Advertisement

ಈ ಕಥೆಗಳ ಹಂದರದಲ್ಲಿ ಜೀವಗಳೇ ಇಲ್ಲ !

10:12 AM Apr 26, 2019 | mahesh |

ಈಸ್ಟರ್‌ ದಿನದಂದು ಶ್ರೀಲಂಕಾದ ಚರ್ಚ್‌ಗಳು ಹಾಗೂ ಪ್ರವಾಸಿ ತಾಣಗಳ ಮೇಲೆ ನಡೆದ ಉಗ್ರರ ದಾಳಿ ಇಡೀ ಜಗತ್ತು ಖಂಡಿಸುವಂಥದ್ದು. 45 ಕ್ಕೂ ಹೆಚ್ಚು ಮಕ್ಕಳನ್ನು ಒಳಗೊಂಡಂತೆ 321ಕ್ಕೂ ಹೆಚ್ಚು ಮಂದಿ ಬಾಂಬ್‌ಸ್ಫೋಟಕ್ಕೆ ಬಲಿಯಾದರು. ಬದುಕು ಕಟ್ಟುವುದು ಎಷ್ಟು ಕಷ್ಟದ ಪ್ರಕ್ರಿಯೆ ಎನ್ನುವುದನ್ನು ಬದುಕನ್ನು ನಾಶ ಮಾಡುವವರು ಅರ್ಥ ಮಾಡಿಕೊಳ್ಳಬೇಕು. ಈ ನೆಲೆಯಲ್ಲೇ ಸಾವಿನ ದುಃಖದ ನೆರೆ ಆವರಿಸಿದ ಒಬ್ಬೊಬ್ಬರ ಮನೆಯದ್ದೂ ಒಂದೊಂದು ಕಥೆ. ಕೆಲವರು ಕೂದಲಂಚಿನಲ್ಲಿ ಸಾವನ್ನು ತಪ್ಪಿಸಿಕೊಂಡವರ ಕಥೆಯೂ ಇಲ್ಲಿದೆ. ಬದುಕು ಮತ್ತು ಜೀವದ ಮಹತ್ವ ತಿಳಿಸಲೆಂದೇ ಇಲ್ಲಿ ಕಟ್ಟಿ ಕೊಡಲಾಗಿದೆ.

Advertisement

ವಿಧಿ ಲಿಖಿತವೇ ಅಂತಿಮ ?
ಡಿಯೇಟರ್‌ ಕೋವಾಲಸ್ಕಿ (40) ಎಂಬ ಅಮೆರಿಕದ ಎಂಜಿ ನಿಯರ್‌ ಉದ್ಯೋಗದ ನಿಮಿತ್ತ ಶ್ರೀಲಂಕಾಕ್ಕೆ ಆಗಮಿಸಿದ್ದರು. ಇದು ಅವರ 3 ವರ್ಷದಲ್ಲಿ 2ನೇ ಭೇಟಿ. ದುರದೃಷ್ಟವಶಾತ್‌ ಅವರು ಬರುವ ವಿಮಾನ ತಾಸಿನ ಬಳಿಕ ಲಂಕಾ ತಲುಪಿತ್ತು. ಬಳಿಕ ಹತ್ತಿರದಲ್ಲೇ ಇದ್ದ ಹೊಟೇಲ್‌ ಒಂದರಲ್ಲಿ ರೂಂ ಮಾಡಿ ಸ್ನಾನಾದಿಗಳನ್ನು ಪೂರೈಸಿದ ಕೆಲವೇ ಗಂಟೆಗಳಲ್ಲಿ ಬಾಂಬ್‌ ಸ್ಫೋಟಕ್ಕೆ ಕೊನೆಯುಸಿರು ಎಳೆದರು. ಬಹುಶಃ ವಿಮಾನ ತಡವಾಗದಿದ್ದರೆ ಬದುಕುಳಿಯುತ್ತಿದ್ದರೇನೋ ಎಂಬ ಮಾತು ಕೇಳಿಬಂದರೂ, ವಿಧಿ ಲಿಖೀತವೇ ಅಂತಿಮ ಎಂಬಂತಾಗಿತ್ತು.

