Advertisement

ಗಿಡಗಳ ಸಿರಿವಂತಿಕೆಯೇ ಇವರಿಗೆ ಜೀವಾಳ !

03:14 PM Aug 20, 2019 | mahesh |

ಮಂಗಳೂರು: ಇಲ್ಲೋರ್ವರು ಉದ್ಯಮಿ ಸಾರ್ವಜನಿಕ ರಸ್ತೆಗಳಲ್ಲೆಲ್ಲ ಗಿಡ ನೆಡುವ ಕಾಯಕದಲ್ಲಿ ತೊಡಗಿದ್ದಾರೆ. ಬೆಳಗ್ಗೆ ಐದಕ್ಕೆ ಎದ್ದು ರಸ್ತೆಯುದ್ದಕ್ಕೂ ಸುತ್ತಿ ಗಿಡಗಳನ್ನು ಪೋಷಣೆ ಮಾಡುತ್ತಿದ್ದಾರೆ.

Advertisement

ಜಪ್ಪಿನಮೊಗರು ಬಂಟರ ಸಂಘದ ಬಳಿಯ ನಿವಾಸಿ ಜೆ. ಪ್ರವೀಣ್‌ಚಂದ್ರ ರೈ ಅವರೇ ಈ ವೃಕ್ಷಪ್ರೇಮಿ. ಉಜ್ಜೋಡಿಯ ಬೈಕ್‌ ಕ್ಲಿನಿಕ್‌ ಸಂಸ್ಥೆಯ ಮಾಲಕರಾಗಿರುವ ಪ್ರವೀಣ್‌ಚಂದ್ರ ಐದು ವರ್ಷಗಳಿಂದ ಜಪ್ಪಿನಮೊಗರು ಸಾರ್ವಜನಿಕ ರಸ್ತೆಗಳಲ್ಲಿ ಗಿಡ ನೆಟ್ಟು ಪೋಷಿಸುತ್ತಿದ್ದಾರೆ. ವಿವಿಧ ರಸ್ತೆ ಬದಿಗಳಲ್ಲಿ 730ಕ್ಕೂ ಹೆಚ್ಚು ನಾನಾ ಜಾತಿಯ ಗಿಡಗಳು ಅವರ ಪೋಷಣೆಯಲ್ಲಿವೆ.

ರಸ್ತೆ ಬದಿ ಮಾತ್ರವಲ್ಲದೆ, ಮನೆಯ ಸುತ್ತಮುತ್ತಲಿನ ಪರಿಸರದಲ್ಲೇ ಸುಮಾರು 147 ಗಿಡಗಳನ್ನು ನೆಟ್ಟು ಬೆಳೆಸು ತ್ತಿದ್ದಾರೆ. ನೇರಳೆ, ಚಿಕ್ಕು, ಕಹಿ ಬೇವು, ಕಾಡು ದಾಸವಾಳ, ವಿವಿಧ ಜಾತಿಯ ಔಷಧ ಗಿಡಗಳು, ಗಂಧ, ಕದಂಬ ಬಾಳೆ ಸಹಿತ ವೈವಿಧ್ಯ ಜಾತಿಯ ಗಿಡಗಳನ್ನು ಅವರು ನೆಟ್ಟು ಪೊಷಿಸುತ್ತಿದ್ದಾರೆ.

ಏಕಾಂಗಿಯಾಗಿ ಗಿಡಗಳ ಪೋಷಣೆ
ಅವರ ಈ ವೃಕ್ಷ ಪ್ರೇಮದ ಹಿಂದೆ ಏಕಾಂಗಿ ಶ್ರಮವಿದೆ. ಮಳೆ, ಚಳಿಯನ್ನು ಲೆಕ್ಕಿಸದೆ, ಪ್ರತಿದಿನ ಬೆಳಗ್ಗೆ 5 ಗಂಟೆಗೆ ಎದ್ದು ತಮ್ಮ ಕಾರಿನಲ್ಲಿ ರಸ್ತೆಯುದ್ದಕ್ಕೂ ಸಂಚರಿಸುತ್ತಾರೆ. ಬೆಳಗ್ಗೆ ಏಳೂವರೆ ತನಕ ನೆಟ್ಟ ಗಿಡಗಳ ಬಳಿ ಇರುವ ಕಳೆ ಕಿತ್ತು ರಕ್ಷಣೆ ನೀಡುತ್ತಾರೆ. ಗಿಡಗಳನ್ನು ನೆಡಲು ಗುಂಡಿ ತೋಡಲು ಹಣ ನೀಡಿ ಕೆಲಸಗಾರರ ಸಹಕಾರ ಪಡೆಯುವುದು ಬಿಟ್ಟರೆ ಮಿಕ್ಕೆಲ್ಲ ಕೆಲಸಗಳನ್ನು ಏಕಾಂಗಿಯಾಗಿಯೇ ನಿರ್ವಹಿಸುತ್ತಾರೆ. ಕೆಲವು ಗಿಡಗಳನ್ನು ಅರಣ್ಯ ಇಲಾಖೆ ಉಚಿತವಾಗಿ ನೀಡಿದ್ದರೆ, ಬಹುತೇಕ ಗಿಡಗಳನ್ನು ಹಣ ನೀಡಿ ಖರೀದಿ ಮಾಡಿದ್ದಾರೆ. ಗಿಡ ಖರೀದಿ ಸಹಿತ ಪಾಲನೆ – ಪೋಷಣೆಗೆ ಲಕ್ಷಾಂತರ ರೂ. ಖರ್ಚು ಮಾಡಿದ್ದಾರೆ.

