ಚೀನಿಕಾಯಿ/ ಕುಂಬಳ ಕಾಯಿ ಬೀಜಗಳು ಆರೋಗ್ಯಕರ ಕೊಬ್ಬು, ಮೆಗ್ನಿàಸಿಯಂ, ಸೆಲೆನಿಯಂ, ಕಬ್ಬಿಣಾಂಶ ಮತ್ತು ಆ್ಯಂಟಿಓಕ್ಸಿಡೆಂಟ್‌ಗಳ ಸಹಿತ ಅನೇಕ ಪೌಷ್ಟಿಕಾಂಶಗಳ ಆಗರವಾಗಿವೆ.
ಒಂದು ಮುಷ್ಠಿಯಷ್ಟು ಈ ಬೀಜಗಳನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಲಾಭಗಳಿವೆ.
ಈ ಬೀಜಗಳಲ್ಲಿ ಇರುವ ಪಾಲಿಸ್ಯಾಚುರೇಟೆಡ್ ಫ್ಯಾಟಿ ಆ್ಯಸಿಡ್‌ಗಳು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ನೆರವಾಗುತ್ತವೆ.
ಎಲುಬು ರೂಪುಗೊಳ್ಳಲು ಮೆಗ್ನಿàಸಿಯಂ ಬೇಕು ಎಂಬುದು ನಮಗೆಲ್ಲರಿಗೂ ತಿಳಿದಿದೆ. ಈ ಅಂಶ ಕಡಿಮೆಯಾದರೆ ಮಹಿಳೆಯರಲ್ಲಿ ಋತುಚಕ್ರಬಂಧದ ಅನಂತರ ಆಸ್ಟಿಯೊಪೊರೋಸಿಸ್ ಕಾಣಿಸಿಕೊಳ್ಳುವ ಅಪಾಯ ಇರುತ್ತದೆ. ಊಟ-ಉಪಾಹಾರದ ಬಳಿಕ ಈ ಬೀಜಗಳನ್ನು ತಿನ್ನುವುದರಿಂದ ದೈನಿಕ ಅಗತ್ಯದಷ್ಟು ಮೆಗ್ನೀಸಿಯಂ ನಮ್ಮ ದೇಹಕ್ಕೆ ಒದಗುತ್ತದೆ.
ಇಷ್ಟಲ್ಲದೆ, ಕಬ್ಬಿಣಾಂಶ ಮತ್ತು ಸೆಲೆನಿಯಂ ಕೂಡ ಈ ಬೀಜಗಳಲ್ಲಿ ಹೇರಳವಾಗಿದೆ. ಒಂದು ಕಪ್‌ನಷ್ಟು ಬೀಜದಲ್ಲಿ 9.5 ಮಿ.ಗ್ರಾಂ ಕಬ್ಬಿಣಾಂಶ ಇರುತ್ತದೆ. ಇದು ಒಬ್ಬ ವ್ಯಕ್ತಿ ದೈನಿಕವಾಗಿ ಪಡೆಯಬೇಕಾದ ಕಬ್ಬಿಣಾಂಶ. ಈ ಬೀಜಗಳಲ್ಲಿ ಇರುವ ವಿಟಮಿನ್ ಇ ಮತ್ತು ಆ್ಯಂಟಿಓಕ್ಸಿಡೆಂಟ್‌ಗಳು ರೋಗ ನಿರೋಧಕ ಶಕ್ತಿಯನ್ನು ಆರೋಗ್ಯಪೂರ್ಣವಾಗಿ ಇರಿಸಿಕೊಳ್ಳಲು ನೆರವಾಗುತ್ತದೆ.
ನಿದ್ರಾಹೀನತೆಗೆ ಚಿಕಿತ್ಸೆ ನೀಡಲು ಬಳಸುವ ಟ್ರಿಪ್ಟೊಫ್ಯಾನ್ ಎಂಬ ಅಮೈನೋ ಆಮ್ಲ ಈ ಬೀಜಗಳಲ್ಲಿ ಹೇರಳವಾಗಿರುತ್ತದೆ. ನಮ್ಮ ದೇಹವು ಟ್ರಿಫ್ಟೊಫ್ಯಾನ್ ಅಂಶವನ್ನು ಸೆರೊಟೋನಿನ್ ಆಗಿ ಪರಿವರ್ತಿಸುತ್ತದೆ. ಈ ಸೆರೊಟೋನಿನ್ “ಫೀಲ್ ಗುಡ್’ ಹಾರ್ಮೋನ್ ಆಗಿದ್ದು, ನಮಗೆ ವಿಶ್ರಾಂತಿಯ ಅನುಭವ ಒದಗಿ ಸುಖನಿದ್ದೆ ಮಾಡಲು ಸಹಾಯ ಮಾಡುತ್ತದೆ.
