Advertisement

ಸರ್ಕಾರಿ ನೌಕರಿಗೆ ಬೈ; ಬಡಿಗತನಕ್ಕೆ ಜೈ

11:05 AM Jan 12, 2020 | Suhan S |

ಬಾಗಲಕೋಟೆ: ಕಷ್ಟಪಟ್ಟು ಓದಿ ಅವರು ಸರ್ಕಾರಿ ಶಾಲೆಯೊಂದರ ಶಿಕ್ಷಕರಾಗಿದ್ದರು. ಮಕ್ಕಳಿಗೆ ನಿತ್ಯ ಪಾಠವೂ ಮಾಡುತ್ತಿದ್ದರು. ಆದರೆ, ತಲೆ ತಲಾಂತರದಿಂದ ಅವರ ಕುಟುಂಬ ಮಾಡಿಕೊಂಡು ಬಂದಿದ್ದ ಬಡಿಗತನ ಅವರನ್ನು ಕೈಬೀಸಿ ಕರೆಯುತ್ತಿತ್ತು. ಹೀಗಾಗಿ ಶಿಕ್ಷಕ ವೃತ್ತಿಯಲ್ಲಿದ್ದ ಅವರು, ತಮ್ಮ ಸಹೋದರನೊಂದಿಗೆ ಸರ್ಕಾರಿ ನೌಕರಿ ಬಿಟ್ಟು ಬಡಿಗತನಕ್ಕೆ ಮುಂದಾದರು. ಈಗ ಅದೇ ಕಸಬು ಅವರ ಕೈ ಹಿಡಿದಿದೆ.

Advertisement

ಇತ್ತೀಚಿನ ದಿನಗಳಲ್ಲಿ ಸರ್ಕಾರಿ ನೌಕರಿ ಸಿಗುವುದೇ ಕಷ್ಟ. ನೌಕರಿಗಾಗಿ ಅಲೆದಾಡುವವರ ಸಂಖ್ಯೆ ಹೆಚ್ಚಿದೆ. ಆದರೆ, ಹೊಳೆಆಲೂರಿನ ಇಬ್ಬರು ಸಹೋದರರು, ತಮಗೆ ಬಂದಿದ್ದ ಸರ್ಕಾರಿ ನೌಕರಿಯನ್ನೇ ತ್ಯಜಿಸಿ, ಬಡಿಗತನ ಮಾಡುತ್ತಿದ್ದಾರೆ. ತಮ್ಮ ಅಜ್ಜ, ತಂದೆ ಮಾಡಿಕೊಂಡು ಬಂದಿದ್ದ ಕಸಬನ್ನು ಮುಂದುವರಿಸಿದ್ದಾರೆ. ಅದರಿಂದಲೇ ಕೈತುಂಬ ಹಣವನ್ನೂ ಎಣಿಸುತ್ತಿದ್ದಾರೆ.

ಶಿಕ್ಷಕ-ಲೈನ್‌ಮನ್‌ ಹುದ್ದೆಗೆ ಬೈ: ಹೊಳೆಆಲೂರಿನ ಬಾಬು ಮತ್ತು ಅಬ್ದುಲ್‌ ಇಬ್ಬರು ಸಹೋದರರಿಗೆ ಸರ್ಕಾರಿ ನೌಕರಿ ಬಂದಿತ್ತು. ಬಾಬು ಅವರು, ರಾಯಚೂರು ಜಿಲ್ಲೆಯ ಮಾನ್ವಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರೆ, ಅಬ್ದುಲ್‌ ಅವರು ಹೆಸ್ಕಾಂನಲ್ಲಿ ಲೈನ್‌ಮನ್‌ ಆಗಿ ನೇಮಕಗೊಂಡಿದ್ದರು. ಆದರೆ, ಅವರಿಬ್ಬರೂ ಸರ್ಕಾರಿ ನೌಕರಿ ಬಿಟ್ಟು, ಕಟ್ಟಿಗೆ ಅಡ್ಡೆ ಇಟ್ಟುಕೊಂಡಿದ್ದಾರೆ. ಕಟ್ಟಿಗೆಯಲ್ಲಿ ಸುಂದರವಾದ ಮನೆಯ ಬಾಗಿಲು, ಕಿಟಕಿ ತಯಾರಿಸುತ್ತಾರೆ. ಅವುಗಳನ್ನು ರಾಜ್ಯದ ನಾನಾ ಭಾಗಗಳಿಗೆ ಮಾರಾಟ ಮಾಡಿ, ಕುಟುಂಬ ನಿರ್ವಹಿಸುತ್ತಿದ್ದಾರೆ.

