Advertisement

ಕೊರೊನಾ ಕಾಲದಲ್ಲಿ ಕುಸುಮ ರೋಗಿಗಳು

01:27 PM May 09, 2021 | Team Udayavani |

ರಕ್ತ ಹೆಪ್ಪುಗಟ್ಟುವ ಅಂಶಗಳನ್ನು ನೀಡುವ ಮೂಲಕ ಕುಸುಮ ರೋಗಕ್ಕೆ ಚಿಕಿತ್ಸೆ ಒದಗಿಸಲಾಗುತ್ತದೆ. ಸಂದುಗಳಲ್ಲಿ ರಕ್ತಸ್ರಾವ ತಡೆಗಟ್ಟಲು ಆಗಾಗ ರಕ್ತ ಹೆಪ್ಪುಗಟ್ಟುವ ಅಂಶಗಳನ್ನು ಸಣ್ಣ ಪ್ರಮಾಣದಲ್ಲಿ ನೀಡುವ ಮೂಲಕ ಅಥವಾ ಕುಸುಮ ರೋಗಿಗೆ ರಕ್ತಸ್ರಾವ ಉಂಟಾದಾಗ ರಕ್ತ ಹೆಪ್ಪುಗಟ್ಟುವ ಅಂಶಗಳನ್ನು ನೀಡುವ ಕ್ರಮವನ್ನು ಇಲ್ಲಿ ಅನುಸರಿಸಲಾಗುತ್ತದೆ.

Advertisement

ಆಗಾಗ ರಕ್ತ ಹೆಪ್ಪುಗಟ್ಟುವ ಅಂಶಗಳನ್ನು ಒದಗಿಸುವುದು ಉತ್ತಮ ಚಿಕಿತ್ಸೆಯ ವಿಧಾನವಾಗಿದ್ದು, ಕುಸುಮ ರೋಗಿಗಳು ಸಂದುಗಳ ಸಮಸ್ಯೆಗಳಿಂದ ಬಳಲುವುದನ್ನು ತಡೆಗಟ್ಟುತ್ತದೆ ಅಥವಾ ಮುಂದೂಡುತ್ತದೆ. ಅಲ್ಲದೆ ಸಹಜ ಸಾಮಾನ್ಯ ಜೀವನವನ್ನು ನಡೆಸಲು ಅನುವು ಮಾಡಿಕೊಡುತ್ತದೆ.ಶಿಕ್ಷಣ ಮತ್ತು ಅರಿವಿನ ಕೊರತೆ, ರೋಗದ ನಿರ್ವಹಣೆಗೆ ಸಂಪನ್ಮೂಲಗಳ ಕೊರತೆ, ಸಾರ್ವಜನಿಕ ಆರೋಗ್ಯದತ್ತ ಕಡಿಮೆ ಪ್ರಾಮುಖ್ಯಗಳು ಇತರ ಹೆಚ್ಚು ತಲಾದಾಯ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕುಸುಮ ರೋಗದ ಪತ್ತೆ ಮತ್ತು ಚಿಕಿತ್ಸೆಗೆ ಪ್ರಮುಖ ಅಡಚಣೆಗಳಾಗಿವೆ. ಪ್ರತೀ ವರ್ಷ ಎಪ್ರಿಲ್‌ 17ರಂದು ವಿಶ್ವ ಕುಸುಮ ರೋಗ ದಿನವನ್ನು ಆಚರಿಸಲಾಗುತ್ತದೆ.

