ಹುಣಸೂರು: ಹುಣಸೂರು ನಗರಠಾಣೆಯ ಮುಖ್ಯಪೇದೆ ಶ್ರೀನಿವಾಸ್(53) ಹೃದಯಾಘಾತದಿಂದ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರಿಗೆ ಪತ್ನಿ, ಒಬ್ಬರು ಮಕ್ಕಳಿದ್ದಾರೆ.
ಮೂಲತಃ ಮಂಡ್ಯ ಜಿಲ್ಲೆಯ ಪಾಂಡವಪುರ ಟೌನ್‌ನಿವಾಸಿಯಾಗಿರುವ ಶ್ರೀನಿವಾಸ್ ಕಳೆದ ಎಡರು ವರ್ಷಗಳ ಹಿಂದೆ ನಂಜನಗೂಡಿನಿಂದ ಹುಣಸೂರು ನಗರಕ್ಕೆ ವರ್ಗಾವಣೆಗೊಂಡಿದ್ದರು. ಶುಕ್ರವಾರ ಸಂಜೆ ಕರ್ತವ್ಯ ಮುಗಿಸಿ ಪೊಲೀಸ್ ವಸತಿ ಗೃಹಕ್ಕೆ ವಿಶ್ರಾಂತಿಗೆ ತೆರಳಿದ್ದರು, ರಾತ್ರಿ 11 ರ ವೇಳೆಯಲ್ಲಿ ತೀವ್ರ ಎದೆನೋವು ಕಾಣಿಸಿಕೊಂಡು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದರು, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ನಾರಾಯಣ ಹೃದಯಾಲಯಕ್ಕೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.
ಇದನ್ನೂ ಓದಿ: ಕಾಸರಗೋಡು: ಮಗುಚಿ ಬಿದ್ದ ಮೀನುಗಾರಿಕೆಗೆ ತೆರಳಿದ್ದ ದೋಣಿ; ಮೂವರು ಮೀನುಗಾರರು ನಾಪತ್ತೆ
ಇವರ ಪತ್ನಿ ಸರಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದು, ನಿತ್ಯ ನಂಜನಗೂಡಿನಿಂದ ಬೈಕ್ ಮೂಲಕ ಹುಣಸೂರಿಗಾಗಮಿಸುತ್ತಿದ್ದ ಶ್ರೀನಿವಾಸ್ ಲಾಕ್‌ಡೌನ್‌ನಿಂದಾಗಿ ನಿಗದಿತ ವೇಳೆಯಲ್ಲಿ ಕರ್ತವ್ಯಕ್ಕೆ ಹಾಜರಾಗಲು ಸಾದ್ಯವಾಗುವುದಿಲ್ಲವೆಂದು ಹೊಸದಾಗಿ ನಿರ್ಮಿಸಿರುವ ಪೊಲೀಸ್ ವಸತಿ ಗೃಹದಲ್ಲಿ ಸಹೋದ್ಯೋಗಿಗಳೊಂದಿಗೆ ವಾಸವಾಗಿದ್ದರು.
ಸ್ವಗ್ರಾಮ ಪಾಂಡವಪುರದಲ್ಲಿ ಡಿಎಆರ್ ಪೊಲೀಸರು ಗೌರವ ರಕ್ಷೆ ನೀಡಿದರು. ಡಿವೈಎಸ್‌ಪಿ ರವಿಪ್ರಸಾದ್, ವೃತ್ತ ನಿರೀಕ್ಷಕ ಸಿ.ವಿ.ರವಿ ಹಾಗೂ ಸಹೋದ್ಯೋಗಿಗಳು ಸಹ ಗೌರವ ಸಲ್ಲಿಸಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.