Advertisement

ಎಚ್‌ಎಂ ಹುದ್ದೆಗೆ ಮುಖ್ಯ ಶಿಕ್ಷಕರೇ ನಿರಾಕರಣೆ!

05:41 PM Dec 04, 2019 | Suhan S |

ಕೊಪ್ಪಳ: ಜಿಲ್ಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ 277 ಮುಖ್ಯ ಶಿಕ್ಷಕರ ಹುದ್ದೆಗಳಿಗೆ ನಡೆದ ಎರಡು ದಿನದ ಆಯ್ಕೆ ಪ್ರಕ್ರಿಯೆಯಲ್ಲಿ ಕೇವಲ 78 ಶಿಕ್ಷಕರು ಮಾತ್ರ ಎಚ್‌ಎಂ ಪೋಸ್ಟ್‌ಗೆ ಆಯ್ಕೆ ಮಾಡಿಕೊಂಡಿದ್ದಾರೆ. ಎಸ್‌ಡಿಎಂಸಿ ಕಿರಿಕಿರಿ, ಕಚೇರಿ ಹೊರೆ, ಅನಗತ್ಯ ಒತ್ತಡದಿಂದಲೇ ಉಳಿದವರು ಹುದ್ದೆ ಆಯ್ಕೆಯಿಂದ ದೂರ ಉಳಿದಿದ್ದಾರೆ ಎನ್ನುವ ಮಾತುಗಳೂ ಆಂತರಿಕ ವಲಯದಲ್ಲಿ ಕೇಳಿ ಬಂದಿವೆ.

Advertisement

ಹೌದು. ಪ್ರಾಥಮಿಕ ಶಿಕ್ಷಣ ಇಲಾಖೆಯಲ್ಲಿ 277 ಮುಖ್ಯೋಪಾಧ್ಯಾಯರ ಹುದ್ದೆಗಳು ಖಾಲಿ ಇದ್ದವು. ಜೊತೆಗೆ ಸಹ ಶಿಕ್ಷಕರಿಂದ ಜೇಷ್ಠತೆ ಆಧಾರದ ಮೇಲೆ ಮುಖ್ಯೋಪಾಧ್ಯಾಯರ ಸ್ಥಾನಕ್ಕೆ ಬಡ್ತಿ ಹೊಂದಿದ್ದ ಶಿಕ್ಷಕರಿಗೆ ಎಚ್‌ಎಂ ಹುದ್ದೆಗಳ ಹಂಚಿಕೆ ಪ್ರಕ್ರಿಯೆ ನಡೆಯಿತು. ಸೋಮವಾರ ನಡೆದ ಮೊದಲ ದಿನದಂದು 145 ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಿತು. ಆದರೆ ಎಚ್‌ಎಂ ಸ್ಥಾನಕ್ಕೆ ಅರ್ಹರಿದ್ದರೂ, ಸ್ಥಾನ ಖಾಲಿಯಿದ್ದರೂ ಕೇವಲ 36 ಜನರು ವಿವಿಧ ಶಾಲೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಇನ್ನೂ ಮಂಗಳವಾರ ಪುನಃ ಬಡ್ತಿಯಲ್ಲಿ ಸಿನಿಯಾರಿಟಿ ಪಟ್ಟಿಯಲ್ಲಿ ಬರುವ ಶಿಕ್ಷಕರನ್ನು ಆಯ್ಕೆ ಮಾಡಿ ಅವರಿಗೂ 132 ಸ್ಥಾನಗಳ ಆಯ್ಕೆಗೆ ಅವಕಾಶ ಪುನಃ ಅವಕಾಶ ನೀಡಲಾಗಿತ್ತು. ಆದರೆ 2ನೇ ದಿನವೂ 42 ಮುಖ್ಯ ಶಿಕ್ಷಕರು ಸ್ಥಾನ ಆಯ್ಕೆ ಮಾಡಿಕೊಂಡಿದ್ದಾರೆ. ಅಂದರೆ ಒಟ್ಟಾರೆ 277 ಮುಖ್ಯ ಶಿಕ್ಷಕರ ಖಾಲಿ ಹುದ್ದೆಗಳಿಗೆ ಕೇವಲ 78ಮುಖ್ಯ ಶಿಕ್ಷಕರು ನಗರ, ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆಗಳಲ್ಲಿ ಎಚ್‌ಎಂ ಪೋಸ್ಟ್‌ ಆಯ್ಕೆ ಮಾಡಿಕೊಂಡಿದ್ದಾರೆ.

