ಹೊಸದಿಲ್ಲಿ:”ಪರೀಕ್ಷೆ ಹತ್ತಿರದಲ್ಲೇ ಇದೆ. ಗಂಭೀರವಾಗಿ ಕಲಿಕೆಯಲ್ಲಿ ತೊಡಗಿಸಿಕೊಳ್ಳಿ.’ ಬೆಳಗ್ಗೆ ದೂರವಾಣಿ ಕರೆ ಮಾಡಿ ಮಕ್ಕಳಿಗೆ ಈ ರೀತಿ ಸಲಹೆ ನೀಡಿದ್ದ ಅಪ್ಪ ಸಂಜೆಯಾಗುತ್ತಲೇ ಗಡಿಯಲ್ಲಿ ಗುಂಡೇಟು ತಿಂದು ಬಾರದ ಲೋಕಕ್ಕೆ ತೆರಳಿದ್ದರು.
ರವಿವಾರ ಪಾಕಿಸ್ಥಾನ ನಡೆಸಿದ ಶೆಲ್ ದಾಳಿಯಿಂದ ಹುತಾತ್ಮರಾದ ಜಮ್ಮುವಿನ ಯೋಧ, ಹವಿಲ್ದಾರ್ ರೋಶನ್ ಲಾಲ್ ಅವರು ಬೆಳಗ್ಗೆಯಷ್ಟೇ ಕುಟುಂಬ ಸದಸ್ಯರೊಂದಿಗೆ ಮಾತನಾಡಿದ್ದರು. ಅಪ್ಪ ದೇಸ್ ರಾಜ್, ಪತ್ನಿ ಆಶಾ ದೇವಿ ಮತ್ತು ಮಕ್ಕಳಾದ ಅಭಿನಂದನ್ (10ನೇ ತರಗತಿ) ಮತ್ತು ಅರ್ತಿಕಾ (8ನೇ ತರಗತಿ) ಜತೆ ಕುಶಲೋಪರಿ ವಿಚಾರಿಸಿದ್ದ ಲಾಲ್ ಅವರು ಸಂಜೆ ಗುಂಡಿಗೆ ಬಲಿಯಾದರು. ಸೋಮವಾರ ಅವರ ಮನೆಯಲ್ಲಿ ದುಃಖದ ಜೊತೆ ಆಕ್ರೋಶವೂ ಮಡುಗಟ್ಟಿತ್ತು.
ಅಪ್ಪನನ್ನು ಕಳೆದುಕೊಂಡ ನೋವಿನ ನಡುವೆಯೂ ಪುತ್ರ ಅಭಿನಂದನ್, ನಾನೂ ಸೇನೆಗೆ ಸೇರುತ್ತೇನೆ ಎಂದು ಹೇಳುತ್ತಿದ್ದಂತೆ ಅಲ್ಲಿದ್ದವರ ಆಕ್ರಂದನ ಮುಗಿಲುಮುಟ್ಟಿತು.
ಇನ್ನು ರವಿವಾರದ ದಾಳಿಗೆ ವೀರಮರಣವನ್ನಪ್ಪಿದ ಕ್ಯಾಪ್ಟನ್ ಕಪಿಲ್ ಕುಂಡು ಅವರು ಇನ್ನು ಐದೇ ದಿನಗಳಲ್ಲಿ 23ನೇ ಜನ್ಮದಿನ ಆಚರಿಸುವವರಿದ್ದರು. ಗುರುಗ್ರಾಮದವರಾದ ಇವರು ತಮ್ಮ ಫೇಸ್‌ಬುಕ್‌ನಲ್ಲಿ “ಆನಂದ್’ ಸಿನಿಮಾದ “ಲೈಫ್ ಶುಡ್ ಬೀ ಬಿಗ್, ನಾಟ್ ಲಾಂಗ್’ ಎಂಬ ವಾಕ್ಯವನ್ನು ಬರೆದುಕೊಂಡಿದ್ದರು. ದೀರ್ಘ ಬದುಕಿಗಿಂತ ಹೆಮ್ಮೆಪಡುವಂತೆ ಬದುಕುವುದೇ ಮುಖ್ಯ ಎಂಬುದನ್ನು ಅವರು ಬದುಕಿ ತೋರಿಸಿದರು ಎನ್ನುತ್ತಾರೆ ಅವರ ಸ್ನೇಹಿತರು. ರವಿವಾರ ಹುತಾತ್ಮರದ ನಾಲ್ವರು ಯೋಧರ ಅಂತ್ಯಕ್ರಿಯೆ ಸೋಮವಾರ ಸ್ವಗ್ರಾಮಗಳಲ್ಲಿ ನೆರವೇರಿತು.
ಪ್ರತೀಕಾರದ ಸುಳಿವು: ಯೋಧರ ಹತ್ಯೆಗೆ ಪ್ರತೀಕಾರ ತೀರಿಸುವ ಬಗ್ಗೆ ಸೇನೆ ಸೋಮ ವಾರ ಸುಳಿವು ನೀಡಿದೆ. ಪಾಕ್ ಶೆಲ್ ದಾಳಿಗೆ ನಾವು ತಕ್ಕ ಪ್ರತ್ಯುತ್ತರ ನೀಡುತ್ತಿದ್ದೇವೆ. ನಮ್ಮ ಪ್ರತೀಕಾರವು ಮಾತಿನಲ್ಲಿರುವುದಿಲ್ಲ, ಮಾಡಿ ತೋರಿಸುತ್ತೇವೆ ಎಂದು ವೈಸ್ ಚೀಫ್ ಲೆ| ಜ| ಶರತ್ ಚಾಂದ್ ತಿಳಿಸಿದ್ದಾರೆ.
3 ವರ್ಷಗಳಲ್ಲಿ 97 ಸಾವು
ಕಳೆದ 3 ವರ್ಷಗಳಲ್ಲಿ ಗಡಿಯಲ್ಲಿ ಪಾಕಿಸ್ಥಾನವು 834 ಬಾರಿ ಕದನ ವಿರಾಮ ಉಲ್ಲಂ ಸಿದ್ದು, 41 ಮಂದಿ ನಾಗರಿಕರು ಸೇರಿದಂತೆ 97 ಮಂದಿ ಮೃತಪಟ್ಟಿದ್ದಾರೆ. 383 ಮಂದಿ ಗಾಯಗೊಂಡಿದ್ದಾರೆ ಎಂದು ಜಮ್ಮು-ಕಾಶ್ಮೀರ ಸರಕಾರ ವಿಧಾನಸಭೆಯಲ್ಲಿ ಮಾಹಿತಿ ನೀಡಿದೆ.