Advertisement
ಆಕೆ ಮುದ್ದಾದ ಹುಡುಗಿ ಪ್ರೀತಿ. ನೀಳವಾದ ದಪ್ಪಗಿನ ಕೂದಲೇ ಆಕೆಯ ಆಕರ್ಷಣೆ. ಒಂದು ದಿನ ಶಾಲೆಯಿಂದ ಬಂದವಳೇ, “ಅಮ್ಮಾ, ತಲೆಯಲ್ಲಿ ಏನೋ ಇದೆ. ಆಚೆ ಈಚೆ ಓಡಿದ ಹಾಗೆ ಆಗ್ತಾ ಇದೆ. ವಿಪರೀತ ಕಡಿತ, ತುರಿಕೆ. ನೋಡಮ್ಮಾ ಒಮ್ಮೆ…’ ಎನ್ನುತ್ತಾ ಅಳಲು ಪ್ರಾರಂಭಿಸಿದಳು. ಒಂದು ಕ್ಷಣ ದಿಗಿಲಾದರೂ, ಸಾವರಿಸಿಕೊಂಡು, “ಮಗಳೇ, ಗಡಿಬಿಡಿ ಯಾಕೆ ಮಾಡ್ಕೊತೀಯ? ಇದು ಆ ತಲೆಯಾಸುರನದೇ ಕಾರುಬಾರು. ನೀನೇನೂ ನಾಚಿಕೆಪಟ್ಕೊàಬೇಡ. ಸಣ್ಣವಳಿದ್ದಾಗ ನಾನೂ ಈ ಸಮಸ್ಯೆಗೆ ಒಳಗಾದವಳೇ’ ಎಂದು ಮಗಳನ್ನು ಸಮಾಧಾನಿಸಿದಳು ಸುಧಾ.
Related Articles
ಮನುಷ್ಯರ, ಅದರಲ್ಲೂ ಮಕ್ಕಳ ತಲೆಯಲ್ಲಿ ವಾಸಿಸುವ ಪರಾವಲಂಬಿ ಕೀಟವೇ ಹೇನು. ಇದರ ಮೊಟ್ಟೆಗೆ ಚೀರು, ಸೀರು ಎನ್ನುತ್ತಾರೆ. ದಪ್ಪನೆಯ ತಲೆಗೂದಲೇ ಇದರ ಅಡಗುತಾಣ. ಹಾಗಾಗಿ ಹೆಣ್ಣು ಮಕ್ಕಳೆಂದರೆ ಹೇನುಗಳಿಗೆ ಬಲುಪ್ರೀತಿ. ದಿನಂಪ್ರತಿ ತಲೆಗೆ ಸ್ನಾನ ಮಾಡುವ, ಚಿಕ್ಕಗೂದಲನ್ನು ಹೊಂದಿರುವ ಗಂಡು ಮಕ್ಕಳಿಗೆ ಹೇನಿನ ಸಮಸ್ಯೆ ಹೆಚ್ಚಾಗಿ ಬಾಧಿಸದು. ಮನುಷ್ಯನ ರಕ್ತವೇ ಇದರ ಮುಖ್ಯ ಆಹಾರ. ಆಶ್ಚರ್ಯವೆಂದರೆ, ಒಂದು ಬಾರಿಗೆ ಹೇನು ನೂರಕ್ಕೂ ಹೆಚ್ಚು ಮೊಟ್ಟೆಗಳನ್ನಿಡುತ್ತವಂತೆ. ಅತ್ಯಂತ ಹೆಚ್ಚು ಕಡಿತದ ನೋವು ಉಂಟು ಮಾಡುವಲ್ಲಿ ಮರಿ ಹೇನುಗಳೇ ಮುಂದು.ಪ್ರಾಣಿಗಳ ಶರೀರದಲ್ಲಿರುವ ಹೇನಿನಂತೆ ಇವು ಹಾರುವುದಿಲ್ಲ ಎಂಬುದಷ್ಟೇ ಸಮಾಧಾನದ ವಿಷಯ. ಹೇನುಗಳು ರಾತ್ರಿ ಮಲಗಿದಾಗ ಏಳು ಹಾಸಿಗೆಯನ್ನು ದಾಟಿ ಮುಂದೆ ಸಾಗಬಲ್ಲವು ಎಂಬುದು ಹಿರಿಯರ ನಂಬಿಕೆ. ಅಂದರೆ, ತಲೆಯಲ್ಲಿ ಹೇನು ಇರುವವರ ಪಕ್ಕ ಮಲಗಿದರೆ, ನಾಳೆ ನೀವೂ ತಲೆ ಕೆರೆದುಕೊಳ್ಳಬೇಕಾದೀತು!