ಈ ವರ್ಷದ ಕುಸುಮ ರೋಗ ದಿನವನ್ನು “ಪರಿವರ್ತನೆಗಳಿಗೆ ಹೊಂದಿಕೋ’ ಎಂಬ ಧ್ಯೇಯದೊಂದಿಗೆ ಆಚರಿಸಲಾಗಿದೆ. ವಿಶೇಷವಾಗಿ ಈಗಿನ ಕೋವಿಡ್‌ -19 ಸಮಯದಲ್ಲಿ ಕುಸುಮ ರೋಗದ ಶೀಘ್ರ ಪತ್ತೆ, ಸುರಕ್ಷಿತ ರಕ್ತ ಹೆಪ್ಪುಗಟ್ಟುವ ಅಂಶಗಳ ಒದಗಣೆಯೊಂದಿಗೆ ಸರಿಯಾದ ಚಿಕಿತ್ಸೆ ಮತ್ತು ಕುಸುಮ ರೋಗದ ಸಮರ್ಪಕ ನಿಭಾವಣೆಯಲ್ಲಿ ಪ್ರೊಫಿಲ್ಯಾಕ್ಸಿಸ್‌ನ ಪ್ರಾಮುಖ್ಯ ಇತ್ಯಾದಿಗಳ ಬಗ್ಗೆ ಅರಿವನ್ನು ವಿಸ್ತರಿಸುವುದು ಬಹಳ ಅಗತ್ಯವಾಗಿದೆ.ಕೋವಿಡ್‌-19 ಸಾಂಕ್ರಾಮಿಕವು ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಕಾರ್ಯತಂತ್ರಗಳಿಂದಾಗಿ ನಾವು ಕಲಿಯುವ, ಉದ್ಯೋಗ ನಿರ್ವಹಿಸುವ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ವಿಧಾನವನ್ನು ವೈಯಕ್ತಿಕವಾಗಿಯೂ ಔದ್ಯೋಗಿಕವಾಗಿಯೂ ಬದಲಾಯಿಸಿದೆ.

ಕೊರೊನಾ ಸಾಂಕ್ರಾಮಿಕವು ಆರೋಗ್ಯ ಮತ್ತು ಆರೋಗ್ಯ ಕಾಳಜಿಯ ವಿಚಾರಗಳಲ್ಲಿ ನಮ್ಮ ವರ್ತನೆಯನ್ನು ಧನಾತ್ಮಕ ಮತ್ತು ಋಣಾತ್ಮಕ – ಎರಡೂ ರೀತಿಗಳಲ್ಲಿ ಬದಲಾಯಿಸಿದೆ. ಈಗ ನಮಗೆಲ್ಲರಿಗೂ ತಿಳಿದಿರುವಂತೆ, ನಾವು ಬದುಕುಳಿಯುವುದಕ್ಕೆ ಮತ್ತು ಸುರಕ್ಷಿತವಾಗಿ ಇರುವುದಕ್ಕಾಗಿ ಬದಲಾವಣೆಗಳಿಗೆ ಒಗ್ಗಿಕೊಳ್ಳಲೇ ಬೇಕಾಗಿದೆ. ಕೊರೊನಾ ವೈರಾಣು ಮತ್ತದರ ಸೋಂಕಿನ ಪರಿಣಾಮಗಳ ಬಗ್ಗೆ ಸತತವಾಗಿ ಹರಿದುಬರುತ್ತಿರುವ ಮಾಹಿತಿಗಳಲ್ಲಿ ಇರುವ ವ್ಯತ್ಯಾಸ ಮತ್ತು ವಿರೋಧಾಭಾಸಗಳಿಂದಾಗಿ ಅನೇಕರಿಗೆ ಅನೇಕ ಬಗೆಗಳಲ್ಲಿ ಸಮಸ್ಯೆಯೂ ಉಂಟಾಗುತ್ತಿದೆ.

