Advertisement

ರಾಜೀವ್‌ ಹತ್ಯೆ ಅಮೆರಿಕಗೆ ಮೊದಲೇ ಗೊತ್ತಿತ್ತೇ?

03:45 AM Jan 30, 2017 | Team Udayavani |

ವಾಷಿಂಗ್ಟನ್‌: ಮಾಜಿ ಪ್ರಧಾನಿ, ದಿವಂಗತ ರಾಜೀವ್‌ ಗಾಂಧಿ ಅವರು ಹತ್ಯೆಯಾಗುವುದು ಅಮೆರಿಕಗೆ ಮೊದಲೇ ಗೊತ್ತಿತ್ತೇ? ಇಂಥ ಶಂಕೆಯೊಂದು ಇದೀಗ ಬಹಿರಂಗವಾಗಿರುವ ರಹಸ್ಯ ಕಡತಗಳನ್ನು ನೋಡಿದ ಮೇಲೆ ಮೂಡುತ್ತದೆ. 1986ರಲ್ಲೇ (ಆಗ ರಾಜೀವ್‌ ಭಾರತದ ಪ್ರಧಾನಿ) ಸಿಐಎ “ರಾಜೀವ್‌ ಗಾಂಧಿ ನಂತರದ ಭಾರತ’ ಎಂಬ ಶೀರ್ಷಿಕೆಯಡಿಯಲ್ಲಿ ಒಂದು ವರದಿ ತಯಾರಿಸಿಟ್ಟಿತ್ತು. 1989ಕ್ಕೂ ಮುನ್ನ, ಅಂದರೆ ಅವರ ಅಧಿಕಾರಾವಧಿ ಅಂತ್ಯಗೊಳ್ಳುವ ಮುನ್ನವೇ ರಾಜೀವ್‌ ಅವರ ಹತ್ಯೆಯಾಗಬಹುದು ಎಂದು ಇದು ಬಲವಾಗಿ ಶಂಕಿಸಿತ್ತು. 

Advertisement

ವಿಚಿತ್ರವೆಂದರೆ, ಈ 23 ಪುಟಗಳ ಫೈಲ್‌ನ ಸಾಕಷ್ಟು ಮಾಹಿತಿ “ಡಿಲೀಟ್‌’ ಆಗಿದೆ. ಕೆಲವು ಭಾಗಗಳಷ್ಟೇ ದೊರೆತಿದೆ. 

ವರದಿಯಲ್ಲಿ ಏನಿದೆ?: 1989ಕ್ಕೂ ಮುನ್ನವೇ ಪ್ರಧಾನಿ ರಾಜೀವ್‌ ಗಾಂಧಿ ಹತ್ಯೆಯಾಗಬಹುದು. ಆಗ ಭಾರತದಲ್ಲಿನ ರಾಜಕೀಯ ವ್ಯವಸ್ಥೆ ಅರ್ಧದಲ್ಲೇ ಅಲ್ಲೋಲಕಲ್ಲೋಲವಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಿತ್ತು. ಈ ವರದಿಯ ಮೊದಲ ಸಾಲೇ ಈ ರೀತಿ ಇದೆ: “”ಒಂದೇ ಒಂದು ಅವಕಾಶ ಸಿಕ್ಕರೂ, ಪ್ರಧಾನಿ ರಾಜೀವ್‌ ಗಾಂಧಿ ಅವರನ್ನು ಅಧಿಕಾರಾವಧಿ ಮುಗಿಸುವ ಮುನ್ನವೇ ಹತ್ಯೆ ಮಾಡುವ ಸಂಭವವಿದೆ”. ಇದರ ಜತೆಯಲ್ಲೇ  ವರದಿ ಮುಂದುವರಿದು ಹೇಳುತ್ತದೆ: “ರಾಜೀವ್‌ ಅವರಿಗೆ ಹತ್ತಿರದಲ್ಲೇ ಇಂಥ ಬೆದರಿಕೆ ಇದೆ’.

ವಿಚಿತ್ರವೆಂದರೆ ಈ ವರದಿ ಸಿದ್ಧವಾದ 5 ವರ್ಷಗಳ ನಂತರ 1991ರ ಮೇ 21ರಂದು ತಮಿಳುನಾಡಿನ ಪೆರಂಬದೂರಿನಲ್ಲಿ ರಾಜೀವ್‌ ಹತ್ಯೆಯಾಯಿತು.

