ಉಡುಪಿ ಜಿಲ್ಲೆಯ 34 ಕಡೆ ಅಳವಡಿಕೆ
Advertisement
ಕುಂದಾಪುರ: ಅಕ್ಷಯ್ ಕುಮಾರ್ ಅಭಿನಯದ ಹಿಂದಿ ಸಿನಿಮಾ ಪ್ಯಾಡ್‌ಮ್ಯಾನ್ ಸಾಕಷ್ಟು ಮಂದಿಗೆ ಪ್ರೇರಣೆ ನೀಡಿದೆ. ಸ್ಯಾನಿಟರಿ ಪ್ಯಾಡ್‌ಗಳ ಕುರಿತಾಗಿ ಜಾಗೃತಿ ಮೂಡಿಸಿದೆ. ಅದೇ ಮಾದರಿಯಲ್ಲಿ ಕುಂದಾಪುರ ತಾಲೂಕಿನಲ್ಲಿ ಒಬ್ಬ ಶಿಕ್ಷಕ ಕಾರ್ಯನಿರ್ವಹಿಸುತ್ತಿದ್ದಾರೆ. ಬಳಸಿದ ಸ್ಯಾನಿಟರಿ ಪ್ಯಾಡ್‌ಗಳ ನಿರ್ವಹಣೆಗೆ ಪಡುತ್ತಿದ್ದ ಬವಣೆ ನೀಗಿಸಲು ಪ್ರಯತ್ನಿಸಿ ಯಶಸ್ವಿಯಾಗಿದ್ದಾರೆ. ಇದಕ್ಕಾಗಿ ಅವರು ರೂಪಿಸಿದ ಘಟಕ ಉಡುಪಿ ಜಿಲ್ಲೆಯ 34 ಶಾಲೆಗಳಲ್ಲಿ ಅಳವಡಿಸಲಾಗಿದ್ದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.
ಕುಂದಾಪುರದ ವಡೇರಹೋಬಳಿ ನಿವಾಸಿ, ಬಸ್ರೂರು ಸರಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕ ಶ್ರೀಕಾಂತ ವಿ. ಈಗ ರಾಷ್ಟ್ರದ ಗಮನ ಸೆಳೆದ ಉತ್ಸಾಹಿ. 23 ವರ್ಷಗಳಿಂದ ಶಿಕ್ಷಕರಾಗಿದ್ದು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರು. ಮೂರು ವರ್ಷದ ಹಿಂದೆ
ಬಸ್ರೂರು ಶಾಲೆಯಲ್ಲಿ ಮೂರು ವರ್ಷದ ಹಿಂದೆ ಸ್ಯಾನಿಟರಿ ಪ್ಯಾಡ್ ಎಸೆಯಲು ಹೊಸವಿಧಾನ ಅಳವಡಿಸಿ ಯಶಸ್ವಿಯಾದ ಶ್ರೀಕಾಂತ್, ಮಡಾಮಕ್ಕಿ, ಹೆಂಗವಳ್ಳಿ, ಮುದ್ರಾಡಿ, ಹಾಲಾಡಿ, ಬಿದ್ಕಲ್‌ಕಟ್ಟೆ, ಬಸ್ರೂರು, ಬೈಂದೂರು, ಉಪ್ಪುಂದ, ನಾವುಂದ, ಹಕ್ಲಾಡಿ, ಹೆಮ್ಮಾಡಿ, ತಲ್ಲೂರು, ಬೀಜಾಡಿ, ವಕ್ವಾಡಿ, ಪೊಲಿಪು, ಪಟ್ಲ, ಮಣಿಪಾಲದ ರಾಜೀವನಗರ, ಕೊಕ್ಕರ್ಣೆ, ಕುಂದಾಪುರ ನಗರದ ಕಾಲೇಜುಗಳು, ನಿಟ್ಟೂರು ಮೊದಲಾದೆಡೆ ಸೇರಿದಂತೆ 34 ಕಡೆ ಇಂತಹ ಘಟಕ ಅಳವಡಿಸಿದ್ದಾರೆ.
