Advertisement

ಶೀಲ ಶಂಕಿಸಿ ಕೊಲೆ ಮಾಡಿದ್ದಾತನಿಗೆ ಜೀವಾವಧಿ ಶಿಕ್ಷೆ

04:26 PM May 10, 2018 | |

ಹುಬ್ಬಳ್ಳಿ: ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿದ್ದ ವ್ಯಕ್ತಿಗೆ ಇಲ್ಲಿನ 5ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿ ಬುಧವಾರ ತೀರ್ಪು ಕೊಟ್ಟಿದೆ. ಇಲ್ಲಿನ ಹಳೇಹುಬ್ಬಳ್ಳಿ ಕಾರವಾರ ರಸ್ತೆ ಕೆಂಪಗೇರಿ ಗಣೇಶ ಗುಡಿ ಹಿಂಬದಿ ನಿವಾಸಿ, 37 ವರ್ಷದ ಹನಮಂತ ವಾಲ್ಮೀಕಿ ಎಂಬಾತನೇ ಶಿಕ್ಷೆಗೊಳಗಾದವ.

Advertisement

ಗೌಂಡಿ ಕೆಲಸ ಮಾಡಿಕೊಂಡಿದ್ದ ಹನಮಂತ ಪತ್ನಿ ಸರೋಜಾ ಊರ್ಫ್‌ ರೇಖಾ ನಡತೆಯ ಬಗ್ಗೆ ಸಂಶಯ ಪಡುತ್ತಿದ್ದ. ಅಲ್ಲದೆ ಈ ವಿಷಯವಾಗಿ ಪದೇ ಪದೇ ಜಗಳ ಮಾಡುವುದು, ಹಲ್ಲೆ ಮಾಡುವುದು ಮಾಡುತ್ತಿದ್ದ. 2015 ಮಾರ್ಚ್‌ 11ರಂದು ಕುಡಿದು ಬಂದು ಪತ್ನಿ ಸರೋಜಾರೊಂದಿಗೆ ಜಗಳ ಮಾಡಿ, ನಂತರ ತಲೆಗೆ ಬಡಿಗೆಯಿಂದ ಹೊಡೆದು ಸೀರೆಯಿಂದ ಕುತ್ತಿಗೆಗೆ ಬಿಗಿದು ಕೊಲೆಗೈದು ಪರಾರಿಯಾಗಿದ್ದ.

ಈ ಸಂದರ್ಭದಲ್ಲಿ ಇವರ ಕೊನೆಯ ಮಗಳು ರೂಪಾ ಸ್ಥಳದಲ್ಲೇ ಇದ್ದಳು. ಈ ಕುರಿತು ಮೃತಳ ಸಹೋದರ ಹಳೇಹುಬ್ಬಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ಹಳೇಹುಬ್ಬಳ್ಳಿ ಠಾಣೆ ಇನ್‌ಸ್ಪೆಕ್ಟರ್‌ ಡಾ| ಶಿವಾನಂದ ಚಲವಾದಿ, ಹನಮಂತನನ್ನು ಬಂಧಿಸಿ,
ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದರು. ಅಲ್ಲದೆ ಹನುಮಂತನ ವಿರುದ್ಧ ನ್ಯಾಯಾಲಯದಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ 5ನೇ ಅಪರ ಜಿಲ್ಲಾ, ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕಿರಣ ಎಸ್‌. ಗಂಗಣ್ಣವರ ಅವರು, ಹನಮಂತ ಪತ್ನಿ ಸರೋಜಾಳನ್ನು ಕೊಲೆ ಮಾಡಿರುವುದು ಸಾಬೀತಾಗಿದೆ, ಈ ಪ್ರಕರಣದಲ್ಲಿ ಆತ ತಪ್ಪಿತಸ್ಥನಾಗಿದ್ದಾನೆಂದು ಪರಿಗಣಿಸಿ ಜೀವಾವಧಿ ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿ ತೀರ್ಪು ಕೊಟ್ಟಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಡಿ.ಎ.
ಭಾಂಡೇಕರ ವಾದ ಮಂಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next