ಕುಸುಮ ರೋಗಿಗಳು ಈಗಿನ ಕೊರೊನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಜಾಗರೂಕರಾಗಿರಬೇಕು ಮತ್ತು ತಮ್ಮ ಆರೋಗ್ಯದ ಬಗ್ಗೆ ಸರಿಯಾಗಿ ಕಾಳಜಿ ವಹಿಸಬೇಕು. ಕೊರೊನಾ ಬಗ್ಗೆ ಮತ್ತು ಈ ಪರಿಸ್ಥಿತಿಯಲ್ಲಿ ಆರೋಗ್ಯ ಮುಂಜಾಗರೂಕತೆಗಳನ್ನು ಕೈಗೊಳ್ಳುವ ಬಗ್ಗೆ ಕೆಲವು ಮಾಹಿತಿಗಳು ಇಲ್ಲಿವೆ. ಕುಸುಮ ರೋಗಿಗಳ ರಕ್ತದಲ್ಲಿ ರಕ್ತ ಹೆಪ್ಪುಗಟ್ಟುವುದಕ್ಕೆ ಅಗತ್ಯವಾದ ಪ್ರೊಟೀನ್‌ ಇಲ್ಲದಿರುವುದರಿಂದ ರಕ್ತಸ್ರಾವ ಉಂಟಾದಾಗಲೆಲ್ಲ ಅವರಿಗೆ ವೈದ್ಯಕೀಯ ಆರೈಕೆಯ ಅಗತ್ಯವಿರುತ್ತದೆ. ಗಾಯ ಉಂಟಾದ ಸಂದರ್ಭದಲ್ಲಿ ಕುಸುಮ ರೋಗಿಯು ಹೆಚ್ಚು ದೀರ್ಘ‌ಕಾಲ ರಕ್ತಸ್ರಾವವನ್ನು ಅನುಭವಿಸುತ್ತಾರೆ. ಆರೋಗ್ಯದೊಂದಿಗೆ ಇರುವುದಕ್ಕಾಗಿ ಕುಸುಮ ರೋಗಿಗಳು ವೈದ್ಯರು ಮತ್ತು ಆರೋಗ್ಯ ಸೇವಾ ಪೂರೈಕೆದಾರರ ಸಲಹೆಗಳು ಮತ್ತು ಶಿಫಾರಸುಗಳನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ.

Advertisement

ರಕ್ತಸ್ರಾವದ ಆರಂಭಿಕ ಲಕ್ಷಣಗಳನ್ನು ನಿರ್ಲಕ್ಷಿಸಿದರೆ ಅದು ಗಂಭೀರ ಮತ್ತು ಪ್ರಾಣಾಪಾಯಕಾರಿಯಾದ ಪರಿಣಾಮಗಳಿಗೆ ಕಾರಣವಾಗಬಹುದು. ಸಾಂಕ್ರಾಮಿಕ ಕಾಲದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ಕುಸುಮ ರೋಗಿಗಳು ಮತ್ತು ಅವರ ಮನೆಯವರು ಕೆಲವು ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಬೇಕಾಗಿರುತ್ತದೆ.

ಸಾಂಕ್ರಾಮಿಕ ಕಾಲದಲ್ಲಿಆರೋಗ್ಯ ಕಾಪಾಡಿಕೊಳ್ಳುವುದು

ಕೋವಿಡ್‌ ಸಾಂಕ್ರಾಮಿಕದ ಕಾಲದಲ್ಲಿ ಪ್ರತೀ ವ್ಯಕ್ತಿಯೂ ಮನೆಯೊಳಗೆ ಬಂಧಿ ಯಾಗಿರುವಂತಾಗಿದೆ. ಪ್ರತಿಯೊಬ್ಬರೂ ತಮ್ಮ ಮತ್ತು ತಮ್ಮ ತಮ್ಮ ವಿನ್ಯಾಸ, ಕ್ಷೇಮ ಮತ್ತು ಸಂತೋಷಗಳಿಗೆ ಕಾರಣವಾಗುವ ಸಹಜ ಸಾಮಾನ್ಯ ಚಟುವಟಿಕೆಗಳು, ಸಭೆ ಸಮಾರಂಭಗಳಿಂದ ದೂರ ಉಳಿಯುವಂತಾ ಗಿದೆ.