ಆಟೋ ಚಾಲಕನ ಕುಟುಂಬವೇ ಛಿದ್ರ
ನಗರದ ರಿಕ್ಷಾ ಚಾಲಕ ಕೆ. ಪಿರಾತಾಪ್‌ ತನ್ನ ಹೆಂಡತಿ ಮತ್ತು ಎರಡು ಪುತ್ರಿಯರ ಜತೆ ಚರ್ಚ್‌ಗೆ ಬಂದಿದ್ದರು. ಈ ವೇಳೆ “ಚರ್ಚ್‌ಗೆ ತೆರಳುತ್ತಿದ್ದೇವೆ ನೀನೂ ಬಾ ಎಂದು’ ತನ್ನ ಸಹೋದರ ವಿಮಲೇಂದ್ರನ್‌ ಜತೆ ಪಿರಾತಾಪ್‌ ಹೇಳಿದ್ದರು. ಆದರೆ ವಿಮಲೇಂದ್ರನ್‌ ಅನಿವಾರ್ಯ ಕಾರಣದಿಂದ ಅಂದು ತೆರಳಿರಲಿಲ್ಲ. ಬಾಂಬ್‌ ಸ್ಫೋಟವಾದ‌ ವಿಷಯ ಬೆಳಗ್ಗೆ ಬಹಿರಂಗ ಗೊಳ್ಳುತ್ತಿದ್ದಂತೆ ಪಿರಾತಾಪ್‌ ಅವರ ಮೊಬೈಲ್‌ಗೆ ಕರೆ ಮಾಡಿದರೂ ಸಂಪರ್ಕಗೊಳ್ಳುತ್ತಿರಲಿಲ್ಲ. ಸೈಂಟ್‌ ಅಂಥೋಣಿ ಚರ್ಚ್‌ನಲ್ಲಿದ್ದ 40 ಮೃತ ಶರೀರದಲ್ಲಿ ಪಿರಾತಾಪ್‌ ಕುಟುಂಬವೂ ಸೇರಿತ್ತು.ಯಾರೂ ಉಳಿಯಲಿಲ್ಲ.

ಹನಿಮೂನ್‌ ಖುಷಿಯ ಜೋಡಿ
ಪೋರ್ಚುಗೀಸ್‌ನ ಎಲೆಕ್ಟ್ರಿಕಲ್‌ ಎಂಜಿನಿಯರ್‌ ರೂಯಿ ಲುಕಸ್‌ ತಮ್ಮದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಅಗಸ್ಟಾ ಟೆಕ್ಸಿರಾಳನ್ನು ಪ್ರೀತಿಸುತ್ತಿದ್ದ. ಬಳಿಕ ಇವರ ಪ್ರೇಮ ಮದುವೆಯ ಸಂಭ್ರಮವನ್ನೂ ಕಂಡು, ಖುಷಿಯ ಜೀವನಕ್ಕೆ ಮುನ್ನುಡಿ ಬರೆದಿದ್ದರು. ವಿವಾಹವಾಗಿ ವಾರಗಳಷ್ಟೇ ಕಳೆದ ನವ ಜೋಡಿ ಹನಿಮೂನ್‌ ಸಂಭ್ರಮದಲ್ಲಿತ್ತು. ಶ್ರೀಲಂಕಾದಲ್ಲಿ ಮಧುಚಂದ್ರ ವನ್ನು ಆಸ್ವಾದಿಸಬೇಕು ಎಂದು “ದ ಕಿಂಗ್ಸ್‌ ಬರಿ ಹೊಟೇಲ್‌’ಗೆ ಆಗಷ್ಟೇ ಬಂದಿದ್ದರು. ಆದರೆ ಒಂದಿರುಳು ಸಹ ಕಳೆಯಲಾಗಲಿಲ್ಲ. ಅಷ್ಟರಲ್ಲೇ ಜೋಡಿ ಬಾಂಬ್‌ ಸ್ಫೋಟದಲ್ಲಿ ಚೂರು ಚೂರಾಗಿತ್ತು.