ಕಲೆಯಿಂದಲೇ ಬಂತು ಕಲೇಗಾರ ಹೆಸರು: ಬಾಬು ಮತ್ತು ಅಬ್ದುಲ್‌ ಅವರಿಗೆ ಕಲೇಗಾರ ಎಂಬ ಅಡ್ಡ ಹೆಸರಿದೆ. ಅವರನ್ನು ಹೊಳೆಆಲೂರಿನಲ್ಲಿ ಕಲೇಗಾರ ಕುಟುಂಬ ಎಂದೇ ಕರೆಯಲಾಗುತ್ತಿದೆ. ಇದು ಬಾಬು ಅವರ ಮುತ್ತಜ್ಜ ಉಮ್ಮರಸಾಬ ಅವರ ಕಾಲದಿಂದಲೂ ಚಾಲ್ತಿಯಲ್ಲಿದೆ. ಇವರ ಮುತ್ತಜ್ಜ ಉಮ್ಮರಸಾಬ, ತಾಮ್ರದ ಕೊಡ ತಯಾರಿಸುತ್ತಿದ್ದರು. ಆ ಕೊಡಗಳ ಮೇಲೆ ಸುಂದರ ಡಿಸೈನ್‌ ಮಾಡುತ್ತಿದ್ದರು. ಉತ್ತಮ ಕಲೆ ಇವರಿಗೆ ಕುಟುಂಬದ ಪರಂಪರೆಯಾಗಿದೆ. ಹೀಗಾಗಿ ಇವರಿಗೆ ಕಲೇಗಾರ ಎಂದು ಹೆಸರು ಬಂದಿದೆ ಎನ್ನುತ್ತಾರೆ ಬಾಬು ಕಲೇಗಾರ. ಮೊದಲು ತಾಮ್ರದ ಕೊಡ ತಯಾರಿಸುತ್ತಿದ್ದ ಇವರ ಕುಟುಂಬ, ಕ್ರಮೇಣ ಕಟ್ಟಿಗೆಗೆ ಕಲೆ ನೀಡಿ, ಬಾಗಿಲು, ಕಿಟಕಿ ತಯಾರಿಸುವುದು ರೂಢಿಸಿಕೊಂಡಿದ್ದಾರೆ. ಅವರ ಇಡೀ ಕುಟುಂಬವೇ ಬಾಗಿಲು, ಕಿಟಕಿ ತಯಾರಿಕೆಯಲ್ಲಿ ತೊಡಗಿದೆ.

ಶುದ್ಧ ಸಾಗವಾನಿ ಕಟ್ಟಿಗೆ ಬಳಕೆ: ಕಲೇಗಾರ ಅವರು ಮೈಸೂರು ಸಾಗವಾನಿ, ಶುದ್ಧ ಸಾಗವಾನಿ ಕಟ್ಟಿಗೆಗಳಿಂದ ಮನೆಗಳ ಬಾಗಿಲು, ಕಿಟಕಿ ತಯಾರಿಸುತ್ತಾರೆ. ಹೀಗಾಗಿ ಇವರು ತಯಾರಿಸುವ ಕಿಟಕಿ, ಬಾಗಿಲುಗಳಿಗೆ ಉತ್ತರ ಕರ್ನಾಟಕ ಅಷ್ಟೇ ಅಲ್ಲ, ದಕ್ಷಿಣ ಕರ್ನಾಟಕದ ಮೈಸೂರು, ಹಾಸನ, ಧರ್ಮಸ್ಥಳ,ಬೆಂಗಳೂರು ಹೀಗೆ ವಿವಿಧೆಡೆಯಿಂದ ಖರೀದಿದಾರರು ಬರುತ್ತಾರೆ. ಇವರಲ್ಲಿಗೆ ಬಂದು, ತಮಗೆ ಬೇಕಾದ ಅಳತೆ, ಡಿಸೈನ್‌ ಎಲ್ಲವೂ ಹೇಳಿ ಹೋಗುತ್ತಾರೆ. ಅವರು ಹೇಳಿದಂತೆ ಉತ್ತಮ ಗುಣಮಟ್ಟದ ಬಾಗಿಲು, ಕಿಟಕಿ ತಯಾರಿಸಿ ಕೊಡುತ್ತಾರೆ. ಒಂದೊಂದು ಬಾಗಿಲುಗಳ ಬೆಲೆ 10 ಸಾವಿರದಿಂದ 50 ಸಾವಿರವರೆಗೂ ಮಾರಾಟವಾಗುತ್ತದೆ.

