ನನಗೆ ಮೂರು ಮಂದಿ ಮಕ್ಕಳು. ಮೂರನೆಯವನು ಚಕ್ಕರ್ ಪಾರ್ಟಿ. ಹೊಟ್ಟೆನೋವು, ತಲೆನೋವು ಎಂದೆಲ್ಲಾ ಹಲವು ಬಗೆಯ ಕುಂಟು ನೆಪ ಹೇಳಿ ಸದಾ ಚಕ್ಕರ್ ಹೊಡೆಯುತ್ತಿದ್ದ. ಅವನ ಆಟ ನನ್ನ ಬಳಿ ನಡೆಯುತ್ತಿರಲಿಲ್ಲ. ಕೊನೆಗೆ ತನ್ನ ಆಟ ಅಮ್ಮನ ಬಳಿ ನಡೆಯುವುದಿಲ್ಲ ಎಂದು ಅವನಿಗೆ ಅರಿವಾಯಿತು. ಆದರೆ, ಅವನು ಕೂಡ ಸೋಲುವ ಪಾರ್ಟಿ ಅಲ್ಲ. “ಅಮ್ಮ ನಾನು ಬೇಗ ಶಾಲೆಗೆ ಹೋಗಬೇಕು. ನೀನು ತಿಂಡಿ ಮಾಡುವ ತನಕ ಕಾಯಲು ಸಾಧ್ಯವಿಲ್ಲ. ನನಗೆ ರಾತ್ರಿ ಅನ್ನ- ಸಾರು ಹಾಕಿ ಬಿಡು. ಅದನ್ನೇ ತಿಂದು ಶಾಲೆಗೆ ಹೊರಡುತ್ತೇನೆ. ಮನೆಯಲ್ಲಿ ಅಣ್ಣಂದಿರು ಗಲಾಟೆ ಮಾಡುತ್ತಾರೆ. ನಾನು ಶಾಲೆ ಶುರುವಾಗುವ ತನಕ ಅಲ್ಲೇ ಕುಳಿತು ಓದಿಕೊಳುತ್ತೇನೆ’ ಎಂದು ತಿಂಡಿಗೆ ಕಾಯದೆ ಅನ್ನ ಸಾರು ತಿಂದು ಹೆಗಲಿಗೆ ಬ್ಯಾಗು ನೇತುಹಾಕಿಕೊಂಡು ಓಡುತ್ತಿದ್ದ.
ಆಗಿನ್ನೂ ಅವನು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ. ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಉಳಿದಿಬ್ಬರು ಮಕ್ಕಳಿಗೂ ಅವನ ಉದಾಹರಣೆ ನೀಡಿ ಬಯ್ತಿದ್ದೆ. ನಿಮಗಿಂತ ಚಿಕ್ಕವನು. ಆದ್ರೆ, ಅವನಿಗೆ ಎಷ್ಟು ಜವಾಬ್ದಾರಿ ಇದೆ… ಅವನನ್ನು ನೋಡಿ ಕಲಿತುಕೊಳ್ಳಿ ಎನ್ನುತ್ತಿದ್ದೆ. ಹೀಗೆ ಸುಮಾರು ದಿನಗಳವರೆಗೆ ನಡೆದಿತ್ತು.
ನಮ್ಮ ಎದುರು ಮನೆಯ ಹಿರಿಯರೊಬ್ಬರು ಕೆಇಬಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ಮನೆಯಿಂದ ಸ್ವಲ್ಪ ದೂರದಲ್ಲೇ ಕೆಇಬಿ ಕಚೇರಿ ಇತ್ತು. ಒಂದು ದಿನ ಆ ಹಿರಿಯರು ನಮ್ಮ ಮನೆಯ ಹತ್ತಿರ ಬಂದು, “ಮಕ್ಕಳು ಓದಲಿ ಎಂದು ಎಷ್ಟು ಕಷ್ಟಪಡುತ್ತೀಯಾ ನೀನು. ನಿನ್ನ ಮಗ ಮಠಕ್ಕೆ ಮಣ್ಣು ಹಾಕುತ್ತಿದ್ದಾನೆ ನೋಡು ಬಾ ಇಲ್ಲಿ’ ಎಂದು ಕರೆದರು. ನಾನು ಅಲ್ಲಿಗೆ ಹೋಗಿ ನೋಡಿದರೆ, ಜೋಡಿಸಿದ ಕೆಇಬಿ ಕಂಬಗಳ ಮೇಲೆ ಪುಸ್ತಕದ ಚೀಲವನ್ನು ತಲೆಯ ಕೆಳಗೆ ಹಾಕಿಕೊಂಡು ಸುಖವಾಗಿ ಮಲಗಿದ್ದ. ಆ ಕ್ಷಣದಲ್ಲಿ ನನಗೆ ಹೇಗಾಗಿರಬೇಡ? ಅನೇಕ ಬಾರಿ ಅವನು ಹೀಗೆ ಮಾಡುತ್ತಿದ್ದ ಎಂದು ಆ ಹಿರಿಯರಿಂದ ತಿಳಿಯಿತು. ಅಂದಿನಿಂದ ಅವನಿಗೆ ಸ್ವಲ್ಪ ತಿಳಿವಳಿಕೆ ಹೇಳಿ, ದಿನವೂ ನಾನೇ ಶಾಲೆಗೆ ಬಿಟ್ಟು ಬರಲು ಶುರು ಮಾಡಿದೆ. ಇವನ ಮೇಲೆ ಸ್ವಲ್ಪ ಗಮನ ಇಡುವಂತೆ ಶಿಕ್ಷಕರಲ್ಲಿಯೂ ಕೇಳಿಕೊಂಡಿದ್ದೆ. ಇದೆಲ್ಲದರ ಫಲವಾಗಿ ಮುಂದೆ ಅವನು ಕಷ್ಟ ಪಟ್ಟು ಓದಿ ಈಗ ವಿದೇಶದಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದಾನೆ.
ರತ್ನ ಅರಕಲಗೂಡು