ಕಣ್ಣೆದುರೇ ಹೆತ್ತವ್ವ ಇಲ್ಲವಾದಳು
ನೆದರ್‌ಲ್ಯಾಂಡ್‌ನ‌ ಮೋನಿಕ್‌ ಅಲೆನ್‌ ಕುಟುಂಬ “ದ ಸಿನೆಮೊನ್‌ ಗ್ರ್ಯಾಂಡ್‌ ಹೊಟೇಲ್‌’ನಲ್ಲಿ ವಾಸ್ತವ್ಯ ಹೂಡಿತ್ತು. ಮೊನಿಕ್‌ ಅಲೆನ್‌ ತಮ್ಮ 2 ಮಕ್ಕಳೊಂದಿಗೆ ಕೊಠಡಿ ಬಿಟ್ಟು ಹೊರಗೆ ಹೋಗಿದ್ದರು. ತಾಯಿ ಮತ್ತು ಒಬ್ಬ ಮಗ ಮಾತ್ರ ಕೊಠಡಿಯಲ್ಲಿ ಚಾಟ್ಸ್‌ ತಿನ್ನುತ್ತಿದ್ದರು. ಈ ಸಮಯ ಆತ್ಮಾಹುತಿ ದಾಳಿಕೋರನ ಕೃತ್ಯದಲ್ಲಿ ತಾಯಿ ಬಲಿಯಾದರು. ಜತೆಗಿದ್ದ ಮಗ ಸಣ್ಣ ಪುಟ್ಟ ಗಾಯದೊಂದಿಗೆ ಪಾರಾಗಿದ್ದಾನೆ. ಹೊರ ಹೊಗಿದ್ದ ಪತಿ ಮತ್ತು ಇಬ್ಬರು ಪುತ್ರರು ಬರುವಷ್ಟರಲ್ಲಿ ಪತ್ನಿ ಕೊನೆಯುಸಿರು ಎಳೆದಿದ್ದನ್ನು ನಂಬಲಾಗುತ್ತಿಲ್ಲ.

