ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ನಿವೇಶನ ಹಂಚಿಕೆ ಅಕ್ರಮ ಪ್ರಕರಣದ ಆರೋಪಿಯನ್ನು ರಕ್ಷಿಸಲು ಲಂಚ ಪಡೆದಿದ್ದ ಆರೋಪದ ಮೇಲೆ ಹೆಡ್ ಕಾನ್‌ಸ್ಟೇಬಲ್ ನನ್ನು ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಚಂದ್ರಗುಪ್ತ ಅಮಾನತು ಮಾಡಿ ಆದೇಶಿಸಿದ್ದಾರೆ.
ಕೇಂದ್ರ ಆರ್ಥಿಕ ವಿಭಾಗ(ಸಿಸಿಬಿ)ದ ಯತೀಶ್ ಅಮಾನತುಗೊಂಡ ಹೆಡ್‌ಕಾನ್‌ಸ್ಟೆಬಲ್. ಈ ಪ್ರಕರಣದಲ್ಲಿ 55 ಲಕ್ಷ ರೂ. ಹಣಕಾಸು ವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿದ್ದು, ಸಮಗ್ರ ತನಿಖೆಗೆ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಚಂದ್ರಗುಪ್ತ ಅವರು ಆದೇಶಿಸಿದ್ದಾರೆ.
ಬಿಡಿಎ ನಿವೇಶನದ ಹಂಚಿಕೆ ಅಕ್ರಮ, ಭ್ರಷ್ಟಾಚಾರ ಸಂಬಂಧ ಶೇಷಾದ್ರಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರ ತನಿಖೆಯನ್ನು 2022ರಿಂದ ಸಿಸಿಬಿ ನಡೆಸುತ್ತಿದೆ. ಅಕ್ರಮದಲ್ಲಿ ಬಿಡಿಎ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳು ಶಾಮೀಲಾಗಿರುವುದು ತನಿಖೆಯಿಂದ ಗೊತ್ತಾಗಿತ್ತು. ಮಹಿಳಾ ಅಧಿಕಾರಿಗೆ ಬಂಧನದ ಭೀತಿ ಎದುರಾಗಿತ್ತು. ತನಿಖೆಯ ಭಾಗವಾಗಿದ್ದ ಹೆಡ್ ಕಾನ್‌ಸ್ಟೇಬಲ್, ಪ್ರಕರಣದ ಪ್ರತಿ ಹಂತದ ಮಾಹಿತಿಯನ್ನು ಆರೋಪಿತ ಅಧಿಕಾರಿಗೆ ನೀಡುವ ಜತೆಗೆ ಆ ಅಧಿಕಾರಿಯನ್ನು ರಕ್ಷಿಸಲು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಮೊದಲ ಕಂತಿನ ನಹಣವನ್ನೂ ಪಡೆದುಕೊಂಡಿದ್ದು ತನಿಖೆಯಿಂದ ಸಾಬೀತಾಗಿತ್ತು. ಅದನ್ನು ಆಧರಿಸಿ ಆರೋಪಿಯನ್ನು ಅಮಾನತು ಮಾಡಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.
ಹಣ ಕೊಟ್ಟ ಅಧಿಕಾರಿಗೂ ಸಂಕಷ್ಟ?: ಹೆಡ್ ಕಾನ್‌ಸ್ಟೇಬಲ್ ಯತೀಶ್‌ಗೆ ತನಿಖಾ ಹಂತದ ಮಾಹಿತಿ ಹಾಗೂ ಪ್ರಕರಣದಿಂದ ತನ್ನನ್ನು ಪಾರು ಮಾಡಲು ಲಕ್ಷಾಂತರ ರೂ. ಲಂಚ ನೀಡಿದ್ದ ಬಿಡಿಎ ಅಧಿಕಾರಿ ಮಂಗಳಾ ಎಂಬುವರಿಗೂ ಸಂಕಷ್ಟ ಎದುರಾಗಿದೆ. ಈಗಾಗಲೇ ಸಿಸಿಬಿಯ ಎಸಿಪಿಯೊಬ್ಬರಿಗೆ ಪ್ರಕರಣದ ತನಿಖಾ ವರದಿ ನೀಡಲು ಸೂಚಿಸಲಾಗಿದೆ. ಈ ವರದಿ ಆಧರಿಸಿ ಹಣ ಕೊಟ್ಟ ಮಹಿಳಾ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಅಗತ್ಯಬಿದ್ದರೆ ಲೋಕಾಯುಕ್ತ ಪೊಲೀಸರಿಗೂ ಮಾಹಿತಿ ನೀಡಲಾಗುತ್ತದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.