Advertisement

ವ್ಯಾಪಾರಕ್ಕಾಗಿ ಬನಶಂಕರಿ ಜಾತ್ರೆಗೆ: ಕಲೇಗಾರ ಕುಟುಂಬದವರು ಕಳೆದ 40 ವರ್ಷಗಳಿಂದಲೂ ಬನಶಂಕರಿದೇವಿ ಜಾತ್ರೆಯಲ್ಲಿ ಬಾಗಿಲು-ಕಿಟಕಿಮಾರಾಟ ಮಾಡುತ್ತ ಬಂದಿದ್ದಾರೆ. ಹೊಳೆಆಲೂರಿನಲ್ಲಿ ಸ್ವಂತ ಕಟಗಿ ಅಡ್ಡೆ ಹೊಂಡಿರುವ ಇವರು, ಬನಶಂಕರಿ ಜಾತ್ರೆಗಾಗಿಯೇ ವಿಶೇಷ ಕಲೆಯುಳ್ಳ, ಸುಂದರ ಬಾಗಿಲು, ಕಿಟಗಿ ಸಿದ್ಧಪಡಿಸಿಕೊಂಡು, ಜಾತ್ರೆಗೆ ಬರುತ್ತಾರೆ. ಅಂದು ಸರ್ಕಾರಿ ಅಧೀನದಲ್ಲಿ ದುಡಿಯುತ್ತಿದ್ದ ಇವರು, ಈಗ ಅವರೇ ಸುಮಾರು 25 ಜನರಿಗೆ ಉದ್ಯೋಗವೂ ನೀಡಿದ್ದಾರೆ. ಪ್ರತಿವರ್ಷ ಬನಶಂಕರಿ ಜಾತ್ರೆಯಲ್ಲಿ 10ರಿಂದ 15 ಲಕ್ಷ ಮೊತ್ತದ ಬಾಗಿಲು, ಕಿಟಕಿ ಮುಂತಾದ ಸಾಮಗ್ರಿ ಮಾರಾಟ ಮಾಡುತ್ತಾರೆ. ಒಂದು ತಿಂಗಳವರೆಗೆ ನಡೆಯುವ ಜಾತ್ರೆಯಲ್ಲಿ ಕೆಲಸಗಾರರ ವೇತನ, ಜಾಗದ ಬಾಡಿಗೆ, ಮೂಲ ಬಂಡವಾಳ ಎಲ್ಲವೂ ತೆಗೆದು ಕನಿಷ್ಠ 1 ಲಕ್ಷವಾದರೂ ಆದಾಯ ಮಾಡುತ್ತಾರೆ. ಸರ್ಕಾರಿ ನೌಕರಿಗಾಗಿ ಹಾತೊರೆಯುವ ಇಂದಿನ ದಿನಗಳಲ್ಲಿ, ಸರ್ಕಾರಿ ನೌಕರಿ ಬಿಟ್ಟು, ಕುಟುಂಬದ ಪಾರಂಪರಿಕ ವೃತ್ತಿಯ ಕೈಹಿಡಿದ ಈ ಕಲೇಗಾರ ಕುಟುಂಬ, ಬಡಿಗತನದಲ್ಲೇ ನೆಮ್ಮದಿ ಕಾಣುತ್ತಿದೆ.

ನಮ್ಮ ಇಡೀ ಕುಟುಂಬ ಬಡಿಗತನ ಮಾಡುತ್ತ ಬಂದಿದೆ. ನಮ್ಮ ಅಜ್ಜ ಉಮ್ಮರಸಾಬ ಅವರ ಕಲೆಯಿಂದಲೇ ನಮ್ಮ ಕುಟುಂಬಕ್ಕೆ ಕಲೇಗಾರ ಎಂಬ ಹೆಸರೂ ಬಂದಿದೆ. ನಾನು ಶಿಕ್ಷಕನಾಗಿದ್ದೆ. ನಮ್ಮ ಸಹೋದರ ಹೆಸ್ಕಾಂ ಲೈನ್‌ಮನ್‌ ಆಗಿದ್ದರು. ಇಬ್ಬರೂ ನೌಕರಿ ಬಿಟ್ಟು, ಸಾಗವಾನಿ ಕಟ್ಟಿಗೆ ಬಾಗಿಲು, ಕಿಟಕಿ ಕೆತ್ತನೆ ಮಾಡುತ್ತೇವೆ. ಬೆಂಗಳೂರು-ಮೈಸೂರು ಭಾಗದಿಂದ ಜನ ಬಂದು ನಮ್ಮಲ್ಲಿ ಖರೀದಿಸುತ್ತಾರೆ. ಇದರಲ್ಲೇ ನೆಮ್ಮದಿ-ಹಣ ಎರಡೂ ಕಂಡಿದ್ದೇವೆ.  –ಬಾಬು ಕಲೇಗಾರ, ಶಿಕ್ಷಕ ವೃತ್ತಿ ಬಿಟ್ಟು, ಬಡಿಗತನ ಮಾಡುವಾತ

 

-ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next