Advertisement

ಎರಡು ಜೀವ ಉಳಿಸಿದ ಮೀನಿನ ಕೊಳ
ಒಂದು ಬಗೆಯಲ್ಲಿ ದುಃಖದ ಕಥೆಯೇ. ಆದರೆ ಪಾಸಿಟಿವ್‌ ಎಳೆ ಇದೆ. ಕೊಲಂಬೋದ ಮೂಲವಾಸಿಯಾದ ಮೇರಿ ಒಟ್ರಿಕಾ ಜಾನ್ಸನ್‌ ಮತ್ತು ಅವರ ಕುಟುಂಬ ಚರ್ಚ್‌ನ ಪ್ರಾರ್ಥನೆಯಲ್ಲಿ ನಿರತವಾಗಿತ್ತು. ಮಗ ಚರ್ಚ್‌ನ ಹೊರಗೆ ಇರುವ ಪುಟ್ಟ ಕೊಳದಲ್ಲಿ ಮೀನುಗಳನ್ನು ನೋಡಬೇಕೆಂದು ಹಠ ಹಿಡಿದ. ಕೊನೆಗೂ ಪತ್ನಿ ಸಿಲ್ವಿಯಾಗೆ ಮಗನನ್ನು ಕರೆದೊಯ್ಯುವಂತೆ ಜಾನ್ಸನ್‌ ಸೂಚಿಸಿದರು. ಅವರು ಚರ್ಚ್‌ನಿಂದ ಹೊರ ಬಂದದ್ದಷ್ಟೇ. ಆಗಲೇ ಶಾಂತವಾಗಿದ್ದ ಚರ್ಚ್‌ ಒಳಗೆೆ ಭಾರೀ ಸದ್ದು ಕೇಳಿಸಿತು. ಅಷ್ಟರಲ್ಲಿ ಹಲವು ಶರೀರಗಳು ಸ್ಫೋಟದ ತೀವ್ರತೆಗೆ ಚೂರು ಚೂರಾಗಿ ಚರ್ಚ್‌ನ ಹೊರಗೆ ಬಿದ್ದವು. ಅಮ್ಮ ಮತ್ತು ಮಗನಿಗೆ ಗಾಬರಿ, ಆತಂಕ. ಆ ಕ್ಷಣ ಅಲ್ಲಿ ನಿಲ್ಲಲೇ ಇಲ್ಲ. ಮಗನ ಕಣ್ಣು ಮುಚ್ಚಿ ತಾಯಿ ಅವುಚಿಕೊಂಡಳು. ಬಳಿಕ ಜನ ಸೇರುತ್ತಿದ್ದಂತೆ ಪ್ರಾರ್ಥನೆಯಲ್ಲಿದ್ದ ಪತಿ ಜಾನ್ಸನ್‌ ಅವರನ್ನು ಸಿಲ್ವಿಯಾ ಹುಡುಕಾಡಿದರು. ಬಹುತೇಕ ಮಂದಿ ಚರ್ಚ್‌ನ ಒಳಗಿನಿಂದ ಹೊರಬಂದರೆ, ಜಾನ್ಸನ್‌ ಮಾತ್ರ ಕಾಣಲೇ ಇಲ್ಲ. ಚರ್ಚ್‌ನೊಳಗೆ ಓಡಿ ಹೋಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಜಾನ್ಸನ್‌ ಅವರನ್ನು ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಪ್ರಾಣ ಪಕ್ಷಿ ಹಾರಿ ಹೋಗಿತ್ತು.

ಕಣ್ಣೆದುರೇ ಮರೆಯಾದ ಮಡದಿ, ಮಕ್ಕಳು
ಇಂಗ್ಲೆಂಡಿನ ಬೆನ್‌ ನಿಕೊಲೋಸ್‌ “ದ ಶಾಂಗ್ರೀಲಾ ಹೊಟೇಲ್‌’ನಲ್ಲಿ ತನ್ನ ಹೆಂಡತಿ ಮತ್ತು ಇಬ್ಬರು
ಪುತ್ರಿಯರ ಜತೆ ಬೆಳಗಿನ ಉಪಾಹಾರವನ್ನು ಪೂರೈಸುತ್ತಿದ್ದರು. ಈ ವೇಳೆ ಉಗ್ರರ ಕೃತ್ಯಕ್ಕೆ ಹೆಂಡತಿ ಮತ್ತು ಇಬ್ಬರು ಪುತ್ರಿಯರು ಬಲಿಯಾಗಿದ್ದಾರೆ. ಮೃತ ಪತ್ನಿ ಅನಿತಾ ನಿಕೋಲಸ್‌ (42) ಅವರು ಇಂಗ್ಲೆಂಡಿನಲ್ಲಿ ವಕೀಲರಾಗಿದ್ದರು. 1998ರಿಂದ 2010ರ ವರೆಗೆ ಅವರು ಬ್ರಿಟಿಷ್‌ ಸರಕಾರದಲ್ಲಿ ಕಾನೂನು ತಜ್ಞರಾಗಿದ್ದವರು. ಬಳಿಕ ಸಿಂಗಾಪುರದಲ್ಲಿ ಕಾರ್ಯ ನಿರ್ವಹಿಸುತ್ತಿದರು. ಶ್ರೀಲಂಕಾದಲ್ಲಿ ಆನಂದಿಸಲು ಬಂದ ಕುಟುಂಬವನ್ನು ವಿಧಿ ತನ್ನತ್ತ ಕರೆದೊಯ್ದಿದೆ. ತನ್ನ ಕುಟುಂಬವೇ ಕಣ್ಣೆದುರು ಮರೆಯಾದ ಕುರಿತು ಶೋಕ ವ್ಯಕ್ತಪಡಿಸಿದ ನಿಕೋಲಸ್‌, ಅವರು ಯಾವುದೇ ನರಕ ಯಾತನೆ ಪಡದೆ ಮೃತಪಟ್ಟಿದ್ದು ಒಂದೇ ಸಾವಿನಲ್ಲೂ ಸಮಧಾನಿಸಿದೆ ಎನ್ನುವಾಗ ಬಿಕ್ಕಿ ಬಿಕ್ಕಿ ಅತ್ತರು. ಲಂಕಾ ನನ್ನಿಂದ ಕಿತ್ತುಕೊಂಡ ಜಗತ್ತಾಗಿದೆ ಎಂದಿದ್ದಾರೆ.

