ಬೆಳಗಾವಿ: ಇಪ್ಪತ್ತು ವರ್ಷಗಳ ಹಿಂದೆ ಪಾಕಿಸ್ತಾನದ ವಿರುದ್ಧ ಸಿಡಿದೆದ್ದು ವೈರಿಗಳನ್ನು ಹಿಮ್ಮೆಟ್ಟಿಸಿ ಕಾರ್ಗಿಲ್ ಯುದ್ಧ ನೆಲ ಬಾಂಬ್ ಸ್ಫೋಟದಲ್ಲಿ ಕೈ, ಕಿವಿ ಹಾಗೂ ಕಣ್ಣಿನ ಸ್ವಾಧೀನ ಕಳೆದುಕೊಂಡು ಗಂಭೀರ ಗಾಯಗೊಂಡಿದ್ದ ಬೆಳಗಾವಿಯ ವೀರಯೋಧ ಮಲ್ಲಪ್ಪ ಮುನವಳ್ಳಿಯದು ಸಾವು ಗೆದ್ದು ಬಂದ ಕಥೆ ಇದು. ಬೈಲಹೊಂಗಲ ತಾಲೂಕಿನ ಹಣಬರಟ್ಟಿಯ ಸೈನಿಕ ಮಲ್ಲಪ್ಪ ಮುನವಳ್ಳಿ 20 ವರ್ಷಗಳಾದರೂ ಇನ್ನೂ ಆ ಸ್ಫೋಟದ ಭೀಕರತೆಯಿಂದ ಹೊರ ಬಂದಿಲ್ಲ. ಪ್ರಜ್ಞೆ ಕಳೆದುಕೊಂಡು ಕೋಮಾ ಸ್ಥಿತಿಯಲ್ಲಿದ್ದ ಮಲ್ಲಪ್ಪ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದರೂ ಸ್ವಂತ ಬಲದಿಂದ ನಡೆಯುವುದು ಅಸಾಧ್ಯದ ಮಾತಾಗಿದೆ. ಸೇನೆಯಿಂದ ಪ್ರತಿ ತಿಂಗಳು ಬರುವ ಪಿಂಚಣಿಯೇ ಇವರ ಕುಟುಂಬಕ್ಕೆ ಆಸರೆ. ಅವರೊಂದಿಗೆ ಪತ್ನಿ ಶಾಂತಾ, ಪುತ್ರಿಯರಾದ ಶಿಲ್ಪಾ, ಸುಷ್ಮಾ ಹಾಗೂ ಪುತ್ರ ಕಿರಣ ಇದ್ದಾರೆ.
ಭಾರತೀಯ ಭೂಸೇನೆಗೆ ಮಲ್ಲಪ್ಪ ಮುನವಳ್ಳಿ ತಮ್ಮ 17ನೇ ವಯಸ್ಸಿನಲ್ಲಿ 1984, ಜು.14ರಂದು ಸೇರ್ಪಡೆಯಾಗಿದ್ದರು. ಸುದೀರ್ಘ 15 ವರ್ಷಗಳ ಕಾಲ ದೇಶ ಕಾಯುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು. ಸೇನೆಯಲ್ಲಿ ಗನ್ನರ್ ಆಗಿದ್ದ ಇವರು ಕಾರ್ಗಿಲ್ ಯುದ್ಧ ನಡೆಯುತ್ತಿದ್ದಾಗ ಗನ್(ಬಂದೂಕು)ಗಳನ್ನು ಪೂರೈಸುತ್ತಿದ್ದರು. 1999, ಅ.26ರಂದು ಬಂದೂಕುಗಳನ್ನು ಇಟ್ಟು ಸೇನಾ ಜೀಪಿನಲ್ಲಿ ವಾಪಸ್ ಬರುತ್ತಿದ್ದಾಗ ಜಮ್ಮುವಿನ ಗಡಿಯಲ್ಲಿರುವ ತಂಗಧಾರ್‌ದಲ್ಲಿ ನೆಲ ಬಾಂಬ್ ಸ್ಫೋಟಗೊಂಡು ಜೀಪಿನಲ್ಲಿದ್ದ ಮಲ್ಲಪ್ಪ, ತಮಿಳುನಾಡು ಹಾಗೂ ಕೇರಳದ ಇನ್ನಿಬ್ಬರು ಸೈನಿಕರು ಗಂಭೀರ ಗಾಯಗೊಂಡಿದ್ದರು. ಬಾಂಬ್ ಸ್ಫೋಟಗೊಂಡು ಜೀಪ್ ಛಿದ್ರಗೊಂಡು ಪ್ರಪಾತಕ್ಕೆ ಬಿದ್ದಿತ್ತು. ಈ ಮೂವರು ಸೈನಿಕರಿಗೆ ಗಂಭೀರವಾಗಿ ಗಾಯವಾಗಿತ್ತು. ಮಲ್ಲಪ್ಪ ಅವರ ತಲೆಗೆ ಬಲವಾದ ಪೆಟ್ಟು ಬಿದ್ದು ನರ ದೌರ್ಬಲ್ಯದಿಂದ ಬಲಗೈ ಸಂಪೂರ್ಣ ಸ್ವಾಧೀನ ಕಳೆದುಕೊಂಡಿದೆ. ಒಂದು ಕಿವಿ ಕೇಳಿಸುವುದಿಲ್ಲ. ಇನ್ನೊಂದು ಕಣ್ಣು ಕಾಣಿಸುವುದಿಲ್ಲ. ಮಾತು ಕೂಡ ಅಷ್ಟಕ್ಕಷ್ಟೇ. ಪ್ರಕರಣದ ಬಳಿಕ ಹಿಂದಿನ ಎಲ್ಲ ಘಟನೆಗಳನ್ನೂ ಯೋಧ ಮಲ್ಲಪ್ಪ ಮರೆತಿದ್ದರು. ಆದರೆ ಈಗ ಕ್ರಮೇಣವಾಗಿ ಒಂದೊಂದನ್ನೇ ನೆನಪಿಸಿಕೊಂಡು ಶೌರ್ಯ, ಸಾಹಸ ಕುರಿತು ನಗುತ್ತ, ಉತ್ಸಾಹಭರಿತರಾಗಿ ಹೇಳುತ್ತಾರೆ.