ಕುಸುಮ ರೋಗಿಗಳು ತಮ್ಮ ಇತರ ಸಮ ವಯಸ್ಕರಿಗಿಂತ ದೈಹಿಕವಾಗಿ ಚಟುವಟಿಕೆಯಿಂದ ಇರುವುದು ಕಡಿಮೆ. ಅದರಲ್ಲೂ ಸಂದುಗಳ ಸಮಸ್ಯೆಗಳನ್ನು ಹೊಂದಿರುವವರು ಇನ್ನೂ ಕಡಿಮೆ. ಕುಸುಮ ರೋಗಿಗಳು ತಮ್ಮ ಮಿತಿಗಳ ಹೊರತಾಗಿಯೂ ದೈನಿಕ ಚಟುವಟಿಕೆಗಳು ಮತ್ತು ವ್ಯಾಯಾಮಗಳಲ್ಲಿ ಭಾಗಿಯಾಗುವ ಉತ್ಸಾಹದಿಂದ ಇರಬೇಕಾದುದು ಬಹಳ ನಿರ್ಣಾಯಕವಾಗಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಮನೆಯಲ್ಲಿಯೇ ಮಾಡುವ ವ್ಯಾಯಾಮಗಳು ಹೆಚ್ಚು ಅನುಕೂಲಕಾರಿ ಮತ್ತು ಸುರಕ್ಷಿತವಾಗಿರುತ್ತವೆ.

ಈ ಬಗ್ಗೆ ನೀವು ನಿಮ್ಮ ಆರೋಗ್ಯ ಸೇವಾ ಪೂರೈಕೆದಾರರ ಜತೆಗೆ ಚರ್ಚಿಸಬಹುದಾಗಿದೆ. ಸಾಂಕ್ರಾಮಿಕದ ಕಾಲದಲ್ಲಿ ಕುಟುಂಬಗಳ ಜತೆಗೆ ಹೆಚ್ಚು ಬೆಸೆದುಕೊಂಡಿರಬೇಕಾಗಿ ಬಂದಿರುವುದರ ಪ್ರಯೋಜನಗಳು ಮತ್ತು ತೊಂದರೆಗಳ ಬಗ್ಗೆ ನಾವು ಅರಿತಿದ್ದೇವೆ. ಸರಳವಾಗಿ ಹೇಳಬೇಕೆಂದರೆ, ವರ್ಷದಲ್ಲಿ ಅನೇಕ ತಿಂಗಳುಗಳ ಕಾಲ ಸಾಂಕ್ರಾಮಿಕವನ್ನು ನಮ್ಮ ಜೀವನವನ್ನು ಸ್ಥಗಿತಗೊಳಿಸಿದೆ, ಆರ್ಥಿಕ ನಷ್ಟದಿಂದಾಗಿ ಆತಂಕವನ್ನು ಉಂಟುಮಾಡಿದೆ, ವ್ಯಾಪಾರ-ವ್ಯವಹಾರ ಹೊಂದಿರುವವರು ಕೂಡ ತೊಂದರೆಗೆ ಈಡಾಗಿದ್ದಾರೆ.

ಕುಸುಮ ರೋಗಿ ಮಗುವೊಂದರ ತಾಯಿಗೆ ಲಾಕ್‌ಡೌನ್‌ನಿಂದ ಹೆಚ್ಚು ತೊಂದರೆ ಆಗಿರಬಹುದು, ಆಕೆ ಹೆಚ್ಚು ಒತ್ತಡ ಮತ್ತು ಆತಂಕಕ್ಕೆ ಗುರಿಯಾಗಿರಬಹುದು. ಹೆತ್ತವರು ಮತ್ತು ಮಕ್ಕಳಲ್ಲಿ ಹೊಸ ಬಗೆಯ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುವ ಸಾಧ್ಯತೆಯನ್ನು ಈ ಸಂದಿಗ್ಧ ಸ್ಥಿತಿ ಹೊಂದಿದೆ. ಆದರೆ ಎಲ್ಲ ಕುಟುಂಬಗಳು ಕೂಡ ನಿರ್ಬಂಧಗಳಿಂದ ಋಣಾತ್ಮಕ ಪರಿಣಾಮಗಳಿಗೆ ಒಳಗಾಗಿಲ್ಲ. ಸಂಬಂಧಗಳನ್ನು ಬಲಪಡಿಸಿಕೊಳ್ಳುವುದು, ಮೆಚ್ಚುಗೆ, ಕೃತಜ್ಞತೆ, ಸಹಿಷ್ಣುತೆಯಂತಹ ಧನಾತ್ಮಕ ಗುಣಗಳನ್ನು ಬೆಳೆಸಿ ಕೊಳ್ಳುವುದೇ ಮೊದಲಾದ ಅವಕಾಶಗಳನ್ನು ಅನೇಕರು ಪಡೆದುಕೊಂಡಿದ್ದಾರೆ.

