Advertisement

Health: ಸ್ತನ ಕಸಿ ಮತ್ತು ಕ್ಯಾನ್ಸರ್‌ ಪರಸ್ಪರ ಸಂಬಂಧ ಇದೆಯೇ?

04:25 PM Sep 09, 2024 | Team Udayavani |

ಸೌಂದರ್ಯವರ್ಧನೆಯ ಉದ್ದೇಶಕ್ಕಾಗಿ ಸ್ತನಗಳ ಆಕಾರವನ್ನು ಸುಂದರಗೊಳಿಸಲು ಸ್ತನಗಳ ಒಳಗೆ ಅಥವಾ ಸ್ತನ ಕ್ಯಾನ್ಸರ್‌ ಶಸ್ತ್ರಚಿಕಿತ್ಸೆಯ ಬಳಿಕ ಸ್ತನಗಳನ್ನು ಪುನರ್‌ ನಿರ್ಮಿಸುವುದಕ್ಕಾಗಿ ಎದೆಯ ಗೋಡೆಯ ಮೇಲೆ ಸ್ಥಾಪಿಸುವ ಸಿಲಿಕೋನ್‌ ಅಥವಾ ಸಲೈನ್‌ ತುಂಬಿದ ಪ್ರೋಸ್ಥೆಸಿಸ್‌ಗಳೇ ಸ್ತನ ಕಸಿ ಅಥವಾ ಬ್ರೆಸ್ಟ್‌ ಇಂಪ್ಲಾಂಟ್‌ಗಳು. ಇಂತಹ ಇಂಪ್ಲಾಂಟ್‌ಗಳ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇದು ಕೂಡ ಸ್ತನ ಕ್ಯಾನ್ಸರ್‌ ಉಂಟಾಗುವಲ್ಲಿ ಒಂದು ಕಾರಣವಾಗಿರಬಹುದು ಎಂದು ಶಂಕಿಸುವುದಕ್ಕೆ ಸಾಕ್ಷ್ಯ ಸಹಿತ ಆಧಾರಗಳು ಹೆಚ್ಚು ಸಿಗುತ್ತಿವೆ.

Advertisement

2011ರಲ್ಲಿ ಎಫ್ಡಿಎ (ಫ‌ುಡ್‌ ಆ್ಯಂಡ್‌ ಡ್ರಗ್‌ ಅಡ್ಮಿನಿಸ್ಟ್ರೇಶನ್‌) ಈ ಸಂಬಂಧ ಮೊತ್ತಮೊದಲ ಬಾರಿಗೆ ಸುರಕ್ಷೆಯ ಎಚ್ಚರಿಕೆ ಸಂದೇಶವೊಂದನ್ನು ಬಿಡುಗಡೆ ಮಾಡಿತ್ತು. ಕೃತಕ ಪ್ರೋಸ್ಥೆಸಿಸ್‌ ಒಂದನ್ನು ದೇಹದಲ್ಲಿ ಸ್ಥಾಪಿಸಿದಾಗ ಅದಕ್ಕೆ ದೇಹದ ಸಹಜ ಪ್ರತಿಕ್ರಿಯೆಯಾಗಿ ಅದರ ಸುತ್ತ ನಾರಿನಂಶಯುಕ್ತ ಪದರ ರೂಪುಗೊಳ್ಳುತ್ತದೆ. ಈ ನಾರಿನಂಶಯುಕ್ತ ಪದರ ಅಥವಾ ಕ್ಯಾಪ್ಸೂಲ್‌ನಲ್ಲಿ ಕೆಲವು ವಿಧವಾದ ಕ್ಯಾನ್ಸರ್‌ಗಳು ಉಂಟಾಗುವ ಸಾಧ್ಯತೆ ಇದೆ ಎಂಬುದಾಗಿ ಎಫ್ಡಿಎ ತನ್ನ ಎಚ್ಚರಿಕೆ ಸಂದೇಶದಲ್ಲಿ ಹೇಳಿತ್ತು.

