ನೀವು ದಿನಕ್ಕೊಮ್ಮೆಯಾದರೂ ನಿಮ್ಮೊಳಗೆ ನೀವೇ ಮಾತನಾಡಿಕೊಳ್ಳಿ, ಆಗ ನೀವು ಒಬ್ಬ ಅತ್ಯದ್ಭುತ ವ್ಯಕ್ತಿಯನ್ನೇ ಭೇಟಿಯಾಗುತ್ತೀರಿ ಎಂದು ಸ್ವಾಮಿ ವಿವೇಕಾನಂದರು ಒಂದು ಮಾತು ಹೇಳಿದ್ದಾರೆ.
ಹೌದು! ಇದು ಸತ್ಯ.. ನಮ್ಮೊಳಗೊಬ್ಬ ಇಂತಹ ವ್ಯಕ್ತಿ ಇದ್ದಾನೆ ಎಂಬ ಅರಿವು ಬರುವುದೇ ನಮಗೆ ನಾವೇ ಮಾತನಾಡಿಕೊಂಡಾಗ. ನಮಗೆ ನಾವೇ ಮಾತನಾಡಿಕೊಳ್ಳುವುದು ಎಂದರೆ ಕೆಲವರು ಅದೊಂದು ಹುಚ್ಚು ಎನ್ನಬಹುದು. ಆದರೆ ಈ ಮಾತು ಒಪ್ಪದಿರೋಣ. ನಮ್ಮನ್ನು ನಾವು ಅರಿಯುವುದೇ ನಮಗೆ ನಾವೇ ಮಾತನಾಡಿಕೊಂಡಾಗ ಮಾತ್ರ.
ಒಬ್ಬ ಮನುಷ್ಯ ಬೆತ್ತಲೆಯಾದಷ್ಟು ಆತ ಪರಿಶುದ್ಧನಾಗುತ್ತಾನೆ ಎಂಬ ಜ್ಞಾನಿಯೊಬ್ಬರ ಮಾತಿದೆ. ಇಲ್ಲಿ ಬೆತ್ತಲು ಎಂದರೆ ವಿವಸ್ತ್ರವಾಗುವುದು ಎಂದರ್ಥವಲ್ಲ, ಬದಲಿಯಾಗಿ ಚಿಂತನೆಯಲ್ಲಿ ತಮ್ಮನ್ನು ತಾವು ಪ್ರಶ್ನಿಸಿಕೊಳ್ಳುವುದು ಎಂದರ್ಥ. ನನ್ನ ಸರಿ- ತಪ್ಪುಗಳನ್ನು ಎಲ್ಲರ ಮುಂದೆ ಹೇಳಲಾಗದಿದ್ದರೂ ಕೂಡ ನಮಗೆ ನಾವೇ ಕೇಳಿಕೊಂಡು ಕ್ಷಮಾಪಣ ಭಾವವನ್ನು ಕಾಣುತ್ತೇವೆ. ಅದಕ್ಕಾಗಿ ಈ ಕ್ಷಮಾಪಣ ಭಾವ ನಮಗೆ ಬರಬೇಕಾದರೆ ನಮಗೆ ನಾವೇ ಮಾತನಾಡಿಕೊಳ್ಳಬೇಕು.
ಸ್ವ ಪ್ರಜ್ಞೆ : ಮನುಷ್ಯನಿಗೆ ವಿಚಾರವಂತಿಕೆಯ ಜತೆಗೆ ಆತನಿಗೆ ವಿಚಾರ ಸ್ಪಷ್ಟತೆ ಇರಬೇಕಾದುದು ಅಗತ್ಯ. ಈ ಕಾರಣಕ್ಕಾಗಿ ಆತನು ಮೊದಲು ಯಾವುದೇ ಸಂಗತಿಗಳನ್ನು ಸಾರ್ವಜನಿಕವಾಗಿ ಮಾತನಾಡುತ್ತಾನೆ ಎಂದರೆ ಮೊದಲು ತನ್ನೊಂದಿಗೆ ತಾನು ಮಾತನಾಡಿಕೊಂಡಿರಬೇಕು. ತನ್ನನ್ನು ತಾನು ಪ್ರಶ್ನಿಸಿಕೊಂಡಿರಬೇಕು. ಈಗ ಮಾತನಾಡಿದಾಗ ನನಗೆ ಯಾವ ರೀತಿಯ ಪ್ರಶ್ನೆಗಳು ಎದುರಾಗಬಹುದು. ಇಲ್ಲವೇ ಏನಾದರೂ ವಿವಾದ ಉಂಟಾಗಬಹುದೇ ಅಥವಾ ಯಾರಿಗಾದರೂ ನೋವುಂಟಾಗಬಹುದೇ ಎಂಬ ಅನೇಕ ಸಂಗತಿಗಳ ಪ್ರಶ್ನೆಗಳೊಂದಿಗೆ ನಮಗೆ ನಾವೇ ಕಂಡುಕೊಂಡಾಗ ಇದರಿಂದ ನಮ್ಮಲ್ಲಿ ಸ್ವಪ್ರಜ್ಞೆ ಬರುತ್ತದೆ. ಇದು ಬರಬೇಕಾದರೆ ನಮ್ಮ ಮನಸ್ಸಿನೊಂದಿಗೆ ಮಾತನಾಡಿಕೊಳ್ಳಬೇಕು.
ದಾರಿಯಲ್ಲಿ ಒಂಟಿಯಾಗಿ ಕಿಲೋ ಮೀಟರ್‌ಗಟ್ಟಲೆ ನಡೆಯುತ್ತೀರಿ. ಈ ಉರಿಬಿಸಿಲು ಹೇಗೆ ನಡೆಯುವುದು ಎಂಬ ಅಸಾಧ್ಯದ ಮಾತುಗಳನ್ನು ಆಡುವ ಬದಲು ನೀವು ಒಂಟಿಯಾಗಿ ನಡೆಯಿರಿ ಮೊದಲು. ಅನಂತರ ಯೋಚಿಸಿ, ಬಳಿಕ ನಿಮ್ಮೊಂದಿಗೆ ನೀವೇ ಮಾತನಾಡುತ್ತ ಹೋಗಿ, ಆಗ ನಿಮ್ಮಲ್ಲೊಬ್ಬ ಅದ್ಭುತ ವ್ಯಕ್ತಿಯ ಪರಿಚಯವಾಗುತ್ತದೆ. ನಿಮ್ಮನ್ನು ಆತ ಚೆನ್ನಾಗಿ ಕೌನ್ಸೆಲಿಂಗ್ ಮಾಡುತ್ತಾನೆ. ನಿಮ್ಮ ನೋವುಗಳನ್ನು ಕೇಳುತ್ತಾನೆ, ಸಂತೋಷವನ್ನು ಹಂಚುತ್ತಾನೆ. ಆಗ ನಿಮ್ಮ ಮುಖದಲ್ಲಿ ನಗು ಅರಳುತ್ತದೆ. ಇದನ್ನೇ ಕೆಲವರು ಹುಚ್ಚೇನೂ ಎಂದು ಪ್ರಶ್ನಿಸಬಹುದು. ಇದರ ಬಗ್ಗೆ ತಲೆನೇ ಕೆಡಿಸಿಕೊಳ್ಳಬೇಡಿ.
ನಿಮ್ಮಲ್ಲಿ ನೀವು ಮಾತನಾಡಿಕೊಳ್ಳುವುದು ಎಂಬುದು ಕ್ಷಣಿಕದಲ್ಲಿ ಸಿಗುವ ಅತ್ಯಮೂಲ್ಯ ಸಂತೋಷ ಎಂದು ಭಾವಿಸುತ್ತೇನೆ. ಮನಃಶಾಸ್ತ್ರಜ್ಞರು ಕೂಡ ಈ ಮಾತನ್ನು ಹೇಳಿದ್ದಾರೆ. ನಮಗೆ ಅರಿವು ಬರುವುದೇ ನಮ್ಮೊಂದಿಗೆ ನಾವು ಮಾತನಾಡಿಕೊಂಡಾಗ. ಸರಿ ತಪ್ಪುಗಳನ್ನು ನಮಗೆ ಕೇಳಿಕೊಳ್ಳುವ ಭಾವನೆ ಇದರಿಂದ ಮೂಡುತ್ತದೆ. ಅದಕ್ಕೆ ಇದೊಂದು ಮಾರ್ಗೋಪಾಯ ಸರಿಯಾದುದು.
ಹೋ! ಹೌದಾ! ಎನ್ನುವ ಮುನ್ನ ನಿಮಗೆ ನೀವೇ ಮಾತನಾಡಿಕೊಂಡಿಲ್ಲ ಎಂದಾದರೆ ಇವತ್ತೇ, ಈ ಕ್ಷಣಕ್ಕೆ ಮಾತನಾಡಿಕೊಳ್ಳಿ. ಆ ಅದ್ಭುತ ವ್ಯಕ್ತಿಯನ್ನು ಒಮ್ಮೆ ನೀವು ಭೇಟಿಯಾಗಿ… ಶುಭಾಶಯಗಳೊಂದಿಗೆ….
- ಅಭಿನವ