Advertisement

ಡೇರಾ ಸಚ್ಚಾ ಲೋಕದಲ್ಲಿ ಅವನಿಚ್ಛೆಯದ್ದೇ ಕರೆನ್ಸಿ!

07:35 AM Aug 28, 2017 | Team Udayavani |

ಚಂಡೀಗಢ: ಅತ್ಯಾಚಾರ ಆರೋಪದಲ್ಲಿ ಜೈಲು ಸೇರಿರುವ ಹರ್ಯಾಣದ ಡೇರಾ ಸಚ್ಚಾ ಸೌದಾದ ಮುಖ್ಯಸ್ಥ, ಸ್ವಘೋಷಿತ ದೇವಮಾನವ ರಾಂ ರಹೀಂ ಗುರ್ಮೀತ್‌ ಸಿಂಗ್‌ ಆಶ್ರಮದಲ್ಲಿ ನಾವು ಬಳಕೆ ಮಾಡುವ ನೋಟುಗಳು ನಡೆಯುವುದೇ ಇಲ್ಲ!
ಇದು ಅಚ್ಚರಿಯಾದರೂ ಸತ್ಯ. ಅಲ್ಲಿ ಪ್ರತ್ಯೇಕವಾಗಿಯೇ, ಆಶ್ರಮದೊಳಗೆ ವ್ಯವಹರಿಸಲಿಕ್ಕಾಗಿಯೇ ತಮ್ಮದೇ ಆದ ಪ್ಲಾಸ್ಟಿಕ್‌ ನಾಣ್ಯಗಳನ್ನು ಸಿದ್ಧಪಡಿಸಿ, ನೀಡಲಾಗುತ್ತದೆ. 

Advertisement

ಇದರಲ್ಲಿ “ಧನ್‌ ಧನ್‌ ಸದ್ಗುರು ತೇರಾ ಹೈ ಅಸಾರಾ, ಡೇರಾ ಸಚ್ಚಾ ಸೌದಾ ಸಿರ್ಸಾ’ ಎಂದು ಮುದ್ರಿಸಲಾಗಿರುತ್ತದೆ. ಡೇರಾ ಆಶ್ರಮದೊಳಗೆ ಸ್ಥಾಪಿತವಾಗಿರುವ ಎಲ್ಲ ಅಂಗಡಿಗಳ ಹೆಸರಿನ ಮುಂದೆಯೂ “ಸಚ್‌'(ಸತ್ಯ) ಎಂಬ ಪದವನ್ನು ಸೇರಿಸಲಾಗಿರುತ್ತದೆ,. ಆ ಅಂಗಡಿಗಳಲ್ಲಿ ಖರೀದಿಗೆ ಇದೇ ಹಣವನ್ನು ಬಳಕೆ ಮಾಡಬೇಕು. ಅಂದರೆ ನಿಮ್ಮಲ್ಲಿ ಚಿಲ್ಲರೆ ಇದ್ದು, ಐದು ಅಥವಾ ಹತ್ತು ರೂ.ಗಳನ್ನು ಕೊಟ್ಟರೆ ಅಲ್ಲಿನ ಗೇಟ್‌ ಕೀಪರ್‌ ಅದಕ್ಕೆ ಸಮಾನವಾದ ಪ್ಲಾಸ್ಟಿಕ್‌ನಿಂದ ಮಾಡಿದ ಅಲ್ಲಿಯ ನಾಣ್ಯಗಳನ್ನು ನೀಡುತ್ತಾನೆ. ಒಂದು ವೇಳೆ ನಿಮ್ಮಲ್ಲಿ ಚೇಂಜ್‌ ಇಲ್ಲವೆಂದರೆ 100 ರೂ. ಕೊಟ್ಟು 70 ರೂ. ಮೌಲ್ಯದ ವಸ್ತು ಖರೀದಿಸಿದರೆ, ಉಳಿದ 30 ರೂ. ಮೌಲ್ಯಕ್ಕೆ ಅಲ್ಲಿಯ ನಾಣ್ಯ ಕೊಡುತ್ತಾನೆ.

ಒಮ್ಮೊಮ್ಮೆ ಈ ನಾಣ್ಯದ ಬದಲಿಗೆ 5 ರೂ., 10ರೂ.ಗಳ ಕೂಪನ್‌ ನೀಡಲಾಗುತ್ತದೆ. ನೀವು ಅದನ್ನು ಡೇರಾಕ್ಕೆ ಸೇರಿದ 1000 ಎಕರೆಯಲ್ಲಿರುವ ಸಿನಿಮಾ ಮಂದಿರ, ಶಾಲೆ, ಕ್ರೀಡಾ ಗ್ರಾಮ, ಆಸ್ಪತ್ರೆಯಲ್ಲಿ ಬಳಕೆ ಮಾಡಬಹುದಾಗಿದೆ. ಇದೀಗ ಆಶ್ರಮವನ್ನು ಅರೆಸೇನಾ ಪಡೆಯು ಸುತ್ತುವರಿದಿರುವ ಕಾರಣ, ಜನರಿಗೆ ಅಲ್ಲಿಗೆ ಹೋಗಿ ತಮ್ಮಲ್ಲಿರುವ ಕೂಪನ್‌ ಅಥವಾ ಪ್ಲಾಸ್ಟಿಕ್‌ ನಾಣ್ಯಗಳನ್ನು ಬದಲಿಸಲು ಆಗುತ್ತಿಲ್ಲ. ಹೀಗಾಗಿ, ಆಶ್ರಮದಲ್ಲಿ ವ್ಯವಹರಿಸುತ್ತಿದ್ದ ಲಕ್ಷಾಂತರ ಮಂದಿ ಗೊಂದಲಕ್ಕೀಡಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಶುಕ್ರವಾರದ ಹಿಂಸೆಗೆ ಡಿಸಿಪಿಯೇ ಕಾರಣ
ಪಂಚಕುಲದಲ್ಲಿ ಶುಕ್ರವಾರ ಸಂಭವಿಸಿದ ಹಿಂಸಾಚಾರಕ್ಕೆ ಅಲ್ಲಿನ ಡಿಸಿಪಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳದಿದ್ದುದೇ ಕಾರಣ ಎಂದು ಹರ್ಯಾಣ ಸರ್ಕಾರ ಹೇಳಿದೆ. ಇಲ್ಲಿನ ಗೃಹ ಕಾರ್ಯದರ್ಶಿ ರಾಮ್‌ ನಿವಾಸ್‌ ಅವರು, ಈ ಸಂಬಂಧ ಮಾತನಾಡಿದ್ದು, ಕೆಲವೊಂದು ತಪ್ಪುಗಳಾಗಿವೆ ಎಂಬುದು ಸತ್ಯ. ಆದರೆ ಇದಕ್ಕೆ ಸರ್ಕಾರ ಕಾರಣ ಅಲ್ಲವೇ ಅಲ್ಲ. ಈ ಬಗ್ಗೆ ನಿಧಾನಗತಿಯಲ್ಲಿ ನಿರ್ಧಾರ ತೆಗೆದುಕೊಳ್ಳುವಂತೆ ಸಿಎಂ ಮನೋಹರ್‌ ಲಾಲ್‌ ಖಟ್ಟರ್‌ ಸೂಚಿಸಿರಲಿಲ್ಲ ಎಂದಿದ್ದಾರೆ.

