ನವಿಮುಂಬಯಿ, ಸೆ. 10: ನಾವು ನಮ್ಮ ಆರೋಗ್ಯದ ಕಡೆಗೆ ಗಮನವನ್ನೇ ನೀಡುವುದಿಲ್ಲ. ನಮ್ಮ ಮೊಬೈಲ್ ಎಲ್ಲಿ ಹಾಳಾಗುತ್ತದೋ ಎಂಬ ಚಿಂತೆಯಿಂದ ಅದಕ್ಕೆ ಬೇಕಾದ ಕವರ್ ಅನ್ನು ಉಪಯೋಗಿಸುತ್ತೇವೆ. ನಮ್ಮ ವಾಹನ ಸ್ವಲ್ಪ ತೊಂದರೆ ಕೊಟ್ಟರೆ ಅದರ ರಿಪೇರಿಯನ್ನು ತತ್‌ಕ್ಷಣ ಮಾಡುತ್ತೇವೆ. ಆದರೆ ನಮಗೆ ನಮ್ಮ ಆರೋಗ್ಯದಲ್ಲಿ ಏನಾದರೂ ಪರಿವರ್ತನೆ ಕಂಡು ಬಂದಲ್ಲಿ ಅದರ ಉಪಚಾರವನ್ನು ಮುಂದೂಡುತ್ತೇವೆ ಎಂದು ನಗರದ ಕ್ಯಾನ್ಸರ್ ತಜ್ಞ ಡಾ| ಶಿಶಿರ್ ಶೆಟ್ಟಿ ನುಡಿದರು.
ಸೆ. 1ರಂದು ನೆರೂಲ್ನ ಶ್ರೀ ಗಣಪತಿ ಐಯ್ಯಪ್ಪ ದುರ್ಗಾದೇವಿ ಮಂದಿರದ ಸಭಾಭವನದಲ್ಲಿ ಬಂಟರ ಸಂಘ ನವಿಮುಂಬಯಿ ಪ್ರಾದೇಶಿಕ ಸಮಿತಿಯ ವತಿ ಯಿಂದ ಆಯೋಜಿಸಲಾಗಿದ್ದ ವೈದ್ಯಕೀಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವು ನಮ್ಮ ಆಹಾರ ಸೇವನೆಯಲ್ಲಿ ಸಮತೋಲನದ ಆಹಾರ ಸೇವನೆಯ ಬಗ್ಗೆ ಕಾಳಜಿಯನ್ನು ವಹಿಸದೆ ರೋಗವನ್ನು ಮೊದಲು ಬರಮಾಡಿ ಕೊಂಡು ಅನಂತರ ಉಪಶಮನಕ್ಕೆ ಪರದಾಡುತ್ತೇವೆ. ಭವಿಷ್ಯದಲ್ಲಿ ಶೇ. 30 ಕ್ಕಿಂತಲೂ ಅಧಿಕ ಕ್ಯಾನ್ಸರ್ ಪೀಡಿತ ರೋಗಿಗಳು ದೇಶದಲ್ಲಿ ಕಂಡು ಬರಲಿದ್ದಾರೆ ಎಂದು ಮಾಹಿತಿಯೊಂದು ತಿಳಿಸುತ್ತದೆ. ಆದ್ದರಿಂದ ಮುಂಜಾಗೃತಾ ಕ್ರಮವಾಗಿ ನಮ್ಮ ಆರೋಗ್ಯ ತಪಾಸಣೆಯನ್ನು ಕನಿಷ್ಠ ಪಕ್ಷ ವರ್ಷಕ್ಕೊಮ್ಮೆಯಾದರೂ ಮಾಡಿಸಿಕೊಳ್ಳಬೇಕು ಎಂದರು.
ಶಿಬಿರದಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು. ಉದ್ಘಾಟನಾ ಸಮಾರಂಭದಲ್ಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಜಗದೀಶ್ ಶೆಟ್ಟಿ ನಂದಿಕೂರು, ಸಮನ್ವಯಕ ಖಾಂದೇಶ್ ಭಾಸ್ಕರ್ ಶೆಟ್ಟಿ, ಉಪ ಕಾರ್ಯಾಧ್ಯಕ್ಷ ಹರೀಶ್ ಶೆಟ್ಟಿ ಪಡುಬಿದ್ರೆ, ಸಲಹಾ ಸಮಿತಿಯ ಕಾರ್ಯಾಧ್ಯಕ್ಷ ಭಾಸ್ಕರ್ ಶೆಟ್ಟಿ ತಾಳಿಪಾಡಿಗುತ್ತು, ಕಾರ್ಯದರ್ಶಿ ದಯಾನಂದ ಶೆಟ್ಟಿ, ಕೋಶಾಧಿಕಾರಿ ಭಾಸ್ಕರ್ ಶೆಟ್ಟಿ ದಕ್ಷಿಣ್, ಜತೆ ಕೋಶಾಧಿಕಾರಿ ನಾಗೇಶ್ ಶೆಟ್ಟಿ ಬೈಕಾಡಿ ಹೆದ್ದಾರಿಮನೆ, ಜತೆ ಕಾರ್ಯದರ್ಶಿ ರವೀಶ್ ಶೆಟ್ಟಿ, ವೈದ್ಯಕೀಯ ಸಮಿತಿಯ ಕಾರ್ಯಾಧ್ಯಕ್ಷ ಸುರೇಶ್ ಬಿ. ಶೆಟ್ಟಿ ಮಾಫೆ, ಮಹಿಳಾ ಕಾರ್ಯಾಧ್ಯಕ್ಷೆ ರೂಪಾ ಡಿ. ಶೆಟ್ಟಿ, ಗಣಪತಿ ಅಯ್ಯಪ್ಪ ದುರ್ಗಾದೇವಿ ಮಂದಿರದ ಅಧ್ಯಕ್ಷ ಮತ್ತು ನವಿಮುಂಬಯಿ ಪ್ರಾದೇಶಿಕ ಸಮಿತಿಯ ಸಲಹೆಗಾರ ಸಂಜೀವ ಎನ್. ಶೆಟ್ಟಿ, ರವಿ ಆರ್. ಶೆಟ್ಟಿ, ಸಂತೋಷ್ ಡಿ. ಶೆಟ್ಟಿ, ಮಾಜಿ ನಗರ ಸೇವಕ ಸುರೇಶ್ ಜಿ. ಶೆಟ್ಟಿ, ರಂಗಭೂಮಿ ಫೈನ್‌ಆರ್ಟ್ಸ್ನ ಅಧ್ಯಕ್ಷ ತಾರನಾಥ ಶೆಟ್ಟಿ ಪುತ್ತೂರು ಉಪಸ್ಥಿತರಿದ್ದರು.
ಶಿಬಿರದಲ್ಲಿ ಶ್ವಾಸಕೋಶ, ಮಧುಮೇಹ ತಪಾಸಣೆ, ಮೂಳೆಯ ಸಾಂದ್ರತೆ, ನೇತ್ರ ತಪಾಸಣೆ, ರಕ್ತದೊತ್ತಡ ಹಾಗೂ ಸ್ತನ ಕ್ಯಾನ್ಸರ್‌ಗಾಗಿ ರಿಯಾಯಿತಿ ದರದಲ್ಲಿ ಕೂಪನ್ ಮೊದಲಾದ ತಪಾಸಣೆಗಳನ್ನು ಆಯೋಜಿಸಲಾಗಿತ್ತು. ಲಘು ಉಪಾಹಾರದ ವ್ಯವಸ್ಥೆಯನ್ನು ವೈದ್ಯಕೀಯ ಸಮಿತಿಯ ಕಾರ್ಯಾಧ್ಯಕ್ಷ ಸುರೇಶ್ ಬಿ. ಶೆಟ್ಟಿ ಮಾಫೆ ಇವರ ವತಿಯಿಂದ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಯಶಸ್ಸಿಗೆ ಕಾರ್ಯಾಧ್ಯಕ್ಷ ಜಗದೀಶ್ ಶೆಟ್ಟಿ ನಂದಿಕೂರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರೂಪಾ ಡಿ. ಶೆಟ್ಟಿ ಅವರು ವಂದಿಸಿದರು. ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಆದ್ಯಪಾಡಿ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.