Related Articles
ಬಾಲಕಿಯರ ಶೌಚಾಲಯದ ಗೋಡೆಗೆ 3 ಇಂಚಿನ ರಂಧ್ರ ಕೊರೆದು ಅದಕ್ಕೆ ಪೈಪ್ ಅಳವಡಿಸಿ ಅದರ ಸಂಪರ್ಕವನ್ನು ಹೊರಗಿನ ತೊಟ್ಟಿಗೆ ನೀಡುವುದು. ಕಾಂಕ್ರಿಟ್ ರಿಂಗ್‌ಗಳ ಮೂಲಕ 2, 3,4 ಅಡಿ ಅಗಲದ, 4 ಅಡಿ ಎತ್ತರದ ತೊಟ್ಟಿ ನಿರ್ಮಿಸುವುದು. ತಿಂಗಳಿಗೊಮ್ಮೆ ಈ ತೊಟ್ಟಿಗೆ ಬ್ಲೀಚಿಂಗ್ ಪೌಡರ್ ಹಾಗೂ ನೀರು ಹಾಕಿದರೆ ಸಾಕು. ಪ್ಲಾಸ್ಟಿಕ್ ಮಾತ್ರ ಉಳಿಯುತ್ತದೆ, ಇತರೆಲ್ಲ ಕರಗುತ್ತದೆ. ಸುಮಾರು ಐದಾರು ವರ್ಷಗಳ ಅನಂತರ ಈ ತೊಟ್ಟಿಯಲ್ಲಿ ಸಂಗ್ರಹವಾದ ಪ್ಲಾಸ್ಟಿಕ್‌ನ್ನು ಪಂಚಾಯತ್ ಮೂಲಕ ಶುಚಿಗೊಳಿಸಿದರೆ ಸಾಕಾಗುತ್ತದೆ. ಒಂದು ತೊಟ್ಟಿಗೆ 8ರಿಂದ 10 ಸಾವಿರ ಖರ್ಚಾಗುತ್ತದೆ.
Advertisement
ಏನು ಪ್ರೇರಣೆವಡೇರಹೋಬಳಿ ಪ್ರೌಢಶಾಲೆಗೆ ಇವರ ಪುತ್ರಿ ಹೋಗುತ್ತಿದ್ದಾಗ ಅವರು ಅನುಭವಿಸಿದ ವೇದನೆಯೇ ಇವರ ಸಂಶೋಧನೆಗೆ ಪ್ರೇರಣೆ. ನೂರಾರು ಹೆಣ್ಣುಮಕ್ಕಳಿರುವ ಕಾಲೇಜು, ಪ್ರೌಢ ಶಾಲೆಗಳಲ್ಲಿ ನ್ಯಾಪ್‌ಕಿನ್ ಎಸೆಯಲು ದೊಡ್ಡ ಸಮಸೆಯಾಗುತ್ತದೆ. ಶೌಚಾಲಯಕ್ಕೆ ಹಾಕಿದರೆ
ಬ್ಲಾಕ್ ಆಗುತ್ತದೆ. ನ್ಯಾಪ್‌ಕಿನ್ ಬರ್ನರ್ ಇದ್ದರೂ ಅದಕ್ಕೆ ವಿದ್ಯುತ್ ಸರಬರಾಜು ಇಲ್ಲದಿದ್ದರೆ ಕಷ್ಟ. ಬೇಗನೇ ಹಾಳಾಗುತ್ತದೆ. ಹಾಗಾಗಿ ತೊಟ್ಟಿ ಅನುಕೂಲ ಎನ್ನುತ್ತಾರೆ ಶ್ರೀಕಾಂತ್. – ಲಕ್ಷ್ಮೀ ಮಚ್ಚಿನ