ಝಡ್‌ ಪ್ಲಸ್‌ ಭದ್ರತೆ ನೀಡುತ್ತಿದ್ದವರೇ ಬಾಬಾನನ್ನು ಬಚಾವ್‌ ಮಾಡುತ್ತಿದ್ದರು!
ಶುಕ್ರವಾರ ರಾಂ ರಹೀಂ ದೋಷಿ ಎಂದು ಕೋರ್ಟ್‌ ತೀರ್ಪು ನೀಡಿದೊಡನೆ, ಅಪರಾಧಿಯನ್ನು ನೇರವಾಗಿ ಜೈಲಿಗೆ ಕರೆದುಕೊಂಡು ಹೋಗುವ ಬದಲು, ಬೆಂಬಲಿಗರ ಗುಂಪಿನೊಳಕ್ಕೆ ನುಸುಳುವಂತೆ ಮಾಡಲು ಅಧಿಕಾರಿಗಳು ಹವಣಿಸಿದ್ದರು ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ. ರಾಂ ರಹೀಂಗೆ ಝಡ್‌ ಪ್ಲಸ್‌ ಭದ್ರತೆ ನೀಡುತ್ತಿದ್ದ ಸಿಬ್ಬಂದಿಯೇ ಈ ಕೃತ್ಯಕ್ಕೆ ಮುಂದಾಗಿದ್ದರು. ಒಂದೊಮ್ಮೆ ಬೆಂಬಲಿಗರ ಗುಂಪಿನೊಳಕ್ಕೆ ಬಾಬಾನನ್ನು ಬಿಟ್ಟುಬಿಟ್ಟರೆ, ನಂತರ ಆತನನ್ನು ಬಂಧಿಸುವುದು ಪೊಲೀಸರಿಗೆ ದೊಡ್ಡ ಸವಾಲಾಗುತ್ತಿತ್ತು. 

Advertisement

ಜತೆಗೆ, ರೌದ್ರಾವತಾರ ತಾಳಿದ್ದ ಬೆಂಬಲಿಗರಿಂದ ಬಾಬಾನನ್ನು ಬಿಡಿಸಿಕೊಂಡು ಬರುವಾಗ ಭಾರೀ ಹಿಂಸಾಚಾರ, ಗೋಲಿಬಾರ್‌ ನಡೆದು ನೂರಾರು ಮಂದಿಯ ಪ್ರಾಣ ಹೋಗುತ್ತಿತ್ತು. ಅದೃಷ್ಟವಶಾತ್‌, ಭದ್ರತಾ ಸಿಬ್ಬಂದಿಯು ಈ ರೀತಿ ಮಾಡಬಹುದು ಎಂಬ ಸುಳಿವು ಸಿಕ್ಕೊಡನೆ ಕೆಲವು ಪೊಲೀಸ್‌ ಅಧಿಕಾರಿಗಳು ಮತ್ತು ಅರೆಸೇನಾಪಡೆಯು ಜಾಗೃತರಾಗಿ, ಬಾಬಾನನ್ನು ತಮ್ಮ ವಶಕ್ಕೆ ಪಡೆದುಕೊಂಡರು. ಈ ವೇಳೆ, ಎರಡೂ ಕಡೆ ಹೊಯ್‌ಕೈ ಕೂಡ ನಡೆದಿತ್ತು. ಪ್ರಕರಣ ಸಂಬಂಧ ಭಾನುವಾರ ಝಡ್‌  ಪ್ಲಸ್‌ ಭದ್ರತೆ ಒದಗಿಸುತ್ತಿದ್ದ 7 ಮಂದಿ ಸಿಬ್ಬಂದಿಯನ್ನು ಬಂಧಿಸಿ, ದೇಶದ್ರೋಹದ ಕೇಸು ಜಡಿಯಲಾಗಿದೆ. ಅವರನ್ನು 7 ದಿನಗಳ ಕಾಲ ಪೊಲೀಸ್‌ ವಶಕ್ಕೊಪ್ಪಿಸಿ ಸ್ಥಳೀಯ ಕೋರ್ಟ್‌ ಆದೇಶ ಹೊರಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next