ಬೆಂಗಳೂರು: ಸಂಚಾರ ವಿಭಾಗದ ಹೆಡ್ ಕಾನ್‌ಸ್ಟೆಬಲ್, ಚಲಿಸುತ್ತಿದ್ದ ಟ್ರಕ್‌ನಲ್ಲಿಯೇ ಚಾಲಕನ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಲಸೂರು ಗೇಟ್ ಸಂಚಾರ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಮಹಾಸ್ವಾಮಿಯಿಂದ ಹಲ್ಲೆಗೊಳಗಾದ ಟ್ರಕ್ ಚಾಲಕ ರವಿ ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದು, ಪೊಲೀಸರ ಈ ಗೂಂಡಾವರ್ತನೆಯನ್ನು ಪ್ರಶ್ನಿಸಿದ್ದಾರೆ.
“ಪೊಲೀಸರ ಜತೆ ಅನುಚಿತವಾಗಿ ವರ್ತಿಸಿದರೆ ದಂಡ ಹಾಕುತ್ತೀರಾ, ಇದೀಗ ಪೊಲೀಸರೇ ನನ್ನ ಜತೆ ಅನುಚಿತವಾಗಿ ವರ್ತಿಸಿ ಹಲ್ಲೆ ನಡೆಸಿದ್ದಾರೆ. ಇದಕ್ಕೆ ಏನು ಹೇಳುತ್ತೀರಿ ಎಂದು ಪೊಲೀಸರ ನಡೆಯನ್ನು ಪ್ರಶ್ನಿಸಿದ್ದಾರೆ.
ವಿಡಿಯೋದಲ್ಲಿ ಏನಿದೆ?: ಪುರಭವನ ಸಿಗ್ನಲ್‌ನಲ್ಲಿ ಹೆಡ್ ಕಾನ್‌ಸ್ಟೆಬಲ್ ಮಹಾಸ್ವಾಮಿ ಹಾಗೂ ಮತ್ತೂಬ್ಬ ಕಾನ್‌ಸ್ಟೆಬಲ್ ಜತೆ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಅದೇ ಮಾರ್ಗವಾಗಿ ಟ್ರಕ್‌ನಲ್ಲಿ ರವಿ ಬಂದಿದ್ದ. ದಾಖಲೆಗಳು ಸರಿಯಿದ್ದ ಕಾರಣ ಚಾಲಕ ರವಿ ಹೊರಡುವುದಾಗಿ ಹೇಳುತ್ತಿದ್ದರು. ಇದಕ್ಕೆ ಸುತಾರಂ ಒಪ್ಪದ ಕಾನ್‌ಸ್ಟೆಬಲ್, ಟ್ರಕ್‌ನ ಮುಂದಿನ ಸೀಟಿನಲ್ಲಿ ಹತ್ತಿ ಕುಳಿತುಕೊಂಡು, ವಾಹನ ಸೈಡಿಗೆ ಹಾಕಿ ಚಾಲಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ.
ಕಾನ್‌ಸ್ಟೆಬಲ್ ಅನುಚಿತ ವರ್ತನೆ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಎಸಿಪಿಗೆ ಸೂಚನೆ ನೀಡಲಾಗಿದೆ. ವರದಿ ಬಂದ ಬಳಿಕ ಕ್ರಮದ ಬಗ್ಗೆ ನಿರ್ಧರಿಸಲಾಗುವುದು ಎಂದು ಸಂಚಾರ ಪೂರ್ವ ವಿಭಾಗದ ಡಿಸಿಪಿ ಕೆ.ವಿ.ಜಗದೀಶ್ ತಿಳಿಸಿದರು.