ಲಸಿಕೆ ಹಾಕಿಸಿಕೊಳ್ಳುವುದು

ಅರ್ಹ ಕುಸುಮ ರೋಗಿಗಳು ಕೋವಿಡ್‌-19 ಲಸಿಕೆಯ ಎರಡು ಡೋಸ್‌ಗಳನ್ನು ಹಾಕಿಸಿಕೊಳ್ಳಬೇಕು. ಲಸಿಕೆ ಹಾಕಿಸಿಕೊಂಡ ಬಳಿಕ ನಿಮಗೆ ಜ್ವರ, ತಲೆನೋವು, ನಿದ್ದೆ ತೂಗುವುದು, ಸ್ನಾಯು ನೋವು, ಹೊಟ್ಟೆ ತೊಳೆಸುವುದು ಮತ್ತು ವಾಂತಿಯಂತಹ ಕೆಲವು ಲಕ್ಷಣಗಳು ಉಂಟಾಗಬಹುದು. ಇವು ತಾವಾಗಿಯೇ ಕಡಿಮೆಯಾಗುತ್ತವೆ. ಆದರೂ ಇವು ಕಡಿಮೆಯಾ ಗದೆ ಇದ್ದರೆ ನಿಮಗೆ ಚಿಕಿತ್ಸೆ ನೀಡುವ ವೈದ್ಯರ ಜತೆಗೆ ಸಮಾಲೋಚಿಸಿಕೊಳ್ಳಿ. ಲಸಿಕೆ ಹಾಕಿಸಿ ಕೊಂಡ ಬಳಿಕ ಚುಚ್ಚುಮದ್ದು ಚುಚ್ಚಿದಲ್ಲಿಗೆ ಲಘುವಾಗಿ ಒತ್ತಿಕೊಳ್ಳಬೇಕು ಮತ್ತು ಐಸ್‌ ಇರಿಸಬಹುದು. ಇದರಿಂದ ಲಸಿಕೆ ಚುಚ್ಚಿದಲ್ಲಿ ಬಾವು, ರಕ್ತ ಸಂಗ್ರಹವಾಗಿ ನೀಲಿಯಾಗುವುದು ಕಡಿಮೆಯಾಗುತ್ತದೆ.

ಸಕಾರಾತ್ಮಕವಾಗಿರುವುದು

ಕೊರೊನಾ ಸಾಂಕ್ರಾಮಿಕವು ಮೆಚ್ಚುಗೆ, ಸಹಿಷ್ಣುತೆಯನ್ನು ಬೆಳೆಸಿಕೊಳ್ಳುವುದು ಮತ್ತು ಪರಸ್ಪರರನ್ನು ಅರ್ಥ ಮಾಡಿಕೊಳ್ಳುವಂತಹ ಸಕಾರಾತ್ಮಕ ಗುಣಗಳ ಬೆಳವಣಿಗೆಗೆ ಅವಕಾಶ ಮಾಡಿಕೊಟ್ಟಿದೆ. ಇದರ ಜತೆಗೆ ಸನ್ನಿವೇಶಗಳಿಗೆ ಹೊಂದಿಕೊಳ್ಳುವುದು ಮತ್ತು ತಾಳ್ಮೆಯನ್ನು ಕಲಿಸಿಕೊಟ್ಟಿದೆ.

ಒಳ್ಳೆಯ ಪುಸ್ತಕಗಳು, ಕಾದಂಬರಿಗಳನ್ನು ಓದುವುದು, ಉತ್ತಮ ಸಿನೆಮಾ ಸಾಕ್ಷ್ಯಚಿತ್ರಗಳನ್ನು ವೀಕ್ಷಿಸುವ ಮೂಲಕ ಸ್ಫೂರ್ತಿಯನ್ನು ಪಡೆಯಿರಿ. ವಿಶ್ವಾಸಾರ್ಹ ಮೂಲಗಳಿಂದ ಈ ಸಾಂಕ್ರಾಮಿಕದ ಬಗ್ಗೆ ಉತ್ತಮ ಮಾಹಿತಿಗಳನ್ನು ಸಂಗ್ರಹಿಸಿ. ಇತರರ ಗುಣನಡತೆಗಳನ್ನು, ಆಗುಹೋಗುಗಳನ್ನು ನಿಯಂತ್ರಿಸಲು ನಮಗೆ ಸಾಧ್ಯವಿಲ್ಲ; ಆದರೆ ನಮ್ಮನ್ನು ನಾವು ನಿಯಂತ್ರಿಸಿಕೊಳ್ಳಬಹುದು.