ಒಂದು ವೇಳೆ ರಾಜೀವ್‌ ಹತ್ಯೆಯಾದರೆ, ಭಾರತದ ರಾಜಕೀಯ ಸ್ಥಿತಿಗಳೇ ಬದಲಾಗುತ್ತವೆ. ಅದರಲ್ಲೂ ಅಮೆರಿಕ, ರಷ್ಯಾ ಮತ್ತು ಈ ಪ್ರದೇಶದ ಇತರೆ ದೇಶಗಳ ಜತೆಗಿನ ಸಂಬಂಧದ ಮೇಲೂ ಅಡ್ಡ ಪರಿಣಾಮವಾಗುವ ಸಾಧ್ಯತೆಯಿದೆ ಎಂದು ವರದಿ ಹೇಳುತ್ತದೆ.””ಒಂದು ವೇಳೆ ರಾಜೀವ್‌ರನ್ನು ಸಿಖ್‌ ಅಥವಾ ಕಾಶ್ಮೀರದ ಮುಸ್ಲಿಮರೊಬ್ಬರು ಹತ್ಯೆ ಮಾಡಿದಲ್ಲಿ ದೇಶದಲ್ಲಿ ಕೋಮು ಹಿಂಸಾಚಾರ ಭುಗಿಲೇಳುತ್ತದೆ. ಉತ್ತರ ಭಾರತದಲ್ಲಿ ಭಾರಿ ಮುಂಜಾಗ್ರತೆ ತೆಗೆದುಕೊಂಡರೂ ಸಹ ಹಿಂಸಾಚಾರ ನಿಗ್ರಹಿಸುವುದು ಅಸಾಧ್ಯದ ಕೆಲಸವಾಗುತ್ತದೆ. ಇದು ಭಾರತದ ರಾಷ್ಟ್ರಪತಿ….(ಡಿಲೀಟ್‌)” ಮೇಲಿದೆ ಎಂದು ಹೇಳುತ್ತಾ ಹೋಗುತ್ತದೆ. 

Advertisement

ರಾಜೀವ್‌ ನಂತರ ಅವರ ಸ್ಥಾನಕ್ಕೆ ಪಿ.ವಿ. ನರಸಿಂಹರಾವ್‌ ಅಥವಾ ವಿ.ಪಿ.ಸಿಂಗ್‌ ಸೂಕ್ತ ವ್ಯಕ್ತಿಯಾಗಬಹುದು ಎಂಬುದು ಈ ವರದಿಯಲ್ಲಿನ ಅಂಶ. ವಿಶೇಷವೆಂದರೆ 1991ರಲ್ಲಿ ನರಸಿಂಹರಾವ್‌ ಅವರೇ ಪ್ರಧಾನಿಯಾಗಿ ಆಯ್ಕೆಯಾಗಿದ್ದು!
ಕೇವಲ ಸಿಖ್‌ ಅಥವಾ ಕಾಶ್ಮೀರದ ಮುಸ್ಲಿಂ ಅಷ್ಟೇ ಅಲ್ಲ, ಉಗ್ರವಾದಿ ಹಿಂದೂ ವ್ಯಕ್ತಿ ಕೂಡ ರಾಜೀವ್‌ ಹತ್ಯೆ ಮಾಡಬಲ್ಲ ಎಂದು ವರದಿ ಹೇಳುತ್ತದೆ. ಆದರೆ ಎಲ್ಲೂ ರಾಜೀವ್‌ ಹತ್ಯೆಗೆ ಕಾರಣವಾದ ಎಲ್‌ಟಿಟಿಇಯ ಪ್ರಸ್ತಾಪವಿಲ್ಲ. ಮೂಲಗಳ ಪ್ರಕಾರ, ಡಿಲೀಟ್‌ ಆಗಿರುವ ಫೈಲ್‌ಗ‌ಳಲ್ಲಿ ಈ ಪ್ರಸ್ತಾಪ ಇದ್ದಿರಲೂಬಹುದು ಎಂಬ ಶಂಕೆ ವ್ಯಕ್ತವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next