ಎಚ್‌ಎಂ ಪೋಸ್ಟ್‌ಗೆ ಒತ್ತಡ ಜಾಸ್ತಿಯಂತೆ!: ಹುದ್ದೆ ಖಾಲಿಯಿದ್ದರೂ ಶಿಕ್ಷಕರಿಗೆ ಅರ್ಹತೆ ಇದ್ದರೂ ಮುಖ್ಯ ಶಿಕ್ಷಕರ ಹುದ್ದೆಯನ್ನು ಏಕೆ ಆಯ್ಕೆ ಮಾಡಿಕೊಳ್ಳಲಿಲ್ಲ ಎನ್ನುವ ಪ್ರಶ್ನೆ ಕಾಡುವುದು ಎಲ್ಲರಲ್ಲಿ ಸಹಜ. ಆದರೆ ಶಿಕ್ಷಕರ ಮೂಲಗಳ ಪ್ರಕಾರ, ಎಚ್‌ಎಂ ಪೋಸ್ಟ್‌ ಎನ್ನುವುದು ತುಂಬ ಕಿರಿಕಿರಿ ಕೆಲಸ, ಮಕ್ಕಳಿಗೆ ಪಾಠ ಮಾಡುವ ಕೆಲಸ ಬಿಟ್ಟು, ಅನ್ಯ ಕೆಲಸಗಳ ಹೊರೆಯೇ ಹೆಚ್ಚು. ಜೊತೆಗೆ ಶಾಲೆಯಲ್ಲಿ ಎಸ್‌ ಡಿಎಂಸಿ ಜೊತೆ ಸರಿ ಇರಬೇಕು. ಸ್ವಲ್ಪವೂ ವಿರೋಧ ಮಾಡುವಂತಿಲ್ಲ. ಏನಾದ್ರೂ ಮಾತನಾಡಿದರೂ ತುಂಬಾ ಕಷ್ಟದ ಪರಿಸ್ಥಿತಿ ಇರುತ್ತದೆ.

ಎಸ್‌ಡಿಎಂಸಿ ಒಣ ಕಿರಿಕಿರಿಯೇ ಹೆಚ್ಚಂತೆ!: ಗ್ರಾಮೀಣ ಪ್ರದೇಶದಲ್ಲಿನ ಜನರು ಎಲ್ಲವನ್ನೂ ಶಿಕ್ಷಕರನ್ನು ಬಿಟ್ಟು ಮುಖ್ಯ ಶಿಕ್ಷಕರ ಮೇಲೆಯೇ ಆಪಾದನೆ ಹೊರಿಸುತ್ತಾರೆ. ಅಲ್ಲದೇ, ಸರ್ಕಾರವು ಪ್ರಸ್ತುತ ದಿನದಲ್ಲಿ ಶಾಲಾ ಮಕ್ಕಳ ಸಮವಸ್ತ್ರ ಹಾಗೂ ಶೂ ಸೇರಿದಂತೆ ಪ್ರತಿಯೊಂದು ಹಣವನ್ನು ಎಸ್‌ಡಿಎಂಸಿಜಂಟಿ ಖಾತೆಗೆ ಜಮೆ ಮಾಡುತ್ತದೆ. ಇಲ್ಲಿ ಹಣಕಾಸಿನ ಹಿಡಿತ ಕಾಯ್ದುಕೊಳ್ಳಬೇಕು. ಗುಣಮಟ್ಟದ ಬಟ್ಟೆ, ಶೂಗಳು, ಬ್ಯಾಗ್‌ಗಳನ್ನು ಖರೀದಿಸಿದರೂ ಮಾಹಿತಿ ಹಕ್ಕು ಕಾಯ್ದೆಗಳಿಗೆ ಇನ್ನಿಲ್ಲದೆ ನಾನಾ ಕಾರಣಕ್ಕೂ ಉತ್ತರ ಕೊಡಬೇಕು.

Advertisement

ಬಿಸಿಯೂಟಕ್ಕೆ ಕಾಯಿಪಲ್ಲೆ ತರಬೇಕು. ಸಾರ್ವಜನಿಕ ವಲಯದಲ್ಲೂ ನಮಗೆ ನೂರೆಂಟು ಕಿರಿಕಿರಿ ಎನ್ನುವುದಕ್ಕೆ ಮುಖ್ಯ ಶಿಕ್ಷಕರ ಹುದ್ದೆಯೇ ನಮಗೆ ಬೇಡ. ಶಿಕ್ಷಕರಾಗಿಯೇ ನಾವು ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡಿಕೊಂಡು ನೌಕರಿ ಮಾಡುತ್ತೇವೆ ಎನ್ನುವ ಮಾತುಗಳು ಶಿಕ್ಷಕರಿಂದ ಕೇಳಿ ಬಂದಿವೆ. ಹೀಗಾಗಿ ಇರುವ 277 ಹುದ್ದೆಗಳಿಗೆ ಕೇವಲ 78 ಜನರು ಮಾತ್ರ ಸ್ಥಾನಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಶಿಕ್ಷಣ ಇಲಾಖೆ ಅಧಿಕಾರಿಗಳು ಮಾತ್ರ, ಕೆಲವೊಂದು ಸ್ಥಳವೂ ಶಿಕ್ಷಕರಿಗೆ ದೂರ ಇರಬಹುದು. ಮಹಿಳೆಯರು ದೂರ ಹೋಗುವುದು ಕಷ್ಟ ಎನ್ನುವ ಕಾರಣಕ್ಕೆ ಹಿಂಬರಹ ನೀಡಿದ್ದಾರೆ ಎನ್ನುವ ಉತ್ತರ ನೀಡುತ್ತಿದ್ದಾರೆ.

 

-ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next