ಈ ಬೀಜಗಳಲ್ಲಿ ಕಂಡುಬರುವ ಆ್ಯಂಟಿಓಕ್ಸಿಡೆಂಟ್‌ಗಳು ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಈ ಬೀಜಗಳ ಆರೋಗ್ಯ ಲಾಭಗಳನ್ನು ಅರಿತುಕೊಳ್ಳುವುದರಿಂದ ಇವುಗಳನ್ನು ನಮ್ಮ ದೈನಿಕ ಆಹಾರದಲ್ಲಿ ಸೇರಿಸಿಕೊಳ್ಳಲು ಸಾಧ್ಯವಾಗುತ್ತದೆ.
ಈ ಆರೋಗ್ಯಪೂರ್ಣ ಬೀಜಗಳನ್ನು ನಮ್ಮ ಆಹಾರ ವಸ್ತುಗಳಲ್ಲಿ ಈ ಕೆಳಗಿನಂತೆ ಉಪಯೋಗಿಸಬಹುದು:
- ಗ್ರೇವಿಗಳು ಮತ್ತು ಕರಿಗಳನ್ನು ದಪ್ಪಗೊಳಿಸಲು ಉಪಯೋಗಿಸಬಹುದು.
- ಬ್ರೇಕ್‌ಫಾಸ್ಟ್ ಸೀರಿಯಲ್‌ಗಳು, ಬ್ರೆಡ್ ಮತ್ತು ಕೇಕ್‌ಗಳಿಗೆ ಮೇಲೆ ಅಲಂಕಾರವಾಗಿ ಬಳಸಬಹುದು.
- ಹುರಿದ ಉಪಾಹಾರವಾಗಿ ಸೇವಿಸಬಹುದು.
- ಸ್ಮೂತೀಗಳು, ಎನರ್ಜಿ ಬಾರ್‌ಗಳಲ್ಲಿ ಸೇರಿಸಿಕೊಳ್ಳಬಹುದು.
- ಸಲಾಡ್‌ಗಳು ಮತ್ತು ಸೂಪ್‌ಗ್ಳಿಗೂ ಸೇರಿಸಿಕೊಳ್ಳಬಹುದು.
ಕುಂಬಳ/ಚೀನಿಕಾಯಿ ಬೀಜಗಳು 163 ಕೆಸಿಎಎಲ್ ಕ್ಯಾಲೊರಿ, 8.5 ಗ್ರಾಂ ಪ್ರೊಟೀನ್ ಮತ್ತು 13.9 ಗ್ರಾಂ ಕೊಬ್ಬು ಒದಗಿಸುತ್ತವೆ. ಇವು ಪೌಷ್ಟಿಕಾಂಶಯುಕ್ತವಾಗಿರುವುದರ ಜತೆಗೆ ರುಚಿಕರವಾಗಿವೆ, ಪ್ರೊಟೀನ್‌ನ ಸಸ್ಯಾಹಾರಿ ಮೂಲಗಳಾಗಿವೆ. ಪ್ರತಿಯೊಬ್ಬರೂ ದಿನದ ಯಾವುದೇ ಸಮಯದಲ್ಲಿ ಇದನ್ನು ಸೇವಿಸಬಹುದು. ಅತಿಯಾಗಿ ಸೇವಿಸಿದರೂ ಯಾವುದೇ ಅಡ್ಡ ಪರಿಣಾಮ ಇಲ್ಲ.
-ಅರುಣಾ ಮಲ್ಯ,
ಹಿರಿಯ ಪಥ್ಯಾಹಾರ ತಜ್ಞೆ,
ಕೆಎಂಸಿ ಆಸ್ಪತ್ರೆ, ಮಂಗಳೂರು
(
ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಪಥ್ಯಾಹಾರ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು)