ಕಲಬುರಗಿ: ಮುಂದಿನ ತಿಂಗಳು ಕುವೈತ್ ನಲ್ಲಿ ನಡೆಯುವ 10ನೇ ಏಷಿಯನ್ ಓಪನ್ ವಾಟರ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್ -2019 ಭಾರತೀಯ ತಂಡದಲ್ಲಿ ಬಿಸಿಲೂರು ಕಲಬುರಗಿ ಮೂಲದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ 16 ವರ್ಷದ ದೀಪ್ ವೆಂಕಟೇಶ ಗಿಲ್ಡಾ ಸ್ಥಾನ ಪಡೆದಿದ್ದಾನೆ.
ಬೆಂಗಳೂರಿನ ಬಸವನಗುಡಿಯ ಅಕ್ವಾಟಿಕ್ ಸೆಂಟರ್‌ನಲ್ಲಿ ತರಬೇತಿ ಪಡೆಯುತ್ತಿರುವ ಹಾಗೂ ಬೆಂಗಳೂರಿನ ಸುದರ್ಶನ ವಿದ್ಯಾಮಂದಿರದಲ್ಲಿ ವಾರದ ಹಿಂದೆಯಷ್ಟೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ದೀಪ್ ವೆಂಕಟೇಶ ಗಿಲ್ಡಾ ಈಗ ಅಂತಾರಾಷ್ಟ್ರೀಯ ಸಮುದ್ರ ಈಜು ಸ್ಪರ್ಧಾಕೂಟಕ್ಕೆ ಆಯ್ಕೆಯಾಗಿದ್ದಾನೆ.
ಅರಬ್ ರಾಷ್ಟ್ರದ ಏಷ್ಯಾ ಖಂಡದ ಕುವೈತ್ ನಲ್ಲಿ ಮುಂದಿನ ತಿಂಗಳು ಏಪ್ರಿಲ್ 19ರಿಂದ 21ರವರೆಗೆ ಸಮುದ್ರ ಈಜು ಸ್ಪರ್ಧಾಕೂಟ ನಡೆಯಲಿದೆ. ಈ ಕೂಟದಲ್ಲಿ ಸ್ವಿಮ್ಮಿಂಗ್ ಫೆಡರೇಷನ್ ಆಫ್ ಇಂಡಿಯಾದಿಂದ 15-18 ವಯಸ್ಸಿನೊಳಗಿನ ಬಾಲಕ-ಬಾಲಕಿಯರ 12 ಜನರ ತಂಡ ಪಾಲ್ಗೊಳ್ಳಲಿದ್ದು, ಈ ತಂಡದಲ್ಲಿ ದೀಪ್‌ನೂ ಇದ್ದಾನೆ.
ಒಂದನೇ ತರಗತಿಯಿಂದ ಬೆಂಗಳೂರಲ್ಲೇ ಅಭ್ಯಸಿಸುತ್ತಿರುವ ದೀಪ್ ಪ್ರತಿದಿನ ಬೆಳಗ್ಗೆ ಮೂರು ಹಾಗೂ ಸಂಜೆ ಮೂರು ಗಂಟೆಗಳ ಕಾಲ ಸ್ವಿಮ್ಮಿಂಗ್ ಅಭ್ಯಾಸ ಮಾಡುತ್ತಾನೆ.
ಕಳೆದ ವರ್ಷ ಚಿತ್ರದುರ್ಗದ ವಾಣಿವಿಲಾಸ ಆಣೆಕಟ್ಟಿನಲ್ಲಿ (7.5 ಕಿ.ಮೀ ಉದ್ದ) 1ಗಂಟೆ 44 ನಿಮಿಷದಲ್ಲಿ ಈಜಿ ಚಿನ್ನದ ಪದಕ, ಉಡುಪಿ ಬಳಿ ನಡೆದ 7.5 ಕಿ.ಮೀ ಉದ್ದದ ಸಮುದ್ರ ಈಜು ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದಾನೆ. ಈಗಾಗಲೇ ವಿವಿಧ ಈಜು ಸ್ಪರ್ಧೆಯಲ್ಲಿ 30ಕ್ಕೂ ಹೆಚ್ಚು ಚಿನ್ನ-ಬೆಳ್ಳಿ ಪದಕಗಳನ್ನು ಪಡೆದಿರುವ ದೀಪ್ ಈಗ ರಾಷ್ಟ್ರಮಟ್ಟದ ಸ್ಪರ್ಧಾಕೂಟಕ್ಕೆ ಆಯ್ಕೆಯಾಗಿದ್ದಾನೆ.
ಮುಂದಿನ ತಿಂಗಳು ಕುವೈತ್‌ನಲ್ಲಿ ನಡೆಯಲಿದೆ 10ನೇ ಏಷಿಯನ್ ಓಪನ್ ವಾಟರ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್
ದೀಪ್‌ನ ತಲೆಯಲ್ಲಿ ಈಜು ಹವ್ಯಾಸವೇ ಮುಳುಗಿದೆ. ಇದೇ ಆತನನ್ನು ಭಾರತೀಯ ತಂಡಕ್ಕೆ ಆಯ್ಕೆಯಾಗುವಂತೆ ಮಾಡಿದೆ. ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ಪಿಯುಸಿ ಪ್ರವೇಶಾತಿ ಪಡೆಯಲು ಮುಂದಾಗಿದ್ದಾನೆ.
ವೆಂಕಟೇಶ ಗಿಲ್ಡಾ,ದೀಪ್ ತಂದೆ
ದೀಪ್ ಪ್ರತಿದಿನ ಆರು ಗಂಟೆಗಳ ಕಾಲ ಈಜು ಅಭ್ಯಾಸ ಮಾಡಿದ್ದಾನೆ. ಇದೇ ಪ್ರಥಮ ಬಾರಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ.
ಕಮಲೇಶ್ ನಾನವತಿ, ಸ್ವಿಮ್ಮಿಂಗ್ ಫೆಡರೇಷನ್ ಆಫ್ ಇಂಡಿಯಾ ಕಾರ್ಯದರ್ಶಿ.
ಹಣಮಂತರಾವ ಭೈರಾಮಡಗಿ