Advertisement
ದೂರ ಮಾಡಬೇಡಿಹೇನಿನ ಕಡಿತದಿಂದ ಕಿರಿಕಿರಿ ಅನುಭವಿಸುವವರು ಸಮಸ್ಯೆಯಿಂದ ಹೊರ ಬರಲು ಯೋಚಿಸುತ್ತಿರುತ್ತಾರೆ. ಇದರ ಜೊತೆಗೆ ಮನೆಮಂದಿ ಪದೇ ಪದೆ, ನಿನ್ನ ತಲೆಯಲ್ಲಿ ಹೇನಿದೆ ಎಂದು ಹೇಳುತ್ತಾ ಇದ್ದರೆ ಅವರಿಗೂ ಬೇಜಾರಾಗುತ್ತದೆ. ಹೇನು ಹರಡುವುದೆಂದು ಎಳೆಯ ಮಕ್ಕಳ ಜೊತೆ ಮಲಗುವುದನ್ನು ಅವಾಯ್ಡ ಮಾಡತೊಡಗಿದರೆ, ಅವರ ಮನಸ್ಸು ಕುಗ್ಗುತ್ತದೆ. ಮಕ್ಕಳ ಮನಸ್ಸು ಬಹು ಸೂಕ್ಷ್ಮ. ಹಾಗಾಗಿ, ಅವರ ಎಳೆ ಮನಸ್ಸಿಗೆ ಘಾಸಿಯಾಗದಂತೆ ನೋಡಿಕೊಳ್ಳಬೇಕು. ಮಕ್ಕಳನ್ನು ಬೇರ್ಪಡಿಸುವ ಬದಲು ಅವರು ಬಳಸುವ ಬಾಚಣಿಗೆ, ಟೋಪಿ ಇನ್ನಿತರ ವಸ್ತುಗಳನ್ನು ಮನೆಯ ಇನ್ನಿತರ ಮಕ್ಕಳು ಬಳಸದಂತೆ ಕಾಳಜಿ ವಹಿಸಬಹುದು. ಹೇನಿಗೆ ಏನು ಮಾಡ್ಬೇಕು?
– ತಲೆಯಲ್ಲಿ ಹೇನಿದೆ ಅಂತ ಅರಿವಾದ ತಕ್ಷಣ ಬಾಚಿ ತೆಗೆಯುವುದೇ ಮೊದಲ ಪರಿಹಾರ. ಹೇನು ಬಾಚಲೆಂದೇ ಚೂಪಾದ, ಅತೀ ಹತ್ತಿರ ಹಲ್ಲು ಹೊಂದಿರುವ ಬಾಚಣಿಗೆಗಳು ಲಭ್ಯ. – ತಲೆಗೆ ತೆಂಗಿನೆಣ್ಣೆ ಹಚ್ಚಿ ಬಾಚಿದರೆ ಚಿಕ್ಕ ಹೇನುಗಳೂ ಬಾಚಣಿಗೆಯ ಹಲ್ಲುಗಳಿಂದ ತಪ್ಪಿಸಿಕೊಳ್ಳಲಾರವು. – ತಲೆಗೂದಲನ್ನು ಚೆನ್ನಾಗಿ ಆರೈಕೆ ಮಾಡುವುದರಿಂದ ಹೇನಿನ ಸಮಸ್ಯೆ ಕಾಡದಂತೆ ತಡೆಯಬಹುದು. – ಎರಡು ದಿನಕ್ಕೊಮ್ಮೆ ತಲೆಗೆ ಸ್ನಾನ ಮಾಡುವುದರಿಂದ ಹೇನಿನ ಕಾಟದಿಂದ ಮುಕ್ತಿ ಪಡೆಯಬಹುದು. ಸ್ನಾನದ ನಂತರ, ತಲೆಗೂದಲು ಚೆನ್ನಾಗಿ ಒಣಗಿದ ನಂತರವೇ, ಹೆಣೆಯಬೇಕು. – ಹೇನು ಬಾಧಿತ ವ್ಯಕ್ತಿಯ ಬಾಚಣಿಗೆ, ಮಂಕೀ ಕ್ಯಾಪ್, ಟೋಪಿಯನ್ನು ಬಳಸದೇ ಹೇನು ಹರಡದಂತೆ ತಡೆಯಿರಿ. -ಹೇನಿನ ಕಾಟ ಅತಿಯಾಗಿದ್ದರೆ ವೈದ್ಯರನ್ನು ಭೇಟಿಯಾಗಿ, ಸಲಹೆ ಪಡೆಯಿರಿ – ಬೇವಿನ ಎಣ್ಣೆಯನ್ನು ಹಚ್ಚುವುದರಿಂದ ಹೇನಿನ ಸಮಸ್ಯೆಗೆ ತಕ್ಕಮಟ್ಟಿಗೆ ಪರಿಹಾರ ಸಿಗುತ್ತದೆ. -ಹೇನುಗಳು ಬ್ಯಾಕ್ಟೀರಿಯಾಗಳನ್ನು ಉತ್ಪತ್ತಿ ಮಾಡಿ, ತಲೆಯ ಆರೋಗ್ಯ ಕೆಡುವಂತೆ ಮಾಡಬಲ್ಲವು. ಹೇನು ಕಚ್ಚಿದ ಜಾಗದಲ್ಲಿ ಅಲರ್ಜಿ ಉಂಟಾಗಿ ಕಜ್ಜಿಯಾಗಬಹುದು. ಹಾಗಾಗಿ ಹೇನಿನ ಸಂತತಿ ಹೆಚ್ಚಾಗುವ ಮೊದಲೇ ಎಚ್ಚರಿಕೆ ವಹಿಸುವುದು ಅಗತ್ಯ. – ಶಾಲೆಗೆ ಹೋಗುವ ಮಕ್ಕಳು ಬೇರೆಯವರಿಂದ ಹೇನು ಅಂಟಿಸಿಕೊಳ್ಳುವ ಸಾಧ್ಯತೆ ಇರುವುದರಿಂದ, ಆಗಾಗ ಅವರ ತಲೆಯ ಕಡೆ ಹಿರಿಯರು ಗಮನ ಕೊಡಬೇಕು.
– ವಂದನಾ ರವಿ ಕೆ.ವೈ.