ಇಂತಹ ಸ್ತನ ಕಸಿ ಅಥವಾ ಬ್ರೆಸ್ಟ್‌ ಇಂಪ್ಲಾಂಟ್‌ಗಳ ಜತೆಗೆ ಸಂಬಂಧ ಹೊಂದಿರುವ ಕ್ಯಾನ್ಸರ್‌ಗಳಲ್ಲಿ ಬಹಳ ಮುಖ್ಯವಾದುದು ಅನಾಪ್ಲಾಸ್ಟಿಕ್‌ ಲಾರ್ಜ್‌ ಸೆಲ್‌ ಲಿಂಫೋಮಾ (ಬಿಐಎ-ಎಎಲ್‌ಸಿಎಲ್‌). ಇದೊಂದು ಅಪರೂಪದ ಕ್ಯಾನ್ಸರ್‌ ಆಗಿದ್ದು, ದೇಹದ ರೋಗ ನಿರೋಧಕ ವ್ಯವಸ್ಥೆಗೆ ಸಂಬಂಧಿಸಿದ್ದಾಗಿದೆ. ಸ್ತನದ ಕ್ಯಾನ್ಸರ್‌ ಸ್ತನದ ಜೀವಕೋಶಗಳಿಂದ ಉಂಟಾಗುತ್ತದೆಯಾದರೆ ಅನಾಪ್ಲಾಸ್ಟಿಕ್‌ ಲಾರ್ಜ್‌ ಸೆಲ್‌ ಲಿಂಫೋಮಾ ರೋಗ ನಿರೋಧಕ ವ್ಯವಸ್ಥೆಯ ಪ್ರತಿಕ್ರಿಯೆಯಿಂದ ತಲೆದೋರುತ್ತದೆ. 2023ರ ಜೂನ್‌ ವರೆಗಿನ ಅಂಕಿಅಂಶಗಳಂತೆ ಅನಾಪ್ಲಾಸ್ಟಿಕ್‌ ಲಾರ್ಜ್‌ ಸೆಲ್‌ ಲಿಂಫೋಮಾದ 1,300 ಪ್ರಕರಣಗಳು ವರದಿಯಾಗಿದ್ದವು. ಇದು ಸಾಮಾನ್ಯವಾಗಿ ಸ್ತನ ಕಸಿ ಮಾಡಿಸಿಕೊಂಡ ಸರಿಸುಮಾರು 10 ವರ್ಷಗಳ ಬಳಿಕ, ಹೆಚ್ಚಾಗಿ ವಿನ್ಯಾಸಯುಕ್ತ ಇಂಪ್ಲಾಂಟ್‌ಗಳನ್ನು ಅಳವಡಿಸಿದ್ದ ಸಂದರ್ಭದಲ್ಲಿ ತಲೆದೋರುತ್ತದೆ. ಕಸಿಯ ಸುತ್ತ ದ್ರವ ತುಂಬಿಕೊಳ್ಳುವುದು, ಸ್ತನದಲ್ಲಿ ಗಂಟು ಅಥವಾ ಗಡ್ಡೆ, ಸ್ತನದ ಚರ್ಮದಲ್ಲಿ ಬದಲಾವಣೆ ಅಥವಾ ನೋವು ಕಾಣಿಸಿಕೊಂಡಿದ್ದರೆ ಈ ಕ್ಯಾನ್ಸರ್‌ ಉಂಟಾಗಿದೆ ಎಂಬುದಾಗಿ ಶಂಕಿಸಬಹುದಾಗಿದೆ.

ಇದಕ್ಕೆ ಚಿಕಿತ್ಸೆಯ ಕಾರ್ಯತಂತ್ರಗಳು ಎಂದರೆ ಕ್ಯಾನ್ಸರ್‌ ಎಷ್ಟು ವಿಸ್ತಾರಕ್ಕೆ ವ್ಯಾಪಿಸಿದೆ ಎಂಬುದರ ಪರೀಕ್ಷೆ ಹಾಗೂ ಕ್ಯಾಪ್ಸೂಲ್‌ ಸಹಿತ ಕಸಿಯನ್ನು ಮತ್ತು ಗಾಯ ಅಂಗಾಂಶವನ್ನು ತೆಗೆದುಹಾಕುವುದರಿಂದ ಇದು ಗುಣ ಹೊಂದುತ್ತದೆ. ಕ್ಯಾನ್ಸರ್‌ ಒಂದು ಸ್ತನದಲ್ಲಿ ಮಾತ್ರವೇ ಉಂಟಾಗಿದ್ದರೂ ಎರಡೂ ಸ್ತನಗಳ ಕಸಿಗಳನ್ನು ತೆಗೆದುಹಾಕಲಾಗುತ್ತದೆ. ರೋಗ ಎಷ್ಟು ವ್ಯಾಪಿಸಿದೆ ಎಂಬುದನ್ನು ಆಧರಿಸಿ ಅಪರೂಪಕ್ಕೆ ರೇಡಿಯೇಶನ್‌ ಚಿಕಿತ್ಸೆ ಅಥವಾ ದೇಹ ವ್ಯವಸ್ಥೆಗೆ ಚಿಕಿತ್ಸೆ ಅಗತ್ಯವಾಗಬಹುದಾಗಿದೆ.

Advertisement

ಸ್ತನ ಕಸಿಯ ಜತೆಗೆ ಸಂಬಂಧ ಹೊಂದಿರುವ ಇನ್ನೂ ಅಪರೂಪವಾದ ಒಂದು ಕ್ಯಾನ್ಸರ್‌ ಎಂದರೆ ಸ್ಕ್ವಾಮಸ್‌ ಸೆಲ್‌ ಕಾರ್ಸಿನೋಮಾ (ಬಿಐಎ-ಎಸ್‌ಸಿಸಿ). ಇದು ಎಷ್ಟು ಅಪರೂಪ ಎಂದರೆ ಜಾಗತಿಕವಾಗಿ 20ಕ್ಕೂ ಕಡಿಮೆ ಪ್ರಕರಣಗಳಿವೆ. ಆದರೆ ಇದು ಹೆಚ್ಚು ಆಕ್ರಮಣಶೀಲ ಸ್ವಭಾವದ್ದಾಗಿದ್ದು, ಬೇಗನೆ ದುಗ್ಧ ರಸ ಗ್ರಂಥಿಗಳು ಮತ್ತು ದೂರದ ಜೀವಕೋಶಗಳಿಗೂ ವ್ಯಾಪಿಸಬಹುದಾಗಿದೆ. ಇದು ಸಾಮಾನ್ಯವಾಗಿ ಸ್ತನ ಕಸಿ ಮಾಡಿಸಿಕೊಂಡ 20 ವರ್ಷಗಳ ಬಳಿಕ ತಲೆದೋರುತ್ತದೆ. ಬಿಐಎ-ಎಎಲ್‌ ಸಿಎಲ್‌ಗೆ ಅನುಸರಿಸುವ ಚಿಕಿತ್ಸಾಕ್ರಮವನ್ನೇ ಇಲ್ಲಿಯೂ ಅನುಸರಿಸಲಾಗುತ್ತದೆ.