ಹೀಗಾಗಿ ಯಾವುದೇ ಘಟನೆ, ಸನ್ನಿವೇಶಗಳಲ್ಲಿ ಆಳವಾಗಿ ತಲ್ಲೀನರಾಗಬೇಡಿ. ಪೌಷ್ಟಿಕಾಂಶಯುಕ್ತ, ಆರೋಗ್ಯಕರವಾದ ಆಹಾರವನ್ನು ಅಡುಗೆ ಮಾಡಿ ಸೇವಿಸಿ. ಇದರಿಂದ ನಿಮ್ಮ ಮತ್ತು ನಿಮ್ಮ ಕುಟುಂಬದ ಕಾಳಜಿ, ಆರೈಕೆ ಮಾಡುತ್ತಿರುವ ಭಾವನೆ ಉಂಟಾಗಿ ಸಂತೃಪ್ತಿ ತುಂಬಿಕೊಳ್ಳುತ್ತದೆ.

ವೈದ್ಯಕೀಯ ದೃಷ್ಟಿಕೋನ

ನಮ್ಮ ಆರೋಗ್ಯ ಸೇವಾ ಸೌಲಭ್ಯಗಳಲ್ಲಿ ನಮ್ಮ ರೋಗಿಗಳು ಕೋವಿಡ್‌-19ನಿಂದ ಬಾಧೆಗೆ ಒಳಗಾಗದಂತೆ ನಾವು ಎಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದೇವೆ. ಕಾಯಿಲೆಯೊಂದರ ಭಯ ನಾವು ಆರೋಗ್ಯವಂತರಾಗಿ ಉಳಿಯುವುದಕ್ಕೆ ನಾವು ಮಾಡಬೇಕಾಗಿರುವುದನ್ನು ತಡೆಯುವುದಕ್ಕೆ ನಾವು ಬಿಡುವುದಿಲ್ಲ. ವಿಶೇಷವಾಗಿ ಕುಸುಮ ರೋಗಿ ಮಕ್ಕಳು ತುರ್ತು ರಕ್ತಸ್ರಾವ ಉಂಟಾದಾಗ ಮತ್ತು ದಡಾರ, ನಾಯಿಕೆಮ್ಮಿನಂತಹ ಕಾಯಿಲೆಗಳ ವಿರುದ್ಧ ನಿಯಮಿತ ಲಸಿಕೆಗಳನ್ನು ಹಾಕಿಸಿಕೊಳ್ಳುವುದಕ್ಕಾಗಿ ಆಸ್ಪತ್ರೆಗೆ ಆಗಾಗ ಭೇಟಿ ನೀಡಲೇ ಬೇಕಾಗಿರುತ್ತದೆ. ಅಂಥವರನ್ನು ನಾವು ನಿರ್ಲಕ್ಷಿಸಲಾಗದು.

ಸುಲೋಚನಾ ಬಿ.ಅಸೋಸಿಯೇಟ್ಪ್ರೊಫೆಸರ್ಮಣಿಪಾಲ ನರ್ಸಿಂಗ್ಕಾಲೇಜು,ಮಾಹೆ, ಮಣಿಪಾಲ

ಡಾ| ಅರ್ಚನಾ ಎಂ.ವಿ.ಅಸಿಸ್ಟೆಂಟ್ಪ್ರೊಫೆಸರ್ಹೆಮಟೊ ಓಂಕಾಲಜಿ ವಿಭಾಗ,ಕೆಎಂಸಿ, ಮಾಹೆ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next