ಸ್ವಯಂ ಜಾಗೃತಿ
ಸಾರ್ವಜನಿಕ ರಸ್ತೆ ಬದಿಯಲ್ಲಿ ಗಿಡ ನೆಡುವಾಗ ಒಂದಷ್ಟು ಮಂದಿ ತಕರಾರು ತೆಗೆದಿದ್ದರು. ಇವೆಲ್ಲವನ್ನು ಸಹಿಸಿ ಕೊಂಡು ಗಿಡಗಳನ್ನು ಪೋಷಿ ಸುತ್ತಿದ್ದೇನೆ ಎನ್ನುತ್ತಾರೆ ರೈ. ಗಿಡಗಳ ಮೇಲೆ ಕೆಲವರು ವಾಹನಗಳನ್ನು ತಂದು ನಿಲ್ಲಿಸುತ್ತಿರುವುದರಿಂದ ಅವುಗಳು ಸಾಯುತ್ತಿವೆ. ಗಿಡಗಳ ರಕ್ಷಣೆ ಅರಿವು ಸ್ವಯಂ ಜಾಗೃತಿಯಿಂದ ಬಂದರೆ ಮಾತ್ರ ಹಸುರು ಕಂಗೊಳಿಸಲು ಸಾಧ್ಯ ಎನ್ನುತ್ತಾರೆ ಅವರು.

Advertisement

ಕಾರಿನಲ್ಲಿ ಟ್ಯಾಂಕ್‌ ವ್ಯವಸ್ಥೆ
ವಿಶೇಷವೆಂದರೆ, ತಾವು ನೆಟ್ಟ ಗಿಡಗಳಿಗೆ ಬೇಸಗೆಯಲ್ಲಿ ನೀರು ಹಾಯಿಸಲು ಅವರು ತಮ್ಮ ಆಲೊrೕ ಕಾರಿನಲ್ಲಿ ಸಿಂಟೆಕ್ಸ್‌ ಟ್ಯಾಂಕ್‌ವೊಂದನ್ನು ಇರಿಸಿಕೊಂಡಿದ್ದಾರೆ. ಕಾರಿನ ಹಿಂಬದಿ ಸೀಟ್‌ಗಳನ್ನು ಸಂಪೂರ್ಣ ಕಿತ್ತು ಹಾಕಿ ಅಲ್ಲಿ ಟ್ಯಾಂಕ್‌ ಇರಿಸಲಾಗಿದ್ದು, ಟ್ಯಾಂಕಿಗೆ ನೀರು ತುಂಬಿಸಿ ಕೊಂಡೊಯ್ದು ಗಿಡಗಳಿಗೆ ನೀರು ಹಾಯಿಸುತ್ತಿದ್ದಾರೆ. ನೀರೆರೆಯಲು ಸುಲಭವಾಗುವಂತೆ ಟ್ಯಾಂಕಿಗೆ ಪೈಪ್‌ ಸಂಪರ್ಕ ನೀಡಲಾಗಿದೆ. ಗಿಡಗಳ ಪಕ್ಕದಲ್ಲಿರುವ ಕಳೆ ತೆಗೆಯಲು ಕತ್ತಿ, ಗಿಡ ನೆಡಲು ಗುಂಡಿ ತೋಡಲು ಹಾರೆಯನ್ನೂ ಕಾರಿನಲ್ಲಿ ಇರಿಸಿಕೊಂಡಿದ್ದಾರೆ. ಈ ಕಾರಿಗೆ ವೃಕ್ಷತೋರಣ ಎಂದು ಹೆಸರಿಟ್ಟಿದ್ದು, ಕಾರಿನಲ್ಲಿ ‘ಮುಂದಿನ ಜನಾಂಗಕ್ಕಾಗಿ ಗಿಡಮರಗಳ ರಕ್ಷಣೆ-ಪೋಷಣೆ; ಸ್ವಾರ್ಥಕ್ಕಾಗಿ ಅಲ್ಲ’ ಎಂಬ ಸಾಲನ್ನು ಬರೆದಿದ್ದಾರೆ.

ಇರುವ ಸ್ಥಳ ಬಳಸಿ ಗಿಡ ಬೆಳೆಸಿನಮ್ಮ ಬಾಲ್ಯದಲ್ಲಿ ಮರಗಿಡಗಳೆಲ್ಲ ಸೊಂಪಾಗಿ ಬೆಳೆಯುತ್ತಿದ್ದವು. ಪ್ರಸ್ತುತ ಎಲ್ಲೆಡೆಯೂ ಕಾಂಕ್ರಿಟ್ ಕಾನನವೇ ತುಂಬಿಕೊಂಡಿದೆ. ಎಸಿ ಇಲ್ಲದೆ ಒಂದು ಕ್ಷಣವೂ ಕುಳಿತುಕೊಳ್ಳಲಾಗದಷ್ಟು ಭೂಮಿಯ ಉಷ್ಣತೆ ಜಾಸ್ತಿಯಾಗಿದೆ. ಇರುವ ಸ್ಥಳಾವಕಾಶವನ್ನೇ ಬಳಸಿಕೊಂಡು ಗಿಡ ಬೆಳೆಸಿದರೆ ವಾತಾವರಣಕ್ಕೂ, ನಮ್ಮ ಜೀವನಕ್ಕೂ ಹಿತ. ಇದಕ್ಕಾಗಿಯೇ ಗಿಡ ಬೆಳೆಸಲು ಮುಂದಾದೆ.
– ಜೆ. ಪ್ರವೀಣ್‌ಚಂದ್ರ ರೈ, ಗಿಡಗಳ ಪೋಷಕ

ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next