ಗಂಡನನ್ನು ಹುಡುಕಾಡಿದ ಪತ್ನಿ
ರೆಸ್ಟೋರೆಂಟ್‌ನ ಉದ್ಯೋಗಿ ರವೀಂದ್ರನ್‌ ಫೆರ್ನಾಂಡೋ ಕುಟುಂಬದ ಜತೆ ಪ್ರತಿವಾರ ಮಾಸ್‌ಗೆ ಬರುತ್ತಿದ್ದರು. ಹೆಂಡತಿ ಡೆಲಿಕಾ ಮತ್ತು ಇಬ್ಬರು ಮಕ್ಕಳು ಚರ್ಚ್‌ ಹಾಲ್‌ನ ಮುಂಭಾಗ ನಿಂತಿದ್ದರು. ತಂದೆ ಮತ್ತು ಮಗ ಹಿಂದಿನ ಬಾಗಿಲ ಹತ್ತಿರ ಪ್ರಾರ್ಥನೆಯಲ್ಲಿದ್ದರು. ಈ ವೇಳೆ ಸ್ಫೋಟಕ್ಕೆ ಚರ್ಚ್‌ನ ಮೇಲ್ಛಾ ವಣಿ ಕುಸಿದು ರವೀಂದ್ರನ್‌ ಗಂಭೀರ ಗಾಯಗೊಂಡರು. ಮಗ ಪಾರಾದ. ಡೆಲಿಕಾ ತನ್ನ ಮಗಳನ್ನು ಕರೆದುಕೊಂಡು ಚರ್ಚ್‌ ನಿಂದ ಹೊರ ಬಂದು ಪತಿ, ಮಗನಿಗಾಗಿ ಹುಡುಕಾಡಿದರು. ಆದರೆ ರವೀಂದ್ರನ್‌ ದೇಹ ಧೂಳಿನಲ್ಲಿ ಮುಚ್ಚಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನವಾಗಲಿಲ್ಲ.

ಆಯ್ಕೆಗಿದ್ದದ್ದೇ ಆ ಮೂರು !
ಸೌದಿಯ ಯುನೈಟೆಡ್‌ ಏರ್‌ಲೈನ್ಸ್‌ನ ಇಬ್ಬರು ಸಿಬಂದಿಗೆ ಕೆಲಸದ ನಿಮಿತ್ತ ಕೊಲಂಬೋದ 3 ಹೊಟೇಲ್‌ಗ‌ಳನ್ನು ಒದಗಿಸಲಾಗಿತ್ತು. ಅವರಿಗೆ ಬೇಕಾದ ಹೊಟೇಲ್‌ ಅನ್ನು ಆಯ್ಕೆ ಮಾಡುವ ಅವಕಾಶವಿತ್ತು. ಯಾಕೋ, ವಿಧಿಯ ಲೆಕ್ಕಾಚಾರವೋ ಏನೋ? ಮೊಹಮ್ಮದ್‌ ಜಾಫ‌ರ್‌ ಮತ್ತು ಹನಿ ಉಸ್ಮಾನ್‌ ಎಂಬ ಹೊಸ ಉದ್ಯೋಗಿಗಳು ಆಯ್ಕೆ ಮಾಡಿಕೊಂಡಿದ್ದು “ದ ಸಿನೆಮೊನ್‌ ಗ್ರ್ಯಾಂಡ್‌ ಹೊಟೇಲ್‌’. ಇಲ್ಲೂ ಸ್ಫೋಟ ಸಂಭವಿಸಿ ಇಬ್ಬರೂ ಮೃತರಾದರು. ದುರಾದೃಷ್ಟವೆಂದರೆ ಅವರಿಗೆ ಆಯ್ಕೆಗಿದ್ದ ಮೂರು ಹೊಟೇಲ್‌ಗ‌ಳೂ ಬಾಂಬ್‌ ದಾಳಿಗೆ ಗುರಿಯಾಗಿವೆ.

ಫೇಸ್‌ಬುಕ್‌ಗೆ ಸೀಮಿತವಾದ ಹಬ್ಬದೂಟ
ಶ್ರೀಲಂಕಾದ ಶಾಂತಾ ಮಾಯಾಡುನ್ನೆ ಎಂಬ ಅಡುಗೆ ಮಾರ್ಗದರ್ಶಿ ಟಿವಿ ಚಾನೆಲ್‌ಗ‌ಳಲ್ಲಿ ಕ್ಷಿಪ್ರವಾಗಿ ಆಹಾರ ತಯಾರಿಸುವ ಕುರಿತು ಮಾಹಿತಿ ಹಂಚುವವರಾಗಿದ್ದರು. ಇವರು ಶಾಂಗ್ರೀಲಾ ಹೊಟೇಲ್‌ನಲ್ಲಿ ಪ್ರವಾಸಿ ಕುಟುಂಬಗಳಿಗೆ ಅಡುಗೆ ತರಬೇತಿ ನೀಡುತ್ತಿದ್ದರು. ಅವರ ಪುತ್ರಿ ನಿಸಂಗಾ ಮಾಯಾಡುನ್ನೆ ಸಹ ಇದ್ದರು. ಕುಟುಂಬಗಳ ಜತೆ ಆಹಾರ ತಯಾರಿಸಿ, ಆಗ ತಾನೆ ಊಟಕ್ಕೆ ಕುಳಿತಿದ್ದರು. ಈ ಸಂದರ್ಭದ ಚಿತ್ರವನ್ನು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ “ಈಸ್ಟರ್‌ ಬ್ರೇಕ್‌ ಫಾಸ್ಟ್‌ ವಿತ್‌ ಫ್ಯಾಮಿಲಿ’ ಎಂದು ನಿಸಂಗಾ ಹಂಚಿಕೊಂಡರೂ ಸಹ. ಆದರೆ ಚಿತ್ರ ಅಪ್‌ಲೋಡ್‌ ಆಗುತ್ತಿದ್ದಂತೆ ಬಾಂಬ್‌ ಸ್ಫೋಟ ಸಂಭವಿಸಿತು. ತಟ್ಟೆಯ ಊಟ ಹೊಟ್ಟೆಗೆ ಸೇರುವ ಮೊದಲೇ ತಟ್ಟೆಗಳು ರಕ್ತದಲ್ಲಿ ತುಂಬಿದ್ದವು. ಆ ಫೋಟೋವಷ್ಟೇ ಅವರಿದ್ದದ್ದಕ್ಕೆ ಸಾಕ್ಷಿಯಾಗಿತ್ತು.

ಉದಯವಾಣಿ ಸ್ಪೆಷಲ್‌ ಡೆಸ್ಕ್

Advertisement

Udayavani is now on Telegram. Click here to join our channel and stay updated with the latest news.

Next