ಮಹಾಲಿಂಗಪುರ: ಸಮೀಪದ ಮದಭಾಂವಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕರಾಗಿ 9 ವರ್ಷ 9 ತಿಂಗಳ ಸೇವೆ ಸಲ್ಲಿಸಿ, ವೃತ್ತಿಯಾದ ಕೆ.ಎಂ.ಬಿಜಾಪುರ ಅವರು ನಿವೃತ್ತಿ ದಿನ ಕೈಗೊಂಡ ನಿರ್ಧಾರ, ಬಡ ಮಕ್ಕಳ ಕುರಿತಾದ ಕಾಳಜಿ ತಾವು ಕಲಿಸಿದ ಸರ್ಕಾರಿ ಶಾಲೆಯ ಮೇಲಿನ ಪ್ರೀತಿ, ಅಭಿಮಾನಕ್ಕೆ ಸಾಕ್ಷಿಯಾಗಿದೆ.
ಹೌದು. ಬಿಜಾಪುರ ಅವರು ಮದಭಾಂವಿ ಸರ್ಕಾರಿ ಪ್ರೌಢ ಶಾಲೆಯ 10ನೇ ವರ್ಗದ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ 2ಲಕ್ಷ ರೂ. ಗಳನ್ನು ಠೇವಣಿ ಮಾಡಿ, ಪ್ರತಿವರ್ಷ ಆ ಠೇವಣಿಯಿಂದ ಬರುವ ಬಡ್ಡಿ ಹಣದಲ್ಲಿ ಕಡು ಬಡವಿದ್ಯಾರ್ಥಿಗಳ ಶೈಕ್ಷಣಿಕ ಸಹಾಯ ನೀಡುವುದಾಗಿ ಘೋಷಿಸಿದ್ದಾರೆ. ಸೇವಾವಧಿ ಮುಗಿದ ನಂತರ ಇಷ್ಟೊಂದು ಬೃಹತ್ ಮೊತ್ತ ಶಾಲೆಗೆ ನೀಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಮದಭಾಂವಿ ಗ್ರಾಮಸ್ಥರು, ಎಸ್ ಡಿಎಂಸಿ ಪದಾಧಿಕಾರಿಗಳು, ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿದ್ದರಿಂದ ಶಾಲೆಯ ಎಸ್ ಡಿಎಂಸಿ ಪದಾಧಿಕಾರಿಗಳಾದ ರವಿ ಕಲ್ಲೋಳ್ಳಿ (ಅಧ್ಯಕ್ಷ), ಪರಪ್ಪ ಉರಭಿನವರ(ಉಪಾಧ್ಯಕ್ಷ), ಮಹ್ಮದ ಹೂಲಿಕಟ್ಟಿ, ಮಲ್ಲಪ್ಪ ಅರಭಾಂವಿ, ಮಹಾಲಿಂಗ ಇಟ್ನಾಳ, ಸುರೇಶ ಸುತಾರ, ಶಂಕರ ವಗ್ಗರ, ಮುತ್ತವ್ವ ಮಾಂಗ, ಮಹಾದೇವಿ ಮಾಂಗ, ಗ್ರಾಮದ ಹಿರಿಯರಾದ ಬಸಪ್ಪ ವಗ್ಗರ, ವಿನೋದ ಉಳ್ಳಾಗಡ್ಡಿ, ಎಂ.ಬಿ.ನಾಯಕ, ಸದಾಶಿವ ಕೋಳೆಕಾರ, ಸತ್ಯಪ್ಪ ಮುಧೋಳ ಸೇರಿದಂತೆ ಗ್ರಾಮಸ್ಥರು ಊರಲ್ಲಿ ಬ್ಯಾನರ್ ಕಟ್ಟಿ, ಕೆ.ಎಂ.ಬಿಜಾಪೂರ ದಂಪತಿಯನ್ನು ಚಕ್ಕಡಿ ಬಂಡಿಯಲ್ಲಿ ಕುಳ್ಳಿರಿಸಿ ಗ್ರಾಮದ ತುಂಬಾ ಮೆರವಣಿಗೆ ಮಾಡಿದ್ದಾರೆ. ಪ್ರೀತಿ, ಅಭಿಮಾನದಿಂದ ಸನ್ಮಾನಿಸಿ-ಬೀಳ್ಕೊಟ್ಟಿದ್ದಾರೆ.
ನಮ್ಮ ಶಾಲೆಯ ಮುಖ್ಯ ಶಿಕ್ಷಕರಾಗಿದ್ದ ಕೆ.ಎಂ.ಬಿಜಾಪುರ ಅವರು ತಮ್ಮ ಸೇವಾ ನಿವೃತ್ತಿ ದಿನವೇ, ಶಾಲೆಯ ಬಡಮಕ್ಕಳ ಶೈಕ್ಷಣಿಕ ನೆರವಿಗಾಗಿ 2 ಲಕ್ಷ ರೂ.ಠೇವಣಿ ಇಡುವುದಾಗಿ ಘೋಷಿಸಿರುವುದು ಅವರಲ್ಲಿನ ಶೈಕ್ಷಣಿಕ ಕಾಳಜಿ, ಬಡಮಕ್ಕಳ ಮೇಲಿನ ಪ್ರೀತಿಗೆ ಸಾಕ್ಷಿಯಾಗಿದೆ. ಅವರು ಮಾದರಿಯಾಗಿದ್ದಾರೆ.
-ಆಯ್.ಎಸ್.ಪಾಟೀಲ, ಸಹಶಿಕ್ಷಕರು
ಚಂದ್ರಶೇಖರ ಮೋರೆ