Advertisement
ಇದು ಪಶ್ವಿಮ ಘಟ್ಟ ಕಾಡುಗಳ ಫಲವತ್ತಾದ ಮಣ್ಣಿನಲ್ಲಿ ಗಡ್ಡೆಯಿಂದ ಬೆಳೆದು ಬಳ್ಳಿಯಾಗಿ ಕಾಯಿ ಬಿಡುವ ಒಂದು ಸಸ್ಯ.ಮಾಡ ಹಾಗಲ ಕಾಯಿಯನ್ನು ಕಾಡು ಹಾಗಲ, ಕಾಡು ಕಂಚಲ,ಮೂಡ ಹಾಗಲ ಹಾಗೂ ಗೌಡ ಸಾರಸ್ವತರು ಪಾಗಿಳವೆಂದು ಕರೆಯುತ್ತಾರೆ. ಮಾಡ ಹಾಗಲ ನೋಡಲು ಹಾಗಲಕಾಯಿ ತರಹವೇ ಇರುತ್ತದೆ. ಆದರೆ ಇದು ಕಹಿ ಇರುವುದಿಲ್ಲ ನೋಡಲು ಗುಂಡಾಗಿ ಅದರ ಮೇಲೆ ಚಿಕ್ಕ ಚಿಕ್ಕ ಮುಳ್ಳಿನಂತೆ ಇರುತ್ತದೆ.
ಮಾಡ ಹಾಗಲ ಕಾಯಿ ಆರೋಗ್ಯಕ್ಕೆ ಉತ್ತಮ ಔಷಧಿ. ಮಾಡ ಹಾಗಲದಲ್ಲಿ ವಿಟಮಿನ್ ಸಿ ಇರುವುದರಿಂದ ದೇಹವನ್ನು ಸೋಂಕುಗಳಿಂದ ಕಾಪಾಡುತ್ತದೆ. ಮಾಡ ಹಾಗಲ ಕಾಯಿ ರಕ್ತದಲ್ಲಿನ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುವುದಲ್ಲದೇ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ. ಮೂತ್ರ ಪಿಂಡ ಸಮಸ್ಯೆಯಿಂದ ಬಳಲುವವರು ಮೂಡ ಹಾಗಲಕಾಯಿಯನ್ನು ತಿಂದರೆ ಒಳ್ಳೆಯದು.
ಮಾರುಕಟ್ಟೆಯಲ್ಲಿ ಮಾಡ ಹಾಗಲ ಕಾಯಿ ಮುಂಚೂಣಿ:
ಹಬ್ಬದ ಸಮಯದಲ್ಲಿ ಮಾಡ ಹಾಗಲಕಾಯಿಯ ಬೆಲೆ ಕಿ.ಲೋಗೆ 120 ರಿಂದ 190ರೂ. ವರೆಗೂ ದಾಟುತ್ತದೆ. ಆದರೆ ಹಬ್ಬದ ಸಂದರ್ಭ ಹೊರತು ಪಡಿಸಿ ಬೇರೆ ದಿನಗಳಲ್ಲಿ ಕಿ.ಲೋಗೆ 70 ರಿಂದ 90ರೂ. ವರೆಗೆ ದರ ಇರುತ್ತದೆ. ಅಡುಗೆಗೂ ಸೈ:
ಮಾಡ ಹಾಗಲಕಾಯಿಂದ ರುಚಿ ರುಚಿಯಾದ ಪಲ್ಯ, ಪದಾರ್ಥ ಹಾಗೂ ತಿಂಡಿ ತಿನಿಸುಗಳನ್ನು ಮಾಡಬಹುದು. ಕಡ್ಲೆ ಹಿಟ್ಟು/ಅಕ್ಕಿ ಹಿಟ್ಟಿನಿಂದ ಕರಿದ ಪೋಡಿ, ಫ್ರೈ ರುಚಿ ತಿಂದವರೇ ಬಲ್ಲರು. ಹಾಗಿದ್ದರೆ ಮಾಡ ಹಾಗಲ ಕಾಯಿಯಿಂದ ಪೋಡಿ ಮಾಡುವುದು ಹೇಗೆ ಎಂದು ತಿಳಿದು ಕೊಳ್ಳೋಣ..
ಬೇಕಾಗುವ ಸಾಮಾಗ್ರಿಗಳು:
1.ಮಾಡ ಹಾಗಲಕಾಯಿ 5 ರಿಂದ 7
2.ಮೆಣಸಿನ ಪುಡಿ 2 ಚಮಚ
3.ಕಡ್ಲೆ ಹಿಟ್ಟು 2 ಕಪ್
4. ಹಿಂಗಿನ ನೀರು ಸ್ವಲ್ಪ
5. ಕಾಯಿಸಲಿಕ್ಕೆ ಎಣ್ಣೆ
ರುಚಿಗೆ ಉಪ್ಪು.
ಮಾಡುವ ವಿಧಾನ:
ಮಾಡ ಹಾಗಲಕಾಯಿಯನ್ನು ದುಂಡಗೆ ಚಕ್ರದಂತೆ ಹೆಚ್ಚಿ. ಒಂದು ಪಾತ್ರೆಗೆ ಹಾಕಿ. ಸ್ವಲ್ಪ ಉಪ್ಪು ಹಾಕಿ 5 ನಿಮಿಷದವರೆಗೆ ಇಡಿ. ಒಂದು ಪಾತ್ರೆಗೆ ನೀರನ್ನು ಹಾಕಿ ಸ್ವಲ್ಪ ಹಿಂಗು, ಮೆಣಸಿನ ಪುಡಿ, ಉಪ್ಪು, ಕಡ್ಲೆ ಹಿಟ್ಟನ್ನು ಕಲಸಿರಿ. ನಂತರ ಕಾದ ಎಣ್ಣೆಯಲ್ಲಿ ಒಂದೊಂದೇ ಪೋಡಿಯನ್ನು ಹಾಕಿ ಕರಿಯಿರಿ. (ಅಕ್ಕಿ ಹಿಟ್ಟಿನಿಂದಲೂ ಪೋಡಿ ಮಾಡಬಹುದು). ರುಚಿ ರುಚಿಯಾದ ಮಾಡ ಹಾಗಲಕಾಯಿಯ ಪೋಡಿ ಸವಿಯಿರಿ.