ಚಿಂತಾಮಣಿ: ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧೆ ತಾಯಿಯ ನರಳಾಟ ನೋಡದೇ ಕುಡಿದ ಮತ್ತಿನಲ್ಲಿ ತಾಯಿಯನ್ನು ಸುಟ್ಟುಕೊಂದ ಮಗ ತಾನು ನೇಣಿಗೆ ಶರಣಾಗಿ ಮೃತಪಟ್ಟಿರುವ ಘಟನೆ ತಾಲೂಕಿನ ಮಾಡಿಕೆರೆ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಘಟನೆಯ ವಿವರ: ಮಾಡಿಕೆರೆ ಗ್ರಾಮದ ವೆಂಟಕಮ್ಮ (90) ಮಗನ ಕೃತ್ಯಕ್ಕೆ ಬಲಿಯಾದ ದುರ್ದೈವಿ ತಾಯಿ ಮತ್ತು ಜಯರಾಮಪ್ಪ (55) ನೇಣಿಗೆ ಶರಣಾಗಿರುವ ಪುತ್ರ. ವೃದ್ಧ ತಾಯಿಯ ನರಳಾಟ ನೋಡಲಾಗದೆ ಹಾಗೂ ತಾಯಿಯ ಸೇವೆ ಮಾಡಲಾಗದೇ ಬೇಸತ್ತಿದ್ದ ಜಯರಾಮ್ ತಾಯಿಗೆ ಬೆಂಕಿ ಹಚ್ಚಿ ಕೊಂದಿದ್ದಾನೆ. ನಂತರ ಮೃತದೇಹ ನೋಡುತ್ತಾ ಮರುಗಿ ತಾನು ನೇಣಿಗೆ ಶರಣಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದಾದಿ ಎಂದೇ ಗುರುತಿಸಿಕೊಂಡಿದ್ದರು: ಸುಮಾರು ವರ್ಷಗಳಿಂದ ಮಾಡಿಕೆರೆ ಗ್ರಾಮದಲ್ಲಿ ವಾಸವಿದ್ದ ವೆಂಕಟಮ್ಮ ಮತ್ತು ಕುಟುಂಬ ಕೂಲಿ ನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ವೆಂಕಟಮ್ಮ ಮಾಡಿಕೆರೆ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಸುಮಾರು 5000 ಕ್ಕೂ ಹೆಚ್ಚು ಹೆರಿಗೆ ಮತ್ತು ಮಕ್ಕಳಿಗೆ ಭಯ ಭೀತಿಗೊಂಡ ಸಂದರ್ಭಗಳಲ್ಲಿ ತಾಯಿತ ಕಟ್ಟುತ್ತಾ ಹಾಗೂ ಮಂತ್ರಗಳ ಮುಖಾಂತರ ರೋಗಗಳನ್ನು ಗುಣಮುಖ ಮಾಡುತ್ತಿದ್ದು, ಸ್ಥಳೀಯವಾಗಿ ದಾದಿ ಎಂದು ಗುರುತಿಸಿಕೊಂಡಿದ್ದರು ಎನ್ನಲಾಗಿದೆ.
ತಾನು ಸಹ ನೇಣಿಗೆ: ವೆಂಕಟಮ್ಮ ಹತ್ತಾರು ವರ್ಷಗಳಿಂದ ಅನಾರೋಗ್ಯ ಪೀಡಿತರಾಗಿ ಹಾಸಿಗೆ ಬಿಟ್ಟು ಹೇಳದಂತಾಗಿದ್ದರು. ಮಗ ಜಯರಾಮಪ್ಪ ಸಹ ಅನೇಕ ವರ್ಷಗಳಿಂದ ತಾಯಿಯ ಸೇವೆ ಮಾಡಿಕೊಂಡು ಬಂದಿದ್ದರು. ಆದರೆ ಶುಕ್ರವಾರ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಬಚ್ಚಲು ಮನೆಯಲ್ಲಿ ತಾಯಿಗೆ ಬೆಂಕಿ ಹಚ್ಚಿದ್ದು, ವೆಂಕಟಮ್ಮ ಹೊರಬರಲು ಆಗದೇ ಸುಟ್ಟು ಕರಕಲಾಗಿದ್ದಾಳೆ. ಅವಘಡ ನಡೆದ ನಂತರ ಕುಡಿದ ಮತ್ತು ಇಳಿದಿದ್ದು ಮನೆಯ ಮತ್ತೂಂದು ಕೋಣೆಯಲ್ಲಿ ಮಗ ಜಯರಾಮಪ್ಪ ನೇಣಿಗೆ ಶರಣಾಗಿದ್ದನು.
ಕ್ಷಣಿಕ ಕೋಪ ಅಥವಾ ಜಿಗುಪ್ಸೆಗೆ ಒಳಗಾದ ಪರಿಣಾಮ ಎರಡು ಜೀವಗಳು ಮತ್ತೆ ಬಾರದ ಲೋಕಕ್ಕೆ ಹೋಗಿರುವುದು ದುರಂತ. ಗ್ರಾಮಾಂತರ ಪೋಲಿಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಚಿಂತಾಮಣಿ ಉಪ ವಿಭಾಗದ ಡಿವೈಎಸ್‌ಪಿ ಶ್ರೀನಿವಾಸ್, ಗ್ರಾಮಾಂತರ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀನಿವಾಸ್, ಹಾಗೂ ಪಿಎಸ್‌ವೈ ಜಗದೀಶ್‌ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.