ಸ್ತನ ಕಸಿಗಳು ಸ್ತನ ಕ್ಯಾನ್ಸರ್‌ ಉಂಟಾಗುವ ಅಪಾಯ ಹೆಚ್ಚಳಕ್ಕೆ ಕಾರಣವಾಗಲಾರವು, ಆದರೆ ಸ್ತನ ಕ್ಯಾನ್ಸರ್‌ ಪತ್ತೆ ವಿಳಂಬವಾಗುವುದಕ್ಕೆ ಕೊಡುಗೆ ನೀಡಬಲ್ಲವು. ಸ್ಪರ್ಶ ಪರೀಕ್ಷೆಯ ಸಂದರ್ಭದಲ್ಲಿ ಅಥವಾ ರೂಢಿಗತ ಇಮೇಜಿಂಗ್‌ ಪರೀಕ್ಷೆಗಳ ಸಂದರ್ಭದಲ್ಲಿ ಇಂಪ್ಲಾಂಟ್‌ಗಳು ತಡೆಯಾಗುವುದೇ ಇದಕ್ಕೆ ಕಾರಣ. ಆದ್ದರಿಂದಲೇ ಇಂಪ್ಲಾಂಟ್‌ ಅಳವಡಿಸಿಕೊಂಡಿರುವವರಲ್ಲಿ ಅದರಲ್ಲೂ ಅವರು ಸ್ತನ ಕ್ಯಾನ್ಸರ್‌ಗೆ ತುತ್ತಾಗುವ ಅಪಾಯ ಹೆಚ್ಚಿದ್ದರೆ ಎಂಆರ್‌ಐ ಪರೀಕ್ಷೆ ಮಾಡಿಸುವುದು ಸೂಕ್ತ.

ಸೌಂದರ್ಯವರ್ಧನೆಯ ಉದ್ದೇಶಕ್ಕಾಗಿ ಅಥವಾ ಕ್ಯಾನ್ಸರ್‌ ಚಿಕಿತ್ಸೆಯ ಬಳಿಕ ಸ್ತನ ಪುನರ್‌ಸ್ಥಾಪನೆಯ ಉದ್ದೇಶಕ್ಕಾಗಿ ಸ್ತನ ಕಸಿ ಮಾಡಿಸಿಕೊಳ್ಳಲು ಬಯಸುವ ಮಹಿಳೆಯರಿಗೆ ಸ್ತನ ಕಸಿಯ ಸಂಭಾವ್ಯ ಅಪಾಯಗಳ ಬಗ್ಗೆ ತಿಳಿವಳಿಕೆ ನೀಡುವ ಮೂಲಕ ಅವರು ಮಾಹಿತಿಯುಕ್ತವಾದ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವಂತಾಗಬೇಕು. ಅದಾಗಿಯೂ ಸ್ತನ ಕಸಿ ಮಾಡಿಸಿಕೊಂಡ ಮಹಿಳೆಯರು ತಮ್ಮ ಸ್ತನಗಳ ಆರೋಗ್ಯದ ಮೇಲೆ ಪ್ರತೀ ತಿಂಗಳು ನಿಯಮಿತವಾದ ನಿಗಾ ಇರಿಸುವುದಕ್ಕಾಗಿ ವ್ಯಕ್ತಿನಿರ್ದಿಷ್ಟವಾದ ಸ್ವಯಂ ಸ್ತನ ಪರೀಕ್ಷೆಯ ವಿಧಾನವನ್ನು ಶಿಫಾರಸು ಮಾಡುವುದು ಸೂಕ್ತವಾಗಿರುತ್ತದೆ.

ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಸರ್ಜರಿ ವಿಭಾಗ ಮತ್ತು ಪ್ಲಾಸ್ಟಿಕ್‌ ಸರ್ಜರಿ ವಿಭಾಗ, ಕೆಎಂಸಿ, ಮಂಗಳೂರು

ಡಾ| ಬಸಿಲಾ ಅಮೀರ್‌ ಅಲಿ ಬ್ರೆಸ್ಟ್‌ ಸರ್ಜನ್‌, ಕೆಎಂಸಿ ಆಸ್ಪತ್ರೆ, ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next