಾನಗಳಿವೆ. ಮೊದಲನೆಯದಾಗಿ ದೈಹಿಕ ಚಟುವಟಿಕೆಗಳಿಗೆ ಅಗತ್ಯವಿರುವಷ್ಟೇ (ಕಡಿಮೆ ಎಣ್ಣೆ, ತುಪ್ಪ, ಬೆಣ್ಣೆ ಅಂಶಗಳಿರುವ) ಸರಳ ಆಹಾರ ಸೇವಿಸುವುದು ಹಾಗೂ ಇನ್ನೂ ಎರಡು ತುತ್ತು ಆಹಾರ ಸೇವಿಸಬೇಕೆನ್ನಿಸುತ್ತಿರುವಾಗಲೇ ಸೇವನೆ ನಿಲ್ಲಿಸುವುದು. ಎರಡನೆಯದಾಗಿ, ದಿನಂಪ್ರತಿ ದೈಹಿಕ ಚಟುವಟಿಕೆಯಿಂದಿರುವುದು- ದೈನಂದಿನ ನಡಿಗೆ (ವಾಕಿಂಗ್), ಯೋಗ, ಲಘು ವ್ಯಾಯಾಮಗಳು, ಮನೆ ಕೆಲಸಗಳು. ಯೋಗ ದೈಹಿಕ ಚಟುವಟಿಕೆ ನೀಡುವುದಲ್ಲದೆ ಮಾನಸಿಕ ಒತ್ತಡ ನಿರ್ವಹಣೆಗೆ ಸಹಾಯಕಾರಿಯಾಗಿದೆ.
ಪ್ರತೀ ದಿನ 30 ರಿಂದ 45 ನಿಮಿಷಗಳ ಆಹ್ಲಾದಕರ ವಾತಾವಣದಲ್ಲಿ ಆರಾಮದಾಯಕವಾಗಿ ಮಾಡುವ ವಾಕಿಂಗ್‌ನಿಂದ ಹಲವಾರು ಲಾಭಗಳಿವೆ. ಪ್ರತೀ ಹತ್ತು ನಿಮಿಷಗಳ ಆರಾಮದಾಯಕವಾದ ನಡಿಗೆಗೆ 25ರಿಂದ 30 ಕಿ.ಲೋ. ಕ್ಯಾಲರಿಯಷ್ಟು ಶಕ್ತಿ ಬಳಕೆಯಾಗುತ್ತದೆ. ಆಹ್ಲಾದಕರ ವಾತಾವರಣದಲ್ಲಿ ಮನಸ್ಸಿಗೆ ಸಂತೋಷವಾದಾಗ ದೇಹದಲ್ಲಿ ಸ್ರವಿಸುವ ರಾಸಾಯನಿಕಗಳು ಮಾನಸಿಕ ಒತ್ತಡಗಳನ್ನು ಕಡಿಮೆ ಮಾಡುತ್ತದೆ. ಅಲ್ಲದೆ ರೋಗ ನಿರೋಧಕ ಶಕ್ತಿಯನ್ನು ಬಲಗೊಳಿಸುತ್ತದೆ. ದಿನಾ ವಾಕಿಂಗ್ ಮಾಡುವುದರಿಂದ ದೇಹದ ಮೂಳೆಗಳ ಮೇಲೆ ತೂಕ ಬಿದ್ದು ಮೂಳೆಗಳಲ್ಲಿ ಹೊಸ ಕೋಶಗಳ ಬೆಳವಣಿಗೆಯಾಗಿ ಆಸ್ಟಿಯೋಪೊರೋಸಿಸ್ ಉಂಟಾಗುವುದನ್ನು ಕೂಡ ತಡೆಯುತ್ತದೆ. ಮೂಳೆಗಳ ಸಂದುಗಳ ಸವಕಳಿ ಕಡಿಮೆಯಾಗಿ ಸಂಧಿನೋವು ಕೂಡ ಕಡಿಮೆಯಾಗುತ್ತದೆ. ಆದರೆ ದೈನಂದಿನ ವಾಕಿಂಗ್ ಹೋಗುವಾಗ ಸುರಕ್ಷಿತ ಹಾದಿಯಲ್ಲಿ/ರಸ್ತೆಯಲ್ಲಿ ಮಾಡುವುದು ಅತೀ ಅಗತ್ಯ. ಮುಂಜಾನೆಯ ನಸುಕಿನಲ್ಲಿ ಅಥವಾ ಸಂಜೆಯ ಮಬ್ಬಿನಲ್ಲಿ ಫುಟ್‌ಪಾತ್ ಇಲ್ಲದ, ವಾಹನ ಸಂದಣಿ ಇರುವ ರಸ್ತೆ ಅಂಚಿನಲ್ಲಿ ವಾಕಿಂಗ್ ಮಾಡಿದರೆ ಅಪಘಾತ, ಸಾವು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂಬ ಅರಿವು ಇರಬೇಕಾಗುತ್ತದೆ.
ವ್ಯಾಯಾಮಕ್ಕಾಗಿ ಪ್ರತಿದಿನ ಓಡುವುದು (ಜಾಗಿಂಗ್) ಪ್ರಕೃತಿಯ ನಿಯಮದಲ್ಲಿ ಮಾನವನ ನೈಸರ್ಗಿಕ ಕ್ರಿಯೆಯಲ್ಲ. ಮನುಷ್ಯನ ದೇಹ, ಸಂಧಿಗಳು ತುರ್ತು ಅಗತ್ಯಕ್ಕೆ, ದೇಹ ರಕ್ಷಣೆಗೆ ಮಾತ್ರ ಸ್ವಲ್ಪ ದೂರ ಓಡಲು ನೈಸರ್ಗಿಕವಾಗಿ ವಿನ್ಯಾಸಗೊಂಡಿವೆ. ದೇಹದ ತೂಕ ಕಡಿಮೆ ಮಾಡಲು ಯಾವುದೇ ರೀತಿಯ ಭಾರೀ ವ್ಯಾಯಾಮ, ದೇಹ ದಂಡನೆ ಮಾಡುವ ಮೊದಲು ತಜ್ಞ ವೈದ್ಯರ ಸಲಹೆ ಪಡೆದುಕೊಳ್ಳುವುದು ಅತೀ ಅಗತ್ಯವಾಗಿದೆ.
ಡಾ| ಸಂಜಯ್ ಕಿಣಿ,
ಅಸೋಸಿಯೇಟ್ ಪ್ರೊಫೆಸರ್
ಡಾ| ಅಶ್ವಿನಿ ಕುಮಾರ್ ಗೋಪಾಡಿ,
ಪ್ರೊಫೆಸರ್ ಮತ್ತು ಮುಖ್ಯಸ್ಥರು,
ಕಮ್ಯೂನಿಟಿ ಮೆಡಿಸಿನ್ ವಿಭಾಗ,
ಕೆಎಂಸಿ, ಮಾಹೆ, ಮಣಿಪಾಲ
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಕಮ್ಯುನಿಟಿ ಮೆಡಿಸಿನ್ ವಿಭಾಗ, ಕೆಎಂಸಿ ಆಸ್ಪತ್ರೆ, ಮಾಹೆ, ಮಂಗಳೂರು)