ಗಾಯಗೊಂಡಾಗ ಮಲ್ಲಪ್ಪ ಅವರನ್ನು ಉಧಮಪುರ, ದಿಲ್ಲಿ ಹಾಗೂ ಪುಣೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದು ವರ್ಷ ಕಾಲ ಪ್ರಜ್ಞೆ ಇಲ್ಲದೇ ಕೋಮಾ ಸ್ಥಿತಿಯಲ್ಲಿದ್ದರು. ಹಂತ ಹಂತವಾಗಿ ಪ್ರಜ್ಞೆ ಬಂದರೂ ಇನ್ನೂವರೆಗೆ ಯೋಧ ಮಲ್ಲಪ್ಪ ಅವರಿಗೆ ಸ್ಪಷ್ಟವಾಗಿ ಮಾತನಾಡಲು ಸಾಧ್ಯವಾಗದು. ಘಟನೆ ಸಂಭವಿಸುವ 15 ದಿನ ಮುಂಚೆಯೇ ಮಲ್ಲಪ್ಪ ರಜೆ ಪಡೆದು ಊರಿಗೆ ಬರುವವರಿದ್ದರು. ಕಾರ್ಗಿಲ್ ಯುದ್ಧ ಘೋಷಣೆಯಾಗಿದ್ದರಿಂದ ಬರಲು ಸಾಧ್ಯವಾಗಲಿಲ್ಲ. ಆದರೆ ಟೆಲಿಗ್ರಾಮ್ ಮೂಲಕ ಬಾಂಬ್ ಸ್ಫೋಟದ ಸುದ್ದಿ ಬರುತ್ತಿದ್ದಂತೆ ಇಡೀ ಕುಟುಂಬ ಶಾಕ್‌ಗೆ ಒಳಗಾಗಿತ್ತು. ಯೋಧ ಮಲ್ಲಪ್ಪ ಅವರಿಗೆ ಬೆಳಗಾವಿಯ ಸುಭಾಷ ನಗರದಲ್ಲಿ ಸರ್ಕಾರ ಜಾಗ ನೀಡಿ ಮನೆ ಕಟ್ಟಿಸಿಕೊಟ್ಟಿದೆ. ಇಬ್ಬರು ಹೆಣ್ಣು ಮಕ್ಕಳು ಬಿ.ಎ. ಪದವಿ ಪೂರ್ಣಗೊಳಿಸಿದ್ದು, ಪುತ್ರ ಕಿರಣ ಪ್ರಥಮ ಪಿಯುಸಿ ಓದುತ್ತಿದ್ದಾನೆ. ಘಟನೆ ಸಂಭವಿಸಿ 20 ವರ್ಷಗಳು ಗತಿಸಿದ್ದು, ಇಬ್ಬರೂ ಹೆಣ್ಣು ಮಕ್ಕಳಿಗೆ ಸರ್ಕಾರ ನೌಕರಿ ಕೊಡಲಿ ಎಂಬುದೇ ಯೋಧನ ಆಸೆ.
ಗಡಿಯಲ್ಲಿ ದೇಶ ಕಾಯುತ್ತಿರುವಾಗ ಸ್ಫೋಟದಲ್ಲಿ ಗಾಯಗೊಂಡ ಪತಿಗೆ ಮೊದಲು ಮಾತೇ ಬರುತ್ತಿರಲಿಲ್ಲ. ನಾವು ಯಾರೆಂಬುದೇ ಅವರಿಗೆ ಗುರುತು ಹಿಡಿಯಲು ಸಾಧ್ಯವಾಗುತ್ತಿರಲಿಲ್ಲ. ಕೆಲ ವರ್ಷಗಳ ಕಾಲ ಮಾತೇ ಬರುತ್ತಿರಲಿಲ್ಲ. ಈಗ ಮನೆಯಲ್ಲಿ ದುಡಿಯುವ ಕೈಗಳಿಲ್ಲ. ಸರ್ಕಾರ ಮಕ್ಕಳಿಗೆ ನೌಕರಿ ಕೊಟ್ಟು ಯೋಧನ ಕುಟುಂಬಕ್ಕೆ ಆಸರೆಯಾಗಬೇಕು.
• ಶಾಂತಾ ಮುನವಳ್ಳಿ, ಯೋಧನ ಪತ್ನಿ
•ಭೈರೋಬಾ ಕಾಂಬಳೆ